ನೆಲ್ಯಾಡಿ: ಕಸ್ತೂರಿ ಸಿರಿಗನ್ನಡ ವೇದಿಕೆ ಬೆಳಗಾವಿ ಇವರು ಕೊಡಮಾಡುವ ರಾಷ್ಟ್ರಮಟ್ಟದ ಜ್ಞಾನ ವಿಭೂಷಣ ಪ್ರಶಸ್ತಿಗೆ ನೆಲ್ಯಾಡಿಯ ಶೇಕ್ ಆದಂ ಸಾಹೇಬ್ ಹಾಗೂ ಬಂಟ್ವಾಳ ಮಂಚಿ ನೂಜಿಪ್ಪಾಡಿಯ ರಮಾನಂದ ಅವರು ಆಯ್ಕೆಗೊಂಡಿದ್ದಾರೆ.
ಇವರ ಸಾಹಿತ್ಯ, ಭಾಷೆ, ನೆಲ-ಜಲ, ಸಂಸ್ಕೃತಿ ಮೊದಲಾದ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸೇವೆ-ಸಾಧನೆ, ಜ್ಞಾನ ಮತ್ತು ಪ್ರೀತಿಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜ.26ರಂದು ಬೆಳಗಾವಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ. ಕಡಬ ತಾಲೂಕಿನ ನೆಲ್ಯಾಡಿ ನಿವಾಸಿಯಾಗಿರುವ ಶೇಕ್ ಆದಂ ಸಾಹೇಬ್ ಅವರು ವಗ್ಗ ಕಾವಲಪಡೂರು ಸರಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕರಾಗಿದ್ದಾರೆ. ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ನೂಜಿಪ್ಪಾಡಿ ನಿವಾಸಿಯಾಗಿರುವ ರಮಾನಂದ ಅವರು ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರಕಾರಿ ಆಂಗ್ಲಮಾಧ್ಯಮ ಶಾಲಾ ಮುಖ್ಯಶಿಕ್ಷಕರಾಗಿದ್ದಾರೆ.