ಸಂಘಟನಾ ಪರ್ವದ ಜಿಲ್ಲಾ ಸಂಚಾಲಕ ರಾಜೇಶ್ ಕಾವೇರಿಯವರಿಂದ ಅಧಿಕೃತ ಘೋಷಣೆ
ಮಂಗಳೂರು:ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಸತೀಶ್ ಕುಂಪಲ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಮಂಗಳೂರಿನಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಜ.29ರಂದು ಸಂಘಟನಾ ಪರ್ವದ ಜಿಲ್ಲಾ ಸಂಚಾಲಕ ರಾಜೇಶ್ ಕಾವೇರಿ ಅವರು ಈ ಘೋಷಣೆ ಮಾಡಿದರು.ಈವರೆಗೆ ತಾತ್ಕಾಲಿಕ ನೆಲೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಸತೀಶ್ ಕುಂಪಲ ಅವರು ಇನ್ನು ಮೂರು ವರ್ಷಗಳ ಕಾಲ ಜಿಲ್ಲಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.ಹೊಸ ಪದಾಧಿಕಾರಿಗಳ ನೇಮಕಗೊಳಿಸುವ ಅಧಿಕಾರ ಅವರಿಗೆ ಇದೆ.ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಶಕ್ತಿಶಾಲಿ ತಂಡ ಹೊಂದುವ ವಿಶ್ವಾಸ ಇದೆ ಎಂದು ರಾಜೇಶ್ ಕಾವೇರಿ ಹೇಳಿದರು.
ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ:
ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ,ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕೊನೆಯ ಅವಧಿಯಲ್ಲಿದೆ.ಈ ಮಣ್ಣಿನ ಪರಂಪರೆ, ಹಿಂದುತ್ವ, ಹಿಂದು ಭಾವನೆ ಏನೆಂಬ ಸಂದೇಶವನ್ನು ಕಾರ್ಯಕರ್ತರಿಗೆ ಕಳುಹಿಸಬೇಕಾಗಿದೆ.ಬಿಜೆಪಿಗೆ ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇದೆ.ಕೇವಲ ಅಧಿಕಾರಕ್ಕಾಗಿ ಸಂಘಟನೆ ಅಲ್ಲ,ಮುಂದೆ ಬಿಜೆಪಿಯೇ ಅಧಿಕಾರಕ್ಕೆ ಬರಲಿರುವುದು ಶತಸಿದ್ಧ ಎಂದರು.
ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ಮೂಡಿಸುವ ಹೊಣೆ ನೂತನ ಜಿಲ್ಲಾ ಸಮಿತಿಗೆ ಇದೆ.ಈ ನಿಟ್ಟಿನಲ್ಲಿ ಅತ್ಯುತ್ತಮವಾದ ಸಂಘಟನೆಯನ್ನು ಕಟ್ಟಿಕೊಳ್ಳಬೇಕು ಎಂದವರು ಸಲಹೆ ನೀಡಿದರು.ಕಾಂಗ್ರೆಸ್‌ನ ಹಿಂದು ವಿರೋಧಿ ವಿಚಾರಧಾರೆ ವಿರುದ್ಧ ಪ್ರಹಾರ ನಡೆಸುವ, ಸಜ್ಜನಿಕೆಯ,ಮೌಲ್ಯಯುತ ರಾಜಕಾರಣ ಬಿಜೆಪಿಯಲ್ಲಿ ಮಾತ್ರ ಕಾಣಲು ಸಾಧ್ಯ.ಹಲವು ಆರೋಪಗಳು ಬಂದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಚಿಕೆ ಇಲ್ಲ.ಇನ್ನೂ ಕುರ್ಚಿಗೆ ಅಂಟಿಕೊಂಡೇ ಕೂತಿದ್ದಾರೆ.ಹೀಗಾಗಿ ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ರೂಪಿಸುವ ಹೊಣೆಗಾರಿಕೆ ನೂತನ ಬಿಜೆಪಿ ಸಮಿತಿಗೆ ಇದೆ.ಕಾರ್ಯಕರ್ತರ ಭಾವನೆಗೆ ಸ್ಪಂದಿಸುತ್ತಾ ಬಿಜೆಪಿಯನ್ನು ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ತರಲು ಪ್ರಯತ್ನ ನಡೆಸಬೇಕು ಎಂದು ಕ್ಯಾ|ಬ್ರಿಜೇಶ್ ಚೌಟ ಕರೆ ನೀಡಿದರು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ರಾಜ್ಯ ಸರ್ಕಾರದ ದುರಾಡಳಿತ ಹಿನ್ನೆಲೆಯಲ್ಲಿ ವಿಪಕ್ಷದಲ್ಲಿರುವ ಬಿಜೆಪಿಗೆ ಈಗ ನಿತ್ಯ ಹೋರಾಟದ ಅನಿವಾರ್ಯತೆ ಇದೆ.ರಾಜ್ಯದಲ್ಲಿ ಬಾಣಂತಿಯರ ಸಾವು,ಆಡಳಿತ ವೈಫಲ್ಯ,ಭ್ರಷ್ಟಾಚಾರ ವಿರುದ್ಧ ಪ್ರಬಲ ಹೋರಾಟ ನಡೆಸಬೇಕಾಗಿದೆ.ದ.ಕ.ಬಿಜೆಪಿ ದೇಶಕ್ಕೇ ಮಾದರಿಯಾಗುವ ಸಂಘಟನೆಯಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು.ಸಂಘಟನಾ ಪರ್ವದ ರಾಜ್ಯ ಸಂಚಾಲಕ ಕ್ಯಾ|ಗಣೇಶ್ ಕಾರ್ಣಿಕ್ ಮಾತನಾಡಿ,ರಾಜ್ಯದಲ್ಲಿ 3.25 ಕೋಟಿ ಸದಸ್ಯರಿದ್ದು,ಇವರಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಸಕ್ರಿಯ ಸದಸ್ಯರಿದ್ದಾರೆ.ರಾಜ್ಯದ ಎಲ್ಲ ಸಂಘಟನಾ ಜಿಲ್ಲೆಗಳಲ್ಲಿ ಹೊಸ ಜಿಲ್ಲಾಧ್ಯಕ್ಷರ ಘೋಷಣೆ ಮಾಡಲಾಗಿದೆ.ಮುಂದಿನ ದಿನಗಳು ಸವಾಲಿನ ದಿನಗಳಾಗಿದ್ದು, ಎಲ್ಲ ಸಮಸ್ಯೆಗಳಿಗೂ ಸ್ಪಂದಿಸುವ ಕೆಲಸ ಆಗಬೇಕಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ,ಕಾಂಗ್ರೆಸ್‌ನವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲ.ನಾನು 12 ಜಿಲ್ಲೆಯಲ್ಲಿ ಸುತ್ತಾಟ ನಡೆಸಿದ್ದು,ಕೊಡಗು ಹಾಗೂ ಮೈಸೂರುಗಳಲ್ಲಿ ಶೀಘ್ರವೇ ಜಿಲ್ಲಾಧ್ಯಕ್ಷರ ನೇಮಕ ನಡೆಯಲಿದೆ ಎಂದರು.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಭಾರತಮಾತೆ, ಪಂಡಿತ್ ದೀನ್‌ದಯಾಳ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ನಮನ ಸಲ್ಲಿಸಿದರು.ಜಿಲ್ಲಾ ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು.ರಾಜ್ಯ ಸಹ ಸಂಚಾಲಕ ವಿಕಾಸ್ ಪಿ. ವಂದಿಸಿದರು.
ಬಿಜೆಪಿ ರಾಜ್ಯ ಘಟಕದ ಹಂಗಾಮಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ದ.ಕ.ಜಿಲ್ಲಾ ಘಟಕದ ಹಂಗಾಮಿ ಅಧ್ಯಕ್ಷರಾಗಿ ಸತೀಶ್ ಕುಂಪಲ ಅವರನ್ನು 2024ರ ಜನವರಿಯಲ್ಲಿ ನೇಮಿಸಿದ್ದರು.ಆದರೆ ಇದೀಗ, ಕಾರ್ಯಸಾರಿಣಿ ಪ್ರಕಾರ ಬೂತ್,ಮಂಡಲ, ಜಿಲ್ಲೆ,ರಾಜ್ಯ ಮತ್ತು ರಾಷ್ಟ್ರ ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಜಿಲ್ಲಾ ಬಿಜೆಪಿ ಸಂಘಟನಾ ಪರ್ವ ಕಾರ್ಯಕ್ರಮದಲ್ಲಿ, ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಂಪಲ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು.