ಪುತ್ತೂರಿನ ಮುಂಡೂರು-ನೈತ್ತಾಡಿ ಗಡಿ ಭಾಗದಲ್ಲಿ ನಿರ್ಮಾಣವಾಗಲಿದೆ ಬೃಹತ್ ತಾಲೂಕು ಕ್ರೀಡಾಂಗಣ- ಪಹಣಿ ಪತ್ರ ಹಸ್ತಾಂತರ

0

15 ಎಕ್ರೆ ವಿಸ್ತೀರ್ಣ ಹೊಂದಿರಲಿದೆ ತಾಲೂಕು ಕ್ರೀಡಾಂಗಣ

ಪುತ್ತೂರು: ಪುತ್ತೂರಿನಲ್ಲಿ ಸುವ್ಯವಸ್ಥಿತ ಕ್ರೀಡಾಂಗಣದ ಕನಸು ಹೊತ್ತ ಶಾಸಕ ಅಶೋಕ್ ಕುಮಾರ್ ರೈ ಅವರ ಕನಸು ಇದೀಗ ನನಸಾಗಿದೆ. ಪುತ್ತೂರಿನ ಮುಂಡೂರು ಮತ್ತು ನೈತ್ತಾಡಿಯ ಗಡಿ ಭಾಗದಲ್ಲಿ ಕೆಮ್ಮಿಂಜೆ ಗ್ರಾಮದ ಆರ್‌ಟಿಸಿಯನ್ನೊಳಗೊಂಡು 15 ಎಕ್ರೆ ಜಾಗವನ್ನು ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಕ್ಕೆ ಗುರುತಿಸಲಾಗಿದ್ದು, ಪುತ್ತೂರಿನ 2ನೇ ಅತಿ ದೊಡ್ಡ ತಾಲೂಕು ಕ್ರೀಡಾಂಗಣದ ಜಾಗದ ದಾಖಲೆ ಪತ್ರವನ್ನು ಯುವಸಬಲೀಕರಣ ಕ್ರೀಡಾ ಇಲಾಖೆಗೆ ಜ.18ರಂದು ಶಾಸಕರ ಕಚೇರಿ ಸಭಾಂಗಣದಲ್ಲಿ ಶಾಸಕರು ಹಸ್ತಾಂತರಿಸಿದರು.


ಶಾಸಕ ಅಶೋಕ್ ಕುಮಾರ್ ರೈ ಅವರು ಮಾಧ್ಯಮದೊಂದಿಗೆ ಮಾತನಾಡಿ, ಪುತ್ತೂರಿನಲ್ಲಿ ಯಾವುದೆ ವ್ಯವಸ್ಥಿತವಾದ ಕ್ರೀಡಾಂಗಣವಿಲ್ಲ. ಆದರೆ ಕ್ರೀಡೆಯಲ್ಲಿ ಎಷ್ಟೋ ಜನ ಸಾಧನೆ ಮಾಡಿದವರು ಪುತ್ತೂರಿನಲ್ಲಿ ಇದ್ದಾರೆ. ಅವರ ಸಾಧನೆಗೆ ಪೂರಕವಾದ ವ್ಯವಸ್ಥೆಗಳನ್ನು ಜೋಡಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ಈಜು, ಕರಾಟೆ, ಅಥ್ಲೆಟಿಕ್, ಕಬಡ್ಡಿಯಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಹೋದವರು ಪುತ್ತೂರಿನಲ್ಲಿದ್ದಾರೆ. ನಾನೇ ಎಷ್ಟೋ ಮಕ್ಕಳನ್ನು ಬೆಂಗಳೂರಿನಲ್ಲಿ ಸ್ಪೋರ್ಟ್ಸ್ ಕಾಲೇಜಿಗೆ ಸೇರಿಸಿದ್ದೇನೆ. ಆದರೆ ಅವರಿಗೆ ಬೇಸಿಕ್ ಸ್ಪೋರ್ಟ್ಸ್ ಬಗ್ಗೆ ಅರಿವು ಮೂಡಿಸುವುದು ಮತ್ತು ಯೋಚನೆಗಳನ್ನು ಕೊಡುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ನಾನು ಶಾಸಕನಾಗಿದ್ದಾಗಿನಿಂದ ಪುತ್ತೂರಿನಲ್ಲಿ ಸುವ್ಯವಸ್ಥಿತ ಕ್ರೀಡಾಂಗಣದ ಕನಸು ಕಟ್ಟಿದ್ದೆ. ಅದು ಇವತ್ತು ಸಾರ್ಥಕವಾಗಿದೆ. ಈ ಮೈದಾನದಲ್ಲಿ ಸಿಂಥೆಟಿಕ್ ಟ್ರ್ಯಾಕ್, ಬಾಸ್ಕೆಟ್ ಬಾಲ್, ಶಟಲ್, ಸ್ಕ್ಯೇಟಿಂಗ್, ಇಂಡೋರ್ ಗೇಮ್ಸ್‌ಗಳಿಗೆ ಪೋಷಕರು ತಮ್ಮ ಮಕ್ಕಳನು ಅಲ್ಲಿಗೆ ಕರೆದುಕೊಂಡು ಹೋಗಿ ಅದಕ್ಕೆ ಬೇಕಾಗುವ ಕೋಚ್‌ಗಳ ಮೂಲಕ ತರಬೇತಿ ಕೊಡಿಸಬಹುದು. ಅಲ್ಲಿ 15 ಎಕ್ರೆಯಲ್ಲಿ ಒಳ್ಳೆಯ ಪಾರ್ಕ್ ಮತ್ತು ವಾಕಿಂಗ್ ಟ್ರ್ಯಾಕ್ ಮಾಡಲಾಗುವುದು. ಈಗಾಗಲೇ ರಾಜ್ಯ ಸರಕಾರದಿಂದ ರೂ. 8 ಕೋಟಿ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ದಿನ ಆವರಣಗೋಡೆ ನಿರ್ಮಾಣ ಆಗಲಿದೆ. ಅಲ್ಲಿ ಮೈದಾನ ಸಮತ್ತಟ್ಟು ಮತ್ತು ಡ್ರೈನೇಜ್ ಸಿಸ್ಟಮ್ ಮಾಡಲು ರೂ.2 ಕೋಟಿಯ ಟೆಂಡರ್ ಕರೆಯಲಾಗುವುದು. ಬಳಿಕ ಹಂತ ಹಂತವಾಗಿ ರೂ.8 ಕೋಟಿ ಅನುದಾನದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಮತ್ತು ಗ್ಯಾಲೆರಿ ಮಾಡಲು ಅನುದಾನ ಬಳಸಿಕೊಳ್ಳಲಾಗುವುದು. ರೂ. 22 ಕೋಟಿಯಲ್ಲಿ ಕೇಂದ್ರ ಸರಕಾರಕ್ಕೆ ಖೇಲೋ ಇಂಡಿಯಾ ಎಂಬ ಯೋಜನೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ ರೂ.8 ಕೋಟಿಯಲ್ಲಿ ಒಲಂಪಿಕ್ ಮಾದರಿಯ ಇಂಡೋರ್ ಈಜುಕೊಳ, ಇಂಡೋರ್ ಗೇಮ್ಸ್ ಕೂಡಾ ಮಾಡಲಾಗುವುದು. ಇದನ್ನು ಖಾಸಗಿ ವ್ಯವಸ್ಥೆಯಲ್ಲಿ ಜೋಡಿಸಿ ನಿರ್ವಾಹಣೆ ಮಾಡಲಾಗುವುದು. ಒಟ್ಟಿನಲ್ಲಿ ನಗರಸಭೆ, ಸರಕಾರದಿಂದ ಬರುವ ಎಲ್ಲಾ ಯೋಜನೆ ಸೇರಿಸಿ ಅಲ್ಲಿ ವ್ಯವಸ್ಥಿತ ರೀತಿಯ ಪಾರ್ಕ್ ಮಾಡುತ್ತೇವೆ. 15 ಎಕ್ರೆಯ ವಾಕಿಂಗ್ ಟ್ರ್ಯಾಕ್‌ ನ ಬದಿಯಲ್ಲಿ ಅರಣ್ಯ ಮತ್ತು ಸಾಮಾಜಿಕ ಅರಣ್ಯ ಸೇರಿಸಿಕೊಂಡು ಹಲಸು, ಮಾವಿನ ಹಣ್ಣು, ನೇರಳೆ ಗಿಡವನ್ನು ನೆಡಿಸಲಾಗುವುದು ಎಂದವರು ಹೇಳಿದರು.

ರಾಜ್ಯ ಮಟ್ಟದ ಕ್ರೀಡೆ ಇಲ್ಲಿ ನಡೆಯುವಂತೆ ಈ ಮೈದಾನ ನಿರ್ಮಾಣ ಮಾಡಲಾಗುವುದು ಎಂದರು. ಕ್ರೀಡಾಂಗಣ ಸ್ಥಳದ ದಾಖಲೆ ಪತ್ರವನ್ನು ಯುವಜನ ಸಬಲೀಕರಣ ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಬಿರಾವು ಅವರಿಗೆ ಹಸ್ತಾಂತರಿಸಲಾಯಿತು. ತಹಸೀಲ್ದಾರ್ ಪುರಂದರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here