ನೆಲ್ಯಾಡಿ: ಮುಂದಿನ 1 ವರ್ಷದ ಅವಧಿಗೆ ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯ ಉದಯಕುಮಾರ್ ದೋಂತಿಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಲೋಕೇಶ್ ಬಾಣಜಾಲು ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜ.20 ರಂದು ಆಯ್ಕೆ ಪ್ರಕ್ರಿಯೆ ನಡೆಯಿತು. ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಆಯ್ಕೆ ಪ್ರಕ್ರಿಯೆ ನಡೆಸಿದರು. ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ದೋಂತಿಲ 3ನೇ ವಾರ್ಡ್ ನಿಂದ ಚುನಾಯಿತರಾಗಿದ್ದ ಬಿಜೆಪಿ ಬೆಂಬಲಿತ ಸದಸ್ಯ ಉದಯಕುಮಾರ್ ಮಾತ್ರ ನಾಮಪತ್ರ ಸಲ್ಲಿಸಿದ್ದು ಅವರು ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷೆ ವನಿತಾ, ಸದಸ್ಯರಾದ ಲೋಕೇಶ್ ಬಾಣಜಾಲು, ಜನಾರ್ದನ ಕಾಪಿನಬಾಗಿಲು, ಭವಾನಿ, ಮಹೇಶ್ ಪಟ್ಲಡ್ಕ, ಸುಧಾಕರ ಗುತ್ತಿನಮನೆ, ಸವಿತಾ ಎಸ್ ಹೊಸಮನೆ, ಪುಷ್ಪಾ, ವಿಶ್ವನಾಥ ಗೌಡ ಕೊರಮೇರು, ರೋಯಿ ಯಾನೆ ಕುರಿಯಾಕೋಸ್ ಟಿ ಎಂ., ದಿನೇಶ್, ದೇವಕಿ, ಹನೀಫ್ ಎಂ., ಶೈಲಾ ಉಪಸ್ಥಿತರಿದ್ದರು. ಮೂವರು ಸದಸ್ಯರು ಗೈರು ಹಾಜರಾಗಿದ್ದರು. ಕಡಬ ಉಪ ತಹಶೀಲ್ದಾರ್ ಸಯ್ಯದುಲ್ಲಾಖಾನ್, ಚುನಾವಣಾ ವಿಷಯ ನಿರ್ವಾಹಕ ಆತ್ಮಾನಂದ, ಕೌಕ್ರಾಡಿ ಗ್ರಾಮ ಪಂಚಾಯತ್ ಪ್ರಭಾರ ಪಿಡಿಒ ದೇವಿಕಾ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸಹಕರಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಉದಯಕುಮಾರ್ ಅವರು 2021ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಕೌಕ್ರಾಡಿ ಗ್ರಾಮ ಪಂಚಾಯತ್ ನ ದೋಂತಿಲ 3ನೇ ವಾರ್ಡ್ ನಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಇವರು ಪ್ರಸ್ತುತ ಬಿಜೆಪಿ ಕೌಕ್ರಾಡಿ ಶಕ್ತಿ ಕೇಂದ್ರದ ಪ್ರಮುಖ್ ಆಗಿದ್ದಾರೆ. ಅಲ್ಲದೆ ದೋಂತಿಲ ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಜೊತೆ ಕಾರ್ಯದರ್ಶಿ, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಟ್ರಸ್ಟಿಯಾಗಿ, ನೆಲ್ಯಾಡಿ -ಕೌಕ್ರಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಯಾಗಿ, ದೋಂತಿಲ ಸ್ಕಂದ ಯುವಕ ಮಂಡಲದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನೆಲ್ಯಾಡಿಯ ಗಣೇಶ್ ಆಯಿಲ್ ಮಿಲ್ ನ ಮಾಲಕರು ಆಗಿದ್ದಾರೆ.
ಅಭಿನಂದನೆ:
ಅಯ್ಕೆ ಪ್ರಕ್ರಿಯೆ ಬಳಿಕ ನಡೆದ ಸಮಾರಂಭದಲ್ಲಿ ನೂತನ ಅಧ್ಯಕ್ಷರನ್ನು ಬಿಜೆಪಿ ಮುಖಂಡರು ಹಾರಾರ್ಪಣೆ ಮಾಡಿ ಅಭಿನಂದನೆ ಸಲ್ಲಿಸಿದರು. ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಬಿಜೆಪಿ ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ ನೆಲ್ಯಾಡಿ, ಕೌಕ್ರಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಲೋಕೇಶ್ ಬಾಣಜಾಲು, ಎಂ ಕೆ ಇಬ್ರಾಹಿಂ ಅವರು ಅಭಿನಂದಿಸಿ ಮಾತನಾಡಿದರು. ಬಿಜೆಪಿ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.