ಪುತ್ತೂರು:ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಜ. 16 ರಂದು ಬೆಳ್ಳಾರೆಯಿಂದ ಪೆರುವಾಜೆ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಮುಂಭಾಗದಿಂದ ಹೊರೆಕಾಣಿಕೆ ಮೆರವಣಿಗೆಗೆ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ವೆಂಕಟಕೃಷ್ಣ ರಾವ್ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಸುಮಾರು ಮೂರುವರೆ ಕಿ.ಮೀ.ದೂರ ಮೆರವಣಿಗೆ ಸಾಗಿತು. ದಾರಿಯುದ್ದಕ್ಕೂ ಭಕ್ತರು ಸಾಥ್ ನೀಡಿದರು.
ಇಡೀ ಮೆರವಣಿಗೆಯಲ್ಲಿ ಕಲಾ ವೈಭವ ಮೇಳೈಸಿತು. ಆನೆಯ ಕಲಾಕೃತಿ ರಾಜ ಪಥದಲ್ಲಿ ಸಾಗುತ್ತಿದ್ದ ದೃಶ್ಯ ನೈಜ ಆನೆಯನ್ನೇ ಬಿಂಬಿಸುವಂತಿತ್ತು. ಪ್ರಚಾರ ವಾಹನ, ಕಲಶ ಹೊತ್ತ ಮಹಿಳೆಯರು, ಅಲಂಕಾರಿಕ ಬಣ್ಣದ ಕೊಡೆಗಳು, ಚೆಂಡೆ, ಅಯೋಧ್ಯೆಯ ರಾಮಮಂದಿರವನ್ನು ಸಾರುವ ಜಾಥಾ ವಾಹನ, ಕುಣಿತ ಭಜನೆ, ಮಕ್ಕಳ ವಿವಿಧ ವೇಷಗಳು, ನವದುರ್ಗೆಯರು, ಗೊಂಬೆ ವೇಷ, ಪಿಲಿವೇಷ, ಹಸುರು ಹೊರೆಕಾಣಿಕೆ ಹೊತ್ತ ವಾಹನಗಳು, ಭಕ್ತರು ಮೆರವಣಿಗೆಗೆ ಮೆರಗು ತುಂಬಿದರು. ನೂರಾರು ಮಹಿಳೆಯರು ಪೂರ್ಣ ಕುಂಭ ಸ್ವಾಗತದೊಂದಿಗೆ ಮುನ್ನಡೆದರು.
ಹೊರೆಕಾಣಿಕೆಯು ರಥಬೀದಿಗೆ ತಲುಪಿದ ವೇಳೆ ಆಕರ್ಷಕ ಚೆಂಡೆ ವಾದನ, ಕುಣಿತ ಭಜನೆ, ಪಿಲಿ ವೇಷದ ನರ್ತನ ಗಮನ ಸೆಳೆಯಿತು. ಬಳಿಕ ಅಲ್ಲಿಂದ ಸುವಸ್ತುಗಳನ್ನು ಹೊತ್ತ ಭಕ್ತರು ದೇವಾಲಯದ ಒಳಭಾಗಕ್ಕೆ ಒಂದು ಸುತ್ತು ಬಂದು ಧ್ವಜಸ್ಥಂಭದ ಬಳಿ ಅವುಗಳನ್ನು ಸಮರ್ಪಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಆರತಿ ಬೆಳಗಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರು ಸಹಿತ ವಿವಿಧ ಗಣ್ಯರು ಉಪಸ್ಥಿತರಿದ್ದರು.
ಉಗ್ರಾಣ ಮುಹೂರ್ತ
ಜ.16 ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಪೂಜಾ ಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.