ಪುತ್ತೂರು: ಕೆದಂಬಾಡಿ ಗ್ರಾಮದ ಪಂಜಿಗುಡ್ಡೆ ಎಂಬಲ್ಲಿ ಮಣ್ಣಿನ ಇಟ್ಟಿಗೆ ತಯಾರಿಕ ಘಟಕ ಆರಂಭಿಸಿದ್ದು ಇದಕ್ಕೆ ವಿದ್ಯುತ್ ಸಂಪರ್ಕ ಕೊಡದೆ ವಿದ್ಯುತ್ ಗುತ್ತಿಗೆದಾರರು ಸತಾಯಿಸುತ್ತಿದ್ದಾರೆ ಎಂದು ಘಟಕದ ಮಾಲಕಿ ಶುತಿ ಕೆ.ಬಿರವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾನು ಸರಕಾರದ ಪಿಎಂಇಜಿಪಿನಲ್ಲಿ ಮಣ್ಣಿನ ಇಟ್ಟಿಗೆ ಘಟಕ ನಿರ್ಮಾಣಕ್ಕೆ ಸಾಲ ಪಡೆದುಕೊಂಡಿದ್ದು ಅದರಂತೆ ಕೆದಂಬಾಡಿ ಗ್ರಾಮದ ಪಂಜಿಗುಡ್ಡೆ ಎಂಬ ಇಟ್ಟಿಗೆ ತಯಾರಿಕ ಘಟಕ ಆರಂಭಿಸಿದ್ದೇನೆ. ಘಟಕಕ್ಕೆ ವಿದ್ಯುತ್ ಸಂಪರ್ಕ ಮಾಡುವುದಕ್ಕಾಗಿ ವಿದ್ಯುತ್ ಗುತ್ತಿಗೆದಾರರಾದ ಪುತ್ತೂರಿನ ಮುನ್ನ ಎಲೆಕ್ಟ್ರೀಕಲ್ ಮಾಲಕರಾದ ಕೆ.ಕೃಷ್ಣಪ್ರಶಾಂತ್‌ರವರಿಗೆ ಅವರು ನೀಡಿದ ಕೊಟೇಶನ್‌ನಂತೆ ಒಮ್ಮೆ 85 ಸಾವಿರ ರೂಪಾಯಿ ಹಾಗೂ ಇನ್ನೊಮ್ಮೆ 75 ರೂಪಾಯಿಗಳನ್ನು ಪಾವತಿ ಮಾಡಿರುತ್ತೇನೆ. ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿ 1 ವರ್ಷ 3 ತಿಂಗಳು ಕಳೆದರೂ ಇದುವರೆಗೆ ಸಂಪರ್ಕ ನೀಡಲಿಲ್ಲ. ನಾನು ಸಾಲ ಪಡೆದು ಘಟಕ ಆರಂಭಿಸಿದ್ದರಿಂದ ಈಗಾಗಲೇ 15 ಸಾಲದ ಕಂತುಗಳನ್ನು ಬ್ಯಾಂಕಿಗೆ ಪಾವತಿಸಿರುತ್ತೇನೆ. ವಿದ್ಯುತ್ ಸಂಪರ್ಕ ಕೊಡದೇ ಇರುವುದರಿಂದ ನನಗೆ ಬಹಳಷ್ಟು ನಷ್ಟ ಉಂಟಾಗಿದೆ.ಕಳೆದ ಕೆಲವು ದಿನಗಳಿಂದ ವಿದ್ಯುತ್ ಗುತ್ತಿಗೆದಾರರು ನಮ್ಮ ಫೋನ್ ಕರೆಗಳನ್ನು ಕೂಡ ಸ್ವೀಕರಿಸದೇ ಇರುವುದರಿಂದ ನಮಗೆ ಅನುಮಾನ ಆರಂಭವಾಗಿದೆ. ಆದ್ದರಿಂದ ಈ ಕೂಡಲೇ ವಿದ್ಯುತ್ ಗುತ್ತಿಗೆದಾರರರನ್ನು ಠಾಣೆಗೆ ಕರೆಸಿ ನಮಗೆ ನ್ಯಾಯ ಕೊಡಿಸಿಕೊಡಬೇಕಾಗಿ ಶುತಿ ಕೆ.ಬಿ.ಯವರು ದೂರಿನಲ್ಲಿ ತಿಳಿಸಿದ್ದಾರೆ.
‘ ಮೆಸ್ಕಾಂನಿಂದ ಯಾವುದೇ ತೊಂದರೆ ಉಂಟಾಗಿಲ್ಲ. ಟಿಸಿ ಕೂಡ ತರಿಸಿಕೊಟ್ಟಿದ್ದೇವೆ. ವಯರಿಂಗ್ ಅಗದೇ ಇರುವುದರಿಂದ ನಮಗೆ ವಿದ್ಯುತ್ ಸಂಪರ್ಕ ಕೊಡಲು ಸಾಧ್ಯವಿಲ್ಲ.’
-ರಾಮಚಂದ್ರ, ಕಾರ್ಯನಿರ್ವಾಹಕ ಇಂಜಿನಿಯರ್ ಮೆಸ್ಕಾಂ ವಿಭಾಗೀಯ ಕಛೇರಿ ಪುತ್ತೂರು
‘ ಫ್ಯಾಕ್ಟರಿಯಲ್ಲಿ ಇದುವರೆಗೆ ಯಾವುದೇ ಮೆಷಿನರಿಗಳು ಬರದೇ ಇರುವುದರಿಂದ ವಯರಿಂಗ್ ಎಲ್ಲಿ ಮಾಡುವುದೆಂದು ಗೊತ್ತಾಗದೆ, ಪೆನಲ್ ಬೋರ್ಡ್ ಅಳವಡಿಸಿ ಮುಂದಿನ ಕೆಲಸಗಳು ಬಾಕಿ ಇರುತ್ತವೆ.’
-ಕೆ.ಕೃಷ್ಣಪ್ರಶಾಂತ್, ಗುತ್ತಿಗೆದಾರರು