ಪುತ್ತೂರು: ಮೊಟ್ಟೆತ್ತಡ್ಕದಲ್ಲಿರುವ ಗೇರು ಸಂಶೋಧನಾ ನಿರ್ದೇಶನಾಲಯ(ಗೇ.ಸಂ.ನಿ) ಜ.3ರಂದು ಡ್ರೋನ್ ತಂತ್ರಜ್ಞಾನ ಪ್ರಯೋಗಾಲಯ ಹಾಗೂ ಜೈವಿಕ ಸಕ್ರಿಯ ಸಂಯೋಜನೆಗಳ ಪ್ರೊಫೈಲಿಂಗ್ ಮತ್ತು ಕೌಶಲ್ಯತಾ ಕೇಂದ್ರವನ್ನು ಉದ್ಘಾಟನೆ ನಡೆಯಿತು.
ಭಾರತ ಸರ್ಕಾರದ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿ ಮತ್ತು ಭಾರತೀಯ ಕೃಷಿ ಸಂಶೋಧನಾ ಪರಿಷತ್ ಮಹಾನಿರ್ದೇಶಕ ಡಾ.ಹಿಮಾಂಶು ಪಾಠಕ್‌ರವರು ಪ್ರಯೋಗಾಲಯ ಹಾಗೂ ಕೌಶಲ್ಯತಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಅತ್ಯುತ್ತಮ ಮೂಲಸೌಕರ್ಯ ಮತ್ತು ಸಂಶೋಧನಾ ಸೌಲಭ್ಯಗಳನ್ನು ನಿರ್ಮಿಸಿರುವ ನಿರ್ದೇಶಕರು ಮತ್ತು ವಿಜ್ಞಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇದನ್ನು ಇತರ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಗಳು ಅನುಕರಿಸಬೇಕು ಎಂದು ಹೇಳಿದರು. ಕಚ್ಚಾ ಗೋಡಂಬಿಯ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಗೋಡಂಬಿ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಪರಿಣಾಮಕಾರಿ ಸಂಶೋಧನೆಯ ಅಗತ್ಯವನ್ನು ತಿಳಿಸಿದರು. ಸಂವಾದದಲ್ಲಿ ಸಂಶೋಧನಾ ಚಟುವಟಿಕೆಗಳ ಬಗ್ಗೆ ಚರ್ಚಿಸಿ, ವೈಜ್ಞಾನಿಕ ಸಿಬ್ಬಂದಿಯೊಂದಿಗೆ ಅವಶ್ಯಕತೆಗಳ ಬಗ್ಗೆ ತಿಳಿಸಿದರು.
ಗೋಡಂಬಿ ಮೊಳಕೆಯಿಂದ ತಯಾರಿಸಿದ ಬಿಸ್ಕತ್ತು ಇದರ ತಂತ್ರಜ್ಞಾನವನ್ನು ಪುತ್ತೂರಿನ ನಿಧಿ ಫುಡ್ ಪ್ರಾಡಕ್ಟ್ಸ್ ಮಾಲಕ ರಾಧಾಕೃಷ್ಣ ಅವರಿಗೆ ಬಳಸಲು ಪರವಾನಗಿ ನೀಡಲಾಯಿತು. ಉತ್ಪನ್ನವನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿ ಡಾ. ವೀಣಾ ಜಿ.ಎಲ್ ಮಾಹಿತಿ ನೀಡಿ ಗೋಡಂಬಿ ಮೊಳಕೆ ಕುಕೀಸ್ ಪ್ರೋಟೀನ್ ಮತ್ತು ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫಾಸ್ಪರಸ್‌ನಂತಹ ಖನಿಜಗಳಿಂದ ಸಮೃದ್ಧವಾಗಿರುವ ಮೌಲ್ಯವರ್ಧಿತ ಉತ್ಪನ್ನವಾಗಿದೆ. ಯಾವುದೇ ಸಂಸ್ಕರಿಸಿದ ಹಿಟ್ಟು, ಬಣ್ಣ ಮತ್ತು ಪರಿಮಳವನ್ನು ಸೇರಿಸದೆ ಆರೋಗ್ಯಕರವಾಗಿದೆ ಎಂದು ತಿಳಿಸಿದರು.
ಗೇರು ಸಂಶೋಧನಾ ನಿರ್ದೇಶನಾಲಯದ ತೋಟಗಾರಿಕೆ ವಿಭಾಗದ ಸಹಾಯಕ ಮಹಾನಿರ್ದೇಶಕ ಡಾ.ವಿ.ಬಿ. ಪಟೇಲ್ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು. ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ.ಜೆ. ದಿನಕರ ಅಡಿಗ ಸ್ವಾಗತಿಸಿದರು.
ಡ್ರೋನ್ ತಂತ್ರಜ್ಞಾನ ಪ್ರಯೋಗಾಲಯ ಮತ್ತು ತೋಟಗಾರಿಕಾ ಪ್ರಯೋಗಾಲಯವನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ-ರಾಫ್ತಾರ್, ಕರ್ನಾಟಕ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ, ಭಾರತ ಸರ್ಕಾರದ ಅನುದಾನದೊಂದಿಗೆ ಸ್ಥಾಪಿಸಲಾಗಿದೆ. ನವೀಕೃತ ಡ್ರೋನ್ ತಂತ್ರಜ್ಞಾನ ಪ್ರಯೋಗಾಲಯವು ತೋಟಗಾರಿಕೆಯಲ್ಲಿ ಮಾನವ ರಹಿತ ವೈಮಾನಿಕ ವಾಹನ ನವೀನತೆಗಳನ್ನು ಮುಂದುವರೆಸಲು, ಸಂಶೋಧನೆಯನ್ನು ಸುಧಾರಿಸಲು ಮತ್ತು ಸತತಾಭಿವೃದ್ಧಿ ಪದ್ದತಿಗಳನ್ನು ಉತ್ತೇಜಿಸಲು ಆಧುನಿಕ ತಂತ್ರಜ್ಞಾನವನ್ನು ಒದಗಿಸುತ್ತದೆ. ಡ್ರೋನ್ಗಳ ಶ್ರೇಣಿಯನ್ನು ಹೊಂದಿರುವ ಈ ಪ್ರಯೋಗಾಲಯ ಆಧುನಿಕ ದತ್ತಾಂಶ ಸಂಸ್ಕರಣಾ ಸಾಧನಗಳೊಂದಿಗೆ, ಸ್ಮಾರ್ಟ್ ಕೃಷಿ ಮತ್ತು ತಂತ್ರಜ್ಞಾನದ ಅನುಷ್ಠಾನಕ್ಕೆ ಅವಕಾಶ ಮಾಡುತ್ತದೆ. ಗೇರು ಹಣ್ಣು, ಗೇರು ಬೀಜ, ಗೋಡಂಬಿ, ಸಿಪ್ಪೆ ಮತ್ತು ಎಲೆಗಳಲ್ಲಿ ಇರುವ ಫೈಟೋಕೆಮಿಕಲ್ಗಳನ್ನು ಅನ್ವೇಷಿಸಲು, ಪ್ರೊಫೈಲಿಂಗ್ ಮತ್ತು ಬಯೋಆಕ್ಟಿವ್ ಕಾಂಪೋನೇಂಟ್ಗಳ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದು ಎಚ್ಪಿಎಲ್ಸಿ, ಜಿಸಿಎಂಎಸ್ ಮತ್ತು ಯೂವಿ ವಿಸಿಬಲ್ ಸ್ಪೆಕ್ಟ್ರೋಫೋಟೋಮೀಟರ್ನಂತಹ ಅತ್ಯಾಧುನಿಕ ಸಾಧನಗಳಿಂದ ಸಂಪನ್ನವಾಗಿದೆ.