ಉಪ್ಪಿನಂಗಡಿ: ಇಲ್ಲಿನ ವೇದಶಂಕರ ನಗರದಲ್ಲಿನ ಶ್ರೀ ರಾಮ ಶಾಲೆಯಲ್ಲಿ ಹನುಮಂತ ಸಹಿತ ಶ್ರೀ ರಾಮನ ಮೂರ್ತಿಯನ್ನು ಜ.22 ರಂದು ಪ್ರತಿಷ್ಠಾಪಿಸಲಾಗುವುದು.
ಅಯೋಧ್ಯೆಯಲ್ಲಿ ಶ್ರೀ ರಾಮ ದೇವಾಲಯವು ಲೋಕಾರ್ಪಣೆಗೊಂಡು ಇದೇ ಜನವರಿಗೆ ಪ್ರತಿಷ್ಠಾ ವಾರ್ಷಿಕೋತ್ಸವವು ನಡೆಯುತ್ತಿರುವ ಕಾಲಘಟ್ಟದಲ್ಲೇ ಶ್ರೀ ರಾಮಭಕ್ತ ಹನುಮಂತ ಸಹಿತ ಶ್ರೀ ರಾಮನ ವಿಗ್ರಹವನ್ನು ಶಾಲಾ ಆವರಣದಲ್ಲಿ ಸ್ಥಾಪಿಸಲು ಶಾಲಾಡಳಿತವು ಸಂಕಲ್ಪಿಸಿದೆ. ಅಂತೆಯೇ ವಿಗ್ರಹದ ನಿರ್ಮಾಣ ಕಾರ್ಯವು ಪೂರ್ಣಗೊಂಡಿದ್ದು, ಶಿಲಾಮಯ ಗುಡಿಯ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.
ಶಾಲೆ ಸ್ಥಾಪನೆಗೊಂಡು ಹದಿನೈದು ವರ್ಷ ಪೂರ್ಣೈಸುತ್ತಿರುವ ಈ ಸುಸಂಧರ್ಭದಲ್ಲಿ ಶಾಲಾ ಮಕ್ಕಳ ಬದುಕಿಗೆ ಶ್ರೀ ರಾಮನ ಬದುಕು ಪ್ರೇರಣೆಯಾಗಲೆಂಬ ಸದುದ್ದೇಶದಿಂದ ಇಲ್ಲಿ ಶ್ರೀ ರಾಮನ ಮೂರ್ತಿ ಸ್ಥಾಪನೆಗೊಳ್ಳಲಿದೆ. ಸುಮಾರು ಹದಿನೈದು ಲಕ್ಷ ರೂ. ವೆಚ್ಚದಲ್ಲಿ ಈ ಗುಡಿ ಹಾಗೂ ಹನುಮಂತ ಸಹಿತ ಶ್ರೀ ರಾಮನ ಗುಡಿ ಸ್ಥಾಪಿಸಲಾಗಿದೆ.
ಪ್ರಭಾ ವಲಯದ ಕಲಿಕೆ ಲಭಿಸುವಂತಾಗಿದೆ:
ಶ್ರೀ ರಾಮನ ಜೀವನಾದರ್ಶ ಸರ್ವತ್ರ ಮಾನ್ಯತೆಗೆ ಒಳಗಾಗಿದೆ. ಅಂತೆಯೇ ಮಕ್ಕಳಿಗೆ ಶ್ರೀ ರಾಮನಿಂದ ಉತ್ತಮ ಪ್ರೇರಣೆ ಲಭಿಸಲಿ ಎಂಬ ಆಶಯದಿಂದ ಶಾಲಾ ಆವರಣದೊಳಗೆ ಶ್ರೀ ರಾಮನ ಮೂರ್ತಿಯನ್ನು ಸ್ಥಾಪಿಸಲು ನಿಶ್ಚಯಿಸಲಾಗಿದೆ. ಶಾಲಾ ಮಕ್ಕಳ ಸಹಿತ ಇಡೀ ಸಮಾಜದ ಉದ್ದಾರವಾಗುವ ನಿರೀಕ್ಷೆ ನಮ್ಮದಾಗಿದೆ ಎಂದು ಶ್ರೀ ರಾಮ ಶಾಲಾಡಳಿತದ ಅಧ್ಯಕ್ಷ ಸುನಿಲ್ ಅನಾವು ತಿಳಿಸಿದ್ದಾರೆ.
ಶ್ರೀರಾಮನಿಗೆ ಇನ್ನಷ್ಟು ಹತ್ತಿರವಾಗುವ ಯೋಗಾಭಾಗ್ಯ ಮಕ್ಕಳದ್ದಾಗಿದೆ:
ನಮ್ಮೆಲ್ಲರ ಆರಾಧ್ಯಮೂರ್ತಿ ಶ್ರೀ ರಾಮನನ್ನು ನಮಿಸಿ – ಸ್ಮರಿಸಿ ಕಲಿಕೆಯನ್ನು ಪ್ರಾರಂಭಿಸಲು ಅವಕಾಶವನ್ನು ಕಲ್ಪಿಸುವ ಸಲುವಾಗಿ ಶಾಲಾ ಆವರಣದಲ್ಲಿ ಶ್ರೀ ರಾಮನ ಮೂರ್ತಿಯ ಸ್ಥಾಪನೆಯಾಗುತ್ತಿದೆ. ಇದರಿಂದಾಗಿ ದೇವ ಸ್ವರೂಪಿ ಮಕ್ಕಳಿಗೆ ದೇವರನ್ನು ತೀರಾ ಹತ್ತಿರದಿಂದ ಪೂಜಿಸುವ ಅವಕಾಶ ಪ್ರಾಪ್ತಿಯಾದಂತಾಗಿದೆ ಎಂದು ಶಾಲಾ ಪೋಷಕ ಸಂಘದ ಅಧ್ಯಕ್ಷ ಉದಯ ಅತ್ರಮಜಲು ಸಂತಸ ವ್ಯಕ್ತಪಡಿಸಿದ್ದಾರೆ.