ವೀರಕಂಬ: ಮನೆ ಅಂಗಳಕ್ಕೆ ಅಕ್ರಮ ಪ್ರವೇಶ ಗೈದು ವ್ಯಕ್ರಿಯೋರ್ವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೈದ ಘಟನೆ ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಮೈರ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಯುವಕರೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವೀರಕಂಬ ಗ್ರಾಮದ ಮೈರ ನಿವಾಸಿ ಯತೀಶ ಎಮ್. ಸಿ. ರವರು ದೂರುದಾರರಾಗಿದ್ದು, ನಾನು ಜ. 31ರಂದು ರಾತ್ರಿ 8 ಗಂಟೆಗೆ ಮನೆಯ ಅಂಗಳದಲ್ಲಿ ನನ್ನ ಮಗುವಿನ ಜೊತೆ ಆಟವಾಡುತ್ತಿರುವಾಗ ಮೋಹನ ಗೌಡ ಎಂಬಾತನು ಏಕಾ ಏಕಿಯಾಗಿ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದದಿಂದ ಬೈದು ನನ್ನ ಮೇಲೆ ಹಿಗ್ಗಾ ಮುಗ್ಗ ಹಲ್ಲೆ ನಡೆಸಿದ್ದಾನೆ. ಈ ವೇಳೆ 6 ವರ್ಷದ ಮಗುವಿನ ಮೇಲೂ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಮನೆಯೊಳಗಿದ್ದ ತಾಯಿ ಮತ್ತು ಪತ್ನಿ ಬೊಬ್ಬೆ ಹಾಕಿದಾಗ ಮೋಹನ್ ಗೌಡ ತನ್ನ ಮನೆಗೆ ತೆರಳಿ, ದೊಣ್ಣೆ ತಂದು ನನ್ನ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ತಡೆಯಲು ಬಂದ ತಾಯಿಯ ಮೇಲೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಿಂದ ಗಾಯಗೊಂಡ ನನ್ನನ್ನು ಸಂಬಂಧಿಕರು ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ಯತೀಶ್ ರವರು ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.