- ಬೊಳುವಾರಿನಲ್ಲಿ ಗುರುಗಳ ನಿವಾಸದಲ್ಲಿ ಸನ್ಮಾನ ಸ್ವೀಕರಿಸಿದ ಶಿಷ್ಯ
- ನಿಮ್ಮ ಅಭಿಮಾನಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುವೆ-ಕಿಶೋರ್ ಬೊಟ್ಯಾಡಿ
ಪುತ್ತೂರು: ನಿವೃತ್ತ ಮುಖ್ಯ ಗುರುಗಳಾದ ಶ್ರೀನಿವಾಸ್ ಎಚ್.ಬಿ ಮತ್ತು ಜಯಶ್ರೀ ಶ್ರೀನಿವಾಸ್ ಅವರ ಆತಿಥ್ಯದಲ್ಲಿ, ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿಯವರಿಗೆ ಅಭಿನಂದನಾ ಸಮಾರಂಭ ಜ.19ರಂದು ಬೊಳುವಾರು ಶ್ರೀ ರಕ್ಷಾ ಕಲಾ ಕೇಂದ್ರದಲ್ಲಿ ನಡೆಯಿತು. ಕಿಶೋರ್ ಕುಮಾರ್ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಪರಿಶ್ರಮದ ಮೂಲಕ ಕಿಶೋರ್ ಮೇಲೆ ಬಂದಿದ್ದಾರೆ-ಶ್ರೀನಿವಾಸ್ ಎಚ್.ಬಿ
ನಿವೃತ್ತ ಮುಖ್ಯಗುರು ಶ್ರೀನಿವಾಸ್ ಎಚ್.ಬಿ ಮಾತನಾಡಿ ನನ್ನ ಶಿಷ್ಯ ಕಿಶೋರ್ ಕುಮಾರ್ ಅವರು ರಾಜಕೀಯದಲ್ಲಿ ಉನ್ನತ ಸ್ಥಾನಮಾನ ಪಡೆದಿರುವುದು ನನಗೆ ಅತೀವ ಖುಷಿ ಕೊಟ್ಟಿದೆ, ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಅವರು ತನ್ನ ಛಲ ಮತ್ತು ಪರಿಶ್ರಮದ ಮೂಲಕವೇ ಮೇಲೆ ಬಂದಿದ್ದಾನೆ ಎಂದು ಹೇಳಿದರು. ‘ನೀನು ಹಣ ಮಾಡಬೇಡ, ಹೆಸರೂ ಮಾಡಬೇಡ, ಜನಸೇವೆಯನ್ನು ಪ್ರಾಮಾಣಿಕವಾಗಿ ಮಾಡು, ಆಗ ಹಣ, ಹೆಸರು, ಗೌರವ, ಎಲ್ಲವೂ ನಿನ್ನ ಬಳಿ ಬರುತ್ತದೆ ಎಂದು ಕಿಶೋರ್ ಕುಮಾರ್ ಅವರಿಗೆ ಕಿವಿಮಾತು ಹೇಳಿದ ಶ್ರೀನಿವಾಸ್ ಎಚ್.ಬಿ ಅವರು ನಾವು ಭೂಮಿ ಮೇಲಿನ ಬಾಡಿಗೆದಾರರು, ನಾವು ಮಾಡುವ ಕೆಲಸ ಮತ್ತು ಸೇವೆ ಮಾತ್ರ ಇಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದರು.
ಕಿಶೋರ್ ಸಾಧನೆ ನಮಗೆ ಹೆಮ್ಮೆ ತಂದಿದೆ-ಜಯಶ್ರೀ
ನಿವೃತ್ತ ಮುಖ್ಯಗುರು ಜಯಶ್ರೀ ಶ್ರೀನಿವಾಸ್ ಮಾತನಾಡಿ ನಮ್ಮ ಹಿರಿಯ ವಿದ್ಯಾರ್ಥಿ ರಾಜಕೀಯವಾಗಿ ಉನ್ನತ ಮಟ್ಟಕ್ಕೆ ಏರಿರುವುದು ಸಂತಸ ತಂದಿದೆ. ಮಕ್ಕಳು ಸಾಧನೆ ಮಾಡಿದಾಗ ಮೊದಲು ತಂದೆತಾಯಿ ಸಂತೋಷ ಪಟ್ಟರೆ ಬಳಿಕ ಸಂತೋಷ ಪಡುವವರು ಶಿಕ್ಷಕರು, ಹಾಗಾಗಿ ಕಿಶೋರ್ ಅವರ ಸಾಧನೆ ನಮಗೆಲ್ಲಾ ಹೆಮ್ಮೆ ತಂದಿದೆ ಎಂದು ಹೇಳಿದ ಅವರು ‘ನೀನು ಎಷ್ಟೇ ಎತ್ತರಕ್ಕೆ ಬೆಳೆದರೂ ಜನರಿಗೆ ಸೇವೆ ಮಾಡುವುದು ಮತ್ತು ದೇಶಕ್ಕಾಗಿ ಸೇವೆ ಮಾಡವುದು ನಿನ್ನ ಗುರಿಯಾಗಿರಲಿ ಎಂದು ಅವರು ಹೇಳಿದರು.
ಮನರಂಜಿಸಿದ ಸ್ವರಚಿತ ಕವನ:
ಎಂ.ಎಲ್.ಸಿ ಕಿಶೋರ್ ಕುಮಾರ್ ಬೊಟ್ಯಾಡಿ ಅವರ ಕುರಿತು ಗಾಯಕಿ ಗುರುಪ್ರಿಯಾ ಕಾಮತ್ ಮತ್ತು ಡಾ.ಸೀತರಾಮ ಭಟ್ ಅವರ ಸ್ವರಚಿತ ಕವನ ಸಭೆಯ ಗಮನ ಸೆಳೆಯಿತು.
ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡಲು ಶ್ರಮಿಸುತ್ತೇನೆ-ಕಿಶೋರ್
ಅಭಿನಂದನಾ ಸನ್ಮಾನ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ ನಿಮ್ಮೆಲ್ಲರ ಪ್ರೋತ್ಸಾಹ, ಹಾರೈಕೆ, ಪ್ರಾರ್ಥನೆಯಿಂದ ನಾನು ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದು ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡಲು ನನ್ನಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ನೀವು ಯಾವ ಸಂದರ್ಭದಲ್ಲಿ ನನ್ನನ್ನು ಸಂಪರ್ಕಿಸಿದರೂ ನಿಮ್ಮ ಸೇವೆಗೆ ನಾನು ಲಭ್ಯವಿದ್ದೇನೆ, ಹೆಜ್ಜೆ ಹೆಜ್ಜೆಗೂ ನಿಮ್ಮ ಜೊತೆ ನಾನಿದ್ದೇನೆ ಎಂದು ಹೇಳಿದರು.
ನನ್ನ ಪಾಲಿನ ಅತೀ ದೊಡ್ಡ ಸನ್ಮಾನ:
ಶ್ರೀನಿವಾಸ್ ಎಚ್.ಬಿ ಮತ್ತು ಜಯಶ್ರೀ ಮೇಡಂ ಅವರ ಆತಿಥ್ಯದಲ್ಲಿ ನಡೆದ ಸನ್ಮಾನ ಕಾರ್ಯಕ್ರಮ ನನ್ನ ಪಾಲಿನ ಅತೀ ದೊಡ್ಡ ಸನ್ಮಾನ, ಈ ಸನ್ಮಾನ ನನ್ನ ಜವಾಬ್ದಾರಿ ಹೆಚ್ಚಿಸಿದೆ, ನೀವು ನನ್ನ ಮೇಲಿಟ್ಟಿರುವ ಪ್ರೀತಿ, ಅಭಿಮಾನಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಕಿಶೋರ್ ಕುಮಾರ್ ಹೇಳಿದರು. ಬಳಿಕ ಮಹಾಬಲ ರೈ ನೇತೃತ್ವದಲ್ಲಿ ಅವರ ಕುಟುಂಬಸ್ಥರು ಸೇರಿ ಕಿಶೋರ್ ಕುಮಾರ್ ಅವರನ್ನು ಸನ್ಮಾನಿಸಿದರು.
ಪಿ.ಜಿ ಜಗನ್ನಿವಾಸ್ ರಾವ್‌ಗೆ ಸನ್ಮಾನ:
ಸ್ಥಳೀಯ ರಸ್ತೆಗೆ ಕಾಂಕ್ರಿಟೀಕರಣ ಮಾಡಲು ಅನುದಾನ ಒದಗಿಸಿದ ನಗರಸಭಾ ಸದಸ್ಯ ಪಿ.ಜಿ ಜಗನ್ನಿವಾಸ್ ರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಿ.ಜಿ ಜಗನ್ನಿವಾಸ್ ರಾವ್ ಅವರ ಅಭಿವೃದ್ಧಿ ಪರವಾದ ಚಿಂತನೆಯನ್ನು ಶ್ರೀನಿವಾಸ್ ಎಚ್.ಬಿ ಶ್ಲಾಘಿಸಿದರು.
ಕಿಶೋರ್ ಕುಮಾರ್‌ಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ-ಡಾ.ಸೀತರಾಮ ಭಟ್
ಅಧ್ಯಕ್ಷತೆ ವಹಿಸಿದ್ದ ಕಲ್ಲಮ ಶ್ರೀ ರಾಘವೇಂದ್ರ ಮಠದ ವ್ಯವಸ್ಥಾಪಕರಾದ ಡಾ. ಸೀತರಾಮ ಭಟ್ ಕಲ್ಲಮ ಮಾತನಾಡಿ ಕಿಶೋರ್ ಕುಮಾರ್ ಅವರಿಗೆ ಉತ್ತಮ ಸಾಮರ್ಥ್ಯವಿದೆ. ಅವರಿಗೆ ಸಾಧಿಸಲು ಸಾಕಷ್ಟು ಅವಕಾಶಗಳಿವೆ, ಭವಿಷ್ಯದಲ್ಲಿ ಅವರಿಂದ ಸಮಾಜಕ್ಕೆ ಉತ್ತಮ ಕೊಡುಗೆಗಳು ಲಭಿಸಲಿ ಎಂದು ಹೇಳಿದರು. ನೇರ ನಡೆ ನುಡಿಯ ಕಿಶೋರ್ ಕುಮಾರ್ ಅವರು ರಾಜಕೀಯದಲ್ಲಿ ಇನ್ನಷ್ಟು ಹೆಸರು ಮಾಡಲಿ, ಭವಿಷ್ಯದಲ್ಲಿ ಪ್ರಧಾನಿಯಾಗುವ ಯೋಗವೂ ಅವರಿಗೆ ಸಿಗಲಿ ಎಂದು ಆಶಿಸಿದರು.
ಹಲವರಿಂದ ಶುಭ ಹಾರೈಕೆ:
ಸೋಮವಾರಪೇಟೆ ಅಬಕಾರಿ ಇನ್ಸ್‌ಪೆಕ್ಟರ್ ಲೋಕೇಶ್ ಸುವರ್ಣ, ನಿವೃತ್ತ ಮುಖ್ಯಗುರು ಮಹಾಬಲ ರೈ ಬೊಟ್ಯಾಡಿ, ಉದ್ಯಮಿ ಪ್ರಕಾಶ್ ಬೆಂಗಳೂರು, ಜೀವ ವಿಮಾ ಸಲಹೆಗಾರ ಜಿ.ಕೆ ಪ್ರಸನ್ನ ಭಟ್, ಶಿಕ್ಷಕ ನಂಜುಂಡಪ್ಪ, ಶಿಕ್ಷಕಿ ಶೋಭಿತಾ ಸತೀಶ್, ನಗರಸಭಾ ಸದಸ್ಯ ಪಿ.ಜಿ ಜಗನ್ನಿವಾಸ್ ರಾವ್, ಮುಂಡೂರು ಗ್ರಾ.ಪಂ ಸದಸ್ಯ ಕರುಣಾಕರ ಗೌಡ ಎಲಿಯ, ಬೆಂಗಳೂರು ಪಂಚಾಯತ್ ರಾಜ್ ವಿಭಾಗದ ಲೋಚನಾ ಶೆಟ್ಟಿ, ಉಪನ್ಯಾಸಕ ಡಾ.ಪ್ರವೀಣ್ ಎಸ್.ಡಿ, ಮುಂಡೂರು ಗ್ರಾ.ಪಂ ಮಾಜಿ ಸದಸ್ಯ ಯತೀಶ್ ರೈ ಮೇಗಿನಗುತ್ತು, ರಾಮಣ್ಣ ಪೂಜಾರಿ ಭಕ್ತಕೋಡಿ, ಹರಿಪ್ರಸಾದ್ ರೈ, ಪತ್ರಕರ್ತ ಯೂಸುಫ್ ರೆಂಜಲಾಡಿ ಮೊದಲಾದವರು ಮಾತನಾಡಿ ಕಿಶೋರ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ವೇದಿಕೆಯಲ್ಲಿ ಬಿಜೆಪಿ ನಗರಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್ ಉಪಸ್ಥಿತರಿದ್ದರು. ಸಭೆಯಲ್ಲಿ ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದರು.
ಶ್ರೀನಿವಾಸ್ ಎಚ್.ಬಿ ಅಭಿಮಾನಿ ಬಳಗದ ಅಧ್ಯಕ್ಷ ಸುರೇಶ್ ಎಸ್.ಡಿ ಸ್ವಾಗತಿಸಿದರು. ಸರ್ವೆ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು ವಂದಿಸಿದರು. ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ ಕಾರ್ಯಕ್ರಮ ನಿರೂಪಿಸಿದರು.