ಜ.28ರಿಂದ ಬೆಂಗಳೂರಿನಲ್ಲಿ ಅನಿರ್ಧಿಷ್ಠಾವಧಿ ಧರಣಿ

0

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕನಿಷ್ಟ ವೇತನ ನೀಡಬೇಕೆಂದು ಒತ್ತಾಯಿಸಿ ಜ.28ರಿಂದ ಬೆಂಗಳೂರಿನ ಫ್ರಿಡಂಪಾರ್ಕ್‌ನಲ್ಲಿ ನಡೆಯಲಿರುವ ಅನಿಽಷ್ಟಾವಽ ಧರಣಿ ಸತ್ಯಾಗ್ರಹ ಬೆಂಬಲಿಸಿ, ಧರಣಿಯಲ್ಲಿ ಭಾಗವಹಿಸಲು ಪುತ್ತೂರು ತಾಲೂಕು ಅಂಗನವಾಡಿ ಮತ್ತು ಕಾರ್ಯಕರ್ತೆಯರ ಸಭೆಯಲ್ಲಿ ನಿರ್ಣಯಿಸಲಾಯಿತು.


ನೆಲ್ಲಿಕಟ್ಟೆ ಅಂಗನವಾಡಿಯಲ್ಲಿ ಪುತ್ತೂರು ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ತುರ್ತು ಸಭೆ ನಡೆದು ಈ ತೀರ್ಮಾನ ಕೈಗೊಳ್ಳಲಾಯಿತು. ಸಂಘದ ಅಧ್ಯಕ್ಷೆ ಕಮಲ ಮಾವಿನಕಟ್ಟೆ ಮಾತನಾಡಿ ಧರಣಿ ಸತ್ಯಾಗ್ರಹದ ಮಾಹಿತಿ ನೀಡಿದರು. ಪುತ್ತೂರು ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಭಾಗವಹಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷೆ ತಾರಾ ಬಲ್ಲಾಳ್, ಕಾರ್ಯದರ್ಶಿ ಶೈಲಜಾ ಈಶ್ವರಮಂಗಲ, ಕೋಶಾಧಕಾರಿ ಚಂದ್ರಿಕ ಪುಳಿತ್ತಡಿ, ಜತೆ ಕಾರ್ಯದರ್ಶಿ ಜಯಂತಿ ಕೋಡಿಂಬಾಡಿ, ನಿಕಟಪೂರ್ವ ಕಾರ್ಯದರ್ಶಿ ಪುಷ್ಪಲತಾ ಕೊಳ್ತಿಗೆ, ಸಂಧ್ಯಾ ಬೀರಿಗ, ಮಾಜಿ ಅಧ್ಯಕ್ಷರುಗಳಾದ ಮಲ್ಲಿಕಾ ಎಸ್.ಆಳ್ವ, ಜೈನಾಬಿ ಕಡಬ, ಶ್ರೀಲತಾ ರಾವ್, ಮೀನಾಕ್ಷಿ ಬೆಳ್ಳಿಪ್ಪಾಡಿ, ಗುಣವತಿ ಉಪ್ಪಿನಂಗಡಿ, ಮಾಜಿ ಜಿಲ್ಲಾಧ್ಯಕ್ಷೆ ಅರುಣ ಡಿ., ಮಾಜಿ ಕಾರ್ಯದರ್ಶಿ ಜಯಲತಾ ಹಾಗೂ ವಲಯದ ಪ್ರತಿನಿಧಿಗಳು ಉಪಸ್ಥಿತರಿದ್ದರು. ಉಪಾಧ್ಯಕ್ಷೆ ರಾಜೀವಿ ಕುಂಬ್ರ ವಂದಿಸಿದರು.


ಪ್ರಮುಖ ಬೇಡಿಕೆಗಳು:
1975ರಲ್ಲಿ ಆರಂಭಗೊಂಡ ಸಮಗ್ರಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಪರಿಣಾಮಕಾರಿಯಾಗಲು ಅಂಗನವಾಡಿ ಕಾರ್ಯಕರ್ತೆಯರು ಸಾಕಷ್ಟು ಶ್ರಮವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಈ ಯೋಜನೆಯಲ್ಲಿ, 3ರಿಂದ 6ವರ್ಷದ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ, ಪೂರಕ ಪೌಷ್ಟಿಕ ಆಹಾರ ವಿತರಣೆ ಮಕ್ಕಳಿಗೆ ಚುಚ್ಚುಮದ್ದು ಕೊಡಿಸುವುದು, ಭಾಗ್ಯಲಕ್ಷ್ಮೀ ಯೋಜನೆ, ಮಾತೃವಂದನಾ ಯೋಜನೆಯನ್ನು ಫಲಾನುಭವಿಗಳಿಗೆ ನೀಡುವುದು. ಬಿಎಲ್‌ಒ ಕೆಲಸ ಕೇಂದ್ರ ಸರಕಾರದ ಯೋಜನೆಯಲ್ಲಿ ಪೋಷಣ್ ಟ್ರ್ಯಾಕರ್‌ನಲ್ಲಿ ಮಕ್ಕಳು ಮತ್ತು ಗರ್ಭಿಣಿಯರು, ಬಾಣಂತಿಯರ ಮಾಹಿತಿ ನಮೂದಿಸಲಾಗುತ್ತದೆ. 2020ರಿಂದ 2022ರವರೆಗೆ ಕರೋನಾ ವಾರಿಯರ‍್ಸ್‌ಗಳಾಗಿ ಆರೋಗ್ಯ ಇಲಾಖೆಯ ಜತೆ ಕೆಲಸ ಮಾಡಲಾಗಿದೆ. ಈ ಸಂದರ್ಭದಲ್ಲಿ ಕರೋನಾ ವೈರಸ್‌ಗೆ ತುತ್ತಾಗಿ ಸಾವಿಗೀಡಾದ ಕಾರ್ಯಕರ್ತೆಯರ ಕುಟುಂಬಗಳು ಬೀದಿಗೆ ಬಂದಿದೆ. ಹೀಗೆ ಅಂಗನವಾಡಿ ಕೆಲಸದ ಜತೆಗೆ ಇತರ ಇಲಾಖೆಗಳ ಕೆಲಸಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಕಳೆದ 50 ವರ್ಷಗಳಿಂದ ನಿರ್ವಹಿಸಿಕೊಂಡು ಬಂದಿದ್ದಾರೆ. ಆದರೆ ಕನಿಷ್ಠ ಕೂಲಿಯನ್ನು ಈವರಗೆ ಜಾರಿ ಮಾಡಿಲ್ಲ.


ಆದುದರಿಂದ ಐಸಿಡಿಎಸ್ ಯೋಜನೆ ಪ್ರಾರಂಭವಾಗಿ 50 ವರ್ಷ ಆಗಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕನಿಷ್ಟ ವೇತನ ನೀಡಬೇಕು ಹಾಗೂ ಸರಕಾರಿ ನೌಕರರೆಂದು ಪರಿಗಣಿಸಬೇಕೆಂಬುದು ರಾಜ್ಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘದ ಪ್ರಮುಖ ಒತ್ತಾಯವಾಗಿದೆ.ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ರೂ.25ಸಾವಿರ ಹಾಗೂ ಅಂಗನವಾಡಿ ಸಹಾಯಕಿಯರಿಗೆ ರೂ.12ಸಾವಿರ ಕನಿಷ್ಠ ವೇತನ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರನ್ನು ಸಿ.ದರ್ಜೆ ನೌಕರರಂತೆ ಹಾಗೂ ಸಹಾಯಕಿಯರನ್ನು ಡಿ.ದರ್ಜೆ ನೌಕರರೆಂದು ಪರಿಗಣಿಸಿ ಗುಜರಾತ್ ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ ಕರ್ನಾಟಕ ರಾಜ್ಯದಲ್ಲೂ ಜಾರಿ ಮಾಡಿ ಸರಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿ ಬೆಂಗಳೂರಿನ ರಾಜ್ಯ ಸಮಿತಿ ಫ್ರೀಡಂಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.

LEAVE A REPLY

Please enter your comment!
Please enter your name here