*ವಿರೋಧ ಪಕ್ಷಗಳಿಗೆ ನಾಲ್ಕು ಸ್ಥಾನ ನೀಡಲು ಸಿದ್ಧ-ಚುನಾವಣೆಗೂ ಬದ್ಧ-ಈಶ್ವರ ಭಟ್
ೄಸಂಧಾನ ನಡೆಯದಿದ್ದರೆ ಚುನಾವಣೆ ಎದುರಿಸಲು ಸಿದ್ಧ-ಸದಸ್ಯರ ಅಭಿಪ್ರಾಯ
ಪುತ್ತೂರು:ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಚುನಾವಣೆ ಬೇಕೇ ಬೇಡವೇ?ಸೌಹಾರ್ದ ಸಂಧಾನವೇ ಅಥವಾ ಸಂಗ್ರಾಮ ಖಚಿತವೇ ಎಂಬ ಕುರಿತು ಚರ್ಚಿಸುವ ಸಲುವಾಗಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರ ಮನೆಯಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ರೈತ ಸದಸ್ಯರ ಸಮಾಲೋಚನಾ ಸಭೆ ನಡೆಯಿತು.ನೂರಾರು ಸದಸ್ಯರು ಪಾಲ್ಗೊಂಡು ತಮ್ಮ ಅಭಿಪ್ರಾಯ, ಸಲಹೆ ಸೂಚನೆಗಳನ್ನು ನೀಡಿದರು.ಸಂಧಾನಕ್ಕೆ ಬಾರದಿದ್ದಲ್ಲಿ ನಾವು ಚುನಾವಣೆಯನ್ನು ಎದುರಿಸಲು ಸದಾ ಸಿದ್ದರಾಗಿದ್ದೇವೆ.ಈ ಬಗ್ಗೆ ಯಾವುದೇ ಹಿಂಜರಿಕೆ ಬೇಡ ಎಂದು ಹೆಚ್ಚಿನ ಸದಸ್ಯರು ಸಲಹೆ ನೀಡಿದರು.
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ,ಪ್ರಗತಿಪರ ಕೃಷಿಕ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಬನ್ನೂರು ರೈತರ ಸೇವಾ ಸಹಕಾರಿ ಸಂಘಕ್ಕೆ ಚುನಾವಣೆ ನಡೆಯದಂತೆ ನಾವು ಪ್ರಯತ್ನಿಸುತ್ತಿದ್ದೇವೆ.ಒಂದು ವೇಳೆ ಚುನಾವಣೆ ರೈತ ಮಿತ್ರರೆಲ್ಲರೂ ಸೇರಿ ಈ ಹಿಂದೆ ರೈತರ ಕಷ್ಟದಲ್ಲಿ ಸ್ಪಂದಿಸಿದ ರೀತಿಯಲ್ಲೇ ಮತ್ತೊಮ್ಮೆ ಸ್ಪಂದಿಸುವಂತಾಗಲು ನಮ್ಮ ತಂಡದವರಿಗೆ ಗೆಲ್ಲಿಸಿ ಕೊಡಬೇಕು ಎಂದು ತಿಳಿಸಿದರು.ಚುನಾವಣೆ ನಡೆದರೆ ನಷ್ಟ ಉಂಟಾಗುತ್ತದೆ ಮತ್ತು ರೈತರ ಹಣ ಪೋಲಾಗುತ್ತದೆ ಎಂದು ಅಂದು ಜೀವನ ಭಂಡಾರಿಯವರು ಸಂಧಾನದ ಮೂಲಕ ವಿರೋಧ ಪಕ್ಷಕ್ಕೆ 2 ಸ್ಥಾನ ಬಿಟ್ಟುಕೊಟ್ಟಿದ್ದರು.ಬಳಿಕ ಮುರಳೀಧರ ರೈರವರು ಅಧ್ಯಕ್ಷರಾಗಿದ್ದಾಗಲೂ ವಿರೋಧ ಪಕ್ಷಕ್ಕೆ 2 ಸ್ಥಾನ ಬಿಟ್ಟುಕೊಟ್ಟಿದ್ದರು.ನನ್ನ ಅವಧಿಯಲ್ಲಿ ವಿರೋಧ ಪಕ್ಷದವರಿಗೆ 4 ಸ್ಥಾನ ಬಿಟ್ಟುಕೊಡಲಾಗಿದೆ.ಎಲ್ಲಾ ನಿರ್ದೇಶಕರ, ಸಹಕಾರಿ ಧುರೀಣ ಪ್ರಮುಖರ ಸಲಹೆ, ಸೂಚನೆ ಪಡೆದುಕೊಂಡು ನಾವು ಈ ಬಾರಿಯೂ ವಿರೋಧ ಪಕ್ಷದವರಿಗೆ 4 ಸ್ಥಾನ ಬಿಟ್ಟುಕೊಡುತ್ತೇವೆ.ಅದಕ್ಕೆ ಅವರು ಒಪ್ಪಿದರೆ ನಾವು ಸಂಧಾನದ ಮೂಲಕ ಚುನಾವಣೆ ನಡೆಯದಂತೆ ಮಾಡುತ್ತೇವೆ. ಆದರೆ ಸಂಧಾನಕ್ಕೆ ಒಪ್ಪಲಿಲ್ಲವಾದರೆ ನಾವು ಚುನಾವಣೆಗೆ ತಯಾರಾಗಿದ್ದೇವೆ.ಸಂಧಾನಕ್ಕೂ ರೆಡಿ ಸಂಗ್ರಾಮಕ್ಕೂ ರೆಡಿಯಾಗಿದ್ದೇವೆ ಎಂದು ಹೇಳಿದ ಅವರು, ಒಂದು ವೇಳೆ ಚುನಾವಣೆ ನಡೆದರೆ ನಮ್ಮ ತಂಡವನ್ನು ಗೆಲ್ಲಿಸಿಕೊಡಬೇಕೆಂದು ವಿನಂತಿಸಿದರು.
ಈಶ್ವರ ಭಟ್ ಪ್ರಾಮಾಣಿಕತೆ, ನಿಷ್ಠೆಯಿಂದ ರೈತರ ಸೇವೆ ಮಾಡುತ್ತಾ ಬಂದಿದ್ದಾರೆ.ಎಲ್ಲಿಯಾದರೂ ಲಂಚ ಕೇಳಿದ ಅಥವಾ ಏನಾದರೂ ತೊಂದರೆ ನೀಡಿದ್ದಾರೆಯೇ? ನಮ್ಮ ಆಡಳಿತ ಮಂಡಳಿಯವರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ.ಹೀಗಿದ್ದರೂ ಚುನಾವಣೆ ಬೇಕೆ? ಎಂದು ಹಲವು ಸದಸ್ಯರು ಕೇಳುತ್ತಿದ್ದಾರೆ.ಒಂದು ವೇಳೆ ಚುನಾವಣೆ ನಡೆದರೆ ಸದಸ್ಯರಾದ ನೀವೇ ಸರಿಯಾದ ಉತ್ತರ ನೀಡಬೇಕು.ಸುಮಾರು ಹತ್ತೊಂಭತ್ತು ಸಹಕಾರಿ ಸಂಘಗಳಿದ್ದು ಅಲ್ಲಿಯೂ ಚುನಾವಣೆ ನಡೆಯಲಿದೆ.ಆದರೆ ಯಾವುದೇ ಸಹಕಾರಿ ಸಂಘಗಳಲ್ಲಿ ಪಕ್ಷಾತೀತವಾಗಿ ಸಭೆಯಲ್ಲಿ ಭಾಗವಹಿಸಿದ್ದು ನಾವು ನೋಡಿಲ್ಲ. ದೊಡ್ಡ ಸಂಖ್ಯೆಯಲ್ಲಿ ನನ್ನ ಮನೆಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿರೋದು ನನ್ನ ಮೇಲೆ ನೀವು ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದರು.
82 ಲಕ್ಷ ರೂ. ನಷ್ಟದಲ್ಲಿದ್ದ ಸಂಘ ಈಗ 1 ಕೋಟಿ 29 ಲಕ್ಷ ಲಾಭದಲ್ಲಿದೆ.ಕೊರೋನಾ ಸಂದರ್ಭದಲ್ಲಿ ರಿಕ್ಷಾ ಚಾಲಕರಿಗೆ, ಕೂಲಿ ಕಾರ್ಮಿಕರಿಗೆ, ಬೀಡಿ ಕಾರ್ಮಿಕರಿಗೆ, ಇನ್ನಿತರ ವಾಹನ ಚಾಲಕರಿಗೆ ಪಿಗ್ಮಿ ಸಾಲ ಮೂಲಕ 3.5 ಕೋಟಿ ರೂ ಸಾಲ ನೀಡಿದ್ದೇವೆ.ಅದನ್ನು ಪ್ರಾಮಾಣಿಕವಾಗಿ ಮರು ಪಾವತಿ ಮಾಡಿದ್ದಾರೆ.ಹುಡುಗರ ತಂಡವನ್ನು ಕಟ್ಟಿಕೊಂಡು ಕಾಂಗ್ರೆಸ್, ಬಿಜೆಪಿ ಎಂದು ನೋಡದೆ ರೈತರ ಕಷ್ಟಕ್ಕೆ ಸ್ಪಂದಿಸಿ ಅವರ ತೋಟಕ್ಕೆ ಮದ್ದು ಸಿಂಪಡಣೆ ಹಾಗೂ ರೈತರ ಒಂದು ಗೊನೆ ಅಡಿಕೆ ಹಾಳಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಕಾರ್ಯಕ್ರಮ ನಡೆಸಲಾಗಿದೆ ಎಂದು ಈಶ್ವರ ಭಟ್ ತಿಳಿಸಿದರು.
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ವ್ಯಾಪ್ತಿಯ ಶಾಖೆಗಳಲ್ಲಿ ಹಲವಾರು ಕೆಲಸ ಕಾರ್ಯಗಳು ನಡೆಯಲಿದ್ದು ಅದಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದ ಅವರು, ನಾನು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಧ್ಯಕ್ಷನಾಗಲು ರೈತರೇ ಕಾರಣ.ದೇವಾಲಯದ ಅಭಿವೃದ್ಧಿಗೆ ಹಾಗೂ ಬನ್ನೂರು ರೈತರ ಸಹಕಾರಿ ಸಂಘದ ಅಭಿವೃದ್ದಿಗೂ ಆದ್ಯತೆ ನೀಡಲಾಗುವುದು.ಅದಕ್ಕೆ ರೈತರು, ಭಕ್ತಾದಿಗಳು ಕೈಜೋಡಿಸಬೇಕೆಂದು ಹೇಳಿದರು.ಚುನಾವಣೆ ಗೆಲ್ಲಲು ಉಸ್ತುವಾರಿಗಳನ್ನು ನೇಮಿಸಿದ್ದು ಅದರಂತೆ ಚುನಾವಣೆ ಎದುರಿಸಲಾಗುವುದು ಎಂದವರು ಹೇಳಿದರು.
ಈಶ್ವರ ಭಟ್ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಸಿದ್ಧ-ಅಶ್ರಫ್ ಕಲ್ಲೇಗ:
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಅಶ್ರಫ್ ಕಲ್ಲೇಗ ಮಾತನಾಡಿ ಸಂಘವು ಈ ಹಿಂದೆ 87 ಲಕ್ಷ ರೂ.ನಷ್ಟದಲ್ಲಿದ್ದು ಲಾಭದತ್ತ ಕೊಂಡೊಯ್ದ ಕೀರ್ತಿ ಪಂಜಿಗುಡ್ಡೆ ಈಶ್ವರ ಭಟ್ ಮತ್ತು ಆಡಳಿತ ಮಂಡಳಿಗೆ ಸಲ್ಲುತ್ತದೆ.ಈ ಮೂಲಕ ಎಲ್ಲಾ ರೈತರ ಮೊಗದಲ್ಲಿ ನಗು ಮೂಡಿಸಿದ್ದಾರೆ.ಎಷ್ಟೋ ರೈತರು ಬ್ಯಾಂಕ್ಗೆ ಹಣ ಕಟ್ಟಲು ಬಾಕಿ ಇದ್ದು ಪಂಜಿಗುಡ್ಡೆ ಈಶ್ವರ ಭಟ್ರವರು ಸ್ವಂತ ಹಣವನ್ನು ಕಟ್ಟಿ ರಿನೀವಲ್ ಮಾಡಿಸಿ ಕೊಟ್ಟಿದ್ದಾರೆ.ಚುನಾವಣೆ ನಡೆದರೆ ಲಕ್ಷಾಂತರ ರೂ.ನಷ್ಟವಾಗುತ್ತದೆ.ಅದು ನಮ್ಮ ರೈತರ ಹಣವಾಗಿರುತ್ತದೆ.ಇದನ್ನು ತಪ್ಪಿಸಲು ಕಳೆದ ಮೂರು ಅವಽಯಲ್ಲೂ ಸಂಧಾನದ ಮೂಲಕ ಅವಿರೋಧವಾಗಿ ಆಯ್ಕೆಗೊಳ್ಳುತ್ತಿದ್ದೇವೆ.ಪಂಜಿಗುಡ್ಡೆ ಈಶ್ವರ ಭಟ್ ನೇತೃತ್ವದಲ್ಲಿ ನಾವು ಚುನಾವಣೆಯಲ್ಲಿಯೂ ಸಫಲರಾಗುತ್ತೇವೆ ಎಂದರು.
ನಾವು ಸಂಗ್ರಾಮಕ್ಕೂ ಸಿದ್ಧ ಸಂಧಾನಕ್ಕೂ ಬದ್ಧ-ರಾಜಶೇಖರ ಜೈನ್:
ಸಂಘದ ಉಪಾಧ್ಯಕ್ಷ ರಾಜಶೇಖರ್ ಜೈನ್ ಮಾತನಾಡಿ ಒಂದು ಕಾಲದಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಸಂಘವು ಕಷ್ಟದಲ್ಲಿತ್ತು.ಬಳಿಕ ಹಂತ ಹಂತವಾಗಿ ಬೆಳೆಯುತ್ತಾ ಈ ಹಂತಕ್ಕೆ ಬೆಳೆದಿದೆ.ಇದು ಸಂಘದ ಎಲ್ಲಾ ರೈತ ಸದಸ್ಯರಿಂದ ಸಾಧ್ಯವಾಗಿದೆ.25 ವರ್ಷಗಳ ಹಿಂದೆ ಈ ಸಂಘವನ್ನು ಮುಚ್ಚುವಂತೆ ಎಸ್ಸಿಡಿಸಿಸಿ ಬ್ಯಾಂಕ್ನ ಆಗಿನ ಅಧ್ಯಕ್ಷರು ಆದೇಶಿಸಿದ್ದರು.ವೈದ್ಯನಾಥ್ ವರದಿಯ ಪ್ರಕಾರ ಬ್ಯಾಂಕ್ನ್ನು ಸಹಜ ಸ್ಥಿತಿಗೆ ತರುವಲ್ಲಿ ಸರಕಾರ ಹಾಗೂ ಆಗಿನ ಅಧ್ಯಕ್ಷ ಜೀವನ್ ಭಂಡಾರಿ ಪ್ರಯತ್ನ ಮಾಡಿದ್ದರು.ಮುರಳೀಧರ ರೈರವರು ಅಧ್ಯಕ್ಷರಾದ ಸಮಯದಲ್ಲಿ ಪಂಜಿಗುಡ್ಡೆ ಈಶ್ವರ ಭಟ್ ಉಪಾಧ್ಯಕ್ಷರಾಗಿದ್ದರು.ನಾವು ಸಂಘದ ಮೂಲಕ ಉತ್ತಮ ಕೆಲಸ ಮಾಡುತ್ತಾ ಬಂದಿದ್ದೇವೆ.ಚುನಾವಣೆ ಬೇಡ ಎಂದಾದರೆ ನಾವು ಸಂಧಾನಕ್ಕೆ ಸಿದ್ಧರಾಗಿದ್ದೇವೆ.ಚುನಾವಣೆ ನಡೆದರೆ ಸಂಗ್ರಾಮಕ್ಕೂ ಸಿದ್ಧರಿದ್ದೇವೆ ಎಂದು ಹೇಳಿ, ರೈತರು ಸಹಕರಿಸುವಂತೆ ಹೇಳಿದರು.
ಮಹಿಳೆಯ ಕರಿಮಣಿ ಮರಳಿಸಿದ ಈಶ್ವರ ಭಟ್:
ಒಂದು ಬಾರಿ ಮಹಿಳೆಯೊಬ್ಬರು 45 ಸಾವಿರ ರೂ. ಬ್ಯಾಂಕ್ಗೆ ಕಟ್ಟಲು ಬಾಕಿ ಇದ್ದಾಗ ಏನೂ ಮಾಡಲು ತೋಚದೆ ಇದ್ದಾಗ ತನ್ನ ಕರಿಮಣಿ ಸರವನ್ನು ಬ್ಯಾಂಕ್ಗೆ ತಂದಿದ್ದರು.ಆ ಸಂದರ್ಭ ಈಶ್ವರ ಭಟ್ ಅವರು ಆ ಮಹಿಳೆಯ ಸ್ಥಿತಿ ಅರಿತು,ಬಾಕಿ ಇದ್ದ ಆಕೆಯ ಹಣವನ್ನು ತಾವೇ ಕಟ್ಟಿ ಕರಿಮಣಿ ಸರವನ್ನು ಮಹಿಳೆಗೆ ಮರಳಿಸಿದ್ದ ಘಟನೆ ನಡೆದಿದೆ.ಅಲ್ಲದೆ ಇತ್ತೀಚೆಗೆ ಪ್ರಾಕೃತಿಕ ವಿಕೋಪದಿಂದ ಧರೆ ಕುಸಿದು ಎರಡು ಪ್ರತ್ಯೇಕ ಘಟನೆಗಳಲ್ಲಿ ಹಲವಾರು ದನಗಳು ಸತ್ತು ಹೋಗಿದ್ದು ವಿಷಯ ತಿಳಿದ ಪಂಜಿಗುಡ್ಡೆ ಈಶ್ವರ ಭಟ್ ಸ್ಥಳಕ್ಕೆ ಹೋಗಿ ಸ್ವಂತ ಹಣದಿಂದ ಪರಿಹಾರ ನೀಡಿದ್ದಾರೆ.ಇಂತಹ ಅನೇಕ ಘಟನೆಗಳು ನಡೆದಿದ್ದು ಅವರು ನಿಜವಾದ ರೈತ ಮಿತ್ರರೆಂದು ರೈತರು ಬಣ್ಣಿಸುವಂತಾಗಿದೆ ಎಂದು ರಾಜಶೇಖರ ಜೈನ್ ಹೇಳಿದರು.
ವಿಕ್ರಂ ಶೆಟ್ಟಿ ಅಂತರ, ಮೋನಪ್ಪ ಗೌಡ ಬೆಳ್ಳಿಪ್ಪಾಡಿ, ಡೆನ್ನಿಸ್ ಮಸ್ಕರೇನ್ಹಸ್, ಶಿವಪ್ರಸಾದ್ ಮಠಂತಬೆಟ್ಟು, ಪ್ರಭಾಕರ ಮಾತನಾಡಿ, ಬನ್ನೂರು ರೈತರ ಸೇವಾ ಸಹಕಾರಿ ಸಂಘವು ಉತ್ತಮ ರೀತಿಯ ಕೆಲಸ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದು ಮುಂದೆಯೂ ಈಶ್ವರ ಭಟ್ ನೇತೃತ್ವದ ತಂಡವೇ ಗೆಲುವು ಸಾಧಿಸಲಿದೆ.ಇದಕ್ಕಾಗಿ ನಾವೆಲ್ಲರೂ ಪ್ರಯತ್ನಿಸಬೇಕು ಎಂದು ಹೇಳಿದರು.ಹಾರಕೆರೆ ವೆಂಕಟರಮಣ ಭಟ್, ಮಾತನಾಡಿ ಮುಂದೆ ಕೂಡ ಈಶ್ವರ ಭಟ್ ತಂಡವೇ ಗೆಲುವು ಸಾಧಿಸುವಂತಾಗಲಿ ಎಂದು ಹೇಳಿದರು.
ಈಶ್ವರ ಭಟ್ ಸಮರ್ಥ ನಾಯಕತ್ವ ಗುಣ ಹೊಂದಿದ್ದಾರೆ:
ಸಂಘದ ಮಾಜಿ ನಿರ್ದೇಶಕ ಅಂಡೆಪುಣಿ ಗೋವಿಂದ ಭಟ್ರವರು ಮಾತನಾಡಿ ಸಮರ್ಪಕವಾದ ಆಡಳಿತ ಮಂಡಳಿ, ಸಮರ್ಪಕವಾದ ನಾಯಕತ್ವ ಗುಣ ಹೊಂದಿರದ ಹಾಗೂ ನಾಯಕತ್ವದ ಕೊರತೆಯಿಂದ ಇಂದು ಹಲವಾರು ಸಹಕಾರಿ ಸಂಸ್ಥೆಗಳು ಮುಳುಗಿಹೋಗಿದೆ.ಸಹಕಾರಿ ರತ್ನರು ಎನಿಸಿಕೊಂಡ ಹಲವು ತಿಮಿಂಗಿಲಗಳಿಂದ ದೊಡ್ಡ ದೊಡ್ಡ ಸಹಕಾರಿ ಸಂಸ್ಥೆಗಳು ಮುಳುಗಿ ಹೋಗಿದೆ.ಇಂತಹ ಸಂದರ್ಭದಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದು ಸಮರ್ಪಕ ನಾಯಕತ್ವ ಗುಣ ಹೊಂದಿರುವ ರೈತಮಿತ್ರನೆಂದೇ ಗುರುತಿಸಿಕೊಂಡಿರುವ ಪಂಜಿಗುಡ್ಡೆ ಈಶ್ವರ ಭಟ್ರವರಿಂದ ಬನ್ನೂರು ರೈತರ ಸೇವಾ ಸಹಕಾರಿ ಸಂಘದಲ್ಲಿ ಅದೆಷ್ಟೋ ಕೆಲಸ ಕಾರ್ಯಗಳು ನಡೆದು ಸಂಘವೂ ಲಾಭದತ್ತ ಮುನ್ನುಗುತ್ತಿದ್ದು ಈಶ್ವರ ಭಟ್ರವರ ನೇತೃತ್ವದ ತಂಡವನ್ನೇ ಮತ್ತೊಮ್ಮೆ ಗೆಲ್ಲಿಸಿ ಕೊಡಬೇಕು ಎಂದು ಹೇಳಿದರು.
ಚುನಾವಣೆ ನಡೆದರೆ ನಾವೆಲ್ಲರೂ ತಯಾರಾಗಿದ್ದೇವೆ:
ಜಿಲ್ಲಾ ಸಹಕಾರಿ ಯೂನಿಯನ್ನ ನಿರ್ಗಮಿತ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಅವರು ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಚುನಾವಣೆ ನಡೆಯಬಾರದೆಂದು ಹೇಳಲಿಕ್ಕೆ ಆಗುವುದಿಲ್ಲ.ಬನ್ನೂರು ರೈತರ ಸೇವಾ ಸಹಕಾರಿ ಸಂಘಕ್ಕೆ ನಾಳೆ ಚುನಾವಣೆ ನಡೆದರೂ ಈಶ್ವರ ಭಟ್ ಪಂಜಿಗುಡ್ಡೆ ಅವರ ತಂಡವೇ ಗೆಲ್ಲಲಿದೆ ಎಂಬುದಕ್ಕೆ ಇಲ್ಲಿ ಸೇರಿದ ಅಸಂಖ್ಯಾತ ಸದಸ್ಯರೇ ಸಾಕ್ಷಿಯಾಗಿದ್ದಾರೆ. ಎಂದು ಹೇಳಿದರು.ಸಂಧಾನವಾದರೆ ಸರಿ.ಒಂದು ವೇಳೆ ಸಂಧಾನ ಆಗದೇ ಚುನಾವಣೆ ನಡೆದರೆ ನಾವೆಲ್ಲರೂ ಶಕ್ತಿ ನೀಡಿ ಈಶ್ವರ ಭಟ್ ಅವರ ತಂಡವನ್ನೇ ಗೆಲ್ಲಿಸಿ ಕೊಡುವ ಎಂದರು.
ಈಶ್ವರ ಭಟ್ ಪಂಜಿಗುಡ್ಡೆ ಸಂಘದ ಸದಸ್ಯರ ಗೌರವ ಹೆಚ್ಚಿಸಿದ್ದಾರೆ:
ಸಹಕಾರಿ ಧುರೀಣ ಮುರಳೀಧರ ರೈ ಮಠಂತಬೆಟ್ಟುರವರು ಮಾತನಾಡಿ, ಈಶ್ವರ ಭಟ್ರವರು ಸಂಘದ ಸದಸ್ಯರ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಅವರ ಜೊತೆಗೆ ಸೇರಿಕೊಂಡು ಹಲವಾರು ಉತ್ತಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಇದು ಅವರ ಹಿರಿಮೆಯಾಗಿದೆ.ಸದಸ್ಯರುಗಳ ತೀರ್ಮಾನದಂತೆ ನಾವು ಚುನಾವಣೆಯನ್ನು ಎದುರಿಸಲು ಸಿದ್ಧ.ಒಂದು ವೇಳೆ ಚುನಾವಣೆ ನಡೆದರೆ ಎಲ್ಲಾ ಸದಸ್ಯರೂ ಒಗ್ಗಟ್ಟಿನಿಂದ ಕೆಲಸ ಕಾರ್ಯಮಾಡಿ ಈಶ್ವರ ಭಟ್ರವರ ತಂಡವನ್ನು ಗೆಲ್ಲಿಸಿಕೊಡಬೇಕೆಂದು ವಿನಂತಿಸಿದರು.ಈಶ್ವರ ಭಟ್ರವರು ಒಂದೂವರೆ ತಿಂಗಳ ಅವಧಿಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳ ಭಾವನೆಗೆ ಸ್ಪಂದಿಸಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಲು ಹೊರಟಿದ್ದಾರೆ ಅದೇ ರೀತಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಕೆಲಸ ಕಾರ್ಯಗಳಲ್ಲೀಯೂ ಸಕ್ರಿಯರಾಗಿದ್ದಾರೆ.ಅವರ ಉತ್ತಮ ಕೆಲಸ ಕಾರ್ಯಗಳಿಗೆ ಸದಾ ನಾವು ಪ್ರೋತ್ಸಾಹ ನೀಡುತ್ತಾ ಬರಬೇಕು ಎಂದು ಹೇಳಿದರು.
ಕ್ರೈಸ್ತರಿಗೆ ಪ್ರಾತಿನಿಧ್ಯ ನೀಡಬೇಕು:
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸದಸ್ಯರಾದ ಮೌರೀಸ್ ಕುಟಿನ್ಹಾರವರು ಮಾತನಾಡಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಈ ಬಾರಿ ಕ್ರೈಸ್ತ ಬಾಂಧವರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ವಿನಂತಿಸಿದರು.
ವೇದಿಕೆಯಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಸುಭಾಸ್ ನಾಯಕ್, ಸುಬ್ರಹ್ಮಣ್ಯ ಗೌಡ ಹಣಿಯೂರು, ಜಯಲಕ್ಷ್ಮೀ ಸುರೇಶ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.