ಪಾಣಾಜೆ: ಕಿನ್ನಿಮಾಣಿ-ಪೂಮಾಣಿ, ಪಿಲಿಭೂತ ದೈವಗಳ ಪುನರ್‌ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ

0

ಪಾಣಾಜೆ: ಇಲ್ಲಿನ ಆರ್ಲಪದವು ಶ್ರೀ ಕಿನ್ನಿಮಾಣಿ-ಪೂಮಾಣಿ, ಪಿಲಿಭೂತ ದೈವಸ್ಥಾನದಲ್ಲಿ ಶ್ರೀ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳು ಮತ್ತು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನೆರವೇರಿದವು.


ಜ. 20ರಂದು ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ ನಡೆಯಿತು. ಬೆಳಿಗ್ಗೆ  7.28 ರಿಂದ 8.28ರ ಮಕರ ಲಗ್ನ ಸುಮುಹೂರ್ತದಲ್ಲಿ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ತ್ಯಾದಿಗಳ ನಿರ್ಣಯ ಪ್ರಸಾದ ವಿತರಣೆ ಜರಗಿತು.

ಚಿತ್ರ: ಜಿ.ಎಸ್.‌ ಹರೀಶ್‌ ಆರ್ಲಪದವು

ದೈವಸ್ಥಾನಕ್ಕಿಂತ 200 ಮೀಟರ್‌ ದೂರದಲ್ಲಿನ ಪೂಮಾಣಿ ಕಿನ್ನಿಮಾಣಿ ದೈವಗಳ ಗುಡಿ ಮತ್ತು ಪಿಲಿಭೂತ ಗುಡಿಯಲ್ಲಿ ಪೀಠ ಪ್ರತಿಷ್ಠೆ, ಮುಗುಳಿ ಪ್ರತಿಷ್ಠೆ, ಗುಳಿಗ ಸಾನ್ನಿಧ್ಯದಲ್ಲಿ ಪೂಜೆ ನೆರವೇರಿದ ಬಳಿಕ ಪ್ರಧಾನ ದೈವಸ್ಥಾನದಲ್ಲಿ ದೈವಗಳ ಪ್ರತಿಷ್ಠೆ, ಮುಗುಳಿ ಪ್ರತಿಷ್ಟೆ ನೆರವೇರಿತು.

ಈ ಕ್ಷಣಗಳನ್ನು ಸಾವಿರಾರು ಭಕ್ತಾಭಿಮಾನಿಗಳು ಕಣ್ತುಂಬಿಕೊಂಡರು. ಮಧ್ಯಾಹ್ನ ಪಲ್ಲಪೂಜೆ ನಡೆದು ಮಹಾ ಅನ್ನಸಂತರ್ಪಣೆ ನೆರವೇರಿತು. 7 ಸಾವಿರಕ್ಕೂ ಮಿಕ್ಕಿ ಮಂದಿಗೆ ಅನ್ನಪ್ರಸಾದ ವಿತರಿಸಲಾಯಿತು. ಒಟ್ಟು 17 ಬ್ರಹ್ಮಕಲಶೋತ್ಸವದ ಉಪಸಮಿತಿಗಳನ್ನು ರಚಿಸಿಕೊಂಡು ನೂರಾರು ಕಾರ್ಯಕರ್ತರ ತಂಡ ಅಚ್ಚುಕಟ್ಟಿನ ವ್ಯವಸ್ಥೆಯಲ್ಲಿ ಶ್ರಮಿಸಿತು.


ಸಂಜೆ  ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಪಟ್ಲ ಸತೀಶ್‌ ಶೆಟ್ಟಿ ಸಾರಥ್ಯದಲ್ಲಿ ʻಶ್ರೀ ದೇವಿ ಮಹಾತ್ಮೆʼ ಯಕ್ಷಗಾನ ಪ್ರದರ್ಶನಗೊಂಡಿತು. ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ, ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಅಶೋಕ್‌ ಕುಮಾರ್‌ ರೈ, ಪ್ರಧಾನ ಸಂಚಾಲಕ ಶಶಿಕುಮಾರ್‌ ರೈ ಬಾಲ್ಯೊಟ್ಟು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಗನ್ಮೋಹನ ರೈ ಸೂರಂಬೈಲು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಪ್ರಧಾನ ಕಾರ್ಯದರ್ಶಿ ತಮ್ಮಣ್ಣ ನಾಯ್ಕ್‌ ಸುಡುಕುಳಿ, ಕಾರ್ಯದರ್ಶಿ ವಿಶ್ವನಾಥ ಪೈ ಸೇರಿದಂತೆ ವಿವಿಧ ಪದಾಧಿಕಾರಿಗಳು, ಉಪಸಮಿತಿಗಳ ಸಂಚಾಲಕರು, ಸಹಸಂಚಾಲಕರು, ಸದಸ್ಯರು, ಕಾರ್ಯಕರ್ತರು, ಊರ ಪರವೂರ ಭಕ್ತಾಭಿಮಾನಿಗಳು ವಿವಿಧ ರೀತಿಯಲ್ಲಿ ಸಹಕರಿಸಿದರು.

25 ಸಾವಿರ ಮಂದಿಗೆ ಅನ್ನದಾನ
ಕ್ಷೇತ್ರದಲ್ಲಿ ನಡೆದ ಬ್ರಹ್ಮಕಲಶೋತ್ಸವದ ಎಲ್ಲಾ ಕಾರ್ಯಕ್ರಮಗಳು, ವ್ಯವಸ್ಥೆಗಳು ನಾವು ಯೋಜಿಸಿದ ರೀತಿಗಿಂತ ಹೆಚ್ಚಿನ ರೀತಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರ ಶ್ರಮ, ಉಪಸಮಿತಿಗಳ ಜೋಡಣೆಯಿಂದಾಗಿ ಎಲ್ಲವೂ ವ್ಯವಸ್ಥಿತವಾಗಿ ನಡೆದಿವೆ. 2-3 ದಿನಗಳಲ್ಲಿ ಸುಮಾರು 25 ಸಾವಿರಕ್ಕೂ ಮಿಕ್ಕಿ ಮಂದಿಗೆ ಅನ್ನದಾನ ಮಾಡುವ ಮಹಾಪುಣ್ಯದ ಕಾರ್ಯ ನಡೆಯಿತು. ನಮ್ಮ ಜೀವನದಲ್ಲಿ ಇದೊಂದು ಅವಿಸ್ಮರಣೀಯ ದೈವಯೋಗ ಎಂದು ಭಾವಿಸಿದ್ದೇವೆ.
– ಶಶಿಕುಮಾರ್‌ ರೈ ಬಾಲ್ಯೊಟ್ಟು ಪ್ರಧಾನ ಸಂಚಾಲಕರು, ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿ

ʻಸುದ್ದಿʼ ಯಿಂದ ಕ್ಷೇತ್ರದ ನಿರಂತರ ಪ್ರಸಾರ
ಬ್ರಹ್ಮಕಲಶೋತ್ಸವದ ವೈದಿಕ ಕಾರ್ಯಕ್ರಮಗಳು ಬೆಳಿಗ್ಗೆ 6.30 ರಿಂದ ಸುದ್ದಿ ಲೈವ್‌ ಯುಟ್ಯೂಬ್‌ ಚಾನೆಲ್‌ ಮತ್ತು ಕೇಬಲ್‌ ನಂ. 92 ರಲ್ಲಿ ನೇರ ಪ್ರಸಾರಗೊಂಡಿತು. ದೈವಸ್ಥಾನದ ಒಳಭಾಗದ ಪ್ರತಿಷ್ಟಾದಿ ಬ್ರಹ್ಮಕಲಶಾಭಿಷೇಕದ ದೃಶ್ಯಾವಳಿಗಳು ದೈವಸ್ಥಾನದ ಮುಂಭಾಗದಲ್ಲಿ ಹಾಕಲಾಗಿದ್ದ ʻಸುದ್ದಿʼʼ ಎಲ್‌ಇಡಿ ಪರದೆ ಮೂಲಕ ಸಾವಿರಾರು ಮಂದಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿತು. ದೈವಸ್ಥಾನದ ಜೀರ್ಣೋದ್ಧಾರದ ಹಂತ ಹಂತದ ಪ್ರಕ್ರಿಯೆಯಿಂದ ಹಿಡಿದು, ಬ್ರಹ್ಮಕಲಶೋತ್ಸವದ ಅಂತಿಮ ಕ್ಷಣಗಳವರೆಗೂ ಸುದ್ದಿ ನ್ಯೂಸ್‌ ಚಾನೆಲ್‌ ಮೂಲಕ ಕ್ಷೇತ್ರದ ಸಂಪೂರ್ಣ ದೃಶ್ಯಾವಳಿಗಳನ್ನು ದೇಶ ವಿದೇಶದ ಸಾವಿರಾರು ಭಕ್ತಾಭಿಮಾನಿಗಳಿಗೆ ʻಸುದ್ದಿ ನ್ಯೂಸ್‌ʼ ತಲುಪಿಸುವ ಕಾರ್ಯ ನಡೆಸಿತು. ಎರಡು ದಿನಗಳ ಕಾರ್ಯಕ್ರಮವನ್ನು 30 ಸಾವಿರಕ್ಕೂ ಮಿಕ್ಕಿ ಮಂದಿ ʻಸುದ್ದಿʼ ಯುಟ್ಯೂಬ್‌ ನಲ್ಲಿ ವೀಕ್ಷಿಸಿದರು.

LEAVE A REPLY

Please enter your comment!
Please enter your name here