ಹಳೆನೇರೆಂಕಿ: ಶ್ರೀ ವಿಷ್ಣಮೂರ್ತಿ ಭಜನಾ ಮಂಡಳಿ 21ನೇ ವಾರ್ಷಿಕೋತ್ಸವ, ಗ್ರಾಮ ಭಜನಾ ಮಂಗಳೋತ್ಸವ

0

ರಾಮಕುಂಜ: ಕಡಬ ತಾಲೂಕು ಹಳೆನೇರೆಂಕಿ ಗ್ರಾಮದ ಆರಟಿಗೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ 21ನೇ ವಾರ್ಷಿಕೋತ್ಸವ ಹಾಗೂ 15 ದಿನ ನಡೆದ ಗ್ರಾಮ ಭಜನೆಯ ಮಂಗಳೋತ್ಸವ ಕಾರ್ಯಕ್ರಮ ಜ.1ರಂದು ಭಜನಾ ಮಂದಿರದಲ್ಲಿ ನಡೆಯಿತು.


ವಾರ್ಷಿಕೋತ್ಸವದ ಅಂಗವಾಗಿ ಕೃಷ್ಣಪ್ರಸಾದ್ ನೂರಿತ್ತಾಯರ ನೇತೃತ್ವದಲ್ಲಿ ಬೆಳಿಗ್ಗೆ ಭಜನಾ ಮಂದಿರದಲ್ಲಿ ಗಣಪತಿ ಹೋಮ ನಡೆಯಿತು. ಸಂಜೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಗ್ರಾಮ ಭಜನಾ ಮಂಗಳೋತ್ಸವ, ಮಹಾಮಂಗಳಾರತಿ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೇಷ್ಠ ಪ್ರಚಾರಕರಾದ ಸೀತಾರಾಮ ಕೆದಿಲಾಯ ಅವರು, ನಮ್ಮ ದೇಶವನ್ನು ವಿಶ್ವಗುರು ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಮಕ್ಕಳಿಗೆ ಸಂಸ್ಕಾರಯುತ ಜೀವನ ಪಾಠ ನೀಡಬೇಕೆಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗೋಳಿತ್ತೊಟ್ಟು ವಲಯ ಮೇಲ್ವಿಚಾರಕಿ ಜಯಶ್ರೀ ಅವರು ಮಾತನಾಡಿ, ಭಜನೆಯಿಂದ ಈ ನೆಲದ ಪಾವಿತ್ರ್ಯ ವೃದ್ಧಿಸಿ ಜನಮಾನಸಕ್ಕೆ ಯೋಗ್ಯ ಜೀವನ ಸಿಗಲಿ ಎಂದು ಹಾರೈಸಿದರು. ಭಜನಾ ಮಂಡಳಿ ಅಧ್ಯಕ್ಷ ಚರಣ್ ಪಾಲೆತ್ತಡ್ಡ ಅಧ್ಯಕ್ಷತೆ ವಹಿಸಿದ್ದರು.


ಡಿ.17ರಿಂದ ಜ.1ರ ತನಕ ನಡೆದ ಗ್ರಾಮ ಭಜನೆಯಲ್ಲಿ ಗ್ರಾಮದ ೪೫೫ ಮನೆಗಳಿಗೆ ಭೇಟಿ ನೀಡಿ ಭಜನಾ ಸೇವೆ ಮಾಡಲಾಗಿದ್ದು ಇದರಲ್ಲಿ ನಿರಂತರವಾಗಿ ತೊಡಗಿಕೊಂಡ ಮಕ್ಕಳನ್ನು ಧಾರ್ಮಿಕ ಸಭೆಯಲ್ಲಿ ಗೌರವಿಸಲಾಯಿತು. ಭಜನಾ ಮಂಡಳಿಯ ಜೊತೆ ಕಾರ್ಯದರ್ಶಿ ಅಶೋಕ್ ಪಾತೃಮಾಡಿ ವರದಿ ವಾಚಿಸಿದರು. ವೀರೇಂದ್ರ ಪಿ.ಸ್ವಾಗತಿಸಿದರು. ಕಾರ್ಯದರ್ಶಿ ನವೀನ್ ಇರಿಂಟಾಡಿ ವಂದಿಸಿದರು. ರಮೇಶ್ ರೈ ರಾಮಜಾಲು, ಪ್ರೇಮನಾಥ ಮರಂಕಾಡಿ ನಿರೂಪಿಸಿದರು. ಧಾರ್ಮಿಕ ಸಭೆಯ ಬಳಿಕ ಶ್ರೀ ಸತ್ಯನಾರಾಯಣ ಪೂಜಾ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ಸನ್ಮಾನ:
ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ ಸ್ಥಾಪನೆ, ನೂತನ ಭಜನಾ ಮಂದಿರದ ನಿರ್ಮಾಣ ಸಮಿತಿಯ ಗೌರವ ಸಲಹೆಗಾರರೂ ಆಗಿದ್ದು, ಹಲವಾರು ವರ್ಷದಿಂದ ಗ್ರಾಮ ಭಜನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಸಲಹೆ, ಮಾರ್ಗದರ್ಶನ ನೀಡುತ್ತಿದ್ದ ಕೆಎಸ್‌ಆರ್‌ಟಿಸಿಯ ನಿವೃತ್ತ ಸಂಚಾರ ನಿಯಂತ್ರಕರೂ ಆದ ಬಿ. ದೇವಪ್ಪ ಗೌಡ ಬರೆಂಬೆಟ್ಟು ಅವರನ್ನು ಭಜನಾ ಮಂಡಳಿಯ ವತಿಯಿಂದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here