ಪುತ್ತೂರು:ಕೃಷಿ ಕಾರ್ಯದಲ್ಲಿ ತೊಡಗಿದ್ದ ವೇಳೆ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕೃಷಿಕರೋರ್ವರ ಆರೋಗ್ಯ ಸ್ಥಿತಿಯು ಉಲ್ಬಣಗೊಂಡು ಗಂಭೀರ ಸ್ಥಿತಿಗೆ ತಲುಪಿದೆ. ಆಸ್ಪತ್ರೆಯವರ ನಿರ್ಲಕ್ಷ್ಯದಿಂದಾಗಿ ಈ ರೀತಿಯಾಗಿದೆ ಎಂದು ಆರೋಪಿಸಿ ಗಾಯಾಳುವಿನ ಕಡೆಯವರು ಇಲ್ಲಿನ ಖಾಸಗಿ ಆಸ್ಪತ್ರೆಯೊಂದರ ಮುಂದೆ ಜಮಾಯಿಸಿ, ಸಿಬ್ಬಂದಿಗಳನ್ನು ತರಾಟೆಗೆತ್ತಿಕೊಂಡ ಘಟನೆ ಜ.19ರಂದು ನಡೆದಿದೆ.
ಬಡಗನ್ನೂರು ಗ್ರಾಮದ ಸಾರೆಪ್ಪಾಡಿ ನಿವಾಸಿಯಾಗಿರುವ ಕೃಷಿಕ ಗಂಗಾಧರ ಗೌಡ(62ವ.)ರವರು ಜ.10ರಂದು ಕಾಳು ಮೆಣಸು ಕೊಯ್ಯುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದರು.ಅವರ ಕಾಲಿಗೆ ಗಾಯವಾಗಿದ್ದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಜ.11ರಂದು ಅವರಿಗೆ ಕಾಲಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದು ಅವರು ಆರೋಗ್ಯದಿಂದಿದ್ದರು.ನಂತರ ನೀಡಿದ ಔಷಧಿಯಿಂದಾಗಿ ಗಾಯಾಳುವಿನ ಆರೋಗ್ಯದಲ್ಲಿ ದಿನೇ ದಿನೇ ಏರುಪೇರು ಉಂಟಾಗುತ್ತಿತ್ತು.ಕೆಲ ದಿನಗಳಿಂದ ಅವರ ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿತ್ತು.ಶೇ.10ರಷ್ಟು ಅನಾರೋಗ್ಯದಿಂದಿದ್ದ ರೋಗಿಯ ಸ್ಥಿತಿ ಈಗ ಗಂಭೀರವಾಗಿದೆ.ಅವರಿಗೆ ನೀಡಿದ ಔಷಧಿಯ ಬಗ್ಗೆ ವೈದ್ಯರಲ್ಲಿ ವಿಚಾರಿಸಿದರೆ ಸರಿಯಾದ ಉತ್ತರವಿಲ್ಲ.ಔಷಧಿ, ಸ್ಕ್ಯಾನಿಂಗ್, ಚಿಕಿತ್ಸೆಯ ಬಗ್ಗೆ ಯಾವುದೇ ವರದಿಗಳೂ ಅವರಲ್ಲಿಲ್ಲ.ರೂ.1 ಲಕ್ಷಕ್ಕೂ ಅಧಿಕ ಮೊತ್ತದ ಬಿಲ್ ಮಾಡಿದ್ದಾರೆ.ಅಲ್ಲದೆ ಹೊರಗಿನ ವೈದ್ಯರ ವೆಚ್ಚವೆಂದು ರೂ.15 ಸಾವಿರ ಹೆಚ್ಚುವರಿ ಪಡೆದುಕೊಂಡಿದ್ದಾರೆ.ಸರಿಯಾದ ಬಿಲ್ ಕೂಡಾ ನೀಡುತ್ತಿಲ್ಲ ಎಂದು ಗಾಯಾಳು ಗಂಗಾಧರ ಗೌಡರ ಸಂಬಂಧಿ ರಂಜಿತ್‌ರವರು ಆರೋಪಿಸಿದ್ದಾರೆ.
ಗಾಯಾಳುವಿನ ಕಡೆಯ ಹಲವರು ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿದ್ದರು.ಚಿಕಿತ್ಸೆಯ ಬಿಲ್ ಪಾವತಿ ವಿಚಾರದಲ್ಲಿ ಆಸ್ಪತ್ರೆಯವರಿಗೆ ಹಾಗೂ ರೋಗಿಯ ಕಡೆಯವರ ನಡುವೆ ಮಾತಿನ ಚಕಮಕಿಯೂ ನಡೆಯಿತು.ಗಂಭೀರ ಸ್ಥಿತಿಯಲ್ಲಿದ್ದ ಗಾಯಾಳುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು.ನಗರ ಠಾಣೆಯ ಇನ್ಸ್‌ಪೆಕ್ಟರ್ ಜಾನ್ಸನ್ ಡಿ’ಸೋಜ, ಎಸ್.ಐ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು.
ಪುತ್ತಿಲ ಭೇಟಿ: ಘಟನೆಯ ಬಗ್ಗೆ ಮಾಹಿತಿ ಪಡೆದ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.