ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಫೆ.9ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಜ.28ರಿಂದ ಆರಂಭಗೊಳ್ಳಲಿದೆ.
ಆಡಳಿತ ಮಂಡಳಿಯ ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸಾಲಗಾರ ಕ್ಷೇತ್ರದಲ್ಲಿ ಸಾಮಾನ್ಯ ಸ್ಥಾನ-5, ಅನುಸೂಚಿತ ಜಾತಿ ಮೀಸಲು ಸ್ಥಾನ-1, ಅನುಸೂಚಿತ ಪಂಗಡ ಮೀಸಲು ಸ್ಥಾನ-1, ಹಿಂದುಳಿದ ವರ್ಗ-ಪ್ರವರ್ಗ ಎ ಮೀಸಲು ಸ್ಥಾನ-1, ಹಿಂದುಳಿದ ವರ್ಗ-ಪ್ರವರ್ಗ ಬಿ ಮೀಸಲು ಸ್ಥಾನ-1, ಮಹಿಳೆ ಮೀಸಲು-2 ಸ್ಥಾನ ಹಾಗೂ ಸಾಲಗಾರರಲ್ಲದ ಅಭ್ಯರ್ಥಿಗಳಿಗೆ 1 ಸ್ಥಾನ ಮೀಸಲಾಗಿದೆ.
ಜ.28 ಬೆಳಿಗ್ಗೆ 10 ಗಂಟೆಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಆಕಾಂಕ್ಷೆಯುಳ್ಳ ಅಭ್ಯರ್ಥಿಗಳು ನೆಲ್ಯಾಡಿಯಲ್ಲಿರುವ ಸಂಘದ ಪ್ರಧಾನ ಕಚೇರಿಯಲ್ಲಿ ರಿಟರ್ನಿಂಗ್ ಅಧಿಕಾರಿಯವರಿಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಫೆ.1 ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ. ಫೆ.2ರಂದು ಬೆಳಿಗ್ಗೆ 11 ಗಂಟೆಗೆ ನಾಮಪತ್ರ ಪರಿಶೀಲನೆ ನಡೆದು ಅದೇ ದಿನ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳಲಿದೆ. ನಾಮಪತ್ರ ಹಿಂಪಡೆಯಲು ಫೆ.3 ಅಪರಾಹ್ನ 3 ಗಂಟೆಯ ತನಕ ಕಾಲಾವಕಾಶವಿದ್ದು ಆ ಬಳಿಕ ಸಿಂಧುತ್ವ ಹೊಂದಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆಯಾಗಲಿದೆ.
ಫೆ.5ರಂದು 11ಗಂಟೆಗೆ ಸಿಂಧುತ್ವ ಹಿಂದಿರುವ ಅಭ್ಯರ್ಥಿಗಳ ಪಟ್ಟಿ ಚಿಹ್ನೆಯೊಂದಿಗೆ ಪ್ರಕಟವಾಗಲಿದೆ. ಫೆ.9ರಂದು ಬೆಳಿಗ್ಗೆ 9ರಿಂದ ಸಂಜೆ 4 ಗಂಟೆ ತನಕ ನೆಲ್ಯಾಡಿಯಲ್ಲಿ ಸಂಘದ ಪ್ರಧಾನ ಕಚೇರಿಯಲ್ಲಿ ಮತದಾನ ನಡೆಯಲಿದ್ದು, ಮತದಾನ ಮುಗಿದ ನಂತರ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಚುನಾವಣಾ ಅಧಿಕಾರಿಯಾಗಿ ಮಂಗಳೂರು ಉಪವಿಭಾಗದ ಮಂಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಅಧೀಕ್ಷಕರಾದ ಬಿ.ನಾಗೇಂದ್ರ ಅವರು ಕರ್ತವ್ಯ ನಿರ್ವಹಿಸಲಿದ್ದಾರೆ.