ಪುತ್ತೂರು: ಆಲ್ಟೋ ಕಾರೊಂದು ಮಹಿಳೆಯೋರ್ವರಿಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಿಸಲು ಹೋದ ಮಹಿಳೆಯ ಪುತ್ರನ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಪುತ್ತೂರು ನ್ಯಾಯಾಲಯವು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
8-1-2023ರಂದು ಅಜಿಲಮೊಗರು ಉರೂಸ್ ಪ್ರಯುಕ್ತ ಉಮ್ಮರ್ ಫಾರೂಕ್ ಎಂಬವರು ತನ್ನ ಆಟೋ ರಿಕ್ಷಾದಲ್ಲಿ ಪತ್ನಿ ಫಾತಿಮಾತ್ ಜೋಹರಾ,ತಾಯಿ ಬಿಪಾತುಮಾ ಹಾಗೂ ಪತ್ನಿಯ ತಂದೆಯ ತಂಗಿ ಅವ್ವಮ್ಮ ಎಂಬವರೊಂದಿಗೆ ಅಜಿಲಮೊಗರುಗೆ ಹೋಗಿ ಅಲ್ಲಿ ರಿಕ್ಷಾವನ್ನು ಪಾರ್ಕಿಂಗ್ ಮಾಡಿ ಅಲ್ಲಿಂದ ಮಸೀದಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಆಲ್ಟೋಕಾರೊಂದು ಬಿಪಾತುಮಾ ಅವರಿಗೆ ಡಿಕ್ಕಿ ಹೊಡೆದು ಅವರ ಕಾಲಿಗೆ ಗಾಯವಾಗಿತ್ತು. ಈ ವೇಳೆ ಗಾಯಾಳು ಮಹಿಳೆಯ ಪುತ್ರ ಉಮ್ಮರ್ ಫಾರೂಕ್ರವರು ಆಲ್ಟೋಕಾರು ಚಾಲಕನನ್ನು ನಿನಗೆ ಕಣ್ಣು ಕಾಣುವುದಿಲ್ಲವೇ ಎಂದು ಕೇಳಿದಾಗ ಅಲ್ಲೇ ಇದ್ದ ಜನರು ಅವರನ್ನು ಸಮಾಧಾನಪಡಿಸಿ ಡಿಕ್ಕಿ ಹೊಡೆದ ಆಲ್ಟೋ ಕಾರಿನಲ್ಲಿ ಗಾಯಾಳು ಬಿ ಪಾತುಮಾರವರನ್ನು ಉಪ್ಪಿನಂಗಡಿ ಆಸ್ಪತ್ರೆಗೆ ಕಳಿಸಿ ಕೊಡಲಾಗಿತ್ತು. ಬಳಿಕ ಉಮ್ಮರ್ ಫಾರೂಕ್ ಮತ್ತು ಅವರ ಪತ್ನಿ ಇನ್ನೊಂದು ವಾಹನದಲ್ಲಿ ಉಪ್ಪಿನಂಗಡಿ ಆಸ್ಪತ್ರೆ ಹತ್ತಿರ ಬಂದಾಗ ಆಲ್ಟೋ ಕಾರಿನಲ್ಲಿದ್ದ ಇಬ್ಬರು ಹಾಗೂ ಇನ್ನಿಬ್ಬರು ಸೇರಿಕೊಂಡು ತನಗೆ ರಾಡಿನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಲ್ಲದೆ ಬಿಡಿಸಲು ಬಂದ ನನ್ನ ಪತ್ನಿಗೂ ಹಲ್ಲೆ ನಡೆಸಿ ಆಕೆಯ ಮಾನಭಂಗಕ್ಕೆ ಪ್ರಯತ್ನಿಸಿ ದೂಡಿ ಹಾಕಿರುತ್ತಾರೆ ನನ್ನನ್ನು ರಫೀಕ್ ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ ಎಂದು ಉಮ್ಮರ್ ಫಾರೂಕ್ರವರು ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಪೊಲೀಸರು ಸೆಕ್ಷನ್ 354 ಹಾಗೂ 326 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಕೊಂಡು ಆರೋಪಿ ಆಲ್ಟೋ ಕಾರ್ ಚಾಲಕ ಅಬ್ದುಲ್ ಖಾದರ್ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಪುತ್ತೂರು ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಸಿ ನ್ಯಾಯಾಲಯದ ನ್ಯಾಯಾಽಶರಾದ ಶಿವಣ್ಣ ಎಚ್. ಆರ್. ರವರು ವಿಚಾರಣೆ ನಡೆಸಿ ಆರೋಪಿ ಅಬ್ದುಲ್ ಖಾದರ್ನನ್ನು ದೋಷ ಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಯ ಪರವಾಗಿ ನ್ಯಾಯವಾದಿ ರಮ್ಲತ್ ಎಂ ಶಾಂತಿನಗರ ರವರು ವಾದಿಸಿದ್ದರು.