*ದೈವಗಳು ಮೂಡನಂಬಿಕೆ ಅಲ್ಲ ತುಳುನಾಡಿನ ಮೂಲ ನಂಬಿಕೆಗಳಾಗಿದೆ-ನಳಿನ್ ಕುಮಾರ್ ಕಟೀಲ್
*ಆಧ್ಯಾತ್ಮಿಕತೆಯಿಂದ ಭಾರತ ಪ್ರಪಂಚದಲ್ಲೇ ಗುರುವಿನ ಶಕ್ತಿಯಾಗಿ ನಿಂತಿದೆ-ಕುಂಟಾರು ರವೀಶ ತಂತ್ರಿ
ಪುತ್ತೂರು: ತುಳುನಾಡು ವಿಶಿಷ್ಟವಾದ ಸಂಸ್ಕೃತಿ ಇರುವ ಜಿಲ್ಲೆ. ಪರಶುರಾಮ ಸೃಷಿಯ ಕರಾವಳಿ ಕ್ಷೇತ್ರದಲ್ಲಿ ತುಳು ಸಂಸ್ಕೃತಿಯ ಆಧಾರದಲ್ಲಿ ಕೃಷಿ ಪ್ರದಾನವಾದ ಸಮಾಜ ಇದೆ. ಈ ಮಣ್ಣಿನ ದೈವಿಕ ಶಕ್ತಿಯ ನಂಬಿಕೆಯ ಜೊತೆಗೆ ಬದುಕಿದ ಜನತೆ ಇಲ್ಲಿನವರು. ದ.ಕ. ಜಿಲ್ಲೆಯಲ್ಲಿ ನಾಗಾರಾಧನೆ ಜೊತೆಗೆ ದೇವತಾರಾಧನೆ ಮತ್ತು ದೈವರಾಧನೆಯನ್ನು ನಂಬಿಕೊಂಡು ಬಂದಿದ್ದಾರೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಪಾಣಾಜೆ ಕಿನ್ನಿಮಾಣಿ-ಪೂಮಾಣಿ, ಪಿಲಿಭೂತ ದೈವಸ್ಥಾನದ ನವೀಕರಣ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯನ್ನು ದೀಪ ಬೆಳಗಿಸಿ ಉದ್ಧಾಟಿಸಿ ಮಾತನಾಡಿದರು. ತುಳು ಪಾಡ್ದನಗಳ ಮೂಲಕ ದೈವರಾಧನೆಯನ್ನು ಹತ್ತಿರದಿಂದ ಕಂಡವರು ತುಳುನಾಡಿನ ಜನತೆ. ಶಿವನ ಗಣಾಧಿಪತಿಗಳು, ಹೋರಾಟದ ಮೂಲಕ ದೈವತ್ವ ಸೇರಿದ ದೈವಗಳು ತುಳುನಾಡಿನಲ್ಲಿವೆ. ಪೂಮಾಣಿ, ಕಿನ್ನಿಮಾಣಿ, ರಾಜನ್ ದೈವಗಳು ಪಾಣಾಜೆ, ಪಡುಮಲೆ, ಇರ್ದೆಯಲ್ಲಿ ಬೆಳಗುತ್ತಿದೆ. ಇದೀಗ ಪಾಣಾಜೆಯಲ್ಲಿರುವ ದೈವಸ್ಥಾನದ ಜೀಣೋದ್ಧಾರಗೊಂಡು ಸುಂದರ ದೈವಸ್ಥಾನ ನಿರ್ಮಾಣ ಆಗಿದೆ ಎಂದರು. ಇಂದು ದೈವ ಪದ್ಧತಿಗಳು ಬದಲಾಗುತ್ತಿದೆ. ನಮ್ಮ ಸಂಸ್ಕೃತಿಗೆ ಮೀರಿ ಆಡಂಬರಗೊಳ್ಳುತ್ತಿದೆ. ಆದರೆ ಇಲ್ಲಿ ನಮ್ಮ ತುಳುನಾಡ ಸಂಸ್ಕೃತಿಯನ್ನು ಉಳಿಸಿದ್ದೀರಿ ದೈವಗಳ ಬಗ್ಗೆ ಪಿಎಚ್ಡಿ ಮಾಡಿ ಸಂಶೋಧನೆ ಮಾಡಿದವರು ಇದ್ದಾರೆ. ತುಳು ಸಂಸ್ಕೃತಿಯಲ್ಲಿ ಜಾತ್ಯಾತೀತದಲ್ಲಿ ಸಾಮರಸ್ಯ ಮೆರೆದ ಸ್ಥಳ ಅಂದರೆ ದೈವದ ಕೊಡಿಅಡಿ. ಇಲ್ಲಿ ದೈವದ ಪ್ರಾಮುಖ್ಯತೆಯನ್ನು ಕಾಣುತ್ತೇವೆ. ದೈವಗಳು ಮೂಡನಂಬಿಕೆ ಅಲ್ಲ ಮೂಲ ನಂಬಿಕೆಗಳಾಗಿದೆ. ದೈವರಾಧನೆಯಲ್ಲಿ ಸಾಮರಸ್ಯದ ಕೊರತೆ ಇಲ್ಲ. ಜಾತ್ಯಾತೀತತೆ, ಕೋಮು ಸಾಮರಸ್ಯಕ್ಕೆ ಮನ್ನಣೆ ನೀಡಿದೆ ಎಂದು ಹೇಳಿ ದೈವಸ್ಥಾನ, ತುಳುಸಂಸ್ಕೃತಿಯನ್ನು ಉಳಿಸಬೇಕು ಎಂದರು.
ಇಲ್ಲಿನ ಮತ ಸಾಮರಸ್ಯ ಭವಿಷ್ಯತ್ತಿನ ಭಾರತಕ್ಕೆ ಮಾರ್ಗಸೂಚಿಯಾಗಿದೆ-ಕುಂಟಾರು ರವೀಶ ತಂತ್ರಿ:
ವೇ.ಮೂ.ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಆಶೀರ್ವಚನ ನೀಡಿ ಪ್ರಪಂಚದಲ್ಲಿ ಯಾವುದೇ ವಿದ್ಯಾಮಾನ ನಡೆಯುವುದಿದ್ದರೂ ಅದಕ್ಕೆ ಪ್ರೇರಕ ಶಕ್ತಿ ಭಗವಂತ. ಕೇವಲ 9 ತಿಂಗಳಲ್ಲಿ ಜೀಣೋದ್ಧಾರ ಕೆಲಸ ಕಾರ್ಯ ನೆರವೇರಿದೆ. ಇದರಲ್ಲಿ ಭಕ್ತಾದಿಗಳ ಶ್ರಮ ಇದೆ. ಪ್ರಪಂಚದಲ್ಲಿ ಗುರುವಿನ ಶಕ್ತಿಯಾಗಿ ಭಾರತ ನಿಲ್ಲಲು ಆಧ್ಯಾತ್ಮಿಕ ಶಕ್ತಿಯೇ ಕಾರಣ. ಯುಗಧರ್ಮಕ್ಕೆ ಅನುಸಾರವಾಗಿ ಬೇಕಾದ ಕಾರ್ಯವನ್ನು ಮಾಡಲು ಧರ್ಮಜ್ಞಾನಿಗಳು ಸಮಾಜಕ್ಕೆ ಧಾರೆ ಎರೆಯುತ್ತಾರೆ ಎಂದರು. ಶರೀರವೇ ದೇವಾಲಯ, ಹೃದಯವೇ ಮಂದಿರ, ಆತ್ಮವೇ ಪರಮಾತ್ಮ ಇಂತಹ ಮಂದಿರದಲ್ಲಿ ದೈವಿಕ ಶಕ್ತಿಗಳು ನೆಲೆಯಾಗಿರುತ್ತದೆ. ಇಂತಹ ಒಂದೊಂದು ದೈವಿಕ ಶಕ್ತಿಗೂ ಸತ್ವ ಇದೆ. ಇವತ್ತು ಸ್ವಾರ್ಥಕ್ಕೋಸ್ಕರ ಸಮಾಜವನ್ನು ದಾರಿ ತಪ್ಪಿಸುವವರು ತುಂಬಾ ಮಂದಿ ಇದ್ದಾರೆ. ಒಳ್ಳೆಯದನ್ನು ಗಮನಿಸಿ ಅದನ್ನು ಉದಹರಣೆಯಾಗಿ ಕೊಡಬೇಕು. ಆರ್ಲಪದವು ಕ್ಷೇತ್ರದಲ್ಲಿ ಅನ್ಯ ಮತೀಯ ಚಿಂತನೆ ಮೀರಿ ಒಳ್ಳೆಯ ಕಾರ್ಯಕ್ಕೆ ಮುಸ್ಲಿಂ ಬಾಂಧವರು ಕೂಡ ಸೇರಿದ್ದಾರೆ. ಇದು ಭವಿಷ್ಯತ್ತಿನ ಭಾರತಕ್ಕೆ ಮಾರ್ಗಸೂಚಿಯಾಗಿದೆ. ಒಂದು ಕಾರ್ಯ ಒಳ್ಳೆಯ ರೀತಿಯಲ್ಲಿ ಆಗಬೇಕಾದರೆ ಅದರ ನೇತೃತ್ವ ವಹಿಸುವವರು ಸಮರ್ಪಣಾ ಭಾವವಿರುವವರು ಆಗಿರಬೇಕು. ಇಂತಹ ಮಹತ್ ಕಾರ್ಯಗಳು ಇಲ್ಲಿ ನಡೆಯುತ್ತಿದೆ ಎಂದರು. ಇಲ್ಲಿನ ಕರಸೇವಕರ ಕಾರ್ಯವನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ ಧರ್ಮ ಕಾರ್ಯದಲ್ಲಿ ತೊಡಗಿಸಿಕೊಂಡ ಈ ದೊಡ್ಡ ಸೇನೆಯ ಕಾರ್ಯಕರ್ತರೆ ಶಕ್ತಿ. ಇಲ್ಲಿ ನಿತ್ಯ ನಿರಂತರ ಧರ್ಮ ಕಾರ್ಯಗಳು ನಡೆಯಲಿ ಎಂದರು.
ಧರ್ಮಾಧರಿತ ಸಮಾಜ ಮುಂದುವರಿದರೆ ಜಗತ್ತು ಉಳಿಯಬಹುದು-ಸಂಜೀವ ಮಠಂದೂರು:
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಧರ್ಮಸಭೆ ಧರ್ಮೋತ್ಥಾನದ ಭಾಗ. ಭಾರತ ಉಳಿದರೆ ಜಗತ್ತು ಉಳಿಯಬಹುದು. ದೇವಸ್ಥಾನ, ದೈವಸ್ಥಾನ ಅಭಿವೃದ್ಧಿಯಾಗಿ ಧರ್ಮಾಧರಿತ ಸಮಾಜ ಮುಂದುವರಿದರೆ ಜಗತ್ತು ಉಳಿಯಬಹುದು. ಇದಕ್ಕೆ ಹಿಂದೂ ಸಮಾಜದ, ಹಿಂದೂ ಯುವಕರ ಕೊಡುಗೆ ಅಪಾರವಿದೆ. ನಮ್ಮ ಆಧ್ಯಾತಿಕ ಪರಂಪರೆ, ಸಂಸ್ಕೃತಿ ಪರಂರೆಯನ್ನು ಇಲ್ಲಿನ ಜನತೆ ಸಮಾಜಕ್ಕೆ ಕೊಡುತ್ತಿದ್ದಾರೆ ಎಂದರು.
ನಮ್ಮ ಎಣಿಕೆಯ ಹತ್ತು ಪಟ್ಟು ಕೆಲಸ ನಡೆದಿದೆ-ಕಾವು ಹೇಮನಾಥ ಶೆಟ್ಟಿ:
ಕೊಂಬೆಟ್ಟು ಶ್ರೀರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ನಡೆದಾಡುವ ದೇವರು ಎಂಬಂತಿರುವವರು ಮೊಕ್ತೇಸರರಾದ ಶ್ರೀಕೃಷ್ಣ ಬೋಳಿಲ್ಲಾಯರು. ಕೇವಲ 9 ತಿಂಗಳಿನಲ್ಲಿ ನಮ್ಮ ಎಣಿಕೆಯ ಹತ್ತು ಪಟ್ಟು ಕೆಲಸ ಕಾರ್ಯ ಇಲ್ಲಿ ನಡೆದಿದೆ. ದೈವ ಪ್ರೇರಣೆ ಹಾಗೂ ದೈವಗಳ ಕಾರಣಿಕ ಶಕ್ತಿಯೇ ಇದಕ್ಕೆ ಸಾಕ್ಷಿಯಾಗಿದೆ. ಈ ಭಾಗದಲ್ಲಿ ಸಾಮರಸ್ಯಕ್ಕೂ ಕೊರತೆಯಿಲ್ಲ. ಇದೆಲ್ಲಾ ದೈವದ ಶಕ್ತಿಯಿಂದ ನಡೆಯುತ್ತಿದೆ ಎಂದರು.
ಭಾರತ ದೇಶ ಧರ್ಮಾಧಾರಿತ ಪುಣ್ಯ ಭೂಮಿ-ವಸಂತ್ ಪೈ ಬದಿಯಡ್ಕ
ಉದ್ಯಮಿ ವಸಂತ್ ಪೈ ಬದಿಯಡ್ಕ ಮಾತನಾಡಿ ಧರ್ಮಿಕತೆ ಪಾರಂಪರ್ಯ, ಆಚಾರ ವಿಚಾರಗಳು ಭೂಲೋಕದಲ್ಲಿ ಎಲ್ಲಿಯೂ ಸಿಗಲು ಸಾಧ್ಯವಿಲ್ಲ. ನಾವೆಲ್ಲರೂ ಶಿಶುವಾಗಿ ಭೂಮಿಗೆ ಬರುವಾಗ ಮುಷ್ಟಿ ಹಿಡಿದುಕೊಂಡು, ಕೂಗಿಕೊಂಡು ಬರುತ್ತೇವೆ. ಈ ಪುಣ್ಯ ಭಾರತದಲ್ಲಿ ಎಲ್ಲರೂ ವಿಶ್ವಾಸವಾಗಿ ಬದುಕಬಹುದು. ಇದಕ್ಕೆಲ್ಲಾ ಕಾರಣ ಭಾರತವೆಂಬ ಪುಣ್ಯ ಭೂಮಿ. ಇಲ್ಲಿ ಮಾನವ ಜನ್ಮ ಸಿಕ್ಕಿದ್ದು ನಮಗೆ ಪುಣ್ಯ. ಇಂತಹ ಪುಣ್ಯಭೂಮಿಯಲ್ಲಿ ಧರ್ಮದ ಕೆಲಸ ನಿರಂತರಾಗಿ ಇರುತ್ತದೆ.
ಜನರು ಮನಸ್ಸು ಮಾಡಿದರೆ ಯಾವುದನ್ನೂ ಸಾಧಿಸಬಹುದು-ರಾಮಪ್ರಸಾದ್ ರೈ
ಸುರಕ್ಷಾ ವೆಲ್ಫೇರ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ರಾಮಪ್ರಸಾದ್ ರೈ ಮಾತನಾಡಿ ಸಂಸ್ಕೃತಿ ಉಳಿಯಬೇಕಾದರೆ ಇಂತಹ ಕೆಲಸಗಳು ನಡೆಯಬೇಕು. ಜನರು ಮನಸ್ಸು ಮಾಡಿದರೆ ಯಾವುದನ್ನೂ ಸಾಧಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ನಾವು ಜಾತಿ ಬಿಟ್ಟು ಕಾರ್ಯ ನಿರ್ವಹಿಸಿದರೆ ಸಮಾಜ ಬೆಳಗುತ್ತದೆ ಎಂದು ಹೇಳಿದರು.
ಉತ್ತಮ ಕಾರ್ಯಕ್ಕೆ ಉತ್ತಮ ಫಲ ಸಿಗುತ್ತದೆ-ಎಸ್.ಬಿ.ಜಯರಾಮ ರೈ ಬಳೆಜ್ಜ:
ದ.ಕ.ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳೆಜ್ಜ ಮಾತನಾಡಿ ನಮ್ಮ ಪ್ರತೀ ಕಾರ್ಯವನ್ನು ದೇವರು ನೋಡುತ್ತಾರೆ ಇದಕ್ಕೆ ತಕ್ಕ ಪ್ರತಿಫಲ ದೇವರು ನೀಡುತ್ತಾರೆ ಎಂದು ನಂಬಿಕೆ ಇದೆ. ಉತ್ತಮ ಕೆಲಸ ನಿರ್ವಹಿಸಿದರೆ ಉತ್ತಮ ಫಲ ಸಿಗುತ್ತದೆ. ದೈವದ ಕೆಲಸ ಮಾಡಿದರೆ ಕೂಡಲೇ ಅನುಗ್ರಹ ಸಿಗುತ್ತದೆ. ನಮ್ಮ ಕೆಲಸಗಳು ಯಾವಾಗಲೂ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಬೇಕು ಎಂದು ಹೇಳಿದ ಅವರು ಇಂತಹ ಅಭೂತ ಪೂರ್ವ ಕಾರ್ಯ ನಿರ್ವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಮುದ್ರದ ನೀರಿನ ಹಾಗೆ ಧರ್ಮದ ಬಗ್ಗೆ ನಾವು ತಿಳಿದುಕೊಳ್ಳಬೇಕು-ಈಶ್ವರ ಭಟ್ ಪಂಜಿಗುಡ್ಡೆ:
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ ಬ್ರಹ್ಮಕಲಶ ಕೆಲಸದಲ್ಲಿ ನಾವು ಭಾಗಿಯಾಗುವುದು, ನೋಡುವುದು ನಮ್ಮ ಪೂರ್ವದ ಪುಣ್ಯ ಫಲ. ಬ್ರಹ್ಮಕಲಶ ಮಾಡಿ ಮುಗಿಸಿದರೆ ಸಾಲದು. ಇಲ್ಲಿ ನಿರಂತರ ಧರ್ಮ ಕಾರ್ಯಗಳು ನಡೆಯುತ್ತಿರಬೇಕು. ಈ ಮೂಲಕ ಧರ್ಮದ ಅರಿವು ಮೂಡಿಸಬೇಕು. ಎಲ್ಲಾ ಧರ್ಮವನ್ನು ಗೌರವಿಸುವ ಕೆಲಸ ಮಾಡಬೇಕು. ಸಮುದ್ರದಲ್ಲಿರುವ ನೀರಿನ ಹಾಗೆ ಧರ್ಮದ ಬಗ್ಗೆ ನಾವು ತಿಳಿದುಕೊಳ್ಳಬೇಕು ಎಂದ ಅವರು ಗೋವನ್ನು ಕೂಡ ಉಳಿಸುವ ಕೆಲಸ ಮಾಡಬೇಕು ಎಂದರು.
ಒಂಭತ್ತು ತಿಂಗಳು ಕೂಡ ಕರಸೇವೆ ನಡೆದಿದೆ-ಶ್ರೀಪ್ರಸಾದ್ ಪಾಣಾಜೆ:
ಪಾಣಾಜೆ ವಿದ್ಯಾಶ್ರೀ ಚಾರಿಟೇಬಲ್ ಟ್ರಸ್ಟ್ನ ಸಂಚಾಲಕ ಶ್ರೀಪ್ರಸಾದ್ ಪಾಣಾಜೆ ಮಾತನಾಡಿ ೯ ತಿಂಗಳಿನಲ್ಲಿ ನಡೆದ ಕರಸೇವೆಯಲ್ಲಿ ಕರಸೇವಕನಾಗಿ ಮಾತನಾಡುತ್ತಿದ್ದೇನೆ. ಇಲ್ಲಿ ೯ ತಿಂಗಳು ಕೂಡ ಕರಸೇವೆ ನಡೆದಿದೆ. ಒಂದೇ ದಿನದಲ್ಲಿ ಇಲ್ಲಿನ ವೇದಿಕೆ ಕರಸೇವೆಯ ಮೂಲಕ ನಡೆದಿದೆ ಇದು ನಮ್ಮ ಹೆಮ್ಮೆಯಾಗಿದೆ. ಉದಾರ ಮನಸ್ಸಿನಿಂದ ಹಲವರು ದಾನದ ಮೂಲಕ ಕರಸೇವೆಯಲ್ಲಿ ಭಾಗಿಯಾಗಿದ್ದಾರೆ. ಎಂದ ಅವರು ಇಲ್ಲಿನ ಯುವಕರು ದಾರಿತಪ್ಪದೆ ಧರ್ಮ ಕೈಂಕರ್ಯದಲ್ಲಿ ತೊಡಗಿ ಪಾವನತೆ ಪಡೆದಿದ್ದಾರೆ.
ದೈವೀಶಕ್ತಿ ಉದ್ದೀಪನಗೊಂಡು ಜನರಲ್ಲಿ ಕಾರ್ಯ ಮಾಡಲು ಪ್ರೇರೆಪಣೆಯಾಗಿದೆ-ಡಾ.ಹರಿಕೃಷ್ಣ ಪಾಣಾಜೆ:
ಪರ್ಲಡ್ಕ ಶ್ರೀದುರ್ಗಾ ಕ್ಲಿನಿಕ್ನ ಡಾ.ಹರಿಕೃಷ್ಣ ಪಾಣಾಜೆ ಮಾತನಾಡಿ ಯಾವುದೇ ಕಾರ್ಯ ಆಗಬೇಕಾದರೆ ಅದರಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಇಲ್ಲಿಯ ದೈವೀಶಕ್ತಿ ಉದ್ದೀಪನಗೊಂಡು ಜನರಲ್ಲಿ ಕಾರ್ಯ ಮಾಡಲು ಪ್ರೇರೆಪಣೆಗೊಂಡಿದೆ. ಮುಂದೆಯೂ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮುಂದುವರಿಯಲಿ ಎಂದರು
ಇಲ್ಲಿನ ಕಾರ್ಯಗಳು ಯುದ್ದೋಪಾದಿಯಲ್ಲಿ ನಡೆದಿದೆ-ಆನಂದ್ ರೈ ಸೂರಂಬೈಲು:
ಪ್ರಗತಿಪರ ಕೃಷಿಕ ಆನಂದ್ ರೈ ಸೂರಂಬೈಲು ಮಾತನಾಡಿ ಇಲ್ಲಿನ ಕಾರ್ಯಗಳು ಯುದ್ದೋಪಾದಿಯಲ್ಲಿ ನಡೆದಿದೆ. ಏಕಚಿತ್ತದಿಂದ ಕರಸೇವಕರು ಬೆವರಿನ ಮೂಲಕ ಕೆಲಸದ ಯುದ್ಧ ಮಾಡಿದ್ದಾರೆ. ನೀವೆಲ್ಲಾ ಇಲ್ಲಿನ ಸೈನಿಕರಾಗಿದ್ದೀರಿ. ನಾವೆಲ್ಲ ಭಕ್ತಿ ಸಾಗರದಲ್ಲಿ ಮಿಂದ ಹಾಗೆ ಆಗಿದೆ ಎಂದರು. ಏಕಾಗ್ರತೆಯಲ್ಲಿ ೯ ತಿಂಗಳಿನಲ್ಲಿ ಈ ಕೆಲಸವನ್ನು ಸಾಧಿಸಿದ್ದೀರಿ ಎಂದರು.
ಕಾರ್ಯಕ್ರಮ ಯಶಸ್ವಿಯಾಗಲು ಕಾಣದ ಕೈಗಳೂ ಕೂಡ ಇದೆ-ಸೀತಾರಾಮ ರೈ ಕೆದಂಬಾಡಿ:
ಪುತ್ತೂರು ಪದ್ಮಶ್ರೀ ಸೋಲರ್ ಮಾಲಕ ಸೀತಾರಾಮ ರೈ ಕೆದಂಬಾಡಿ ಮಾತನಾಡಿ ಈ ಕಾರ್ಯಕ್ರಮ ಯಶಸ್ವಿಯಾಗಲು ಕಾಣದ ಕೈಗಳೂ ಕೂಡ ಇದೆ. ಎಲ್ಲ ಕರಸೇವಕರಿಗೆ, ಮಹತ್ಕಾರ್ಯದಲ್ಲಿ ತೊಡಗಿಕೊಂಡವರಿಗೆ ದೈವದ ಅನುಗ್ರಹ ಸಿಗಲಿ ಎಂದ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದಕ್ಕೆ ಕೃತಜ್ಞತೆ ಸಲ್ಲಿಸಿದರು.
ಉಪ್ಪಿನಂಗಡಿ ಶ್ರೀಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್ ಮಾತನಾಡಿ ಶುಭ ಹಾರೈಸಿದರು.
ಎಲ್ಲಾ ಭಗವದ್ಭಕ್ತರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ-ಶಶಿಕುಮಾರ್ ರೈ ಬಾಲೊಟ್ಟು
ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ರಣಮಂಗಲ ಶ್ರೀಸುಬ್ರಹ್ಮಣ್ಯ ದೇವಾಲಯದ ಬ್ರಹ್ಮಕಲಶೋತ್ಸವ ನಡೆದು 8 ವರ್ಷದ ಬಳಿಕ ಇಲ್ಲಿನ ದೈವಸ್ಥಾನದಲ್ಲಿ ಬ್ರಹ್ಮಕಲಶ ನಡೆಯುತ್ತಿದೆ. ಇಲ್ಲಿನ ಎಲ್ಲಾ ಭಗವದ್ಭಕ್ತರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮನೆಯಲ್ಲಿ ಕಷ್ಟ ಇದ್ದರೂ ಈ ಕಾರ್ಯಕ್ಕೆ ದೇಣಿಗೆ ನೀಡಿದ ಉದಾಹರಣೆ ಇಲ್ಲಿದೆ. ಪ್ರತೀ ಮನೆಯವರ ಸಹಕಾರದಿಂದ ಜೀರ್ಣೋದ್ಧಾರ ಆಗಿದೆ. ಇಲ್ಲಿ ಸಭಾಂಗಣದ ವ್ಯವಸ್ಥೆ ಕೂಡ ಆಗಿದೆ. ಮುಂದಿನ ಜಾತ್ರೋತ್ಸವ ಸಮಯದಲ್ಲಿ ಈ ಸಭಾಭವನವನ್ನು ವಿಸ್ತಾರಗೊಳಿಸುವ ಯೋಜನೆ ಇದೆ ಎಂದ ಅವರು ಈ ಕಾರ್ಯಕ್ಕೆ ಸಹಾಯ ನೀಡಿದ ಶ್ರೀಕೃಷ್ಣ ಬೋಳಿಲ್ಲಾಯರವರಿಗೆ, ಕರಸೇವಕರಿಗೆ, ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಮಂಗಳೂರು ಶ್ರೀಗಣೇಶ್ ಇಂಜಿನಿಯರಿಂಗ್ ಇಂಡಸ್ಟ್ರೀಸ್ನ ಮಾಲಕ ಯತೀಶ್ ರೈ ಚೆಲ್ಯಡ್ಕ, ಚೆಲ್ಯಡ್ಕ ಆಳ್ವರ ಮನೆಯ ಕೃಷ್ಣಪ್ರಸಾದ್ ಆಳ್ವ ಉದ್ಯಮಿ ಅಜಯ್ ಪೈ ಪೆರ್ಲ, ದ.ಕ.ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್, ಮಂಗಳೂರಿನ ನ್ಯಾಯವಾದಿ ರಾಧಾಕೃಷ್ಣ ರೈ ಆನಾಜೆ, ಆರ್ಲಪದವು ಸ್ವಸ್ತಿಕ್ ಜ್ಯೋತಿಷಾಲಯದ ಲೋಕೇಶ್ ಬಲ್ಯಾಯ ದೊಡ್ಡಡ್ಕ, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಜಯಪ್ರಕಾಶ್ ರೈ ಚೆಲ್ಯಡ್ಕ, ಬೆಂಗಳೂರು ಎಸ್ಐಟಿ ಟೆಕ್ನಾಲಜಿಯ ಪ್ರಾಜೆಕ್ಟ್ ಮ್ಯಾನೇಜರ್ ಭಾಸ್ಕರ ರೈ ಪಡ್ಯಂಬೆಟ್ಟು, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್, ಪಾಣಾಜೆ ರಣಮಂಗಲ ಶ್ರೀಸುಬ್ರಹ್ಮಣ್ಯ ದೇವಾಲಯದ ಅನುವಂಶಿಕ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ, ಜೀಣೋದ್ಧಾರ ಸಮಿತಿ ಅಧ್ಯಕ್ಷ ಜಗನ್ಮೋಹನ ರೈ ಸೂರಂಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಮಾರಿ ಅನ್ವಿತಾ ಮತ್ತು ಕುಮಾರಿ ಸಂಹಿತಾ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಲಕ್ಷ್ಮೀನರಾಯಣ ರೈ ಕೆದಂಬಾಡಿ ಸ್ವಾಗತಿಸಿ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ತಮ್ಮಣ್ಣ ನಾಯ್ಕ್ ಸುಡುಕುಳಿ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು. ಸಭಾಕಾರ್ಯಕ್ರಮ ಬಳಿಕ ಅನ್ನಸಂತರ್ಪಣೆ ನಡೆಯಿತು.
ಮರಮುಟ್ಟು ನೀಡಿ ಸಹಕರಿಸಿದ ದಾನಿಗಳಿಗೆ ಸನ್ಮಾನ
ಎರಡೂವರೆ ಕೋಟಿ ಮೌಲ್ಯದ ಮರಮುಟ್ಟುಗಳನ್ನು ದೇಣಿಗೆ ರೂಪದಲ್ಲಿ ಒದಗಿಸಿದ ಭಗವದ್ಭಕ್ತರನ್ನು ಸನ್ಮಾನಿಸಲಾಯಿತು. ಅನಂತರಾಮ ರೈ ಕೆದಂಬಾಡಿ, ಗಣಪತಿ ಭಟ್ ಬೈಂಕ್ರೋಡು, ಅಜಿತ್ ಬಲ್ಯಾಯ ಕೊಂದಲ್ಕಾನ, ಕೃಷ್ಣಪ್ಪ ನಲಿಕೆ ಕೆದಂಬಾಡಿ, ಹರಿಕೃಷ್ಣ ಭರಣ್ಯರವರನ್ನು ವೇದಿಕೆಯಲ್ಲಿದ್ದ ಗಣ್ಯರು ಶಾಲು, ಹಾರ, ಪೇಟ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಿದರು.
ವಿಶೇಷ ಸಹಕಾರ ನೀಡಿದ ದಾನಿಗಳಿಗೆ ಸನ್ಮಾನ
ಮರದ ರೂಪದ ಸಹಕಾರ ನೀಡಿದ ಹೇಮಚಂದ್ರ ಮುರ, ಮಹಾಪೋಷಕರಾಗಿ ಸಹಕಾರ ನೀಡಿದ ಸುಬ್ರಹಣ್ಯ ಭಟ್ ಪಾಲ್ತಮೂಲೆ, ಶಾರದೋತ್ಸವ ಸಮಿತಿಯ ಪರವಾಗಿ ಸದಾಶಿವ ರೈ ಸೂರಂಬೈಲು, ಯಾದವ ಸಭಾ ಪ್ರಾದೇಶಿಕ ಸಮಿತಿಯ ಪರವಾಗಿ ಧನಂಜಯ ಯಾದವ್, ಯತೀಶ್ ರೈ ಪಡ್ಯಂಬೆಟ್ಟು ಹಾಗೂ ಜೆಸಿಬಿ ಕೆಲಸಕ್ಕೆ ಸಹಕರಿಸಿದ ಜಗದೀಶ್ ಎಂ.ಎಲ್. ಪೆರ್ಲರವರನ್ನು ವೇದಿಕೆಯಲ್ಲಿದ್ದ ಗಣ್ಯರು ಶಾಲು, ಹಾರ, ಪೇಟ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.