ಅಮೃತ್ ಭಾರತ್ ಯೋಜನೆಯಲ್ಲಿ ಮಂಗಳೂರು-ಸುಬ್ರಹ್ಮಣ್ಯ ರೈಲ್ವೇ ಹಳಿ ನಡುವೆ ನಿರ್ಮಾಣವಾಗುತ್ತಿವೆ ನಾಲ್ಕು ಮೇಲ್ಸೇತುವೆಗಳು

0

ಕಡಬ: ಕೇಂದ್ರ ಸರಕಾರದ ಅಮೃತ್ ಭಾರತ್ ವಿಶೇಷ ಯೋಜನೆಯ ರೈಲ್ವೇ ಮೈಸೂರು ವಿಭಾಗದ ಮಂಗಳೂರು -ಸುಬ್ರಹ್ಮಣ್ಯ ಮಧ್ಯೆ ನಾಲ್ಕು ಕಡೆ ರೈಲ್ವೇ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಮುಗಿಯಲಿದೆ.


ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2024 ನೇ ಫೆಬ್ರವರಿ 26 ರಂದು ದೇಶಾದ್ಯಾಂತ ನನ್ನ ಕುಟುಂಬ ಸದಸ್ಯರಿಗೆ 41 ಸಾವಿರ ಕೋಟಿ ರೂ ಮೌಲ್ಯದ ರೈಲ್ವೇ ಯೋಜನೆೆಗಳ ಉಡುಗೊರೆ ಎನ್ನುವ ಘೋಷಣೆಯೊಂದಿಗೆ ಯೋಜನೆಗಳಿಗೆ ಚಾಲನೆ ನೀಡಿದ್ದರು.


ಅಮೃತ ಭಾರತ್ ಸ್ಪೆಷಲ್ ಯೋಜನೆಯಲ್ಲಿ 554 ರೈಲ್ವೇ ನಿಲ್ದಾಣಗಳ ಪುನರಾಭಿವೃದ್ಧಿ ಹಾಗೂ 1500 ರಸ್ತೆ ಮೇಲ್ಸೇತುವೆಗಳು ಹಾಗೂ ಅಂಡರ್ ಪಾಸ್‌ಗಳ ಶಂಕುಸ್ಥಾಪನೆ ನೆರವೇರಿಸಿದ್ದರು. ಇದರ ಒಂದು ಭಾಗವೇ ಮಂಗಳೂರು-ಬೆಂಗಳೂರು ರೈಲ್ಷೇ ಹಳಿಯ ಮೇಲೆ ಬರುವ ಸುಬ್ರಹ್ಮಣ್ಯ -ಮಂಗಳೂರು ಮಧ್ಯೆ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕೋರಿಯಾರ್, 102ನೇ ನೆಕ್ಕಿಲಾಡಿ ಗ್ರಾಮದ ಬಜಕರೆ, ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ಸಾಂದೀಪನಿ ವಿದ್ಯಾಸಂಸ್ಥೆಯ ಬಳಿ ಹಾಗೂ ನರಿಮೊಗರು ಗ್ರಾಮದ ಗಡಿಪಿಲ ಎಂಬಲ್ಲಿ ನಾಲ್ಕು ಕಡೆ ಸುಮಾರು 24ಕೋಟಿ ರೂ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣವಾಗುತ್ತಿದೆ. ಈ ಪೈಕಿ ಗಡಿಪಿಲದ ಕಾಮಗಾರಿ ಹೊರತುಪಡಿಸಿ ಉಳಿದ ಮೂರು ಕಾಮಗಾರಿಗಳು ಶೇ.60 ರಷ್ಟು ಮುಗಿದಿದೆ. ಕೋರಿಯಾರ್, ಬಜಕರೆ ಹಾಗು ಪುರುಷರಕಟ್ಟೆಯ ಮೇಲ್ಸೇತುವೆ ಕಾಮಗಾರಿ ಫೆಬ್ರವರಿ ತಿಂಗಳಾಂತ್ಯಕ್ಕೆ ಮುಗಿಯಲಿದೆ ಎಂದು ಹೇಳಲಾಗಿದೆ. ಗಡಿಪಿಲದ ಕಾಮಗಾರಿ ಎಪ್ರಿಲ್ ತಿಂಗಳಿಗೆ ಕೊನೆಗೊಳ್ಳಲಿದೆ.

ರೈಲ್ವೇ ಹಳಿಯಿಂದ ಸುಮಾರು 6.53ಮೀಟರ್ ಎತ್ತರ(ಅಗತ್ಯ ಬಿದ್ದಲ್ಲಿ ಸ್ವಲ್ಪ ಬದಲಾವಣೆಯಾಗಬಹುದು) , 7.5 ಮೀಟರ್ ಅಗಲ, 10 ಮೀಟರ್ ಉದ್ದದ ಸೇತುವೆ ನಿರ್ಮಾಣವಾಗಲಿದೆ. ಇದಕ್ಕೆ ಪೂರಕವಾದ ಸಂಪರ್ಕ ರಸ್ತೆ ನಿರ್ಮಾಣ ಹಾಗೂ ಅದರ ಕಾಂಕ್ರೀಟಿಕರಣ ಆಗಲಿದೆ. ಬೆಂಗಳೂರು ಮೂಲದ ಎಸ್.ವಿ. ಕನ್ಸ್ಟ್ರಕ್ಷನ್ಸ್ ನವರು ಗುತ್ತಿಗೆ ಪಡೆದು ಕಾಮಗಾರಿ ಕೈಗೆತ್ತಿಕೊಂಡಿದ್ದು, ಹವಾಮಾನ ವೈಪರೀತ್ಯದಿಂದಾಗಿ ಮಳೆಯ ಹಿನ್ನೆಲೆಯಲ್ಲಿ ಕಾಮಗಾರಿ ಸ್ವಲ್ಪ ನಿಧಾನಗತಿಯಲ್ಲಿ ಸಾಗಿದರೂ ಮಳೆ ದೂರವಾದ ಬಳಿಕ ಕಾಮಗಾರಿ ವೇಗವನ್ನು ಪಡೆದುಕೊಂಡಿದೆ. ಈಗಾಗಲೇ ಈ ಭಾಗದ ರೈಲ್ವೇ ನಿಲ್ದಾಣಗಳ ವಿದ್ಯುದ್ಧೀಕರಣ, ಪ್ಲಾಟ್ ಫಾರ್ಮ್ಗಳ ಎತ್ತರಿಸುವ ಕಾರ್ಯಗಳು ನಡೆದು ಅಭಿವೃದ್ಧಿಗೊಂಡಿವೆ. ಮೇಲ್ಸೇತುವೆಗಳ ಕಾಮಗಾರಿ ಶೀಘ್ರ ಮುಗಿದಲ್ಲಿ ಆಯಾ ಭಾಗದ ಜನರ ಬಹುಕಾಲದ ಕನಸು ಈಡೇರಿದಂತಾಗುತ್ತದೆ.

ಕೋರಿಯಾರ್ ಹಾಗೂ ಬಜಕರೆಯಲ್ಲಿ ರೈಲ್ಷೇ ಮೇಲ್ಸೇತುವೆ ನಿರ್ಮಿಸುವಂತೆ ನಾವು ಅಂದಿನ ಸಂಸದ ನಳಿನ್ ಕುಮಾರ್ ಕಟೀಲ್ ಅವರಲ್ಲಿ ಮನವಿ ಮಾಡಿದ್ದೆವು. ಅವರು ಅದನ್ನು ನೆರವೇರಿಸುವ ಭರವಸೆ ನೀಡಿದ್ದರು. ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಮೃತ ಭಾರತ್ ಯೋಜನೆಯಲ್ಲಿ ಅನುದಾನ ಜೋಡಿಸಿಕೊಂಡು ಮೇಲ್ಸೇತುವೆ ನಿರ್ಮಾಣ ಕಾರ್ಯವಾಗುತ್ತಿದೆ. ನಮ್ಮ ಭಾಗದ ರೈಲ್ವೇ ಇಲಾಖೆಗೆ ಸಂಬಂಧಪಟ್ಟ ಅಭಿವೃದ್ಧಿಯ ಬಗ್ಗೆ ಈಗಿನ ಸಂಸದ ಬ್ರಿಜೇಶ್ ಚೌಟ ಅವರಿಗೆ ಮನವಿ ಮಾಡಲಾಗುವುದು. ಈಗ ಮೇಲ್ಸೇತುವೆಗಳು ನಿರ್ಮಾಣವಾಗುತ್ತಿರುವುದರಿಂದ ನಾವು ಈ ಹಿಂದೆ ಗಂಟೆಗಟ್ಟಲೆ ರೈಲ್ವೇ ಗೇಟ್ ಬಳಿ ಕಾಯುವ ಸಮಸ್ಯೆ ತಪ್ಪಿಹೋಗಲಿದೆ.
ಮೇದಪ್ಪ ಗೌಡ ಡೆಪ್ಪುಣಿ, ಮಾಜಿ ನಿರ್ದೆಶಕರು, ಎ.ಪಿ.ಎಂ.ಸಿ ಪುತ್ತೂರು.

ಕೋರಿಯರ್, ಬಜಕರೆ, ಹಾಗೂ ಪುರುಷರಕಟ್ಟೆಯಲ್ಲಿ ರೈಲ್ವೇ ರಸ್ತೆ ಮೇಲ್ಸೇತುವೆ ಕಾಮಗಾರಿ ಶೇ. 60 ರಷ್ಟು ಪೂರ್ತಿಗೊಳಿಸಲಾಗಿದೆ. ಗಡಿಪಿಲದ ಕಾಮಗಾರಿಯನ್ನು ಕೂಡಾ ಪ್ರಾರಂಭಿಸಲಾಗಿದೆ. ಈ ಕಾಮಗಾರಿ ಎಪ್ರಿಲ್ ತಿಂಗಳಲ್ಲಿ ಮುಗಿಸಿ ಕೊಡಲಾಗುವುದು. ರೈಲ್ವೇ ಇಲಾಖೆಯ ಸೂಚನೆಯಂತೆ ನಾಲ್ಕು ಮೇಲ್ಸೇತುವೆಗಳ ಕಾಮಗಾರಿಗಳು ಶೀಘ್ರ ಮುಗಿಸಲು ಉದ್ದೇಶಿಸಲಾಗಿದೆ.
ಗೋವರ್ಧನ್ ರೆಡ್ಡಿ, ಪ್ರಾಜೆಕ್ಟ್ ಇಂಜಿನಿಯರ್

LEAVE A REPLY

Please enter your comment!
Please enter your name here