ದೊಡ್ಡ ರೋಗಕ್ಕೆ ದೊಡ್ಡ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ-ಸಿದ್ದರಾಮಯ್ಯ ಭರವಸೆ
ಪುತ್ತೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಿಚಿತ್ರ ಕಾಯಿಲೆಗಳು ಹೆಚ್ಚಾಗುತ್ತಲೇ ಇದೆ ಅದರಲ್ಲೂ ಕಿಡ್ನಿ ವೈಫಲ್ಯ ರೋಗ ಹೆಚ್ಚಾಗುತ್ತಿದ್ದು ಬಡವರು ಆಸ್ಪತ್ರೆ ಬಿಲ್ ಪಾವತಿಸಲಾಗದೆ ಕಷ್ಟ ಅನುಭವಿಸುತ್ತಿದ್ದು, ದೊಡ್ಡ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಮತ್ತು ಎಪಿಎಲ್ ಕಾರ್ಡುದಾರರಿಗೆ ಅವರ ಪರಿಸ್ಥಿತಿ ನೋಡಿ ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಶುಕ್ರವಾರ ಮಂಗಳೂರಿನಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಪ್ರಾದೇಶಿಕ ಕಚೇರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಡವರು ಸಹಾಯ ಕೋರಿ ಅರ್ಜಿ ಹಾಕುತ್ತಿದ್ದಾರೆ. ಅರ್ಜಿ ಪರಿಶೀಲನೆ ಮಾಡುವಾಗ ಕೆಲವರದ್ದು 30 ಲಕ್ಷಕ್ಕಿಂತಲೂ ಹೆಚ್ಚು ಬಿಲ್ ಇದೆ, ಬಡವರು ಹೇಗೆ ಪಾವತಿ ಮಾಡುತ್ತಾರೆ. ಅಂತವರನ್ನು ಗುರುತಿಸಿ ಸರಕಾರದಿಂದಲೇ ಉಚಿತ ಚಿಕಿತ್ಸೆ ನೀಡುವಲ್ಲಿ ಕ್ರಮಕ್ಕೆ ಸೂಚಿಸಿದ್ದೇನೆ. ಕಿಡ್ನಿ ವೈಫಲ್ಯಗೊಂಡ ಸುಮಾರು 5000 ಅರ್ಜಿಗಳಿವೆ. ಜನರ ಆರೋಗ್ಯದ ಹಿತ ದೃಷ್ಟಿಯಿಂದ ಸರಕಾರ ಪೂರಕ ಕ್ರಮಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಗ್ರಾಮಾಂತರ ಭಾಗದಲ್ಲಿ ಮೆಡಿಕಲ್ ಕಾಲೇಜು ಬೇಕಿದೆ:
ಪಟ್ಟಣ ಪ್ರದೇಶದಲ್ಲಿ ದೊಡ್ಡ ಮಟ್ಟದ ಆಸ್ಪತ್ರೆಗಳಿವೆ ಆದರೆ ಗ್ರಾಮಾಂತರ ಭಾಗದಲ್ಲಿ ಈ ಸೌಲಭ್ಯವಿಲ್ಲ ಇದಕ್ಕಾಗಿ ಗ್ರಾಮಾಂತರ ಭಾಗದಲ್ಲಿ ಮೆಡಿಕಲ್ ಕಾಲೇಜು ಈ ಕಾಲದ ಬೇಡಿಕೆಯಾಗಿದೆ ಇದಕ್ಕಾಗಿ ಸರಕಾರ ಕೆಲಸ ಮಾಡಲಿದೆ. ಗ್ರಾಮೀಣ ಭಾಗದ ಕಲಿಕೆಗೂ ಇದು ಸಹಕಾರಿಯಾಗಲಿದೆ ಎಂದು ಹೇಳಿದರು.
ಪುತ್ತೂರಿಗೆ ಬರಲಿ: ಅಶೋಕ್ ರೈ
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರ ಮಾತನಾಡುವಾಗ ವೇದಿಕೆಯಲ್ಲಿದ್ದ ಪುತ್ತೂರು ಶಾಸಕ ಅಶೋಕ್ ರೈ ಅವರು ಈ ಕಾರಣಕ್ಕಾಗಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಕೇಳಿದ್ದೇನೆ ಎಂದಾಗ ಸಿದ್ದರಾಮಯ್ಯ ಅವರು ಅಶೋಕ್ ರೈ ಅವರನ್ನೇ ನೋಡಿದ ಘಟನೆಯೂ ನಡೆಯಿತು. ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಕು ಎಂದು ಅಶೋಕ್ ರೈ ಹೇಳಿದಾಗ ಸಭೆಯಲ್ಲಿದ್ದವರು ಚಪ್ಪಾಳೆ ಮೂಲಕ ಬೆಂಬಲವನ್ನು ವ್ಯಕ್ತಪಡಿಸಿದರು.