ಹೆದ್ದಾರಿ ಚತುಷ್ಪಥ ಕಾಮಗಾರಿ ವೀಕ್ಷಿಸಿದ ಶಾಸಕ ಅಶೋಕ್ ಕುಮಾರ್ ರೈ
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ವೇಳೆ ಸ್ಥಳೀಯ ವ್ಯವಸ್ಥೆಗೆ ಅನುಕೂಲವಾಗುವಂತೆ ಕಾಮಗಾರಿಯನ್ನು ನಡೆಸಬೇಕು ಹಾಗೂ ಇತಿಹಾಸ ಪ್ರಸಿದ್ದ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯಕ್ಕೆ ಹೆದ್ದಾರಿಯಿಂದ ಕಲ್ಪಿಸಲಾದ ಸಂಪರ್ಕ ರಸ್ತೆಯನ್ನು ಉಳಿಸಿಕೊಳ್ಳಬೇಕೆಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅದಿಕಾರಿಗಳಿಗೆ ನಿರ್ದೇಶನ ನೀಡಿದರು.
ಉಪ್ಪಿನಂಗಡಿಯ ಪರಿಸರದಲ್ಲಿ ಜ.18ರಂದು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಇಲ್ಲಿನ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಸಮೀಪದಲ್ಲಿರುವ ಬ್ರಿಟಿಷರ ಕಾಲದ ಕುಮಾರಧಾರಾ ಸೇತುವೆಯ ಧಾರಣಾ ಸಾಮರ್ಥ್ಯ ಕುಸಿದಿರುವ ಕಾರಣ ಘನವಾಹನಗಳ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಬೇಕು ಹಾಗೂ ಈ ಸೇತುವೆಯ ಬಳಿಯಲ್ಲಿನ ಸ್ಥಳವನ್ನು ದೇವಾಲಯಕ್ಕೆ ಆಗಮಿಸುವ ಮಂದಿಯ ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಯೋಜನಾಬದ್ಧವಾಗಿ ಬಳಸಬೇಕೆಂದು ತಿಳಿಸಿದರಲ್ಲದೆ, ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳಲ್ಲಿ ಹೆದ್ದಾರಿಯಿಂದ ದೇವಾಲಯಕ್ಕಿರುವ ಸಂಪರ್ಕ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಸಿಕೊಡಬೇಕು. ಬ್ರಿಟಿಷರ ಕಾಲದ ಸೇತುವೆಯ ಬಳಿ ಹೆದ್ದಾರಿ ಬದಿ ತಡೆಗೋಡೆಯನ್ನು ನಿರ್ಮಿಸಬೇಕೆಂದು ತಿಳಿಸಿದರು.
ಗಾಂಧಿಪಾರ್ಕ್ ಬಳಿ ಹೆದ್ದಾರಿ ಕಾಮಗಾರಿಯ ಸಲುವಾಗಿ ಕಡಿಯಲಾದ ಸ್ಥಳದ ಸುರಕ್ಷತೆಗಾಗಿ ಕೋಟೆ ರಸ್ತೆಗೆ ತಡೆಗೋಡೆ ನಿರ್ಮಿಸಲು ಸೂಚಿಸಿದ ಶಾಸಕರು, ಹೆದ್ದಾರಿ ಕಾಮಗಾರಿಯನ್ನು ನಿಗದಿ ಅವಧಿಯೊಳಗೆ ಪೂರ್ಣಗೊಳಿಸಲು ಸೂಚಿಸಿದರಲ್ಲದೆ, ಕಲ್ಲಡ್ಕ ಮತ್ತು ಮಾಣಿಯಲ್ಲಿ ಫೆಬ್ರವರಿ ಅಂತ್ಯದವರೆಗೆ ಒನ್‌ವೇ ಯನ್ನಾದರೂ ಕಾಮಗಾರಿ ಪೂರ್ತಿಗೊಳಿಸಿ ವಾಹನ ಸಂಚಾರಕ್ಕೆ ಬಿಟ್ಟುಕೊಡಿ. ಇದಕ್ಕೂ ನೀವು ಸಹಕಾರ ನೀಡದಿದ್ದಲ್ಲಿ ಮುಂದಿನ ಹೋರಾಟ ಅನಿವಾರ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳಿಗೆ ಎಚ್ಚರಿಕೆ ನೀಡಿದರು.
ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿಯಿರುವ ನೇತ್ರಾವತಿ ನದಿ ಸೇತುವೆಯಿಂದ ರಾಷ್ಟ್ರೀಯ ಹೆದ್ದಾರಿಯವರೆಗಿನ ಪಿಡಬ್ಲ್ಯೂಡಿ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಿ , ನಾಲ್ಕು ರಸ್ತೆ ಸೇರುವಲ್ಲಿ ಆಕರ್ಷಕ ವೃತ್ತವನ್ನು ನಿರ್ಮಿಸಿ ನಗರ ಸೌಂದರ್ಯ ಹೆಚ್ಚಿಸಲು ಯೋಜನೆ ರೂಪಿಸಲಾಗುವುದು. ಯುಜಿಡಿ ಸಹಿತ ಒಳಚರಂಡಿ ವ್ಯವಸ್ಥೆಗೆ ಒಂದೊಂದು ಗ್ರಾ.ಪಂ.ಗೂ ಐದು ಕೋಟಿ ರೂ. ಅನುದಾನ ಲಭಿಸಲಿರುವುದರಿಂದ ಉಪ್ಪಿನಂಗಡಿ ಗ್ರಾ.ಪಂ.ನವರಲ್ಲಿ ಒಳಚರಂಡಿ ವ್ಯವಸ್ಥೆಗಾಗಿ ೫ ಲಕ್ಷ ಕಟ್ಟಿ ಯುಜಿಡಿ ಮಾಡಿಸಿಕೊಳ್ಳಲು ಮುಂದಾಗಲಿ. ಆ ಮೂಲಕ ನದಿಗೆ ಕಲುಷಿತ ನೀರು ನೇರವಾಗಿ ಸೇರುವುದನ್ನು ತಡೆಗಟ್ಟಬಹುದೆಂದರು.
ಶಾಸಕರ ಭೇಟಿ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ನವೀನ್, ಹೆದ್ದಾರಿ ಕಾಮಗಾರಿ ಗುತ್ತಿಗೆದಾರ ಸಂಸ್ಥೆಯ ಯೋಜನಾ ನಿರ್ದೇಶಕ ರಘುನಾಥ ರೆಡ್ಡಿ , ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಕ್, ಸದಸ್ಯ ಸೋಮನಾಥ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್ , ಪುತ್ತೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ , ಹಾಗೂ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಡಾ. ರಾಜಾರಾಮ್ ಕೆ.ಬಿ. ಮತ್ತು ಮುರಳೀಧರ ರೈ , ಪ್ರಮುಖರಾದ ಶಬೀರ್ ಕೆಂಪಿ, ಅಬ್ದುರ್ರಹ್ಮಾನ್ ಯುನಿಕ್, ಜಯಪ್ರಕಾಶ್ ಬದಿನಾರ್, ನಝೀರ್ ಮಠ, ಸುದೇಶ್ ಶೆಟ್ಟಿ, ವೆಂಕಟೇಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.