ಆಲಂಕಾರು: ನಕಲಿ ಪೋನ್ ಪೇ ಬಳಸಿ ವಂಚನೆ-ಆರೋಪಿ ವಶ

0

ಆಲಂಕಾರು: ನಕಲಿ ಫೋನ್ ಪೇ ಬಳಸಿ ವಂಚಿಸುತ್ತಿದ್ದ ವ್ಯಕ್ತಿಯನ್ನು ಆಲಂಕಾರಿನ ವರ್ತಕರು ಪೊಲೀಸರಿಗೆ ಒಪ್ಪಿಸಿದ ಘಟನೆ ಆಲಂಕಾರಿನಲ್ಲಿ ನಡೆದಿದೆ.
ಸವಣೂರು ಮಾಂತೂರು ನಿವಾಸಿ ಸಮೀರ್(27ವ) ಎಂಬ ಯುವಕ ಅಂಗಡಿಗಳಿಗೆ ತೆರಳಿ ಮನೆಗೆ ಬೇಕಾಗುವ ಸಾಮಾನು, ಹಣ್ಣು ಹಂಪಲು ಖರೀದಿಸಿ ಬಳಿಕ ಹಣ ಬೇಕು ಮತ್ತು ಒಟ್ಟು ಮೊತ್ತವನ್ನು ಒಟ್ಟು ಸೇರಿಸಿ ಪೋನ್ ಪೇ ಮಾಡುತ್ತೇನೆ ಎಂದು ಹೇಳಿ ನಕಲಿ ಪೊನ್ ಪೇ ಮೂಲಕ ಸ್ಕ್ಯಾನರ್‌ಗೆ ಸ್ಕ್ಯಾನ್ ಮಾಡಿ ಹಣ ಸಂದಾಯವಾಗಿರುತ್ತದೆ ಎಂದು ನಂಬಿಸಿ ತಾನು ಬೇಡಿಕೆ ಇಟ್ಟಿರುವ ಮೊತ್ತವನ್ನು ಪಡೆದು ಜಾಗ ಖಾಲಿ ಮಾಡುತ್ತಿದ್ದ ಎಂದು ವರ್ತಕರು ಆರೋಪಿಸಿದ್ದಾರೆ. ಆಲಂಕಾರು ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಈತ ವರ್ತಕರಿಗೆ ಈ ರೀತಿ ವಂಚನೆ ಮಾಡಿರುತ್ತಾನೆ.


ಫೆ.1ರಂದು ಮಧ್ಯಾಹ್ನದ ವೇಳೆ ಆಲಂಕಾರು ಪೇಟೆಯ ಬಸ್ ತಂಗುದಾಣದ ಬಳಿ ಒಬ್ಬರಲ್ಲಿ 2ಸಾವಿರ ಮೊತ್ತ ಪೋನ್ ಮಾಡುತ್ತೇನೆ ನಗದು ನೀಡಿ ಎಂದು ಬೇಡಿಕೆ ಇಟ್ಟಿದ್ದ. ವಿಪರ್ಯಾಸವೆಂದರೆ ಈ ವ್ಯಕ್ತಿ ಕೆಲಸ ಮಾಡುವ ಅಂಗಡಿಯಲ್ಲಿ ಎರಡು ದಿನಗಳ ಹಿಂದೆ ಹಣ ತನ್ನ ಮೋಸದ ಜಾಲದ ಮೂಲಕ ಸಮೀರ್ ಲಪಟಾಯಿಸಿದ್ದ, ಸಿಸಿ ಕ್ಯಾಮರದ ಮೂಲಕ ಪರಿಶೀಲಿಸಿ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಆದರೆ ಆತ ತನ್ನ ಕೈಗೆ ಬ್ಯಾಂಡೇಜ್ ಸುತ್ತಿರುವುದನ್ನು ಕೆಲಸದ ಯುವಕ ಗಮನಿಸಿದ್ದ, ಇಂದು ಅದೇ ಯುವಕನಲ್ಲಿ ಹಣದ ಬೇಡಿಕೆ ಇಟ್ಟ ಕಾರಣ ಆತನ ಸ್ವರ ಹಾಗೂ ಕೈಯಲ್ಲಿರುವ ಬ್ಯಾಂಡೇಜ್ ಮೂಲಕ ಗುರುತು ಹಿಡಿದ ಯುವಕ ತನ್ನ ಮಾಲೀಕನಿಗೆ ಮೋಸ ಮಾಡಿದಾತ ಈತನೇ ಎಂದು ಗುರುತು ಹಿಡಿದು ತಕ್ಷಣ ಮಾಲೀಕನಿಗೆ ಮಾಹಿತಿ ನೀಡಿದ. ಸ್ಥಳದಲ್ಲಿ ಜನರು ಜಮಾಯಿಸಿ ವಿಚಾರಿಸಿದಾಗ ಈತ ಆಲಂಕಾರು, ಕುಂತೂರು, ನೆಲ್ಯಾಡಿ ಮುಂತಾದ ಕಡೆಗಳಲ್ಲಿ ವಂಚಿಸಿರುವುದಾಗಿ ತಿಳಿದು ಬಂದಿದೆ.


ಹೆಲ್ಮೆಟ್ ಹಾಕಿ ಅಂಗಡಿಗೆ ಪ್ರವೇಶ:
ಈತ ಅಂಗಡಿಗಳಿಗೆ ಹೆಲ್ಮೆಟ್ ಹಾಕಿಕೊಂಡು ಹೋಗುತ್ತಾನೆ. ಸಿಸಿ ಟಿವಿಯಲ್ಲಿ ತನ್ನ ಪರಿಚಯ ಸಿಗಬಹುದೆಂದು ಎಲ್ಲಿಯೂ ಹೆಲ್ಮೆಟ್ ತೆಗೆಯುವುದಿಲ್ಲ. ಮಾತ್ರವಲ್ಲದೆ ತನ್ನ ದ್ವಿ ಚಕ್ರ ವಾಹನದ ಸಂಖ್ಯೆ ಸಂಪೂರ್ಣವಾಗಿ ತಿರುಚಿರುತ್ತಾನೆ. ತನ್ನ ಮಾಹಿತಿ ಸಿಗಬಾರದೆಂದು ತನ್ನ ಆಧಾರ್ ಕಾರ್ಡಿನ ವಿಳಾಸದ ಭಾಗವನ್ನು ಹರಿದು ತೆಗೆದಿರುತ್ತಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.


ಅಮಲು ಪದಾರ್ಥಗಳು:
ಈತನ ಬೈಕ್‌ನಲ್ಲಿ ಅಮಲು ಪದಾರ್ಥಗಳು ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಜೊತೆಗೆ ಮತ್ತು ಬರುವ ಸಿರಪ್‌ಗಳು, ಮಾತ್ರೆಗಳು ಆತನ ಬಳಿಯಿದ್ದವು ಎಂದು ತಿಳಿದು ಬಂದಿದೆ.


ಸಾರ್ವಜನಿಕರ ದೂರಿನಂತೆ ಪೋಲಿಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ಪಡೆದುಕೊಂಡಿರುತ್ತಾರೆ. ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here