ಪುತ್ತೂರು: ನ್ಯಾಯಯುತವಾದ ಗೌರವಧನ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪುತ್ತೂರಿನ ಕೃಷಿ ಸಖಿಯರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಸಂಬಂಧಿಸಿದ ಅಧಿಕಾರಿಗಳಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸುವಂತೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಪುತ್ತೂರು ತಾಲೂಕಿನ 22 ಗ್ರಾಮಪಂಚಾಯತಿಗಳಲ್ಲಿ ತಲಾ ಒಬ್ಬರಂತೆ ಒಟ್ಟು 22 ಕೃಷಿ ಸಖಿಯರು ಕಾಯನಿರ್ವಹಿಸುತ್ತಿದ್ದೇವೆ. ನಮಗೆ ಬೇರೆ ಬೇರೆ ಇಲಾಖೆಯಿಂದ ಕೆಲಸ ನಿರ್ವಹಿಸಲು ಆದೇಶ ನೀಡಲಾಗುತ್ತಿದೆ. ಪಿ.ಎಂ ಕಿಸಾನ್ ಯೋಜನೆಗೆ ಫಲಾನುಭವಿಗಳ ಇ.ಕೆ.ವೈ ಸಿ ಮಾಡಿರುವುದು ಕಿಸಾನ್ ಯೋಜನೆಗೆ ಹೊಸದಾಗಿ ಅರ್ಜಿಕೊಡಿಸಿರುವುದು. ಎಫ್.ಐ.ಡಿ ಮಾಡಲು ಬೇಕಾದ ದಾಖಲೆಗಳನ್ನು ಸಂಗ್ರಹಿಸಿ ಇಲಾಖೆಗೆ ನೀಡುವುದು. ಏಕ ಕುಟುಂಬ ಪರಿಶೀಲನೆ. ಮರಣ ಹೊಂದಿದ್ದಲ್ಲಿ, ತೆರಿಗೆ ಪಾವತಿದಾರರು ಆಗಿದ್ದಲ್ಲಿ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ ಇಲಾಖೆಗೆ ನೀಡಿರುವುದು. ಕೃಷಿ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ರೈತರಿಗೆ ತಿಳಿಸಿರುವುದು. ಈ ಹಿಂದೆ ಕೃಷಿ ಇಲಾಖೆಯ ಅನುವುಗಾರರು ಮಾಡುವ ಕೆಲಸವನ್ನು ಯಾವುದೇ (ಸಂಭಾವನೆಯನ್ನು ಪಡೆಯದೆ ಮಾಡುತ್ತಿದ್ದೇವೆ. ಹೊಸದಾಗಿ ಜಾಬ್ ಕಾರ್ಡ್ ಮಾಡಿಸಿಕೊಟ್ಟಿರುವುದು. ಉದ್ಯೋಗ ಖಾತರಿ ಯೋಜನೆಗೆ ಫಲಾನುಭವಿಗಳನ್ನು ಗುರುತಿಸಿ ಬೇಡಿಕೆಯ ಅರ್ಜಿಯನ್ನು ಸಲ್ಲಿಸಿರುವುದು. ಮಕ್ಕಳ ಸಮೀಕ್ಷೆ ಮಾಡಿರುವುದು, ಮನೆ ಸಮೀಕ್ಷೆ ಮಾಡಿರುವುದು. ಸ್ವಚ್ಚತೆಯ ಕೆಲಸದಲ್ಲೂ ನಮ್ಮನ್ನು ತೊಡಗಿಸಿಕೊಂಡಿರುವುದು. ನಾಲೈದು ಇಲಾಖೆಗಳ ಕೆಲಸ ನಿರ್ವಹಿಸುವ ನಮಗೆ ಸಿಗುವುದು ಕೇವಲ 3750 ರೂಪಾಯಿ ಗೌರವಧನ ಮಾತ್ರ. ಈಗ ಇರುವ ಗೌರವಧನ ಉದ್ಯೋಗ ಖಾತರಿಯಲ್ಲಿ ನೀಡುವ ಕನಿಷ್ಟ ಕೂಲಿ ದರಕ್ಕೂ ಕಡಿಮೆಯಿದೆ. ನಮ್ಮ ಕೆಲಸಕ್ಕೆ ಈಗಿನ ದಿನಗೂಲಿ ನೌಕರರು ಪಡೆಯುವ ವೇತನದಷ್ಟಾದರೂ ನಿಗದಿಪಡಿಸಬೇಕು.ರೈತರ ಮನೆ ಭೇಟಿ, ಬೆಳೆ ಸಮೀಕ್ಷೆಯನ್ನು ಮಾಡುವುದರಿಂದ ನಮ್ಮ ಕುಟುಂಬದ ಭದ್ರತೆ ದೃಷ್ಟಿಯಿಂದ ಜೀವ ವಿಮಾ ಮೊತ್ತವನ್ನು ನಿಗದಿಪಡಿಸಬೇಕು.ಮೊಬೈಲ್ ತಂತ್ರಾಂಶದಿಂದ ಹೆಚ್ಚಿನ ಕೆಲಸ ಇರುವುದರಿಂದ ಅದಕ್ಕಾಗಿ ಮೊಬೈಲ್ ಹಾಗೂ ಡೇಟಾ ರೀಚಾರ್ಜ್ ಮಾಡುವುದು.ಈಗಾಗಲೇ ವಿವಿಧ ಇಲಾಖೆಗೆ ಕೇಂದ್ರ ಸರಕಾರದಿಂದ ಪ್ರತಿ ಕೆಲಸಕ್ಕೆ ಪಾವತಿಸಬೇಕಾದ ಆಧಾರದಲ್ಲಿ ಕೆಲಸ ನಿರ್ವಹಿಸಲು ಆದೇಶವಿರುವುದರಿಂದ ಎಲ್ಲಾ ಇಲಾಖೆಗಳು ಸದ್ರಿ ಆದೇಶಗಳನ್ನು ಸರಿಯಾಗಿ ಅನುಷ್ಠಾನಿಸುವುದು.ಕೃಷಿ ಸಖಿಯರಿಗೆ ಇಲಾಖೆಯಿಂದಲೇ ಸಮವಸ್ತ್ರವನ್ನು ನೀಡುವುದು.ನಮ್ಮ ಕಛೇರಿಗೆ ಕಂಪ್ಯೂಟರ್, ಪ್ರಿಂಟರ್ ಹಾಗೂ ಜೆರಾಕ್ಸ್ ಮೆಷಿನ್‌ನ್ನು ಒದಗಿಸಿಕೊಡುವುದು.
- ಈ ಮೇಲಿನ ಎಲ್ಲಾ ಅಂಶಗಳನ್ನು ಮಗದೊಮ್ಮೆ ಪರಿಶೀಲಿಸಿ ನಾವು ಮಾಡುವ ಕೆಲಸಕ್ಕೆ ಯೋಗ್ಯ ಗೌರವಧನವನ್ನು ನೀಡಲು ಸರಕಾರ/ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ನ್ಯಾಯಯುತ, ಸಂವಿಧಾನಾತ್ಮಕ, ಮಹಿಳಾ ಸಬಲೀಕರಣಕ್ಕೆ ಪೂರಕವಾಗುವಂತೆ ಬೇಡಿಕೆಗಳನ್ನು ಈಡೇರಿಸುವಂತೆ ತಾಲೂಕಿನ 22 ಗ್ರಾಮಪಂಚಾಯತ್‌ಗಳ ಕೃಷಿ ಸಖಿಯರು ಮನವಿ ಮೂಲಕ ವಿನಂತಿಸಿಕೊಂಡಿದ್ದಾರೆ.