ಪುತ್ತೂರಿಗೆ ಮೆಡಿಕಲ್ ಕಾಲೇಜು ಕೇಳಿದ್ದೇನೆ-ಅಶೋಕ್ ರೈ
ಮಂಗಳೂರು:ಗ್ರಾಮಾಂತರ ಭಾಗದಲ್ಲಿ ಮೆಡಿಕಲ್ ಕಾಲೇಜು ಈ ಕಾಲದ ಬೇಡಿಕೆಯಾಗಿದೆ.ದ.ಕ.ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜಿನ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದಾಗ ವೇದಿಕೆಯಲ್ಲಿದ್ದ ಶಾಸಕ ಅಶೋಕ್ ಕುಮಾರ್ ರೈ,ಈ ಕಾರಣಕ್ಕಾಗಿಯೇ ಪುತ್ತೂರಿಗೆ ಮೆಡಿಕಲ್ ಕಾಲೇಜು ಕೇಳಿದ್ದೇನೆ ಎಂದು ಹೇಳಿದ ಘಟನೆ ಜ.17ರಂದು ಮಂಗಳೂರುನಲ್ಲಿ ನಡೆದಿದೆ.
ಮಂಗಳೂರಿನಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಪ್ರಾದೇಶಿಕ ಕಚೇರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಪಟ್ಟಣ ಪ್ರದೇಶದಲ್ಲಿ ದೊಡ್ಡ ಮಟ್ಟದ ಆಸ್ಪತ್ರೆಗಳಿವೆ.ಆದರೆ ಗ್ರಾಮಾಂತರ ಭಾಗದಲ್ಲಿ ಈ ಸೌಲಭ್ಯವಿಲ್ಲ.ಇದಕ್ಕಾಗಿ ಗ್ರಾಮಾಂತರ ಭಾಗದಲ್ಲಿ ಮೆಡಿಕಲ್ ಕಾಲೇಜು ಕಾಲದ ಬೇಡಿಕೆಯಾಗಿದೆ.ಇದಕ್ಕಾಗಿ ಸರಕಾರ ಕೆಲಸ ಮಾಡಲಿದೆ.ಗ್ರಾಮೀಣ ಭಾಗದ ಕಲಿಕೆಗೂ ಇದು ಸಹಕಾರಿಯಾಗಲಿದೆ.ಜಿಲ್ಲೆಗೊಂದು ಸರಕಾರಿ ವೈದ್ಯಕೀಯ ಕಾಲೇಜು ಇರಬೇಕು ಎನ್ನುವುದು ನನ್ನ ಗುರಿ.ಮಂಗಳೂರಿನಲ್ಲಿ ಉತ್ತಮ ಆರೋಗ್ಯ ಸೇವೆ ಇದ್ದರೂ ದ.ಕ.ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜಿನ ಅಗತ್ಯ ಇದೆ.ಈ ದಿಕ್ಕಿನಲ್ಲೂ ಸರಕಾರ ಯೋಚಿಸಿ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಈ ವೇಳೆ ಸಮಾರಂಭದ ವೇದಿಕೆಯಲ್ಲಿದ್ದ ಶಾಸಕ ಅಶೋಕ್ ಕುಮಾರ್ ರೈ ಎದ್ದುನಿಂತು ಮಾತನಾಡುತ್ತಾ,ಈ ಕಾರಣಕ್ಕಾಗಿಯೇ ಪುತ್ತೂರಿಗೆ ಮೆಡಿಕಲ್ ಕಾಲೇಜು ಕೇಳಿದ್ದೇನೆ ಎಂದಾಗ ಸಿದ್ದರಾಮಯ್ಯ ಅವರು ಅಶೋಕ್ ಕುಮಾರ್ ರೈ ಅವರನ್ನೇ ನೋಡಿದರು.ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಕು ಎಂದು ಅಶೋಕ್ ಕುಮಾರ್ ರೈ ಅವರು ಹೇಳಿದಾಗ ಸಭೆಯಲ್ಲಿದ್ದವರು ಕರತಾಡನದ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಿಚಿತ್ರ ಕಾಯಿಲೆಗಳು ಹೆಚ್ಚಾಗುತ್ತಲೇ ಇದೆ.ಅದರಲ್ಲೂ ಕಿಡ್ನಿ ವೈಫಲ್ಯ ರೋಗ ಹೆಚ್ಚಾಗುತ್ತಿದ್ದು ಬಡವರು ಆಸ್ಪತ್ರೆ ಬಿಲ್ ಪಾವತಿಸಲಾಗದೆ ಕಷ್ಟ ಅನುಭವಿಸುತ್ತಿದ್ದಾರೆ.ಈ ನಿಟ್ಟಿನಲ್ಲಿ ಬೆಂಗಳೂರಿನ ದೊಡ್ಡ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಮತ್ತು ಎಪಿಎಲ್ ಕಾರ್ಡುದಾರರಿಗೆ ಅವರ ಪರಿಸ್ಥಿತಿ ನೋಡಿ ಉಚಿತ ಚಿಕಿತ್ಸೆಗೆ ಸೂಚನೆ ನೀಡಿರುವುದಾಗಿ ಸಿಎಂ ಹೇಳಿದರು.
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಡವರು ಸಹಾಯ ಕೋರಿ ಅರ್ಜಿ ಹಾಕುತ್ತಿದ್ದಾರೆ.ಅರ್ಜಿ ಪರಿಶೀಲನೆ ಮಾಡುವಾಗ ಕೆಲವರದ್ದು 30 ಲಕ್ಷಕ್ಕಿಂತಲೂ ಹೆಚ್ಚು ಬಿಲ್ ಇದೆ.ಬಡವರು ಹೇಗೆ ಪಾವತಿ ಮಾಡುತ್ತಾರೆ.ಅಂಥವರನ್ನು ಗುರುತಿಸಿ ಸರಕಾರದಿಂದಲೇ ಉಚಿತ ಚಿಕಿತ್ಸೆ ನೀಡುವಲ್ಲಿ ಕ್ರಮಕ್ಕೆ ಸೂಚಿಸಿದ್ದೇನೆ.ಕಿಡ್ನಿ ವೈಫಲ್ಯಗೊಂಡ ಸುಮಾರು 5000 ಅರ್ಜಿಗಳಿವೆ.ಜನರ ಆರೋಗ್ಯದ ಹಿತ ದೃಷ್ಟಿಯಿಂದ ಸರಕಾರ ಪೂರಕ ಕ್ರಮಕೈಗೊಳ್ಳಲಿದೆ ಎಂದೂ ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ರಮೇಶ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಈ ಪ್ರಾದೇಶಿಕ ಕೇಂದ್ರವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ವಿನೂತನ ಸಿಮ್ಯುಲೇಶನ್ ಲ್ಯಾಬ್, ಕ್ರೀಡಾ ಸಂಕೀರ್ಣ, ಸುಧಾರಿತ ಫಿಟ್ನೆಸ್ ಕೇಂದ್ರ, ಮನೋರಂಜನಾ ಸೌಲಭ್ಯ, ಹವಾನಿಯಂತ್ರಿತ ಸಭಾಂಗಣ, ಸುಧಾರಿತ ಸಂಶೋಧನಾ ಕೇಂದ್ರಗಳು, ಸೆಮಿನಾರ್ ಹಾಲ್ನೊಂದಿಗೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಇಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ಕೇಂದ್ರದ ಪ್ರಾದೇಶಿಕ ಕೇಂದ್ರ ಆರಂಭಿಸಬೇಕೆನ್ನುವುದು ನನ್ನ ಬಹು ದಿನದ ಕನಸು.ಈ ದೇಶದ ಯುವ ಜನರು ಈ ದೇಶದ ಸಂಪತ್ತಾಗಬೇಕೆನ್ನುವುದು ನಮ್ಮ ಆಶಯ.ಈ ಕೇಂದ್ರ ರಾಜೀವ ಗಾಂಧಿ ಆರೋಗ್ಯ ವಿ.ವಿ.ಯ ಕೇಂದ್ರ ಮಾತ್ರವಲ್ಲ, ಕರಾವಳಿ ಜನತೆಯ ಹೆಮ್ಮೆಯ ಕೇಂದ್ರವಾಗಲಿ ಎಂದು ಶುಭ ಹಾರೈಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಮತ್ತು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಸಹ ಕುಲಪತಿ ಡಾ.ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್ ಮಾತನಾಡಿ,ದೇಶದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಅತ್ಯಂತ ಹೆಚ್ಚು ವೈದ್ಯಕೀಯ ಕಾಲೇಜು ಹೊಂದಿದೆ.ಸರಕಾರ ಬಡವರಿಗೆ ಕನಿಷ್ಠ ದರದಲ್ಲಿ ಚಿಕಿತ್ಸೆ ನೀಡುವ ಗುರಿ ಹೊಂದಿದೆ ಎಂದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ, ಶಾಸಕರಾದ ಅಶೋಕ್ ಕುಮಾರ್ ರೈ,ಭಾಗೀರಥಿ ಮುರುಳ್ಯ, ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್,ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜ, ಡಾ|ಮಂಜುನಾಥ ಭಂಡಾರಿ, ಗೋವಿಂದರಾಜು, ಮನಪಾ ಮೇಯರ್ ಮನೋಜ್ ಕುಮಾರ್, ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ.ಸುಜಾತಾ ರಾಥೋಡ್, ಸರಕಾರದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್, ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಾದ ಡಾ.ತ್ರಿವೇಣಿ,ರಾಜೀವಗಾಂಧಿ ಆರೋಗ್ಯ ವಿವಿ ಸೆನೆಟ್ ಸದಸ್ಯರಾದ, ಡಾ.ಶಿವಶರಣ್ ಶೆಟ್ಟಿ, ಪ್ರೊ|ವೈಶಾಲಿ ಶ್ರೀಜಿತ್,ಡಾ.ಸಲೀಮುಲ್ಲಾ, ಡಾ.ಚರಿಶ್ಮಾ ಡಿಸಿಲ್ವ ಡಾ.ಮುಹಮ್ಮದ್ ಸುಹೇಲ್ ಮೊದಲಾದವರು ಉಪಸ್ಥಿತರಿದ್ದರು. ರಾಜ್ಯ ಅಲೈಡ್ ಮತ್ತು ಆರೋಗ್ಯ ರಕ್ಷಣಾ ಮಂಡಳಿಯ ಅಧ್ಯಕ್ಷ ಡಾ|ಯು.ಟಿ.ಇಫ್ತಿಕಾರ್ ಅಲಿ ವಂದಿಸಿದರು.
ಬಿಪಿಎಲ್ ಕಾರ್ಡ್ನವರಿಗೆ ಉಚಿತ ಸೇವೆ
ಬಿಪಿಎಲ್ ಕಾರ್ಡ್ ಇದ್ದವರಿಗೆ ಎಲ್ಲಾ ರೀತಿಯ ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡುವಂತೆ ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.