ಪುತ್ತೂರು: ಹತ್ತು ಹಲವು ವಿಶೇಷತೆಗಳ ಮೂಲಕ ಹತ್ತೂರಿನಲ್ಲಿ ತನ್ನ ಕಾರಣಿಕತೆಯನ್ನು ಮೆರೆಯುತ್ತಿರುವ ಪುತ್ತೂರಿನ ಪರ್ಪುಂಜ ರಾಮಜಾಲುವಿನಲ್ಲಿ ನೆಲೆಯಾಗಿರುವ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಶ್ರೀ ಬೈದೇರುಗಳ ವಿಜೃಂಭಣೆಯ ಜಾತ್ರೋತ್ಸವವು ಜ.18 ರಂದು ಜಗರಲಿದೆ. ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುವ ಈ ಸಂಭ್ರಮದ ಜಾತ್ರೋತ್ಸವದಲ್ಲಿ ಊರ ಪರವೂರ ಹತ್ತೂರ ಸಮಸ್ತ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಕೋಟಿ ಚೆನ್ನಯರ ಕೃಪೆಗೆ ಪಾತ್ರರಾಗುವಂತೆ ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ವಿನಂತಿಸಿಕೊಂಡಿದ್ದಾರೆ. ಜ.18 ರಂದು ಬೆಳಿಗ್ಗೆ ಶ್ರೀ ಗಣಪತಿ ಹೋಮ ನಡೆದು ಬಳಿಕ ಶ್ರೀ ನಾಗದೇವರಿಗೆ ಮತ್ತು ಶ್ರೀ ಬ್ರಹ್ಮದೇವರಿಗೆ ತಂಬಿಲ ಸೇವೆ ಹಾಗೂ ಶ್ರೀ ಕೋಟಿ ಚೆನ್ನಯರಿಗೆ ಕಲಶಾಭಿಷೇಕ ಹಾಗೂ ತಂಬಿಲ ಸೇವೆ ನಡೆದು ಮಹಾಪೂಜೆ ಬಳಿಕ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ರಾತ್ರಿ ಸಭಾ ಕಾರ್ಯಕ್ರಮದ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಬೈದೇರುಗಳ ಗರಡಿ ಇಳಿಯುವ ಕಾರ್ಯಕ್ರಮ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಲಿದೆ.ರಾತ್ರಿ 11.30 ಕ್ಕೆ ಬೈದೇರುಗಳ ಮೀಸೆ ಧರಿಸುವುದು, ಮಾಯಂದಾಲೆ(ಮಾಣಿ ಬಾಲೆ) ಗರಡಿ ಇಳಿಯುವುದು ನಡೆಯಲಿದೆ. ಇದೇ ಸಮಯದಲ್ಲಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಮುಂಜಾವು 4 ಗಂಟೆಗೆ ಕೋಟಿಚೆನ್ನಯ ದರ್ಶನ ಪಾತ್ರಿಗಳ ಸೇಟ್(ಸುರ್ಯ ಹಾಕಿಕೊಳ್ಳುವುದು), ಅರುಣೋದಯಕ್ಕೆ ನೇಮೋತ್ಸವದಿಂದ ದೈವ ಸಂತೃಪ್ತಿಗಾಗಿ ಕಂಚಿಕಲ್ಲಿಗೆ ಕಾಯಿ ಸೇಜನೆಯಿಂದ ಪರಿಸಮಾಪ್ತಿ ನಡೆಯಲಿದೆ.
ಸಪ್ತದಶ ಸಂಭ್ರಮ
ಪರ್ಪುಂಜ ರಾಮಜಾಲು ಗರಡಿ ನೇಮೋತ್ಸವಕ್ಕೆ ಹಲವು ವರ್ಷಗಳ ಇತಿಹಾಸವಿದ್ದು ಶ್ರೀ ಗರಡಿಯು ಸಂಪೂರ್ಣ ನವೀಕರಣಗೊಂಡು ಪುನರ್‌ಪ್ರತಿಷ್ಠೆ ನಡೆದ ಬಳಿಕದ ಇದು 17 ನೇ ವರ್ಷದ ವೈಭವದ ನೇಮೋತ್ಸವ ಆಗಿದೆ. ಶ್ರೀ ಬ್ರಹ್ಮಬೈದರ್ಕಳ ಜಾತ್ರೋತ್ಸವದ ಈ ಸಪ್ತದಶ ಸಂಭ್ರಮಕ್ಕೆ ಈ ವರ್ಷವೂ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. 7 ಸಾವಿರಕ್ಕೂ ಅಧಿಕ ಮಂದಿಗೆ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಗಿದೆ.
ಸಭಾ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ
ಪ್ರತಿ ವರ್ಷದಂತೆ ಈ ವರ್ಷವೂ ಸಂಜೆ 7.30 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಸಭಾಧ್ಯಕ್ಷತೆ ವಹಿಸಲಿದ್ದು ಮಂಗಳೂರು ಸಂಸದರಾದ ಕ್ಯಾ.ಬ್ರಿಜೇಶ್ ಚೌಟರವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ವರ್ಷ ರಾಮಜಾಲು ಗರಡಿ ಗೌರವ ಪ್ರಶಸ್ತಿ ಪ್ರದಾನ ನಡೆಯಲಿದ್ದು ಮಂಗಳೂರು ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್‌ರವರಿಗೆ ‘ರಾಮಜಾಲು ಗರಡಿ ಗೌರವ’ ಪ್ರಶಸ್ತಿಯ ಪ್ರದಾನ ನಡೆಯಲಿದೆ. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಮಜಾಲು ಕ್ಷೇತ್ರದ ಮಹಿಮೆಯನ್ನು ಸಾರುವ ‘ರಾಮಜಾಲುದ ಬೈದೇರ್ಲು’ ಎಂಬ ವಿಡಿಯೋ ಆಲ್ಬಂ ಸಾಂಗ್ ಅನ್ನು ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ತು ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶಯನಾ ಜಯಾನಂದ ಭಾಗವಹಿಸಲಿದ್ದಾರೆ.
‘ಏರ‍್ಲಾ ಗ್ಯಾರಂಟಿ ಅತ್ತ್…’
ರಾಮಜಾಲು ಶ್ರೀ ಬೈದೇರುಗಳ ಜಾತ್ರೋತ್ಸವದ ಅಂಗವಾಗಿ ಈ ವರ್ಷವೂ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ರಾತ್ರಿ 1 ಗಂಟೆಯ ಬಳಿಕ ನಾಟಕ ಪ್ರದರ್ಶನಗೊಳ್ಳಲಿದ್ದು ಈ ವರ್ಷ ‘ಚಾ ಪರ‍್ಕ ಕಲಾವಿದರು ಕುಡ್ಲ’ ಇವರು ಅಭಿನಯಿಸುವ ‘ಏರ‍್ಲಾ ಗ್ಯಾರಂಟಿ ಅತ್ತ್..’ ಎನ್ನುವ ವಿಭಿನ್ನ ಶೈಲಿಯ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.