ಪುತ್ತೂರು: ಡೈನಾಮಿಕ್ ರೇಸಿಂಗ್, ಆತೂರು ಪಾರ್ಟಿ ಆಂಡ್ ಎಂಟಟೈರ್ಮೆಂಟ್ ಸರ್ವಿಸ್ ಮತ್ತು ಪ್ರೈಮ್ ಪ್ರೋಪಾರ್ಟಿಸ್ ಪ್ರಸ್ತುತ ಪಡಿಸುವ ಆಟೋಕ್ರಾಸ್ ಡರ್ಟ್ ರೇಸಿಂಗ್ 2025 ಫೆ.9 ರಂದು ಆತೂರು ಉಪ್ಪಿನಂಗಡಿ ಸಮೀಪದ ಆತೂರಿನಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕ ನಝೀರ್ ಆತೂರು ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಕರ್ನಾಟಕ ಸರಕಾರದ ಸಭಾಪತಿ ಯು.ಟಿ.ಖಾದರ್ ಆಟೋಕ್ರಾಸ್ ಡರ್ಟ್ ರೇಸಿಂಗ್ ಗೆ ಚಾಲನೆ ನೀಡಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದು, ಕೆಪಿಸಿಸಿ ಸದಸ್ಯ ಕೃಷ್ಣಪ್ಪ ಜಿ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಆರ್ಯಾಪು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹೆಚ್ ಮಹಮ್ಮದ್ ಆಲಿ ಸಹಿತ ಹಲವಾರು ಮಂದಿ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿಜೇತ 39 ಮಂದಿಗೆ ವಿವಿಧ ವಿಭಾಗಗಳಲ್ಲಿ ಬಹುಮಾನ ವಿತರಣೆ ನೀಡಲಾಗುವುದು ಎಂದವರು ಹೇಳಿದರು.
ಆತೂರಿನ ಮೂರು ಎಕ್ರೆ ಪ್ರದೇಶದಲ್ಲಿ ಕಾರ್ ರೇಸ್ ಗೆ ಡರ್ಟ್ ಟ್ರ್ಯಾಕ್ ನಿರ್ಮಾಣಗೊಳ್ಳುತ್ತಿದೆ. ಯುವಕರ ಹುರುಪಿನ ಕಾರ್ ರೇಸ್ ಬಗ್ಗೆ ಸ್ಥಳೀಯರಿಗೆ ಮಾತ್ರವಲ್ಲದೆ, ಸುತ್ತಮುತ್ತಲ ಊರ ಜನರಲ್ಲೂ ಕುತೂಹಲ ಮೂಡಿದೆ. ಫೆ.9 ರಂದು ಆತೂರಿನ ಹೃದಯ ಭಾಗದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ನಡೆಯುವ ಈ ಕಾರ್ ರೇಸ್ ನಲ್ಲಿ ಹಲವು ಕಾರ್ ರೇಸ್ ದಿಗ್ಗಜರು, ತಮ್ಮ ಸುಧಾರಿತ ಕಾರುಗಳೊಂದಿಗೆ ಭಾಗವಹಿಸಲಿದ್ದಾರೆ. ಧೂಳೆಬಿಸುತ್ತಾ ಕೃತಕ ರಸ್ತೆಯಲ್ಲಿ ಏರಿ, ಇಳಿದು ಸಾಗುವ ಕಾರುಗಳ ರಣರೋಚಕ ರೇಸ್ ನ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲು ಕಾರ್ ರೇಸ್ ಪ್ರಿಯರು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.