ಟೌನ್ ಬ್ಯಾಂಕ್‌ನ್ನು ಜಿಲ್ಲೆಗೆ ಮಾದರಿ ಸಹಕಾರಿ ಬ್ಯಾಂಕ್ ಮಾಡುವ ಗುರಿ-ಬಿಜೆಪಿ, ಸಹಕಾರ ಭಾರತಿ ಜಂಟಿ ಪತ್ರಿಕಾಗೋಷ್ಠಿ

0

ಪುತ್ತೂರು:ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ 115 ವರ್ಷಗಳ ಇತಿಹಾಸ ಇರುವ, ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರಿಂದ ಸ್ಥಾಪಿಸಲ್ಪಟ್ಟ ಮೊದಲ ಬ್ಯಾಂಕ್.ಈ ಸಹಕಾರಿ ಬ್ಯಾಂಕ್ ಇತರ ವಾಣಿಜ್ಯ ಬ್ಯಾಂಕ್‌ಗಳಲ್ಲಿ ನೀಡುವ ಎಲ್ಲಾ ಆಧುನಿಕ ಸೇವಾ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದ್ದು ಟೌನ್ ಬ್ಯಾಂಕ್ ಅನ್ನು ಜಿಲ್ಲೆಗೆ ಒಂದು ಮಾದರಿ ಸಹಕಾರಿ ಬ್ಯಾಂಕ್ ಮಾಡಬೇಕೆಂಬ ಸಂಕಲ್ಪವೂ ಇದೆ.ಹಾಗಾಗಿ ಟೌನ್ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಬಿಜೆಪಿ ಮತ್ತು ಸಹಕಾರ ಭಾರತಿ ಮುಖಂಡರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದ್ದಾರೆ.


ಬಿಜೆಪಿಯ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ ಅವರು ಮಾತನಾಡಿ, ಕಳೆದ ಹಲವು ವರ್ಷಗಳಿಂದ ಬ್ಯಾಂಕ್ ಹಲವು ಸಾಧನೆಗಳನ್ನು ಮಾಡಿದೆ.5 ವರ್ಷಗಳ ಹಿಂದೆ ಇದ್ದ, ರೂ.70 ಲಕ್ಷ ಲಾಭವನ್ನು ಕಳೆದ 2023-24ನೇ ಸಾಲಿನಲ್ಲಿ ರೂ.154 ಲಕ್ಷಕ್ಕೆ ಏರಿಸಲಾಗಿದೆ.ಲಾಭಾಂಶದಲ್ಲಿ ಸದಸ್ಯರಿಗೆ ಡಿವಿಡೆಂಡ್ ಕೂಡಾ ನೀಡಲಾಗುತ್ತಿದೆ.ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಾವಳಿಗಳನ್ನು ಚಾಚೂ ತಪ್ಪದೆ ಪಾಲನೆ ಮಾಡಲಾಗುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನೇಮಿಸಿದ ಶಾಸನ ಬದ್ಧ ಲೆಕ್ಕಪರಿಶೋಧಕರು ಸತತವಾಗಿ ಎ ಗ್ರೇಡ್ ನೀಡುತ್ತಿದ್ದಾರೆ.ನೇರ ನೆಪ್ಟ್, ಆರ್.ಟಿ.ಜಿ.ಎಸ್ ಸೌಕರ್ಯ ಇದೆ.ವಿಟ್ಲದಲ್ಲಿ ಶಾಖೆಯನ್ನೂ ತೆರೆಯಲಾಗಿದೆ.ಪರಿಸರ ಸ್ನೇಹಿ ಸೋಲಾರ್ ರೂ-ಟಾಪ್ ಗ್ರಿಡ್ ಘಟಕ ಸ್ಥಾಪನೆ ಸಹಿತ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ.ಜೊತೆಗೆ 115 ವರ್ಷಗಳ ಇತಿಹಾಸದಲ್ಲಿ ಈ ತನಕ ನಿರ್ದೇಶಕರು ಸಿಟ್ಟಿಂಗ್ ಫೀಸ್, ಭತ್ತೆ ಅಥವಾ ಇನ್ಯಾವುದೇ ಸಾಲ ಸವಲತ್ತನ್ನು ಈ ತನಕ ಪಡೆದಿಲ್ಲ ಎಂದು ಹೇಳಿದರು.


ಮುಂದಿನ ಯೋಜನೆ:
ಮುಂದಿನ ದಿನ ಇನ್ನೂ ಹೆಚ್ಚು ಶಾಖೆಗಳನ್ನು ತೆರೆದು ಜಿಲ್ಲೆಗೆ ವಿಸ್ತರಿಸುವ ಯೋಜನೆ ಇದೆ.ಯು.ಪಿ.ಐ ವ್ಯವಹಾರ, ಎಟಿಎಮ್ ಕಾರ್ಡ್, ಮೊಬೈಲ್ ಬ್ಯಾಂಕಿಂಗ್ ವ್ಯವಹಾರ ಸೌಲಭ್ಯ ನೀಡುವುದು, ಬ್ಯಾಂಕಿನ ಆರ್ಥಿಕ ಸದೃಢತೆ ಹೆಚ್ಚಿಸುವುದು, ಸರಳ ಸಾಲ ಸೌಕರ್ಯ ನೀಡುವುದು,ಸದಸ್ಯರಿಗೆ ವಿಮಾ ಸೌಲಭ್ಯ, ಮೊಬೈಲ್ ಆಪ್ ಮೂಲಕ ಪಿಗ್ಮಿ ಸಂಗ್ರಹದ ಬಗ್ಗೆ ಎಸ್‌ಎಮ್‌ಎಸ್ ಸಂದೇಶ ಹೋಗುವ ವ್ಯವಸ್ಥೆ ಸಹಿತ ಹಲವು ಯೋಜನೆ ಮುಂದೆ ಅಳವಡಿಸಲಾಗುವುದು.ಈ ಎಲ್ಲಾ ಯೋಜನೆಗಳ ಜಾರಿಗೆ ಬ್ಯಾಂಕ್‌ನ ಗೌರವಾನ್ವಿತ ಸದಸ್ಯರು ಸಹಕಾರ ಭಾರತಿಯ 12 ಮಂದಿ ಅಭ್ಯರ್ಥಿಗಳಾದ ಕಿಶೋರ್ ಕೊಳತ್ತಾಯ ಎನ್, ಚಂದ್ರಶೇಖರ್ ರಾವ್ ಬಪ್ಪಳಿಗೆ, ರಾಜು ಶೆಟ್ಟಿ, ರಾಮಚಂದ್ರ ಕಾಮತ್, ಶ್ರೀಧರ ಗೌಡ, ಶ್ರೀಧರ ಪಟ್ಲ, ಸುಜೀಂದ್ರ ಪ್ರಭು, ವೀಣಾ, ಸೀಮಾ ಎಂ.ವಿ, ಗಣೇಶ್ ಕೌಕ್ರಾಡಿ, ಮಲ್ಲೇಶ್ ಕುಮಾರ್, ಕಿರಣ್ ಕುಮಾರ್ ರೈ ಅವರಿಗೆ ಮತ ನೀಡಿ ಆಶೀರ್ವದಿಸುವಂತೆ ಶಿವಕುಮಾರ್ ಪಿ.ಬಿ ಮನವಿ ಮಾಡಿದರು.


ಬ್ಯಾಂಕ್‌ನಿಂದ ಯಾವುದೇ ತಪ್ಪು ನಡೆದಿಲ್ಲ:
ಪತ್ರಿಕಾಗೋಷ್ಟಿ ನಡೆಸಿ ಬ್ಯಾಂಕಿನ ವಿರುದ್ಧ ಹೊರಿಸಲಾಗಿರುವ ಆರೋಪಗಳು ಸುಳ್ಳು.ಬ್ಯಾಂಕ್‌ನಿಂದ ಯಾವುದೇ ತಪ್ಪು ನಡೆದಿಲ್ಲ.ತಪ್ಪು ಮಾಡದಿದ್ದರೂ ಅದನ್ನು ನಾವು ಒಪ್ಪಬೇಕೆಂದು ಒತ್ತಡ ಹಾಕುವ ಕೆಲಸ ಆಗಿದೆ.ದೂರು ನೀಡಿದ ವಿಚಾರಕ್ಕೆ ಸಂಬಂಧಿಸಿ ಬ್ಯಾಂಕ್‌ನಲ್ಲೇ ವಿಚಾರ ಮಾಡಬಹುದು. ಪಾರದರ್ಶಕ ಆಡಳಿತ ನೀಡಿದ್ದೇವೆ.ಮಹಾಸಭೆಗಳಲ್ಲಿ ನಿರ್ಣಯ ಆಗಿರುವುದನ್ನು ಪುಸ್ತಕದಲ್ಲಿ ದಾಖಲಿಸುತ್ತೇವೆ.ಮುಂದಿನ ಮಹಾಸಭೆಯಲ್ಲೂ ಅದಕ್ಕೆ ಉತ್ತರ ಕೊಡುತ್ತಾ ಬಂದಿದ್ದೇವೆ.ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಕೂಡಾ ಸಹಕಾರ ಭಾರತಿ ವ್ಯಕ್ತಿ ಪೂಜೆ ಮಾಡುವುದಿಲ್ಲ.ಒಟ್ಟಿನಲ್ಲಿ ಬ್ಯಾಂಕ್ ವಿಚಾರಕ್ಕೆ ಸಂಬಂಽಸಿ ಅನಗತ್ಯ ಗೊಂದಲ ಇರುವುದನ್ನು ನಾವು ಸರಿಪಡಿಸುತ್ತೇವೆ ಎಂದು ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕೊಳತ್ತಾಯ ಮತ್ತು ಸಹಕಾರ ಭಾರತಿಯ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು ಹೇಳಿದರು.ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here