ಪುತ್ತೂರು: ತುಳು ಭಾಷೆ ಸಂಸ್ಕೃತಿಯ ಜಾಗೃತಿಗಾಗಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಇದರ ಆಶ್ರಯದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಫೆ.7 ರಂದು ನಡೆಯುವ ತುಳುನಾಡ ಜಾತ್ರೆ ಒಡಿಯೂರು ರಥೋತ್ಸವ ಹಾಗೇ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಕೊಡಮಾಡುವ ತುಳುಸಿರಿ ಮಾನಾದಿಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಹೆಡ್‌ಕಾನ್ಸ್‌ಸ್ಟೇಬಲ್ ಪ್ರವೀಣ್ ರೈ ನಡುಕೂಟೇಲುರವರು ಆಯ್ಕೆಯಾಗಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಕೊಡಮಾಡುವ ಅತ್ಯುತ್ತಮ ಪ್ರಶಸ್ತಿಯಾಗಿರುವ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತರಾಗಿರುವ ಇವರು ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ, ಈಶ್ವರಮಂಗಲದಲ್ಲಿ ನಡೆದ ಮೈಸೂರಿನ ಫೋಟೋಗ್ರಫರ್ ಜಗದೀಶ್ ಕೊಲೆ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ನಡೆದ ಹಲವು ಘೋರ ಅಪರಾಧ ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರ ವಿಶೇಷ ತಂಡದಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ಸೇವೆ ಮಾಡುತ್ತಿರುವ ಪ್ರವೀಣ್ ರೈಯವರು ಪ್ರಸ್ತುತ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವಧಿ ಮಹೋತ್ಸವದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಲ್ಲದೆ ಪಾಲ್ತಾಡಿ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿ, ಪಾಲ್ತಾಡಿ ಶಾಲಾ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರಾಗಿ, ಪಾಲ್ತಾಡಿ ಆದಿ ಮೊಗೇರ್ಕಳ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷರಾಗಿ,ನಳೀಲು ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕರಾಗಿ, ಮಣಿಕ್ಕರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಹೀಗೆ ಹತ್ತು ಹಲವು ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರವೀಣ್ ರೈಯವರು ಪಾಲ್ತಾಡಿ ಗ್ರಾಮದ ನಡುಕೂಟೇಲು ವಿಶ್ವನಾಥ ರೈ ಮತ್ತು ಲೀಲಾವತಿ ರೈಯವರ ಪುತ್ರರಾಗಿದ್ದಾರೆ.