3ನೇ ದಿನವೂ ಉತ್ತಮ ಸ್ಪಂದನೆ- ವಿವಿಧ ಸ್ಟಾಲ್ಗಳಲ್ಲಿ ಜನ ಜಾತ್ರೆ-ಭರ್ಜರಿ ಖರೀದಿ
ಪುತ್ತೂರು: ಸುದ್ದಿ ಮಾಹಿತಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಅರಿವು ಕೃಷಿ ಕೇಂದ್ರದ ಸಾರಥ್ಯದಲ್ಲಿ ನಗರಸಭೆ, ತಾ.ಪಂ., ಜಿ.ಪಂ.ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಸಿರೇ ಉಸಿರು-ಮನೆ ಮನೆಯಲ್ಲಿ ಕೃಷಿ ಆಶಯದೊಂದಿಗೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಮೂರು ದಿನ ನಡೆದ ಸಸ್ಯಜಾತ್ರೆ ಜ.12ರಂದು ರಾತ್ರಿ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಜ.10ರಂದು ಬೆಳಿಗ್ಗೆ ಆರಂಭಗೊಂಡ ‘ಸಸ್ಯಜಾತ್ರೆ ಸೀಸನ್ 2.0’ ಕಾರ್ಯಕ್ರಮಕ್ಕೆ ಮೂರು ದಿನವೂ ಸಾರ್ವಜನಿಕರಿಂದ ಅದ್ಭುತ ಸ್ಪಂದನೆ ವ್ಯಕ್ತವಾಗಿದೆ. ಕೊನೆಯ ದಿನವಾದ ಜ.12ರಂದೂ ವಿವಿಧ ಸ್ಟಾಲ್ಗಳಲ್ಲಿ ಜನಜಂಗುಳಿ ಕಂಡುಬಂದಿದ್ದು ಭರ್ಜರಿ ಖರೀದಿ ನಡೆದಿದೆ.
ಸ್ಟಾಲ್ಗಳಲ್ಲಿ ಜನಜಂಗುಳಿ:
ಸಸ್ಯಜಾತ್ರೆ ಸೀಸನ್ 2.0 ಕಾರ್ಯಕ್ರಮದ 3ನೇ ದಿನವಾದ ಜ.12ರ ಆದಿತ್ಯವಾರ ಎಲ್ಲಾ ಸ್ಟಾಲ್ಗಳು ಜನರಿಂದ ತುಂಬಿ ಕಿಲ್ಲೆ ಮೈದಾನದಲ್ಲಿ ಅಕ್ಷರಶಃ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಸಸ್ಯಜಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದಲ್ಲದೆ ಜನರ ಮೆಚ್ಚುಗೆಗೆ ಪಾತ್ರವಾಯಿತು. ವಿವಿಧ ಸ್ಟಾಲ್ಗಳಿಗೆ ಬೆಳಿಗ್ಗೆಯಿಂದಲೇ ಜನರು ಭೇಟಿ ನೀಡಿ ಖರೀದಿಯಲ್ಲಿ ನಿರತರಾಗಿದ್ದರಲ್ಲದೆ, ವಿವಿಧ ಮಾಹಿತಿ ಪಡೆದುಕೊಳ್ಳುತ್ತಿದ್ದರು. ವಿವಿಧ ವಿಭಾಗಗಳ 120 ಸ್ಟಾಲ್ಗಳಿದ್ದು ಎಲ್ಲಾ ಸ್ಟಾಲ್ಗಳಲ್ಲಿಯೂ ಜನಜಂಗುಳಿ ಕಂಡುಬಂತು.
ಜ.12ರಂದು ಆದಿತ್ಯವಾರ ರಜೆ ಇದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು, ಗೃಹಿಣಿಯರು, ಕೃಷಿಕರು, ವಿದ್ಯಾರ್ಥಿಗಳು ಸೇರಿದಂತೆ ಹಲವು ಮಂದಿ ರಾತ್ರಿ ತನಕ ಭೇಟಿ ನೀಡುತ್ತಲೇ ಇದ್ದರು. ನರ್ಸರಿ ಮಳಿಗೆಗಳು, ಕನ್ಸ್ಟ್ರಕ್ಷನ್ ಮಳಿಗೆ, ವಿವಿಧ ಆಹಾರ ಮಳಿಗೆಗಳು, ವೆಹಿಕಲ್ಸ್, ಅಟೋಮೊಬೈಲ್ಸ್ ಸ್ಟಾಲ್ಗಳು, ಶಿಕ್ಷಣ ಸಂಸ್ಥೆಗಳ ಮಳಿಗೆಗಳು, ಬ್ಯಾಂಕ್ ಸ್ಟಾಲ್ಗಳು, ಗೊಬ್ಬರ, ಕೃಷಿ ಉಪಕರಣ ಮಳಿಗೆಗಳು, ರೈತ ಉತ್ಪಾದಕ ಸಂಸ್ಥೆಯ ಮಳಿಗೆಗಳು, ವಸ್ತ್ರ ಮಳಿಗೆಗಳು ಸೇರಿದಂತೆ 120 ಮಳಿಗೆಗಳು ಇತ್ತು. ವಿವಿಧ ಮಳಿಗೆಗಳಿಂದ ಖರೀದಿ ಮಾಡುತ್ತಿದ್ದ ಜನತೆ ಆಹಾರ ಮಳಿಗೆಗೆ ಭೇಟಿ ನೀಡಿ ದೋಸೆ, ಐಸ್ಕ್ರೀಂ, ಗುಜ್ಜೆ ಪೋಡಿ, ಬಾಳೆಕಾಯಿ ಪೋಡಿ, ಲೈಮ್ ಜ್ಯೂಸ್, ಆಲಡ್ಕ ಕಪ್ಪು ದ್ರಾಕ್ಷೆ ಹಣ್ಣಿನ ತಾಜಾ ಜ್ಯೂಸ್, ಚರುಂಬುರಿ, ಮಶ್ರೂಮ್ ಐಟಂ, ಹಲಸಿನ ಹಣ್ಣಿನ ಹೋಳಿಗೆ ಇತ್ಯಾದಿ ಸ್ಟಾಲ್ಗಳಿಂದ ಆಹಾರ ಸವಿದು ಸಸ್ಯ ಜಾತ್ರೆಯ ಸವಿಯನ್ನು ಸಂಭ್ರಮಿಸಿದರು.
ವಿವಿಧ ಗೋಷ್ಠಿಗಳು:
ಸಸ್ಯಜಾತ್ರೆಯ 3ನೇ ದಿನ ಬೆಳಿಗ್ಗೆಯಿಂದ ಸಂಜೆ ತನಕ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಕೃಷಿಯ ವಿವಿಧ ಬೆಳೆಗಳಿಗೆ ಸಂಬಂಧಿಸಿದ ವಿಚಾರ ಸಂಕಿರಣಗಳು ನಡೆಯಿತು. ಬೆಳಿಗ್ಗೆ ಗಂಟೆ 10ರಿಂದ ‘ಹಣ್ಣಿನ ಗಿಡಗಳ ಬೆಳಯುವಿಕೆ’ ಕುರಿತು ದೇಶೀ ಮತ್ತು ವಿದೇಶಿ ಹಣ್ಣಿನ ಗಿಡಗಳ ತಜ್ಞ ಅನಿಲ್ ಬಳಂಜ, ‘ಟೆರೇಸ್ ಗಾರ್ಡನ್’ ಕುರಿತು ತಜ್ಞ ಬ್ಲ್ಯಾನಿ ಡಿ’ಸೋಜ, ‘ಔಷಧ ಗಿಡಗಳು’ ಕುರಿತು ಆಯುರ್ವೇದ ತಜ್ಞ ಡಾ.ರವೀಂದ್ರನಾಥ ಐತಾಳ್, ‘ಮೀನು ಸಾಕಾಣಿಕೆ’ ಕುರಿತು ಕಡಮ್ಮಾಜೆ -ಫಾರ್ಮ್ಸ್ ನ ದೇವಿಪ್ರಸಾದ್ ಉಪ್ಪಿನಂಗಡಿ, ‘ಮೀನುಗಾರಿಕೆ ಮತ್ತು ಮೌಲ್ಯವರ್ಧನೆ’ ಕುರಿತು ಮಂಗಳೂರು ಫಿಶರೀಸ್ ಕಾಲೇಜಿನ ಹೆಚ್ಒಡಿ ಡಾ|ಮಂಜ ನಾಯ್ಕ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಗೋಷ್ಠಿ ನಡೆಸಿಕೊಟ್ಟರು.
ಸುದ್ದಿ ಚಾನೆಲ್ ನಿರೂಪಕರುಗಳಾದ ಉಮೇಶ್ ಮಿತ್ತಡ್ಕ ಮತ್ತು ಗೌತಮ್ ಶೆಟ್ಟಿ ಗೋಷ್ಠಿ ನಿರ್ವಹಣೆ ಮಾಡಿದರು. ಬೆಳ್ತಂಗಡಿ ಸುದ್ದಿ ಚಾನೆಲ್ ನಿರೂಪಕ ದಾಮೋದರ್ ದುಂಡೋಲೆ ಮತ್ತು ಸುದ್ದಿ ಬಿಡುಗಡೆ ವರದಿಗಾರ ಹರಿಪ್ರಸಾದ್ ನೆಲ್ಯಾಡಿ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು. ಸುದ್ದಿ ಮಾಹಿತಿ ಟ್ರಸ್ಟ್ ಅಧ್ಯಕ್ಷ ಡಾ.ಯು.ಪಿ.ಶಿವಾನಂದ ಅಧ್ಯಕ್ಷತೆ ವಹಿಸಿ ಸಂಪನ್ಮೂಲ ವ್ಯಕ್ತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ವಿವಿಧ ಸ್ಪರ್ಧೆಗಳು:
ಸಸ್ಯಜಾತ್ರೆ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸಸ್ಯಜಾತ್ರೆಯ 3ನೇ ದಿನ ಮೆಹೆಂದಿ, ಚಿತ್ರಕಲೆ, ಬೆಂಕಿಯಿಲ್ಲದ ಅಡುಗೆ, ಸಸ್ಯ ಗುರುತಿಸುವಿಕೆ ಸ್ಪರ್ಧೆಗಳನ್ನು ನಡೆಸಲಾಯಿತು. ಪ್ರಾಥಮಿಕ, ಪ್ರೌಢಶಾಲೆ ವಿಭಾಗ ಹಾಗೂ ಸಾರ್ವಜನಿಕರು ಸ್ಪರ್ಧೆಗಳಲ್ಲಿ ಭಾಗವಹಿಸಿದರು. ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಸ್ಪರ್ಧಾ ಕಾರ್ಯಕ್ರಮ ನಿರ್ವಹಿಸಿದರು. ತಾರನಾಥ ಸವಣೂರು, ಜಗನ್ನಾಥ ಅರಿಯಡ್ಕ, ಮೌನೇಶ್ ವಿಶ್ವಕರ್ಮ ತೀರ್ಪುಗಾರರಾಗಿ ಸಹಕರಿಸಿದರು. ಉಮೇಶ್ ನಾಯಕ್, ವಚನಾ ಜಯರಾಮ್, ಪಶುಪತಿ ಶರ್ಮರವರು ಸಹಕರಿಸಿದರು.
ಕೃಷಿ ಮೌಲ್ಯವರ್ಧಕರಿಂದ ಅನುಭವ ಹಂಚಿಕೆ:
ಸಂಜೆ ಕೃಷಿ ಮೌಲ್ಯವರ್ಧಕರಿಂದ ಅನುಭವ ಹಂಚಿಕೆ ನಡೆಯಿತು. ವಿಮೇಡ್ ಪ್ರಾಡಕ್ಟ್ನ ಮಹೇಶ್, ಇಂಡಸ್ ಬಯೋ ಪ್ರಾಡಕ್ಟ್ನ ಅಜಿತ್ ರೈ ದೇರ್ಲ, ಸತ್ವಂ ಹಾರ್ದಿಕ್ ಹರ್ಬಲ್ಸ್ನ ಮುರಳೀಧರ, ವಿವಾನ್ ಚಾಕೋ ಚೀರ್ನ ಎಚ್.ಎಂ.ಕೃಷ್ಣಕುಮಾರ್, ಲಹರಿ ಡ್ರೈ -ಟ್ಸ್ನ ಲಿಖಿತಾ ಕುಸುಮಾಧರ, ಪಂಚಗವ್ಯ ಪ್ರೋ ಬಯೋಟೆಕ್ನ ಸುರೇಶ್ ಕೂಡೂರು, ಕಾಳುಮೆಣಸು ಕೃಷಿಯ ಬಗ್ಗೆ ಅಜಿತ್ ಪ್ರಸಾದ್ ರೈ ಕಡಬ, ಅದೀವ ಲೈಫ್-ಸ್ಟೈಲ್ನ ವಚನಾ ಜಯರಾಮ್, ಕ್ಯಾಟಲ್ ಫೀಡ್ನ ಪಿಕೆಎಸ್ ಭಟ್, ಜೋಶ್ ನ್ಯಾಚುರಲ್ ಕ್ಯಾಂಡಿಯ ಭರತೇಶ್ ಜೋಯಿಸ ಎಂ., ಲಿಯ ಟಮರೈಂಡ ಕಾನ್ಸಂಟ್ರೇಟ್ನ ವಿಷ್ಣುಪ್ರಸಾದ, ನಿತ್ಯ ಫುಡ್ ಪ್ರಾಡಕ್ಟ್ನ ರಾಧಾಕೃಷ್ಣ ಇಟ್ಟಿಗುಂಡಿ ಹನಿವರ್ಲ್ಡ್ನ ಮನಮೋಹನ ಆರಂಭ್ಯರವರು ತಮ್ಮ ಉತ್ಪನ್ನಗಳ ಬಗ್ಗೆ ಅನುಭವ ಹಾಗೂ ಸುದ್ದಿ ಅರಿವು ಕೃಷಿ ಸೇವಾಕೇಂದ್ರ, ಸಸ್ಯಜಾತ್ರೆಯ ಬಗ್ಗೆ ಅನಿಸಿಕೆ ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ:
ಸಂಜೆ ಗಂಟೆ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂತ ಫಿಲೋಮಿನಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮುಂಡಾಲಗುತ್ತು ಪ್ರಶಾಂತ್ ರೈ ಸಂಯೋಜನೆಯಲ್ಲಿ ಸಸ್ಯ ಸಿರಿ ಯಕ್ಷಗಾನ ಕಲಾ ರೂಪಕ ನಡೆಯಿತು.
3 ದಿನವೂ ಸಾವಿರಾರು ಮಂದಿಗೆ ಉಪಹಾರ, ಭೋಜನ
ಸಸ್ಯಜಾತ್ರೆಯ 3 ದಿನವೂ ಆಗಮಿಸಿದ ಎಲ್ಲರಿಗೂ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಗಂಜಿ ಊಟ, ಸಂಜೆ ಚಹಾ ವ್ಯವಸ್ಥೆ ಮಾಡಲಾಗಿತ್ತು. ಮೊದಲ ದಿನ ಬೆಳಿಗ್ಗೆ ಸಜ್ಜಿಗೆ ಅವಲಕ್ಕಿ, ಮಧ್ಯಾಹ್ನ ಮತ್ತು ರಾತ್ರಿ ಗಂಜಿ ಊಟ, ಗುಜ್ಜೆ ಗಸಿ, ಚಟ್ನಿ, ಉಪ್ಪಿನಕಾಯಿ, ಸಂಜೆ ಲೆಮೆನ್ ಚಹಾ ನೀಡಲಾಗಿತ್ತು. 2ನೇ ದಿನ ಬೆಳಿಗ್ಗೆ ಕಡ್ಲೆ ಅವಲಕ್ಕಿ, ಮಧ್ಯಾಹ್ನ ಮತ್ತು ರಾತ್ರಿ ಗಂಜಿ ಊಟ, ಸೌತೆಕಾಯಿ ಅಲಸಂಡೆ ಬೀಜ ಗಸಿ, ಚಟ್ನಿ, ಉಪ್ಪಿನಕಾಯಿ, ಸಂಜೆ ಶುಂಠಿ ಚಹಾ ವ್ಯವಸ್ಥೆ ಮಾಡಲಾಗಿತ್ತು. 3ನೇ ದಿನ ಬೆಳಿಗ್ಗೆ ಹೆಸರು ಕಾಳು ಅವಲಕ್ಕಿ, ಮಧ್ಯಾಹ್ನ ಮತ್ತು ರಾತ್ರಿ ಗಂಜಿ ಊಟ, ಗುಜ್ಜೆ ಗಸಿ, ಚಟ್ನಿ, ಉಪ್ಪಿನಕಾಯಿ ಹಾಗೂ ಸಂಜೆ ಶುಂಠಿ ಚಹಾ ನೀಡಲಾಗಿತ್ತು. ಮೂರು ದಿನವೂ ಸುಮಾರು 3 ಸಾವಿರದಷ್ಟು ಮಂದಿ ಉಪಾಹಾರ, ಭೋಜನ ಸ್ವೀಕರಿಸಿದರು.
ವಿದ್ಯಾರ್ಥಿಗಳ ಶಿಸ್ತು ಬದ್ಧ ಸ್ವಯಂ ಸೇವಕ ತಂಡ
ಸಸ್ಯಜಾತ್ರೆಯ 3 ದಿನವೂ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು. ಪುತ್ತೂರು ಪ್ರಗತಿ ಸ್ಟಡಿ ಸೆಂಟರ್ ಹಾಗೂ ಸಂಪ್ಯ ಅಕ್ಷಯ ಕಾಲೇಜಿನ ಸುಮಾರು ನೂರು ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಸ್ವಯಂಸೇವಕರಾಗಿ ದುಡಿದರು. ಶಿಸ್ತುಬದ್ಧವಾಗಿ ಹಾಗೂ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.