ನಯನಾಕರ್ಷಕ ಅಲಂಕೃತದಿ ಸಿಂಗರಿಸಲ್ಪಟ್ಟಿದೆ ಆರ್ಲಪದವು- ನೋಡಬನ್ನಿ ಈ ಪರಿಯ ಸೊಬಗು…!

0

ಪೂಮಾಣಿ – ಕಿನ್ನಿಮಾಣಿ, ಪಿಲಿಭೂತ ದೈವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ದತೆ
ಕರಸೇವೆಯೇ ಈ ದೈವಸ್ಥಾನ ನಿರ್ಮಾಣದ ವಿಶೇಷತೆ…

ಪಾಣಾಜೆ: ಎಲ್ಲೆಲ್ಲೂ ಕೇಸರಿಮಯ ತೋರಣ.. ರಾರಾಜಿಸುತ್ತಿರುವ ಬ್ಯಾನರ್‌ ಕಟೌಟ್‌ಗಳು.. ದೀಪಾಲಂಕಾರದಿ ಶೋಭಿಸುತ್ತಿರುವ ರಾಜಮಾರ್ಗ… ಚಿತ್ತಾಕರ್ಷಕ ಸ್ವಾಗತ ಕಮಾನುಗಳು… ಅಬ್ಬಾಬ್ಬಾ.. ಕಣ್ಣುಗಳೆರಡು ಸಾಲದು ಈ ಪರಿಯ ಸೊಬಗ ನೋಡಲು.. ಹೌದು.. ಈ ಎಲ್ಲಾ ಶೋಭಾಲಂಕಾರ ಕಂಡುಬಂದಿರುವುದು ಪಾಣಾಜೆ ಗ್ರಾಮದ ಆರ್ಲಪದವು ಪೇಟೆಯಲ್ಲಿ.. ಪುತ್ತೂರು ಪಾಣಾಜೆ ರಸ್ತೆಯ ಸಂಟ್ಯಾರ್‌ನಿಂದ ಅಲ್ಲಲ್ಲಿ ಹಾಕಲಾದ ಸ್ವಾಗತ ಕಮಾನುಗಳು ಅದ್ದೂರಿಯ ಬ್ರಹ್ಮಕಲಶೋತ್ಸವಕ್ಕೆ ಕೈ ಬೀಸಿ ಕರೆಯುತ್ತಿದೆ.. ಆರ್ಲಪದವು ಶ್ರೀ ಪೂಮಾಣಿ – ಕಿನ್ನಿಮಾಣಿ, ಪಿಲಿಭೂತ ದೈವಸ್ಥಾನದ ನವೀಕರಣ ಪುನರ್‌ ಪ್ರತಿಷ್ಟಾ ಬ್ರಹ್ಮಕಲಶೋತ್ಸವದ ಅಂಗವಾಗಿ ಇಡೀ ಪಾಣಾಜೆ ಗ್ರಾಮ ಸಕಲ ಸಿದ್ದತೆಯಲ್ಲಿ ತೊಡಗಿದೆ. ಚಿತ್ತಾಕರ್ಷಕ ಅಲಂಕಾರಗಳು, ಕೇಸರಿ ತೋರಣಗಳು ಬ್ರಹ್ಮಕಲಶೋತ್ಸವಕ್ಕೆ ಸ್ವಾಗತ ಬಯಸಿವೆ..


ಜನವರಿ 19 ಮತ್ತು 20 ರಂದು ನಡೆಯಲಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಿಗೆ ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆಯಲ್ಲಿರುವ ಶಶಿಕುಮಾರ್‌ ರೈ ಬಾಲ್ಯೊಟ್ಟುರವರ ಸಂಚಾಲಕತ್ವದ ಬ್ರಹ್ಮಕಲಶೋತ್ಸವ ಸಮಿತಿ ಇನ್ನಿಲ್ಲದ ಸಿದ್ದತೆ, ತಯಾರಿಯಲ್ಲಿ ತೊಡಗಿಸಿಕೊಂಡಿದೆ. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳು ಹಾಗೂ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನವೀಕರಣ ಪುನರ್‌ ಪ್ರತಿಷ್ಟಾ ಬ್ರಹ್ಮಕಲಶೋತ್ಸವವು ನಡೆಯಲಿದೆ.


ಜೀರ್ಣೋದ್ಧಾರ ಪ್ರಕ್ರಿಯೆ ಸಾಗಿ ಬಂದ ಹಾದಿ
ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಗಡಿ ಪ್ರದೇಶದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಅತ್ಯಂತ ಪುರಾತನವಾದ ರಣಮಂಗಲ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಹಾಗೂ ಆರ್ಲಪದವಿನಲ್ಲಿರುವ ಕಿನ್ನಿಮಾಣಿ-ಪೂಮಾಣಿ (ಇರ್ವೆರು ಉಳ್ಳಾಕುಳು) ಮತ್ತು ಪಿಲಿಭೂತ ದೈವಸ್ಥಾನಗಳು ಈ ಗ್ರಾಮದ ಆಸ್ತಿಕರ ನಂಬಿಕೆಗೆ ಅಭಯವರಪ್ರಸಾದ ಕರುಣಿಸುತ್ತಿರುವ ದೈವ ದೇವರುಗಳಾಗಿವೆ. 1937ರಲ್ಲಿ ಹಾಗೂ 2008-2009ರಲ್ಲಿ ದೈವಸ್ಥಾನದ ಈ ಹಿಂದಿನ ನವೀಕರಣ ಕಾರ್ಯಗಳು ನಡೆದಿದ್ದವು. 2024 ಫೆಬ್ರವರಿಯಲ್ಲಿ ದೈವಜ್ಞರಾದ ಚೇಕೋಟು ಸುಬ್ರಹ್ಮಣ್ಯ ಭಟ್‌ ರವರ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ದೈವಸ್ಥಾನ ಶಿಥಿಲಾವಸ್ಥೆಗೆ ಬಂದು ಜೀರ್ಣೋದ್ಧಾರ ಅಗತ್ಯತೆಯಿದೆ ಎಂದು ಮನಗಂಡು ಈ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಮುಂದಡಿಯಿಡಲಾಗಿತ್ತು. ವಾಸ್ತುಶಿಲ್ಪಿ ಮಹೇಶ್‌ ಮುನಿಯಂಗಳರವರ ಮಾರ್ಗದರ್ಶನದಲ್ಲಿ, ಗಿರೀಶ್‌ ಮಣಿಯಾಣಿ ಮತ್ತು ಕೃಷ್ಣಪ್ಪ ತಂಡದವರು ಕಲ್ಲಿನ ಕೆಲಸ ಮಾಡಿದ್ದಾರೆ. ಪ್ರದೀಪ್‌ ಆಚಾರ್ಯ ಮತ್ತು ಬಳದವರು ಕುಸುರಿ ಕೆಲಸ ಮಾಡಿರುತ್ತಾರೆ. ದೈವಜ್ಞರ ಮುಖೇನ ತಿಳಿದುಬಂದಂತೆ ಪ್ರಧಾನ ಗುಡಿಯ ಸುತ್ತಲಿನ ಅಂಗಣವನ್ನು ಇನ್ನಷ್ಟು ವಿಸ್ತರಿಸಿ ಗುಡಿಯನ್ನು ಆಮೂಲಾಗ್ರವಾಗಿ ನವೀಕರಣ, ಪಿಲಿಭೂತದ ಗುಡಿಯ ಜೀರ್ಣೋದ್ಧಾರ ಕಾರ್ಯಗಳು, ಗುಡಿಯ ಸುತ್ತಲಿನ ಅಂಗಣದ ವಿಸ್ತಾರ, ಹೊಸ ಗುಡಿಯ ಹಾಗೂ ಗೋಪುರದ ಪುನರ್ ನಿರ್ಮಾಣ ಕಾರ್ಯ, ಧ್ವಜಸ್ತಂಭದ ನಿರ್ಮಾಣ, ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ನಡೆದಿದೆ. ಊರ ಪರವೂರ ದಾನಿಗಳ ಸಹಕಾರದಿಂದ ಸಕಲ ಜೀರ್ಣೋದ್ಧಾರದೊಂದಿಗೆ ಇಡೀ ಕ್ಷೇತ್ರಕ್ಕೆ ಹೊಸ ರೂಪ ಕೊಡುವ ನಿಟ್ಟಿನಲ್ಲಿ ಭಕ್ತಮಹನೀಯರು ಒಂದಾಗಿದ್ದಾರೆ.

ತಮ್ಮ ಆರಾಧ್ಯಮೂರ್ತಿ ಶ್ರೀ ದೈವಗಳ ಗುಡಿ, ದೈವಸ್ಥಾನ ಜೀರ್ಣೋದ್ಧಾರ ಕಾಮಗಾರಿಗಳಲ್ಲಿ ಊರ ಪರವೂರ ಭಕ್ತರು ʻಕಾಯಾ ವಾಚಾ ಮನಸಾʼ ಎಂಬಂತೆ ತೊಡಗಿಸಿಕೊಳ್ಳುತ್ತಿದ್ದಾರೆ. ನಿತ್ಯ ಕರಸೇವೆಯಲ್ಲಿ ಭಕ್ತಿ ಭಾವದಿಂದ ಭಕ್ತ ಸಮೂಹ ಪಾಲ್ಗೊಳ್ಳುತ್ತಿದೆ. ಕಾರಣಿಕ ಕ್ಷೇತ್ರವಾದ ಇಲ್ಲಿನ ಜೀರ್ಣೋದ್ಧಾರ ಕಾರ್ಯದಲ್ಲಿ ಅನೇಕ ರೀತಿಯ ವಸ್ತುರೂಪದ, ನಗದು ರೂಪದ ನೆರವುಗಳನ್ನು ಭಕ್ತರು ನೀಡುತ್ತಿದ್ದಾರೆ. ಕೆಲವೇ ಕೆಲವು ತಿಂಗಳಿನಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಕಾಮಗಾರಿಗಳು ಪೂರ್ಣಗೊಂಡು ಬ್ರಹ್ಮಕಲಶೋತ್ಸವಕ್ಕೆ ಸರ್ವ ಸನ್ನದ್ಧವಾಗುತ್ತಿವೆ. ಶ್ರೀ ದೈವಗಳ ವರ್ಷಾವಧಿ ಉತ್ಸವದ ವೇಳೆಗೆ ಕ್ಷೇತ್ರವು ಸಂಪೂರ್ಣ ನವೀಕರಣಗೊಂಡು ಇಡೀ ಪರಿಸರಕ್ಕೆ ಒಂದು ಹೊಸ ರೂಪ, ಚೈತನ್ಯ ಪ್ರಾಪ್ತಿಯಾಗುತ್ತಿವೆ. ಪೂರ್ವಕಾಲದಲ್ಲಿದ್ದ ಶೈಲಿಯಲ್ಲೇ ಅದಕ್ಕೆ ಯಾವುದೇ ವ್ಯತಿರಿಕ್ತವಾಗದಂತೆ ಮತ್ತು ಅದರ ಅಳತೆಗಿಂತ ಉತ್ಕೃಷ್ಟಮಟ್ಟದಲ್ಲಿ ನಿರ್ಮಿಸಲಾಗಿದೆ. ಮಾಡ ಸಂಕಲ್ಪದ ದೈವಸ್ಥಾನವಾದುದರಿಂದ ಇಲ್ಲಿ ಹಚ್ಚುವ ದೀಪವು ಇಡೀ ಊರಿಗೆ ಬೆಳಕನ್ನು ನೀಡಬೇಕೆಂಬುದು ನಿಯಮ. ಆ ದಿಶೆಯಲ್ಲಿ ಹಿಂದಿನ ಶೈಲಿಯಲ್ಲಿ ಒಂದಷ್ಟು ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಪುನರ್‌ ನಿರ್ಮಾಣ ಕಾರ್ಯಗಳು ನಡೆದಿವೆ. ಸುತ್ತುಪೌಳಿಯನ್ನು ವಿಸ್ತರಿಸಲಾಗಿದೆ. ಗೋಪುರವನ್ನು ಸಮಾನಂತರಗೊಳಿಸಲಾಗಿದೆ. ಗರ್ಭಗೃಹ ದೊಡ್ಡದಾದ ಹಿನ್ನೆಲೆಯಲ್ಲಿ ಸ್ಥಾನಪಲ್ಲಟ ಮಾಡಿ ಧ್ವಜಸ್ತಂಭ ನಿರ್ಮಿಸಲಾಗಿದೆ. ಆಯಾ ಪರಿಸರದಲ್ಲಿ ಸಿಗುವ ವಸ್ತುಗಳಿಂದಲೇ ದೈವಸ್ಥಾನ ನಿರ್ಮಾಣಮಾಡಬೇಕೆಂಬುದು ರೂಢಿ. ಸೀಮಿತ ಪ್ರದೇಶದಲ್ಲಿನ ಕಲ್ಲು, ಮರ, ವಸ್ತುಗಳಿಂದಲೇ ನಿರ್ಮಾಣ ಮಾಡಿ ಸಾನ್ನಿಧ್ಯ ಪೂರಕ ವ್ಯವಸ್ಥೆ ಮಾಡಲಾಗಿದೆ. ದೈವಸ್ಥಾನ ನಿಯಮ ಮತ್ತು ಶಾಸ್ತ್ರಬದ್ದ ರೀತಿಯಲ್ಲಿಯೇ ನಡೆದಿದೆ. ನ್ಯೂನತೆ ಸರಿಪಡಿಸಿಕೊಳ್ಳಲಾಗಿದೆ. ನೈರುತ್ಯ ಭಾಗದಲ್ಲಿ ದೈವಗಳ ಬಂಡಿಕೊಟ್ಯ ನಿರ್ಮಿಸಲಾಗಿದೆ. ಪಿಲಿಭೂತ ಗುಡಿಯನ್ನು ಎತ್ತರಿಸಿ ಕಟ್ಟಲಾಗಿದೆ. ಪ್ರಾಸಾದ ಕಟ್ಟಡಾದಿಗಳು ಶಾಸ್ತ್ರಬದ್ದವಾದಾಗ ಪ್ರಕೃತಿಯಿಂದ ಶಕ್ತಿಯನ್ನು ಆಕರ್ಷಿಸಿ ಜನರಿಗೆ ಭಗದನುಗ್ರಹ ಸಿಗುತ್ತದೆ ಎಂಬ ನಂಬಿಕೆ ಇಲ್ಲಿನ ದೈವಸ್ಥಾನ ಮತ್ತು ದೈವ ಗುಡಿಗಳ ನಿರ್ಮಾಣ ಕಾರ್ಯದಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ.


ಕರಸೇವಕರು ಅಭಿನಂದನಾರ್ಹರು  – ಶಶಿಕುಮಾರ್‌ ರೈ ಬಾಲ್ಯೊಟ್ಟು ಸಂಚಾಲಕರು, ಬ್ರಹ್ಮಕಲಶೋತ್ಸವ ಸಮಿತಿ
ಇಲ್ಲಿನ ಭಕ್ತರ ಕರಸೇವೆ ಶ್ರಮದಿಂದ ಅಭೂತಪೂರ್ವ ಕೆಲಸ ಕಾರ್ಯ ನಡೆದಿದೆ. ನಿರಂತರ ಕೆಲಸ ಕಾಮಗಾರಿಗಳು ನಡೆದಿದೆ. ಕೇವಲ 9 ತಿಂಗಳ ಅವಧಿಯಲ್ಲಿ ದೈವಸ್ಥಾನದ ಸಂಪೂರ್ಣ ಕೆಲಸಗಳು ಆಗಿವೆ. ಇದು ಈ ಗ್ರಾಮದ ಇತಿಹಾಸವಾಗಿದೆ. ಇದೇ ಜಾಗದಿಂದ ಕಲ್ಲು ತೆಗೆಯುವ ಕಾರ್ಯ ಮಾಡಿದ್ದೇವೆ. ಮರಮುಂಗಟ್ಟುಗಳನ್ನು ಈ ಊರಿನ ಭಕ್ತರೇ ತಮ್ಮ ಪಟ್ಟಾ ಜಾಗದಿಂದ ನೀಡಿರುತ್ತಾರೆ. ನೈಪುಣ್ಯಮಯವಾದ ಕೆಲಸಗಳು ನಡೆದು ಈ ಭಾಗದಲ್ಲಿ ಇಂತಹ ಭವ್ಯ ದೈವಸ್ಥಾನ ಎಲ್ಲೂ ಸಿಗದ ರೀತಿಯಲ್ಲಿ ನಿರ್ಮಾಣಗೊಂಡಿದೆ. 2 ಸಾವಿರಕ್ಕೂ ಮಿಕ್ಕಿ ಕರಸೇವಕರಿಂದ ಕರಸೇವೆ ನಡೆದಿದೆ. ಇಲ್ಲಿನ ಕಾರಣಿಕ ಶಕ್ತಿಗಳು ಈ ಗ್ರಾಮದ ಪ್ರತಿಯೊಬ್ಬನಿಗೂ ಇದರಲ್ಲಿ ತೊಡಗಿಸಿಕೊಳ್ಳುವ ಶಕ್ತಿಯನ್ನು ನೀಡಿವೆ. ಜ.19 ಮತ್ತು 20 ರಂದು ಸುಮಾರು 25ಸಾವಿರಕ್ಕೂ ಮಿಕ್ಕಿ ಜನರಿಗೆ ಅನ್ನದಾನ ಮಾಡುವ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ. ಊರ ಪರವೂರ ಭಕ್ತಾಭಿಮಾನಿಗಳು ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಲ್ಲಿ ಭಾಗಿಗಳಾಗಬೇಕು.


ರಾಜ್ಯದ ಅನೇಕ ಕಡೆಯಿಂದ ಇಲ್ಲಿಗೆ ಭಕ್ತರು ಬರುತ್ತಾರೆ – ಶ್ರೀಕೃಷ್ಣ ಬೋಳಿಲ್ಲಾಯ ಕಡಮ್ಮಾಜೆ ಅನುವಂಶಿಕ ಆಡಳಿತ ಮೊಕ್ತೇಸರರು
ಕರ್ನಾಟಕ ರಾಜ್ಯದಿಂದ ಇಲ್ಲಿಗೆ ಭಕ್ತರು ಬಂದು ಕಷ್ಟಗಳನ್ನು ಪರಿಹರಿಸಿಕೊಂಡು ಹೋಗುತ್ತಿದ್ದಾರೆ. ಗ್ರಾಮಸ್ಥರ ಸಹಕಾರವೇ ಇಲ್ಲಿ ಮೇಳೈಸಿದೆ. ನಾನು ಅನುವಂಶಿಕ ಮೊಕ್ತೇಸರನಾದರೂ ಇಲ್ಲಿನ ಅಭಿವೃದ್ಧಿ ಗ್ರಾಮಸ್ಥರಿಂದಲೇ ನಡೆದಿದೆ. ಶಾಸಕರಾದ ಕೋಡಿಂಬಾಡಿ ಅಶೋಕ್‌ ಕುಮಾರ್‌ ರೈ ಮತ್ತು ಶಶಿಕುಮಾರ್‌ ರೈ ಬಾಲ್ಯೊಟ್ಟುರವರು ನಮ್ಮೆಲ್ಲಾ ಕೆಲಸ ಕಾರ್ಯಗಳಿಗೆ ಮುಂದಾಳತ್ವ ವಹಿಸಿದ ಪರಿಣಾಮ ಇಷ್ಟೊಂದು ಕಡಿಮೆ ಅವಧಿಯಲ್ಲಿ ನಾವು ಎಣಿಸಿರದ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆದಿವೆ. ಪ್ರತಿಯೊಬ್ಬರಿಗೂ ಇಲ್ಲಿನ ಕಾರಣಿಕ ಶಕ್ತಿಗಳು ಅಭಯಪ್ರಸಾದ ನೀಡಲೆಂದು ಆಶಿಸುತ್ತೇನೆ.

ಕಲ್ಪನೆಗೂ ಮೀರಿದ ಅಭಿವೃದ್ಧಿಗೆ ದೈವಶಕ್ತಿಯೇ ಪ್ರೇರಣೆ – ಜಗನ್ಮೋಹನ ರೈ ಸೂರಂಬೈಲು ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ
ಈ ದೈವಸ್ಥಾನದ ಜೀರ್ಣೋದ್ಧಾರದ ಕಾರ್ಯಗಳು ನಮ್ಮ ಕಲ್ಪನೆಗೂ ಮೀರಿ ನಡೆದಿರಲು ಇಲ್ಲಿನ ಕಾರಣಿಕ ಶಕ್ತಿಗಳೇ ಪ್ರೇರಣೆಯಾಗಿದೆ. ಕೇವಲ 9 ತಿಂಗಳಲ್ಲಿ ಇಷ್ಟೊಂದು ಅಭೂತಪೂರ್ವವಾದ ಕೆಲಸಗಳು ನಡೆಯಲು ಸಾಧ್ಯವಾ ಎಂದು ಆಲೋಚಿಸಿದ್ದೆವು. ಆದರೆ ಗ್ರಾಮದ ಭಕ್ತಾಭಿಮಾನಿಗಳ ನಿರಂತರ ಶ್ರಮ ಮತ್ತು ಸಹಕಾರ, ಸ್ಪಂದನೆಯಿಂದಾಗಿ, ಪರವೂರ ಭಕ್ತರ ಸಹಕಾರದಿಂದಾಗಿ ಪಾಣಾಜೆಯ ಗತವೈಭವ ಮತ್ತೆ ಮರುಕಳಿಸಿದಂತಾಗಿದೆ.

ಕರಸೇವಕರಿಂದಲೇ ನಿರ್ಮಾಣಗೊಂಡಿದೆ – ಲಕ್ಷ್ಮೀನಾರಾಯಣ ರೈ ಕೆದಂಬಾಡಿ ಅಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ
ನಮ್ಮ ಆಲೋಚನೆಗಳಿಗಿಂತ ಹತ್ತು ಪಟ್ಟು ಹೆಚ್ಚು ವ್ಯವಸ್ಥಿತವಾಗಿ ಕೆಲಸ ನಡೆದಿದೆ. ಸುಮಾರು 35ಲಕ್ಷ ರೂ. ಗಳಷ್ಟು ಕೆಲಸ ಕರಸೇವೆಯಿಂದಲೇ ನಡೆದಿದೆ. ಊರಿನ ಬಡವರೂ ಇಲ್ಲಿಗೆ ದೇಣಿಗೆ ಸಮರ್ಪಿಸಿದ್ದಾರೆ. ಅವರ ಬೆವರಿನ ಹನಿಯೂ ಇಲ್ಲಿ ಬಿದ್ದಿದೆ. ಈ ದೈವಸ್ಥಾನದ ನಿಜವಾದ ನಿರ್ಮಾತೃರೆಂದರೆ ಕರಸೇವಕರು. ಅನ್ನದಾನ ಸೇವೆ ವ್ಯವಸ್ಥಿತವಾಗಿ ನಡೆಸಲು ಯೋಜಿಸಿದ್ದೇವೆ. ಊರ ಭಕ್ತರ ಸಹಕಾರ ಅತ್ಯದ್ಭುತವಾಗಿದೆ.

ಬ್ರಹ್ಮಕಲಶೋತ್ಸವಕ್ಕೂ ಸಹಕಾರ ಬಯಸುತ್ತೇವೆ – ತಮ್ಮಣ್ಣ ನಾಯ್ಕ್‌ ಸುಡುಕುಳಿ ಕಾರ್ಯದರ್ಶಿ, ಬ್ರಹ್ಮಕಲಶೋತ್ಸವ ಸಮಿತಿ
ದಿನಕ್ಕೆ 100-150 ಮಂದಿ ಪ್ರತಿನಿತ್ಯ ಕರಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪರವೂರ ಭಕ್ತರಿಂದ ಅನೇಕ ದೇಣಿಗೆ ಹರಿದುಬಂದಿದೆ. ಪುರುಷರೂ ಮಹಿಳೆಯರೂ ಕರಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮದ ಜನರ ಸಕ್ರೀಯ ತೊಡಗಿಸಿಕೊಳ್ಳುವಿಕೆಯಿಂದ ಇಷ್ಟೊಂದು ಅತ್ಯಲ್ಪ ಅವಧಿಯಲ್ಲಿ, ಭವ್ಯವಾದ ದೈವಸ್ಥಾನ ಎದ್ದುನಿಂತಿದೆ. ಇನ್ನು ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳಲ್ಲೂ ಜನರಿಂದ ಇದೇ ರೀತಿಯ ಸಹಕಾರವನ್ನು ಬಯಸುತ್ತೇವೆ.

ಅದ್ದೂರಿಯ ಹಸಿರುವಾಣಿಗೆ ಸಿದ್ದತೆ – ಬಾಬು ರೈ ಕೋಟೆ ಸಂಚಾಲಕರು, ಸುರೇಶ್‌ ಪೂಜಾರಿ ಸಹಸಂಚಾಲಕರು, ಹೊರೆಕಾಣಿಕೆ ಸಮಿತಿ
ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶೋತ್ಸದ ಹೊರೆಕಾಣಿಕೆ ಇತಿಹಾಸ ನಿರ್ಮಿಸಿದೆ. ಪುತ್ತೂರು ತಾಲೂಕಿನ ಅನೇಕ ದೇವಸ್ಥಾನ, ಭಜನಾ ಮಂದಿರಗಳಿಂದ ಹೊರೆಕಾಣಿಕೆ ಬರಲಿದೆ. ನರೆಹೊರೆಯ ಗ್ರಾಮಗಳ ದೇವಸ್ಥಾನಗಳಿಂದ ಹೊರೆಕಾಣಿಕೆ ಬರುವಂತೆ ಈಗಾಗಲೇ ಮನವಿ ಮಾಡಿದ್ದೇವೆ. ಜ.19ರಂದು ಬೆಳಿಗ್ಗೆ ಉಡ್ಡಂಗಳ ಎಂಬಲ್ಲಿಂದ ಮೆರವಣಿಗೆ ಮೂಲಕ ಹಸಿರುವಾಣಿ ಬರಲಿದೆ. ಕುಣಿತ ಭಜನೆ, ವಾದ್ಯಬ್ಯಾಂಡ್‌ಗಳ ಮೂಲಕ ಭವ್ಯ ಮೆರವಣಿಗೆ ನಡೆಯಲಿದೆ. ಗ್ರಾಮದ ಪ್ರತೀ ಮನೆಯಿಂದ ಹೊರೆಕಾಣಿಕೆ ಸಮರ್ಪಿಸಲಿದ್ದಾರೆ.

✍🏻 ಉಮೇಶ್‌ ಮಿತ್ತಡ್ಕ

LEAVE A REPLY

Please enter your comment!
Please enter your name here