ಪುತ್ತೂರು: ಹತ್ತು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿ ಪೋಕ್ಸೋ ಪ್ರಕರಣದಡಿ ಆರೋಪಿಯಾಗಿದ್ದ ಸಂಶುದ್ದೀನ್ ಎಂಬಾತ ಪುತ್ತೂರು ಮಹಿಳಾ ಠಾಣೆಗೆ ಶರಣಾಗಿರುವುದಾಗಿ ವರದಿಯಾಗಿದೆ.
10 ವರ್ಷಗಳ ಹಿಂದೆ 5 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಲ್ಲಿ ಈತನ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಶಾಲೆಗೆ ಹೋಗುತ್ತಿದ್ದ ಬಾಲಕಿ ತನ್ನ ನಿಕಟ ಸಂಬಂಧಿಕರ ಜತೆ ಕೇರಳಕ್ಕೆ ಹೋಗಿದ್ದ ಸಂದರ್ಭ ಮಾನಸಿಕವಾಗಿ ಕುಗ್ಗಿದ್ದರು. ಈ ಸಂದರ್ಭ ಆಕೆಯನ್ನು ವೈದ್ಯಕೀಯ ಕೌನ್ಸೆಲಿಂಗ್ ಮಾಡಿದಾಗ, ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ್ದರು. ಈ ವಿಚಾರವನ್ನು ಕೇರಳ ಪೊಲೀಸರ ಗಮನಕ್ಕೆ ತರಲಾಗಿತ್ತು. ತಿರುವನಂತಪುರ ಪೊಲೀಸರು ಪ್ರಕರಣವನ್ನು ಪುತ್ತೂರು ಮಹಿಳಾ ಠಾಣೆಗೆ ವರ್ಗಾಯಿಸಿದ್ದರು.
ಮಹಿಳಾ ಠಾಣೆಯಲ್ಲಿ ಆರೋಪಿ ಸಂಶುದ್ದೀನ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿದ್ದ ಆರೋಪಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಈ ಮಧ್ಯೆ ಆರೋಪಿಯು ಹತ್ತು ವರ್ಷಗಳ ಬಳಿಕ ಇದೀಗ ದಿಢೀರ್ ಆಗಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.