ಉಪ್ಪಿನಂಗಡಿ: ಇಲ್ಲಿನ ಶಾಂತಿನಗರದಲ್ಲಿರುವ 34 ನೆಕ್ಕಿಲಾಡಿಯ ತ್ಯಾಜ್ಯ ಘಟಕದಲ್ಲಿ 93 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮಲ ತ್ಯಾಜ್ಯ ಘಟಕಕ್ಕೆ ಶಾಸಕ ಅಶೋಕ್ ಕುಮಾರ್ ರೈಯವರು ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕರು, ಕರ್ನಾಟಕ ಸರಕಾರದ ಸ್ವಚ್ಛ ಭಾರತ್ ಯೋಜನೆಯಡಿ ಪುತ್ತೂರು ತಾಲೂಕಿಗೆ ಎರಡು ಮಲ ತ್ಯಾಜ್ಯ ಘಟಕಗಳನ್ನು ನೀಡಿದೆ. ಮನುಷ್ಯನ ಮಲವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಆಧುನಿಕ ಘಟಕ ಇಲ್ಲಿ ನಿರ್ಮಾಣವಾಗಲಿದೆ. ಶೌಚಾಲಯಗಳು ತುಂಬಿದಾಗ ತಾ.ಪಂ.ನಲ್ಲಿರುವ ಸಕ್ಕಿಂಗ್ ಮೆಷಿನ್ ಮೂಲಕ ಅದನ್ನು ತೆಗೆದುಕೊಂಡು ಬಂದು ಈ ಘಟಕದಲ್ಲಿ ಅದನ್ನು ಸಂಸ್ಕರಿಸುವ ಕೆಲಸ ಮಾಡಲಾಗುವುದು. ಸಂಸ್ಕರಿಸಿದ ಆ ನೀರನ್ನು ಕೂಡಾ ತೋಟಗಳಿಗೆ ಗೊಬ್ಬರವಾಗಿ ಹರಿಸಬಹುದು. ರಾಜ್ಯ ಸರಕಾರವು ಸ್ವಚ್ಛತೆಗೂ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಮಟ್ಟಕ್ಕೂ ಈ ಯೋಜನೆಯನ್ನು ತರುವ ಉದ್ದೇಶವಿದೆ ಎಂದರಲ್ಲದೆ, 34 ನೆಕ್ಕಿಲಾಡಿಯ ತ್ಯಾಜ್ಯ ಘಟಕದಲ್ಲಿ ತ್ಯಾಜ್ಯಗಳನ್ನು ನಾಯಿಗಳು ಎತ್ತಿಕೊಂಡು ಹೋಗಿ ಎಲ್ಲೆಂದರಲ್ಲಿ ಹಾಕುತ್ತಿವೆ ಎಂಬ ಬಗ್ಗೆ ದೂರುಗಳಿವೆ. ಆದ್ದರಿಂದ ಇಲ್ಲಿ ಪರಿಸರ ಸ್ವಚ್ಛತೆಯ ಆದ್ಯತೆಯೊಂದಿಗೆ ವ್ಯವಸ್ಥಿತ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡಬೇಕೆಂದು ಸೂಚಿಸಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಈ ಮೊದಲು ಮಲ ತ್ಯಾಜ್ಯ ಘಟಕ ಗೋಳ್ತಮಜಲಿನಲ್ಲಿ ಮಾತ್ರವಿತ್ತು. ಇಲ್ಲಿ ಸಂಗ್ರಹ ಮಾಡಿದ ಮಲ ತ್ಯಾಜ್ಯವನ್ನು ಅಲ್ಲಿಗೆ ಕೊಂಡು ಹೋಗಬೇಕಾದರೆ ಸುಮಾರು 2,500 ಸಾವಿರದಷ್ಟು ಅಧಿಕ ಹೊರೆ ಜನರಿಗೆ ಬೀಳುತ್ತಿತ್ತು. ಇನ್ನು ನೆಕ್ಕಿಲಾಡಿಯಲ್ಲಿಯೇ ಮಲ ತ್ಯಾಜ್ಯ ಘಟಕ ಆಗುವುದರಿಂದ ಈ ಭಾಗದವರಿಗೆ ಆರ್ಥಿಕ ಹೊರೆ ಕಮ್ಮಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ 34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ, ಉಪಾಧ್ಯಕ್ಷ ಹರೀಶ್ ಡಿ., ಸದಸ್ಯ ವಿಜಯಕುಮಾರ್, ಡಿಸಿಸಿ ಕಾರ್ಯದರ್ಶಿ ಮುರಳೀಧರ ರೈ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌ನ ನಿಕಟಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ನಿಕಟಪೂರ್ವ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್, 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಬೂತ್ ಅಧ್ಯಕ್ಷರಾದ ಹಮೀದ್ ಪಿ.ಟಿ., ಅಬ್ದುಲ್ ಖಾದರ್, ಗ್ರಾಮೀಣ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸುರೇಶ್, ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗದ ಸಂದೀಪ್, ತಾಲೂಕು ಕಾರ್ಯಕ್ರಮ ಸಂಯೋಜಕ ಜಗತ್, ಸಂಜೀವಿನಿ ಸಂಘದ ಜಮೀಳಾ, ಕಾಂಗ್ರೆಸ್ ಮುಖಂಡರಾದ ಅಸ್ಕರ್ ಅಲಿ, ಜಯಶೀಲ ಶೆಟ್ಟಿ, ಜಾನ್ ಕೆನ್ಯೂಟ್ ಮತ್ತಿತರರು ಉಪಸ್ಥಿತರಿದ್ದರು.
34 ನೆಕ್ಕಿಲಾಡಿ ಪಿಡಿಒ ದೇವಪ್ಪ ನಾಯ್ಕ ಸ್ವಾಗತಿಸಿ, ವಂದಿಸಿದರು. ಗ್ರಾ.ಪಂ. ಸಿಬ್ಬಂದಿ ನಿತಿನ್ ಸಹಕರಿಸಿದರು.