ಕೋಟೆಕಾರು ಬ್ಯಾಂಕ್ ದರೋಡೆ- 18 ಕೆ.ಜಿ ಚಿನ್ನ ವಶ- ಮಾಹಿತಿ ನೀಡಿದ ಪೊಲೀಸ್ ಕಮಿಷನರ್!

0

ಮಂಗಳೂರು: ಉಳ್ಳಾಲ ತಾಲೂಕಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್ ಶಾಖೆಯಲ್ಲಿ ಜ.17 ರಂದು ನಡೆದ ದರೋಡೆ ಪ್ರಕರಣದಲ್ಲಿ ಪೊಲೀಸರು ಒಟ್ಟು 18.314 ಕೆ‌‌ಜಿ‌ ಚಿನ್ನ ಹಾಗೂ 3.80 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಒಟ್ಟು 18.674 ಕೆ.ಜಿ. ಚಿನ್ನಾಭರಣ ಹಾಗೂ 11.67 ಲಕ್ಷ ನಗದು ದರೋಡೆಯಾಗಿತ್ತು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ ವಾಲ್, ‘ಪ್ರಕರಣ ಸಂಬಂಧ ತಮಿಳುನಾಡಿನ ಪದ್ಮನೇರಿಯ ಅಮ್ಮನ್ ಕೋವಿಲ್ ನ ಮುರುಗಂಡಿ ಥೇವರ್ (36ವ), ಮುಂಬೈನ ಡೊಂಬಿವಿಲಿ ಪಶ್ಚಿಮದ ಗೋಪಿನಾಥ್ ಚೌಕ್ ನ ಯೋಸುವ ರಾಜಂದ್ರನ್ (35), ಮುಂಬೈ ಚೆಂಬೂರು ತಿಲಕನಗರದ ಕಣ್ಣನ್ ಮಣಿ (36), ಮುರುಗಂಡಿಗೆ ಆಶ್ರಯ ನೀಡಿದ್ದ ಆತನ ತಂದೆ ಎಂ.‌ಷಣ್ಮುಗಸುಂದರಂ ಸೇರಿ ನಾಲ್ವರನ್ನು ಬಂಧಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಮುರುಗಂಡಿ, ಯೋಸುವ ರಾಜೇಂದ್ರನ್ ಹಾಗೂ ಶಶಿ ಥೇವರ್ ಎಂಬುವರು ಮುಂಬೈನ ತಲೋಜಾ ಜೈಲಿನಲ್ಲಿ 2016ರಲ್ಲಿ ಒಟ್ಟಿಗೆ ಇದ್ದರು. ಕೆ.ಸಿ.ರೋಡ್ ನ ಬ್ಯಾಂಕಿನಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನಾಭರಣ ಇರುವ ಬಗ್ಗೆ ಹಾಗೂ ಭದ್ರತಾ ವ್ಯವಸ್ಥೆಯಲ್ಲಿ ಲೋಪ ಇರುವ ಬಗ್ಗೆ ಶಶಿ ಥೇವರ್ ಈ ತಂಡಕ್ಕೆ ಮಾಹಿತಿ ನೀಡಿದ್ದ. ಮುರುಗಂಡಿ, ಯೊಸುವಾ ರಾಜೇಂದ್ರನ್, ಮಣಿಕಣ್ಣನ್, ಶಶಿ ಥೆವರ್ ಹಾಗೂ ಉತ್ತರ ಭಾರತದ ಇತರ ಮೂವರನ್ನು ಒಳಗೊಂಡ ತಂಡವು ಕೆ.ಸಿ.ರೋಡ್ ಸಹಕಾರ ಬ್ಯಾಂಕ್ ದರೋಡೆಗೆ ಆರು ತಿಂಗಳು ಮೊದಲೇ ಸಂಚು ರೂಪಿಸಿತ್ತು. ಸ್ಥಳೀಯ ವ್ಯಕ್ತಿಗಳು ಈ ಕೃತ್ಯಕ್ಕೆ ನೆರವಾಗಿರುವ ಸಾಧ್ಯತೆ ಇದೆ. ಶಶಿ ಥೇವರ್ ಈಗಲೂ ತಲೆಮರೆಸಿಕೊಂಡಿದ್ದು, ಆತನ ಬಂಧನವಾದರೆ ಈ ಬಗ್ಗೆ ಖಚಿತ ಮಾಹಿತಿ ಸಿಗಲಿದೆ. ಶಶಿ ತೇವರ್ ಸೇರಿ ಇನ್ನೂ ನಾಲ್ವರ ಬಂಧನ ಆಗಬೇಕಿದೆ ಎಂದು ತಿಳಿಸಿದರು.

ಮುರುಗಂಡಿ 2024ರ ಆಗಸ್ಟ್ ನಲ್ಲಿ ಕೆ‌.ಸಿ.ರೋಡ್ ಗೆ ಬಂದು ಬ್ಯಾಂಕ್ ಅನ್ನು ನೋಡಿ ಹೋಗಿದ್ದ. ನಂತರ ಅಕ್ಟೋಬರ್ ನಲ್ಲಿ ಅವರ ತಂಡದ ಕೆಲವರು ಮತ್ತೊಮ್ಮೆ ಕೆ.ಸಿ.ರೋಡ್ ಗೆ ಬಂದಿದ್ದರು.‌ ಆ ಬಳಿಕ ನ.27 ರಂದು ಯೊಸುವಾ ರಾಜೆಂದ್ರನ್ ಮತ್ತು ಮುರುಗಂಡಿ ಮತ್ತೆ ಕೆ.ಸಿ‌ರೋಡ್ ಗೆ ಬಂದು ದರೋಡೆಗೆ ಸಂಚು ರೂಪಿಸಿದ್ದರು‌‌. ಶುಕ್ರವಾರ ಮಧ್ಯಾಹ್ನ ಸ್ಥಳದಲ್ಲಿ ಜನ ಓಡಾಟ ಕಡಿಮೆ ಇರುವುದರಿಂದ ಕೃತ್ಯಕ್ಕೆ ಆ ದಿನವನ್ನೇ ಆಯ್ಕೆ ಮಾಡಿದ್ದರು ಎಂದು ತಿಳಿಸಿದರು.

ಜ.16ರಂದು ಮುಂಬೈನ ತಿಲಕನಗರದಿಂದ ಮುರುಗಂಡಿ ಮೂವರು ಸಹಚರರ ಜೊತೆ ಫಿಯೆಟ್ ಕಾರಿನಲ್ಲಿ ಹೊರಟಿದ್ದ. ಕಣ್ಣನ್ ಮಣಿ ಮತ್ತು ಇನ್ನಿಬ್ಬರು ರೈಲಿನಲ್ಲಿ ಬಂದಿದ್ದರು ಎಂದರು. ಮುರುಗಂಡಿ ಮತ್ತು ಯೊಸುವಾ ರಾಜೇಂದ್ರನ್ ಫಿಯೆಟ್ ಕಾರಿನಲ್ಲಿ ಕೇರಳ ಮೂಲಕ ತಮಿಳುನಾಡಿಗೆ ಪರಾರಿಯಾಗಿದ್ದರು. ಮೂವರು ಆರೋಪಿಗಳು ರಿಕ್ಷಾದಲ್ಲಿ ಹಾಗೂ ಒಬ್ಬ ಬಸ್ ಮೂಲಕ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮುಂಬೈಗೆ ಪರಾರಿಯಾಗಿದ್ದರು ಎಂದರು.

‌ಸಿ‌ಸಿ.ಟಿ.ವಿ. ಕ್ಯಾಮರಾ ಪರಿಶೀಲಿಸಿದಾಗ ಕೃತ್ಯಕ್ಕೆ ಬಳಸಿದ ಕಾರು ಮುಂಬೈ ನೋಂದಣಿ ಹೊಂದಿರುವುದು ತಿಳಿಯಿತು. ಈ ಮಾಹಿತಿ ಆಧಾರದಲ್ಲಿ ಮುಂಬೈಗೆ ಪೊಲೀಸರ ತಂಡ ತೆರಳಿತ್ತು. ಅಷ್ಟರಲ್ಲಿ ಅರೋಪಿಗಳು ತಮಿಳುನಾಡಿಗೆ ಪರಾರಿಯಾಗಿದ್ದರು. ನಂತರ ಪೊಲೀಸರು ತಮಿಳುನಾಡಿಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಚಿನ್ನವನ್ನು ತಮಿಳುನಾಡಿನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದರು.

ಪೊಲೀಸ್ ವಿವಿಧ ತಂಡಗಳ ಪ್ರಯತ್ನದಿಂದ ಈ ಯಶಸ್ಸು ಸಾಧ್ಯವಾಗಿದೆ. ಅಲ್ಪಾವಧಿಯಲ್ಲಿ ಪೊಲೀಸರ ತಂಡದ ಸದಸ್ಯರು ಸ್ವಲ್ಪವೂ ವಿಶ್ರಾಂತಿ ಪಡೆಯದೇ ಮೂರು ದಿನಗಳಲ್ಲಿ 3,700 ಕಿ.ಮಿ. ಪ್ರಯಾಣಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನವನ್ನು ಮರಳಿ ವಶಪಡಿಸಿಕೊಂಡ ಎರಡನೇ ಅತಿದೊಡ್ಡ ಪ್ರಕರಣ ಇದು ಎಂದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿ (ಕಾನೂನು ಸುವ್ಯವಸ್ಥೆ) ಸಿದ್ದಾರ್ಥ ಗೋಯಲ್ , ಡಿಸಿಪಿ (ಅಪರಾಧ) ಕೆ.ರವಿಶಂಕರ್, ನಗರ ದಕ್ಷಿಣ ವಿಭಾಗದ ಎಸಿಪಿ ಧನ್ಯಾ ನಾಯಕ್ ಹಾಗೂ ಸಿಸಿಬಿ ಎಸಿಪಿ ಮನೋಜ್ ನಾಯ್ಕ್ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here