ನೂತನ ಕಟ್ಟಡ ಲೋಕಾರ್ಪಣೆ- ಅದ್ಧೂರಿ ಮೆರವಣಿಗೆ- ಸ್ಮರಣಸಂಚಿಕೆ ಅನಾವರಣ
ಕಾಣಿಯೂರು: ಜೀವಕ್ಕೆ ರಕ್ಷಣೆ ನೀಡುವ ಸೈನಿಕ, ಆರೋಗ್ಯಕ್ಕೆ ಅನ್ನ ನೀಡುವ ರೈತ ದೇಶದ ಎರಡು ಕಣ್ಣುಗಳು. ಇವರಿಬ್ಬರನ್ನು ಸಮಾಜ ಗೌರವಿಸಬೇಕು. ಸಹಕಾರ ಕ್ಷೇತ್ರ ನಮ್ಮೆಲ್ಲರ ಏಳಿಗೆಗೆ ಮೂಲ ಸ್ಪೂರ್ತಿಯಾಗಿದ್ದು, ಪರಸ್ಪರ ಸಹಕಾರ ಪ್ರತಿ ಮನೆ ಮನಗಳಲ್ಲಿ ಮೂಡಿದಾಗ ದೇಶ ಸುಭಿಕ್ಷವಾಗುತ್ತದೆ . ರೈತರ ಹಿತ ಕಾಪಾಡುವಲ್ಲಿ ಸಹಕಾರಿ ಕ್ಷೇತ್ರದ ಪಾಲು ಅತಿ ದೊಡ್ಡದು. ನಾವು ಮಾತ್ಸರ್ಯ, ದ್ವೇಷ ಎಲ್ಲವನ್ನು ಹೊರಗಿಟ್ಟು ಪರಸ್ಪರ ಸಹಕಾರದಲ್ಲಿ ತೊಡಗಿಸಿಕೊಂಡಾಗ ಎಲ್ಲರಿಗೂ ಒಳಿತಾಗಲು ಸಾಧ್ಯ ಎಂದು ಕಾಣಿಯೂರು ರಾಮತೀರ್ಥ ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ನುಡಿದರು.
ಜ.13ರಂದು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಾಣಿಯೂರು ಇದರ ಶತಮಾನೋತ್ಸವದ ಸವಿನೆನೆಪಿಗಾಗಿ ನಿರ್ಮಾಣವಾದ ನೂತನ ಕಛೇರಿ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಬಳಿಕ ಕಾಣಿಯೂರು ರಾಮತೀರ್ಥ ಮಠದ ಜಾತ್ರಾ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರದಲ್ಲಿ ಅವರು ಆಶೀರ್ವಚನ ನೀಡಿದರು. ದೇಶವಾಸಿಗಳು ಸುಖ ಹಾಗೂ ನೆಮ್ಮದಿಯಿಂದ ಇದ್ದರೆ ಅದಕ್ಕೆ ರೈತ ಹಾಗೂ ಸೈನಿಕ ಕಾರಣ ಅವರನ್ನು ನಾವು ಯಾವತ್ತೂ ನೆನೆಯಲೇಬೇಕು. ನಾವೆಲ್ಲಾ ಸಹಕಾರ ತತ್ವದಡಿಯಲ್ಲಿ ಬದುಕುವ ವ್ಯವಸ್ಥೆ ನಡೆದಾಗ ನಮ್ಮ ನಾಡು, ದೇಶ ಸುಸ್ಥಿತಿಯಲ್ಲಿರಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಚಾರ್ವಾಕ ಕೃಷಿ ಪತ್ತಿನ ಸಹಕಾರ ಸಂಘದ ನೂರು ವರ್ಷದಲ್ಲಿ ಈ ಭಾಗದ ರೈತರ ಜೀವನಾಡಿಯಾಗಿ ಸಮಾಜದಲ್ಲಿ ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ. ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಅವರ ಕಾರ್ಯವೈಖರಿಯಿಂದ ಸಂಘದ ಘನತೆ ಗೌರವ ಇನ್ನೂ ಹೆಚ್ಚಾಗಿ ಜನಮಾನಸದಲ್ಲಿ ಉಳಿಯುವಂತಾಗಿದೆ ಎಂದ ಶ್ರೀಗಳು, ಕೃಷಿಕರಿಗೆ ಅನುಕೂಲವಾಗಲೆಂದು ಹುಟ್ಟು ಹಾಕಿದ ಸಂಘವು ಅನೇಕ ಹಿರಿಯರ ಪರಿಶ್ರಮದ ಫಲವಾಗಿ ಯಶಸ್ವಿಯಾಗಿ ಇದೀಗ ಶತಮಾನವನ್ನು ಕಂಡಿದೆ. ಸಂಘದ ಪ್ರಸ್ತುತ ನೇತೃತ್ವ ವಹಿಸಿದ ಆಡಳಿತ ಮಂಡಳಿ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿ ಮಾದರಿಯಾಗಿದೆ ಎಂದು ಹೇಳಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ದೇಶಕ್ಕೆ ಬ್ಯಾಂಕಿಂಗ್ ಕ್ಷೇತ್ರವನ್ನು ಹೇಗೆ ನಡೆಸಿಕೊಂಡು ಹೋಗಬಹುದು ಎನ್ನುವುದನ್ನು ದೇಶಕ್ಕೆ ತೋರಿಸಿಕೊಟ್ಟ ಜಿಲ್ಲೆ ಇದ್ದರೆ ಅದು ದಕ್ಷಿಣ ಕನ್ನಡ ಜಿಲ್ಲೆ, ಸಹಕಾರ. ಬ್ಯಾಂಕಿಂಗ್, ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳುವಿಕೆ ಇದು ದ.ಕ ಮತ್ತು ತುಳುನಾಡಿನ ಜನರ ರಕ್ತದಲ್ಲಿದೆ. ಅಂತಹ ಒಂದು ಅಪರೂಪದ ಜನ ನಾವು, ಇಷ್ಟು ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ಮತ್ತು ಉದ್ದೇಶಗಳನ್ನು ಇಟ್ಟುಕೊಂಡು ಪ್ರಾರಂಭಿಸಿದ ಸಹಕಾರಿ ಕ್ಷೇತ್ರವನ್ನು ಸಾರ್ಥಕತೆ ಮಾಡಿಕೊಂಡ ಜಿಲ್ಲೆ ಇದ್ದರೆ ಅದೂ ನಮ್ಮ ಜಿಲ್ಲೆ. ನರೇಂದ್ರ ಮೋದಿಯವರು ದೇಶದ ಪ್ರಧಾನಿ ಆದ ಬಳಿಕ ಸಹಕಾರಿ ಕ್ಷೇತ್ರಕ್ಕೆ ವಿಶೇಷ ಮಹತ್ವವನ್ನು ನೀಡಿ ಸಹಕಾರ ಕ್ಷೇತ್ರವನ್ನು ವ್ಯವಸ್ಥಿತವಾಗಿ ಜನಮಾನಸಕ್ಕೆ ಉಪಯೋಗ ಆಗುವ ರೀತಿಯಲ್ಲಿ ಕೇಂದ್ರ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಅತ್ಯುತ್ತಮ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಇಂತಹ ಸಂದರ್ಭದಲ್ಲಿ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅದರಲ್ಲಿ ಕೈಜೋಡಿಸುತ್ತಿರುವುದು ವಿಶೇಷವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಮಾತನಾಡಿ, ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಮಾರ್ಗದರ್ಶನದಲ್ಲಿ ಚಾರ್ವಾಕ ಭಾಗದ ಅನೇಕ ಹಿರಿಯರು ಸೇರಿಕೊಂಡು, ಉಪ್ಪಿನಂಗಡಿ ತಾಲೂಕು ಕೇಂದ್ರ ಆಗಿದ್ದ ಸಂದರ್ಭದಲ್ಲಿ ಚಾರ್ವಾಕ ಗ್ರಾಮದಲ್ಲಿ ಸಂಘ ಸ್ಥಾಪನೆ ಮಾಡಿದ್ದರು. ಇದೀಗ ಶತಮಾನೋತ್ಸವದ ಅಂಗವಾಗಿ ಸ್ಥಳೀಯ 4.30 ಸೆಂಟ್ಸ್ ಜಾಗವನ್ನು ಖರೀದಿ ಮಾಡಿಕೊಂಡು ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದ್ದೇವೆ. ಎಲ್ಲರ ಸಹಕಾರದಿಂದ 3 ದಿನಗಳ ಶತಮಾನೋತ್ಸವ ಕಾರ್ಯಕ್ರಮ ಯಶಸ್ವಿಯಾಗಿದೆ. ಸಹಕಾರ ಸಂಘದ ಮೂಲಕ ಊರಿನ ಎಲ್ಲಾ ಜನರು ರಾಜಕೀಯ , ಜಾತಿ ಧರ್ಮ ಬಿಟ್ಟು ಒಟ್ಟು ಸೇರುವ ಕಾರ್ಯಕ್ಕೆ ಮುನ್ನುಡಿಯಾಗಿದೆ. ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಂಘದ ನಿವೃತ್ತ ಸಿಬ್ಬಂದಿಗಳ, ಸದಸ್ಯರ,ಆಡಳಿತ ಮಂಡಳಿ,ಸಿಬ್ಬಂದಿಗಳ ಮತ್ತು 60 ಮಂದಿ ಸ್ವಯಂ ಸೇವಕರ ಸಹಕಾರ ಸ್ತುತ್ಯರ್ಹ, ನನಗೆ 26 ವರ್ಷ ವಯಸ್ಸಿನಲ್ಲಿ ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕನಾಗುವ ಅವಕಾಶ ಬಂದಿತ್ತು. ಶತಮಾನೋತ್ಸವ ಹೊತ್ತಿನಲ್ಲಿ ಚಾರ್ವಾಕ ಸಂಘದ ಅಧ್ಯಕ್ಷನಾಗುವ ಅವಕಾಶ ದೊರಕಿರುವುದು ಹಿರಿಯರು ಮಾಡಿದ ಪುಣ್ಯದ ಫಲ ರಾಜಕೀಯ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ಸಂಘದ ಸದಸ್ಯರು ಡೆವಿಡೆಂಡ್ ಅನ್ನು ಸಂಘಕ್ಕೆ ನೀಡಿದ್ದರಿಂದ 20 ಲಕ್ಷ ರೂ.ವೆಚ್ಚದ ಜಾಗ ಖರೀದಿಸಲು ಸಹಕಾರಿಯಾಗಿದೆ ಎಂದರು.
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ, ದ.ಕ ಜಿಲ್ಲಾ ಸಹಕಾರಿ ಯುನಿಯನ್‌ನ ಅಧ್ಯಕ್ಷರೂ ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಸಹಕಾರಿ ಕ್ಷೇತ್ರ ಇಂದು ಜಿಲ್ಲೆಯಲ್ಲಿ ಬಲಿಷ್ಠವಾಗಿ ಬೆಳೆದು ಜಿಲ್ಲೆಯ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘ ಅದ್ಭುತವಾದ ಕಾರ್ಯಯೋಜನೆಗಳಿಂದ ಇತರ ಸಂಘಗಳಿಗೆ ಮಾದರಿಯಾಗಿ ಬೆಳೆದು ನಿಂತಿದೆ, ಇಂತಹ ಸಂಘವನ್ನು ಪಡೆದ ಇಲ್ಲಿನ ರೈತರು ಪುಣ್ಯವಂತರು ಎಂದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಇನ್ನೋರ್ವ ನಿರ್ದೇಶಕ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷರೂ ಆಗಿರುವ ಎಸ್.ಬಿ. ಜಯರಾಮ್ ರೈ ಮಾತನಾಡಿ, ಮೊಳಹಳ್ಳಿ ಶಿವರಾಯರು ಪುತ್ತೂರಿನಿಂದ ಮೊಳಗಿಸಿದ ಸಹಕಾರಿ ಕಹಳೆ ಇಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರತಿಧ್ವನಿಸಿ ರಾಷ್ಟ್ರದ ಅಭಿವೃದ್ಧಿಯಲ್ಲಿ ತನ್ನದೇ ಛಾಪು ಮೂಡಿಸಿದೆ. ನೂರು ವರ್ಷ ಪೂರೈಸಿರುವ ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಈ ಭಾಗದ ಜನರ ವಿಶ್ವಾಸವನ್ನು ಗಳಿಸಿ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ, ಸಹಕಾರಿ ಸಂಘಗಳು ಸಮಾಜದಲ್ಲಿನ ಕಟ್ಟಕಡೆಯ ರೈತರಿಗೆ ಆರ್ಥಿಕ ಶಕ್ತಿಯನ್ನು ತುಂಬುವುದರೊಂದಿಗೆ ಹೊಸ ಬದುಕನ್ನು ಕಟ್ಟಿಕೊಳ್ಳಲು ನವಚೈತನ್ಯವನ್ನು ತುಂಬುತ್ತಿವೆ, ರೈತರು ಗೌರವಯುತ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡುತ್ತಿವೆ ಎಂದರು.
ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ ಮಾತನಾಡಿ , ಸಂಘದ ಶತಮಾನೋತ್ಸವ ಸಂದರ್ಭದಲ್ಲಿ ಸಂಘದ ಸ್ಥಾಪನೆಗೆ ಕಾರಣಕರ್ತರಾದವರನ್ನು ನೆನಪಿಸುವ ಕಾರ್ಯ ಅವರ ಮನೆಯವರನ್ನು ಗೌರವಿಸುವ ಮೂಲಕ ಆಗಿದೆ. ಹಿಂದೆ ಕೃಷಿಕ ಎಂದರೆ ಸಾಲದಲ್ಲೇ ಹುಟ್ಟಿ , ಸಾಲದಲ್ಲೇ ಬದುಕಿ ,ಸಾಲದಲ್ಲೇ ಸಾಯುವ ಪರಿಸ್ಥಿತಿ ಇತ್ತು. ಸಹಕಾರಿ ಸಂಘದ ಪರಿಕಲ್ಪನೆಯ ಮೂಲಕ ಕೃಷಿಕನಿಗೂ ಆರ್ಥಿಕ ಚೈತನ್ಯ ತುಂಬುವ ಕೆಲಸವನ್ನು ನಮ್ಮ ಹಿರಿಯರು ಶತಮಾನ ಪೂರ್ವದಲ್ಲೇ ಮಾಡಿದ್ದಾರೆ ಎಂಬುದು ಇಡೀ ಗ್ರಾಮಕ್ಕೆ ಹೆಮ್ಮೆ. ಗಣೇಶ್ ಉದನಡ್ಕ ಅವರು ಶತಮಾನೋತ್ಸವ ಸಂದರ್ಭದಲ್ಲಿ ಅಧ್ಯಕ್ಷರಾದ ಬಳಿಕ ಎಲ್ಲರನ್ನೂ ಜತೆಯಲ್ಲಿ ಕೊಂಡುಹೋಗುವ ಕಾರ್ಯ ಮಾಡಿದ್ದಾರೆ.ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಶ್ರಮ ಅಭಿನಂದನಾರ್ಹ ಎಂದರು.
ಕಾಣಿಯೂರು ಗ್ರಾ. ಪಂ.ಅಧ್ಯಕ್ಷ ವಿಶ್ವನಾಥ ಕೊಪ್ಪ ಮಾತನಾಡಿ, ಚಾರ್ವಾಕ ಸಹಕಾರಿ ಸಂಘದ ಅಧ್ಯಕ್ಷರಾಗಿ ಗಣೇಶ್ ಉದನಡ್ಕ ಅವರು ಸಂಘದ ಮಹಾಸಭೆಯಲ್ಲಿ ನುಡಿದಂತೆ ಶತಮಾನೋತ್ಸವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಿದ್ದಾರೆ. ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಕಲ್ಪನೆ ಚಾರ್ವಾಕ ಸಹಕಾರಿ ಸಂಘದ ಸಾಕಾರಗೊಂಡಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿಗೆ ಸಂಪರ್ಕ ಕಲ್ಪಿಸುವ ನೂತನ ರಸ್ತೆಯನ್ನು ಉದ್ಘಾಟಿಸಿದರು. ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ಕಾಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೇಶಕರಾದ ಅನಂತಕುಮಾರ್ ಬೈಲಂಗಡಿ, ಪರಮೇಶ್ವರ ಅನಿಲ, ವಿಶ್ವನಾಥ ಕೂಡಿಗೆ, ಸುಂದರ ಗೌಡ ದೇವಸ್ಯ, ರಮೇಶ್ ಉಪ್ಪಡ್ಕ, ಲೋಕೇಶ್ ಗೌಡ ಆತಾಜೆ, ಶೀಲಾವತಿ ಮುಗರಂಜ, ವೀಣಾ ಅಂಬುಲ, ದಿವಾಕರ ಮರಕ್ಕಡ, ರತ್ನಾವತಿ ಮುದುವ, ವಲಯ ಮೇಲ್ವಿಚಾರಕ ವಸಂತ ಎಸ್, ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವಾಣಿ ಎ., ಶಾಖಾ ವ್ಯವಸ್ಥಾಪಕ ಭವತ್ ಎ.ಎಸ್., ಸಿಬ್ಬಂದಿಗಳಾದ ವಸಂತಿ ಎಂ., ಪುನೀತ್ ಕೆ.ಜೆ, ವಿನಯ ಎ., ದುರ್ಗಾಪ್ರಸಾದ್ ಎಂ., ಕೀರ್ತಿಕುಮಾರ್ ವೈ, ವೇಣುಗೋಪಾಲ ಯು, ಕೇಶವ ಗೌಡ ಎನ್ ಉಪಸ್ಥಿತರಿದ್ದರು.
ಕುಸುಮಾಧರ ರೈ ಕಾಸ್ಪಾಡಿಗುತ್ತು ಸನ್ಮಾನಿತರ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಧನುಷ್ ಕಲ್ಲೂರಾಯ ಚಾರ್ವಾಕ ಪ್ರಾರ್ಥಿಸಿದರು. ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಸ್ವಾಗತಿಸಿ, ಅತಿಥಿಗಳನ್ನು ಗೌರವಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ವಂದಿಸಿದರು. ಶಿಕ್ಷಕ ಗಣೇಶ್ ನಡುವಾಲ್ ಕಾರ್ಯಕ್ರಮ ನಿರೂಪಿಸಿದರು. ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷ ಧನಂಜಯ ಕೇನಾಜೆ ಸಹಕರಿಸಿದರು. ಬಳಿಕ ಧ್ವಜಾವರೋಹಣ ನಡೆಯಿತು.
ಸ್ಥಾಪಕ ಸದಸ್ಯರಿಗೆ ಸನ್ಮಾನ: ಸಂಘದ ಸ್ಥಾಪಕ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಪಟೇಲ್ ಸಣ್ಣಣ್ಣ ಗೌಡ ನೂಜಿ ಚಾರ್ವಾಕ, ಮೋಂಟ ಗೌಡ ಪುದ್ದೊಟ್ಟು ಬೈಲು ಚಾರ್ವಾಕ, ಶೇಷಪ್ಪ ಗೌಡ ಅಭಿಕಾರ ಚಾರ್ವಾಕ, ಕೃಷ್ಣ ಗೌಡ ಖಂಡಿಗ ಚಾರ್ವಾಕ, ಕುಕ್ಕಪ್ಪ ಗೌಡ ಅರುವ ಚಾರ್ವಾಕ, ಚನ್ನ ಗೌಡ ತಿರ್ಥಕೇರಿ ಚಾರ್ವಾಕ, ಹುಕ್ರ ಗೌಡ ಅಂಬುಲ ಚಾರ್ವಾಕ, ಚೆನ್ನಪ್ಪ ಗೌಡ ಅಂಬುಲ ಚಾರ್ವಾಕ, ವೆಂಕಪ್ಪ ಗೌಡ ಕುಂಬ್ಲಾಡಿ, ಗೋವಿಂದ ಗೌಡ ಅರುವ ಚಾರ್ವಾಕ, ಚನ್ನ ತಿರ್ಥಕೇರಿ ಚಾರ್ವಾಕ, ಕುಕ್ಕ ಗೌಡ ಅರುವ ಚಾರ್ವಾಕ, ಕುಕ್ಕಪ್ಪ ಗೌಡ ಅಂಬುಲ ಚಾರ್ವಾಕ, ಮಾಯಿಲ ಗೌಡ ತಿರ್ಥಕೇರಿ ಚಾರ್ವಾಕ, ನಾಗಣ್ಣ ಗೌಡ ತಿರ್ಥಕೇರಿ ಚಾರ್ವಾಕ, ಹೆನ್ನಯ್ಯ ಗೌಡ ಖಂಡಿಗ ಚಾರ್ವಾಕ ಅವರು ಸನ್ಮಾನಕ್ಕೆ ಪಾತ್ರರಾಗಿದ್ದು, ಅವರ ಮನೆಯವರು ಸನ್ಮಾನವನ್ನು ಸ್ವೀಕರಿಸಿದರು.
ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ:
ಸಂಘದ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಯನ್. ಪರಮೇಶ್ವರ ಗೌಡ ನೂಜಿ ಚಾರ್ವಾಕ, ವೆಂಕಪ್ಪ ಗೌಡ ಕರಂದ್ಲಾಜೆ, ಬೊಮ್ಮಣ್ಣ ಗೌಡ ಎರ್ಕ, ತಿಮ್ಮಪ್ಪ ಗೌಡ ಇಡ್ಯಡ್ಕ, ಪಕೀರಪ್ಪ ರೈ ಕಾಸ್ಪಾಡಿಗುತ್ತು, ವೆಂಕಟೇಶ ಗೌಡ ಅಬಿಕಾರ, ಸಿ.ಪಿ ಜಯರಾಮ ಗೌಡ ಅರುವ, ಮೇದಪ್ಪ ಗೌಡ ಕೀಲೆ, ಶ್ರೀನಿವಾಸ ಗೌಡ ಮರಕ್ಕಡ, ವಾಸುದೇವ ಗೌಡ ಅಬಿಕಾರ, ಮೋಹನ ಗೌಡ ಇಡ್ಯಡ್ಕ, ಕೃಷ್ಣಪ್ಪ ಗೌಡ ಇಡ್ಯಡ್ಕ, ಧರ್ಮೇಂದ್ರ ಗೌಡ ಕಟ್ಟತ್ತಾರು, ಆನಂದ ಗೌಡ ಮೇಲ್ಮನೆ ಸನ್ಮಾನಕ್ಕೆ ಪಾತ್ರರಾಗಿದ್ದು ಈ ಪೈಕಿ ಅಗಲಿದ ಮಾಜಿ ಅಧ್ಯಕ್ಷರ ಮನೆಯವರು ಸನ್ಮಾನವನ್ನು ಸ್ವೀಕರಿಸಿದರು.
ನಿವೃತ್ತ ಸಿಬ್ಬಂದಿಗಳಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ಸಂಘದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ತಿಮ್ಮಪ್ಪ ಗೌಡ, ಶೀನಪ್ಪ ಗೌಡ, ಶೇಷಪ್ಪ ಗೌಡ ಇಡ್ಯಡ್ಕ, ಹೊನ್ನಪ್ಪ ಗೌಡ ಕಟ್ಟ, ಸುಬ್ರಾಯ ಗೌಡ, ಬಾಲಕೃಷ್ಣ ರೈ ಕಾಸ್ಪಾಡಿಗುತ್ತು, ಮೋನಪ್ಪ ಗೌಡ ಅಂಬುಲ, ಕೊರಗಪ್ಪ ಗೌಡ ರಾಮುಂಡೇಲು, ವಿಜಯ ಕುಮಾರ್ ಅಭಿಕಾರ, ಶೀನಪ್ಪ ಗೌಡ ನಾವೂರು ಅವರು ಸನ್ಮಾನಕ್ಕೆ ಪಾತ್ರರಾಗಿದ್ದಾರೆ.
ರಾಷ್ಟ್ರ ಮಟ್ಟದ ಸಾಧಕರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ರಾಷ್ಟ್ರ ಮಟ್ಟದ ಸಾಧಕರುಗಳನ್ನು ಸನ್ಮಾನಿಸಲಾಯಿತು. ಕೃಷ್ಣಪ್ಪ ಮಿಯೋಳ್ಪೆ, ರಾಮಣ್ಣ ಗೌಡ ಮುಗರಂಜ, ಸುಲೋಚನಾ ಮುಗರಂಜ, ಪ್ರಜ್ವಲ್ ದೇವಿನಗರ, ಸುಶೀಲಾ ಪೆರ್ಲೋಡಿ, ರತ್ನಾ ಮುಗರಂಜ, ಶೋಧನಾ ನಡುಬೈಲು, ದೇಶಿತಾ ಮುದುವ, ಕೀರ್ತಿಕಾ ಅಭಿಕಾರ, ಕಾವ್ಯ ಎಣ್ಮೂರು, ಅಂಕಿತಾ ಕೋಡಂದೂರು ಸನ್ಮಾನ ಸ್ವೀಕರಿಸಿದರು.
ದ.ಕ ಸಂಸದ ಕ್ಯಾ| ಬ್ರಿಜೇಶ್ ಚೌಡ, ದ.ಕ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಗಣೇಶ್ ಉದನಡ್ಕ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ, ಕಟ್ಟಡದ ಇಂಜಿನಿಯರ್ ಚಂದ್ರಹಾಸ ಪನ್ಯಾಡಿ ಮತ್ತು ಸ್ಥಳ ದಾನಿಗಳನ್ನ್ನೂ ಸನ್ಮಾಸಲಾಯಿತು. ಸಂಘದ ಪ್ರಸ್ತುತ ಸಿಬ್ಬಂದಿಗಳಿಗೆ ಗೌರವಾರ್ಪಣೆ ಮಾಡಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ, ಸಿಬ್ಬಂದಿಗಳಾದ ವಾಣಿ, ಭವತ್, ವಸಂತಿ, ಪುನೀತ್, ವಿನಯ್, ದುರ್ಗಾಪ್ರಸಾದ್, ಕೀರ್ತಿಕುಮಾರ್, ವೇಣುಗೋಪಾಲ್ ಅವರು ಗೌರವವನ್ನು ಸ್ವೀಕರಿಸಿದರು. ಪ್ರಾರ್ಥನೆ ಹಾಡಿದ ಧನುಷ್ ಕಲ್ಲೂರಾಯ ಮತ್ತು ಕಾರ್ಯಕ್ರಮ ನಿರೂಪಕರಾದ ಗಣೇಶ್ ನಡುವಾಲ್ ಅವರನ್ನು ಸ್ವಾಮೀಜಿ ಗೌರವಿಸಿದರು.
ಅದ್ಧೂರಿ ಭವ್ಯ ಮೆರವಣಿಗೆ
ಕಾರ್ಯಕ್ರಮದ ಆರಂಭದಲ್ಲಿ ಕಾಣಿಯೂರು ಶ್ರೀ ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನಕ್ಕೆ ಆಗಮಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕಾಣಿಯೂರು ಮುಖ್ಯರಸ್ತೆ ಮೂಲಕ ಸಂಘದ ನೂತನ ಕಟ್ಟಡದವರೆಗೆ ಚೆಂಡೆ ವಾದನದೊಂದಿಗೆ ಪೂರ್ಣಕುಂಭದೊಂದಿಗೆ ಅವರನ್ನು ಸ್ವಾಗತಿಸಲಾಯಿತು. ಬಳಿಕ ಅದ್ದೂರಿ ಮೆರವಣಿಗೆ ನಡೆಯಿತು. ಟ್ಯಾಬ್ಲೋ, ಕರಗ ನೃತ್ಯ, ಬ್ಯಾಂಡ್, ಚೆಂಡೆ ವಾದನ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.
3 ದಿನಗಳ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನ
ಚಾರ್ವಾಕ ಪ್ರಾ.ಕೃ.ಪ.ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ 3 ದಿನಗಳ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಕೃಷಿ ಮೇಳ ,ವಿಚಾರ ಸಂಕಿರಣ , ನೂತನ ಕಟ್ಟಡ ಉದ್ಘಾಟನೆ, ಸಂಘದ ಮಾಜಿ ಅಧ್ಯಕ್ಷರುಗಳಿಗೆ, ಮಾಜಿ ಉಪಾಧ್ಯಕ್ಷರಿಗೆ, ನಿರ್ದೇಶಕರಿಗೆ, ಸ್ಥಾಪಕ ಸದಸ್ಯರಿಗೆ, ಸಿಬ್ಬಂದಿಗಳಿಗೆ ಗೌರವಾರ್ಪಣೆ, ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಸಮರ್ಪಣೆಯೊಂದಿಗೆ ಸಂಪನ್ನಗೊಂಡಿದೆ. ಸಭಾ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ಮೂಲಕ ತಮ್ಮ ಊರಿನ ಸಹಕಾರಿ ಸಂಘದ ಶತಮಾನೋತ್ಸವ ಸಂಭ್ರಮವನ್ನು ಕಣ್ತುಂಬಿಸಿಕೊಂಡರು. ಮೂರು ದಿನಗಳ ಕಾರ್ಯಕ್ರಮದಲ್ಲೂ ಉಪಹಾರ, ಸಹಭೋಜನ , ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಘದ ಕಳೆದ ಆರ್ಥಿಕ ವರ್ಷದ ಡಿವಿಡೆಂಡ್‌ನ್ನು ಸಂಘಕ್ಕೆ ಬಿಟ್ಟುಕೊಟ್ಟ ಸಂಘದ ಎಲ್ಲಾ ಸದಸ್ಯರಿಗೆ ಏರ್ಪಡಿಸಲಾದ ಅದೃಷ್ಟ ಚೀಟಿಯಲ್ಲಿ ಸದಸ್ಯಲಿಂಗಪ್ಪ ಗೌಡ ಅನಿಲ ಅವರು ಅದೃಷ್ಠ ಶಾಲಿಯಾಗಿ ಆಯ್ಕೆಯಾಗಿ ಚಿನ್ನದ ಉಂಗುರವನ್ನು ಪಡೆದುಕೊಂಡರು.