ಮಂಗಳೂರು:ವಿದ್ಯಾರ್ಥಿಯೋರ್ವ ಬಸ್ಸಿನಿಂದ ರಸ್ತೆಗೆಸೆಯಲ್ಪಟ್ಟ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು, ಬಸ್ಸಿನ ಚಾಲಕ ಹಾಗೂ ನಿರ್ವಾಹಕನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
2019ರ ಆ.24ರಂದು ಘಟನೆ ನಡೆದಿತ್ತು.
ನಿಂತಿಕಲ್ಲು ಕಡೆಯಿಂದ ಕಾಣಿಯೂರು ಕಡೆಗೆ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಬರುತ್ತಿದ್ದ ಬಸ್ಸಿನಲ್ಲಿದ್ದ ವಿದ್ಯಾರ್ಥಿ ಮಹಮ್ಮದ್ ಅಫೀಝ್ ಎಂಬವರು, ಬೆಳಂದೂರಿನಲ್ಲಿ ಬಸ್ಸಿನಿಂದ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು.ಪ್ರಯಾಣಿಕರು ಹತ್ತುವ ಹಾಗೂ ಇಳಿಯುವ ದ್ವಾರದ ಬಾಗಿಲುಗಳನ್ನು ಮುಚ್ಚಿ ಭದ್ರಪಡಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಿ ಬಸ್ ಚಾಲಕ ವಿಷ್ಣು ಕುಮಾರ್ ಮತ್ತು ನಿರ್ವಾಹಕ ವಿಜಯ ಕುಮಾರ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಧಿಶರಾದ ಅರ್ಪಿತಾ ಅವರು, ಆರೋಪಿಗಳನ್ನು ದೋಷಿ ಎಂದು ಘೋಷಿಸಿ, ಒಂದನೇ ಆರೋಪಿಗೆ ಕಲಂ 279ರಡಿಯಲ್ಲಿ 1 ತಿಂಗಳ ಸಾದಾ ಕಾರಾಗೃಹ ವಾಸ ಮತ್ತು ರೂ.1000 ದಂಡ ವಿಧಿಸಿದ್ದಾರೆ.ದಂಡ ತೆರಲು ತಪ್ಪಿದಲ್ಲಿ 15 ದಿನಗಳ ಸಾದಾ ಕಾರಾಗೃಹವಾಸ ಅನುಭವಿಸುವಂತೆ ಆದೇಶಿಸಿದ್ದಾರೆ.ಎರಡನೇ ಆರೋಪಿಗೆ ಕಲಂ 336ರಡಿಯಲ್ಲಿ 1 ತಿಂಗಳ ಸಾದಾ ಕಾರಾಗೃಹವಾಸ ಮತ್ತು ರೂ.250 ದಂಡ ವಿಧಿಸಲಾಗಿದೆ.ದಂಡ ತೆರಲು ತಪ್ಪಿದಲ್ಲಿ 15 ದಿನಗಳ ಸಾದಾ ಕಾರಾಗೃಹವಾಸ ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ.