ಪುತ್ತೂರು: ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂ ಎದುರಿನಲ್ಲಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಸೆಲ್ವದರ್ ಫನಾಂಡೀಸ್ ಎಂಬವರು ಮೃತಪಟ್ಟ ಘಟನೆಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಾಲಯ ಆರೋಪಿ ಸವಾರ ನಿತಿನ್ ಎಂಬಾತನಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಘಟನೆಯ ವಿವರ:
ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂ ಎದುರಿನಲ್ಲಿ ರಸ್ತೆ ದಾಟುತ್ತಿದ್ದ ಸೆಲ್ವದರ್ ಫೆನಾಂಡೀಸ್ ಎಂಬವರಿಗೆ ನಿತಿನ್ ಎಂಬವರು ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿತ್ತು. ಓಮ್ನಿ ಕಾರನ್ನು ಓವರ್ಟೇಕ್ ಮಾಡುವ ವೇಳೆ ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡಿದ್ದ ಸೆಲ್ವದರ್ ಫನಾಂಡೀಸ್ ಅವರು ಮೃತಪಟ್ಟಿದ್ದರು. ಘಟನೆಯ ಕುರಿತು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 89/23ರಂತೆ ಕಲಂ 279 ಮತ್ತು 304(ಎ)ರಡಿ ಸವಾರ ನಿತಿನ್ ವಿರುದ್ಧ ಕೇಸು ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಆಗಿನ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್ ಎಮ್.ಎಸ್. ಅವರು ಆರೋಪಿ ಸವಾರನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಇದೀಗ ವಿಚಾರಣೆ ಪೂರ್ಣಗೊಳಿಸಿದ ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಮನು ಬಿ.ಕೆ. ಅವರು ಸವಾರ ನಿತಿನ್ಗೆ 279ರಡಿಯ ಅಪರಾಧಕ್ಕಾಗಿ ಆರು ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು ಒಂದು ಸಾವಿರ ರೂ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಜೈಲು ಶಿಕ್ಷೆ, 304(ಎ) ಐ.ಪಿ.ಸಿಯಡಿಯ ಅಪರಾಧಕ್ಕಾಗಿ 6 ತಿಂಗಳ ಕಾರಾಗೃಹ ವಾಸ ಮತ್ತು 10 ಸಾವಿರ ದಂಡ. ದಂಡ ಪಾವತಿಸಲು ತಪ್ಪಿದಲ್ಲಿ ಮೂರು ತಿಂಗಳು ಜೈಲು ಶಿಕ್ಷೆ ಮತ್ತು ಐ.ಎಮ್.ವಿ ಕಾಯ್ದೆಯಡಿಯ ಕಲಂ 190(2)ರ ಅಪರಾಧಕ್ಕಾಗಿ ಮೂರು ತಿಂಗಳ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ ದಂಡ ವಿಧಿಸಿದ್ದಾರೆ. ಅಪರಾಧಿಯ ಚಾಲನಾ ಪರವಾನಿಗೆಯನ್ನು ಮೂರು ತಿಂಗಳ ಕಾಲ ಅಮಾನತು ಪಡಿಸಲೂ ನ್ಯಾಯಾಧೀಶರು ಆದೇಶಿಸಿದ್ದಾರೆ. ಜತೆಗೆ 177 ಐ.ಎಮ್.ವಿ. ಕಾಯ್ದೆಯಡಿ ಅಪರಾಧಕ್ಕಾಗಿ 500ರೂ ದಂಡ ವಿಧಿಸಲಾಗಿದ್ದು ಒಟ್ಟು 21,500ರೂ ದಂಡವನ್ನು ಮೃತ ಸೆಲ್ವದರ್ ಫನಾಂಡಿಸ್ ಅವರ ಕಾನೂನು ಬದ್ಧ ಉತ್ತರಾಧಿಕಾರಿಗೆ ನೀಡಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಸರ್ಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ದಿವ್ಯಾರಾಜ್ ಹೆಗ್ಡೆ ಪುತ್ತೂರು ವಾದ ಮಂಡಿಸಿದ್ದರು.