ಕಡಬ: ಸುಮಾರು 5 ವರ್ಷಗಳ ಹಿಂದೆ ಕೊರೋನ ಮಹಾಮಾರಿಯ ಸಂದರ್ಭದಲ್ಲಿ ನಿಂತು ಹೋಗಿದ್ದ ಕಡಬ ಜಾತ್ರೆಯು, ನಂತರದ ವರ್ಷಗಳಲ್ಲಿ ನಡೆಯದಿರುವುದಕ್ಕೆ ನಾವು ಕಾರಣರಲ್ಲ, ಶ್ರೀ ಕಡಂಬಳಿತ್ತಾಯ ಸ್ವಾಮಿಯ ಸಾನಿಧ್ಯವನ್ನು ಗೌರವಯುತವಾಗಿ ನಡೆಸಿಕೊಂಡರೆ ಈಗಲೂ ಕುಕ್ಕೆರೆಬೆಟ್ಟುವಿನಿಂದ ಭಂಡಾರ ಕೊಂಡೊಯ್ಯಲು ನಾವು ಸಿದ್ದರಿದ್ದೇವೆ ಎಂದು ಕುಕ್ಕೆರಬೆಟ್ಟು ಮನೆತನದ ಸುರೇಂದ್ರ ನಾಯ್ಕ್ ಅವರು ಹೇಳಿದರು.
ಅವರು ಜ.7ರಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಡಬದ ಇತಿಹಾಸ ಪ್ರಸಿದ್ದವಾದ ಕಡಬ ಜಾತ್ರೆಯು ಕಳೆದ ಐದು ವರ್ಷಗಳಿಂದ ನಿಂತಿರುವುದು, ಇದಕ್ಕೆ ಕಡಂಬಳಿತ್ತಾಯ ಸ್ವಾಮಿಯ ಆಡಳಿತದಾರರಾದ ಕುಕ್ಕೆರೆಬೆಟ್ಟು ಮನೆತನದ ಮೇಲೆ ಜನಸಾಮಾನ್ಯರಿಗೆ ಮೂಡಿರುವ ಸಂಶಯಗಳಿಗೆ ಉತ್ತರವನ್ನು ನೀಡುತ್ತಿದ್ದೇವೆ.
ಸುಮಾರು 4 ವರ್ಷಗಳ ಹಿಂದೆ ಕುಕ್ಕೆರೆಬೆಟ್ಟು ಮನೆತನದಲ್ಲಿ ಕಡಂಬಳಿತ್ತಾಯ ಸ್ವಾಮಿ, ಕುಟುಂಬದ ನಾಗದೇವರು ಮತ್ತು ಇತರ ದೈವಗಳ ಜೀರ್ಣೋದ್ದಾರದ ಬಗ್ಗೆ ನಡೆದ ಪ್ರಶ್ನಾ ಚಿಂತನೆಯಲ್ಲಿ ಶ್ರೀ ಕಡಂಬಳಿತ್ತಾಯ ಸ್ವಾಮಿಯ ಸಾನಿಧ್ಯಕ್ಕೆ ಹಾಗೂ ಪಾವಿತ್ರ್ಯಕ್ಕೆ ದಕ್ಕೆ ಬರುತ್ತಿದೆ ಎಂದು ಜ್ಯೋತಿಷಿಗಳಿಂದ ಚಿಂತನೆಯಲ್ಲಿ ಕಂಡು ಬಂದಾಗ ಕೂಡಲೇ ಈ ವಿಚಾರವನ್ನು ಜಾತ್ರೋತ್ಸೋವ ಸಮಿತಿಯವರಿಗೆ ತಿಳಿಸಿದ್ದು ಅಲ್ಲಿಗೆ ಆಗಮಿಸಿದ್ದ ಸಮಿತಿಯ ಪದಾಧಿಕಾರಿಗಳಿಗೆ ಆ ಬಗ್ಗೆ ಜ್ಯೋತಿಷಿಗಳೇ ವಿವರಣೆ ನೀಡಿದ್ದರು. ಭಂಡಾರ ಇಡುವ ಕಡಬ ಮಾಡದಲ್ಲಿ ಶುದ್ದಿ ಕಲಶ ಆಗದೆ ಜಾತ್ರೆ ನಡೆಯುವುದು, 2 ಮನೆಗಳ ಭಂಡಾರ ಬಾರದೆ ಇರುವುದು, ಭಂಡಾರದ ಮನೆತನದ ಸಾನಿಧ್ಯಗಳಿಗೆ ಹೇಳಿಕೆ ನೀಡದಿರುವುದು ಇತ್ಯಾದಿಯಾಗಿ ಮಾಡದಲ್ಲಿನ ಹಲವು ಪದ್ದತಿಗಳಲ್ಲಿನ ನ್ಯೂನತೆಗಳ ಬಗ್ಗೆ ವಿವರಿಸಿದರು ಹಾಗೂ ಶ್ರೀ ಕಡಂಬಳಿತ್ತಾಯ ಸ್ವಾಮಿಯ ಸಾನಿಧ್ಯಕ್ಕೆ ಗೌರವಯುತವಾಗಿ ನಡೆದುಕೊಳ್ಳಬೇಕಾಗಿರುವ ಅಂಶಗಳನ್ನು ಮನವರಿಕೆ ಮಾಡಿದ್ದರು. ಅಲ್ಲದೆ ಕೆಲ ದಿನಗಳ ನಂತರ ಮಾಡದಲ್ಲಿ ನಡೆದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ವಿಚಾರಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿ, ಕಡಂಬಳಿತ್ತಾಯ ಸ್ವಾಮಿಯ ಬಗ್ಗೆ ಕುಕ್ಕೆರೆಬೆಟ್ಟುವಿನಲ್ಲಿ ನಡೆದ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ಅಂಶಗಳನ್ನು ಪುನರ್ ವಿಮರ್ಶಿಸಬೇಕು ಎಂದು ತಿಳಿಸಿರುತ್ತೇವೆ. ಅಲ್ಲದೆ 2024 ಅಕ್ಟೋಬರ್ ನಲ್ಲಿ ಕುಕ್ಕೆರೆಬೆಟ್ಟುವಿಗೆ ಆಗಮಿಸಿದ ಜಾತ್ರಾ ಸಮಿತಿಯವರು ಮುಂದಿನ ದಿನಗಳಲ್ಲಿ ನಡೆಸುವ ಜಾತ್ರೋತ್ಸವ ಬಗ್ಗೆ ಚರ್ಚಿಸಿದಾಗ ಆ ಸಂದರ್ಭದಲ್ಲಿಯೂ ಹಿಂದೆ ತಿಳಿಸಿದಂತ ವಿಚಾರಗಳನ್ನು ಮತ್ತೊಮ್ಮೆ ಅವರ ಗಮನಕ್ಕೆ ತಂದಿದ್ದು ಆ ವೇಳೆಯೂ ನಾವು ಭಂಡಾರ ತರುವುದಿಲ್ಲ ಎಂದು ಹೇಳಲಿಲ್ಲ ಎಂದರು.
ಕುಕ್ಕೆರೆಬೆಟ್ಟು ಕುಲ ಪುರೋಹಿತರ ಮೇಲೆ ಆಪಾದನೆ ಸರಿಯಲ್ಲ:
ಕುಕ್ಕೆರೆಬೆಟ್ಟು ಕುಟುಂಬದ ಕುಲ ಪುರೋಹಿತರು ಭಂಡಾರ ತರಲು ಬಿಡುತ್ತಿಲ್ಲ ಎಂದು ಅವರ ಮೇಲೂ ಆಪಾದನೆ ಮಾಡುತ್ತಿರುವುದು ಕೇಳಿ ಬರುತ್ತಿದೆ, ಇದು ಸರಿಯಲ್ಲ ಎಂದ ಅವರು ಜಾತ್ರೋತ್ಸವ ನಡೆಯುವ ಸಂದರ್ಭದಲ್ಲಿ ಆಗುತ್ತಿರುವ ನ್ಯೂನತೆಗಳನ್ನು ಸರಿಪಡಿಸದೆ ಪುರೋಹಿತರ ಮೇಲೆ, ಕುಕ್ಕೆರೆಬೆಟ್ಟು ಮನೆತನದವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಜನರಿಗೆ ತಪ್ಪು ಸಂದೇಶಗಳನ್ನು ನೀಡಿರುವುದು ಸರಿಯಲ್ಲ, ಇದರಿಂದ ಮೂಲ ಸಮಸ್ಯೆಗಳು ಬಗೆಹರಿಯದೆ ಸಮಸ್ಯೆ ಉಲ್ಬಣ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಪೂರ್ವ ಪದ್ದತಿಯಂತೆಸೋಣ ನಡಾವಳಿ- ಅಂದರೇನು?
ಜ.13ರಂದು ಸೋಣ ನಡಾವಳಿ ನಡೆಸುವ ಬಗ್ಗೆ ಮುದ್ರಿಸಿರುವ ಆಮಂತ್ರಣ ಪತ್ರಿಕೆ ನಮ್ಮ ಗಮನಕ್ಕೆ ಬಂದಿರುತ್ತದೆ. ಆ ಆಮಂತ್ರಣ ಪತ್ರದಲ್ಲಿ ಪೂರ್ವ ಪದ್ದತಿಯಂತೆ ಸೋಣ ನಡಾವಳಿ ನಡೆಸುವುದಾಗಿ ಮುದ್ರಿಸಲಾಗಿದೆ, ಪೂರ್ವ ಪದ್ದತಿ ಎಂದು ಹೇಳಬೇಕಾದರೆ ಸಂಬಂಧಪಟ್ಟ ಮನೆತನದಿಂದ ಭಂಡಾರ ಬಂದು ನೇಮೋತ್ಸವ ನಡೆಯಬೇಕು, ಆ ಆಮಂತ್ರಣ ಪತ್ರದಲ್ಲಿ ಕಡಬ ಮಾಡದಿಂದ ಕಡಂಬಳಿತ್ತಾಯ ಸ್ವಾಮಿಯ ಭಂಡಾರ ಹೊರಡುವುದೆಂದು ಬರೆಯಲಾಗಿದೆ, ಇದು ಪೂರ್ವ ಪದ್ದತಿಯೇ ? ಕಡಂಬಳಿತ್ತಾಯ ಸ್ವಾಮಿಯ ಭಂಡಾರ ಪೂರ್ವ ಪದ್ದತಿಯಂತೆ ಅಂದಿನಿಂದ ಇಂದಿನವರೆಗೆ ನಮ್ಮ ಕುಕ್ಕೆರೆಬೆಟ್ಟು ಸ್ವಾಮಿಯ ಚಾವಡಿಯಿಂದ ಬರುತ್ತಿತ್ತೆ ಹೊರತು, ಕಡಬ ಮಾಡ ಆಗಲಿ ಇನ್ಯಾವುದೇ ಮನೆಯಿಂದ ಬರುತ್ತಿರಲಿಲ್ಲ. ಇನ್ನು ಎರಡು ಕಡೆಯಿಂದ ಕಡಬ ಜಾತ್ರೆಗೆ ಬರುತ್ತಿದ್ದ ಭಂಡಾರ ನಿಂತು ತುಂಬಾ ವರ್ಷಗಳಾಗಿರುತ್ತದೆ. ಇದು ಪೂರ್ವ ಪದ್ದತಿಯೇ? ಎಂದು ಪ್ರಶ್ನಿಸಿದರು.
ಕಡಂಬಳಿತ್ತಾಯ ಸ್ವಾಮಿಯ ಪಾತ್ರಿಯನ್ನು ಬದಲು ಮಾಡುತ್ತಾರೆಯೇ?
ಕಡಬ ಜಾತ್ರೆ ಮತ್ತು ಸೋಣ ನಡಾವಳಿಗೆ ಪೂರ್ವ ಪದ್ದತಿಯಂತೆ ಕಡಂಬಳಿತ್ತಾಯ ಸ್ವಾಮಿಯ ಪಾತ್ರಿ ಕುಕ್ಕೆರೆಬೆಟ್ಟು ಮನೆತನದವರು ಆಗಿರುತ್ತಾರೆ ಹೊರತು ಬೇರೆಯವರು ಅಲ್ಲ, ಸ್ವಾಮಿಗೆ ಪಾತ್ರಿಯಾಗುವ ಅರ್ಹತೆಯೂ ಸೋಣ ನಡವಳಿಯಲ್ಲಿ ಬೂಳ್ಯವಾಗುವ ಸಂಪ್ರದಾಯದಲ್ಲಿ ನೀಡಲಾಗುತ್ತದೆ. ಕುಕ್ಕೆರಬೆಟ್ಟುವಿನಲ್ಲಿ ಕಳೆದ ವರ್ಷ ಕಡಂಬಳಿತ್ತಾಯ ಸ್ವಾಮಿಯ ದೈವಸ್ಥಾನ ಜೀರ್ಣೋದ್ಧಾರ ಗೊಂಡ ಹಿನ್ನೆಲೆಯಲ್ಲಿ ನೇಮೋತ್ಸವ ನಡೆದಿದ್ದು ಈ ನೇಮೋತ್ಸವ ಕಡಬ ಜಾತ್ರೆಯ ನೇಮೋತ್ಸವ ಕ್ಕ ಸಂಬಂಧವಿಲ್ಲ ಎಂದು ಅವರು ಸ್ವಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಕ್ಕೆರೆಬೆಟ್ಟು ಮನೆತನದ ಮುಖ್ಯಸ್ಥ ತಮ್ಮಯ್ಯ ನಾಯ್ಕ್, ಕಡಂಬಳಿತ್ತಾಯ ಸ್ವಾಮಿಯ ಪಾತ್ರಿ ಬಾಲಕೃಷ್ಣ ನಾಯ್ಕ್, ಅರ್ಚಕ ಗೋಪಾಲಕೃಷ್ಣ ಕೆದಿಲಾಯ, ಕುಕ್ಕೆರೆಬೆಟ್ಟು ಮನೆತನದ ಸುರೇಶ್ ನಾಯ್ಕ್, ಶ್ರೀಕಾಂತ್ ನಾಯ್ಕ್, ರಘುರಾಮ ನಾಯ್ಕ್, ಮುಖೇಶ್ ನಾಯ್ಕ್ ಸುನಿಲ್ ನಾಯ್ಕ್, ವೈಶಾಕ್ ನಾಯ್ಕ್ ಉಪಸ್ಥಿತರಿದ್ದರು.