ಏಕಾದಶ ರುದ್ರಾಭಿಷೇಕ – ‘ಪ್ರೀತಿಯಿಂದ ಪ್ರೀತಿಗೆ’ ಕೃತಿ ಬಿಡುಗಡೆ
ಪುತ್ತೂರು: ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ – ಚಿನ್ನದ ಪದಕ ವಿಜೇತ ಕೃಷಿಕ ಕಡಮಜಲು ಸುಭಾಸ್ ರೈಯವರ ಬದುಕಿನ 75 ರ ಅಮೃತವರ್ಷ ಸಂಭ್ರಮವನ್ನು ಫೆ. 6 ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಕಾದಶ ರುದ್ರಾಭಿಷೇಕದ ಮೂಲಕ ಸರಳ ರೀತಿಯಲ್ಲಿ ಆಚರಿಸಿದರು. ದೇವಾಲಯದ ಪ್ರಧಾನ ಅರ್ಚಕರು ಪ್ರಾರ್ಥಿಸಿ, ದೇವರ ಪ್ರಸಾದ ನೀಡಿ ಕಡಮಜಲು ಸುಭಾಸ್ ರೈ ಮತ್ತು ಪ್ರೀತಿ ಎಸ್. ರೈ ಕಡಮಜಲು ದಂಪತಿಯನ್ನು ಗೌರವಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ರವರು ಕಡಮಜಲು ದಂಪತಿಯನ್ನು ದೇವಳದ ವತಿಯಿಂದ ಗೌರವಿಸಿದರು.
ದಾಂಪತ್ಯ 45 ರ ಸಂಭ್ರಮ ಈಗಾಗಲೇ ಆಚರಿಸಿಕೊಂಡಿರುವ ಸುಭಾಸ್ ರೈಯವರು ತನ್ನ 75 ರ ಅಮೃತವರ್ಷ ಸಂಭ್ರಮ ಅಂಗವಾಗಿ ಸಾಹಿತ್ಯಲೋಕಕ್ಕೆ ಒಂದು ಕೊಡುಗೆ ನೀಡಿದ್ದು, ಪ್ರೀತಿಯ ಸೆಲೆ, ಆಸರೆಯ ನೆಲೆಯಾಗಿ ಜೀವನಯಾನ ʻಪ್ರೀತಿಯಿಂದ ಪ್ರೀತಿಗೆʼ ಎಂಬ ಕೃತಿಯನ್ನು ಶ್ರೀ ಮಹಾಲಿಂಗೇಶ್ವರ ದೇವರಿಗೆ ಅರ್ಪಿಸಿ ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಯಿತು.
ಅನ್ನದಾನಕ್ಕೆ ದೇಣಿಗೆ
ತನ್ನ ಹುಟ್ಟುಹಬ್ಬದ ಅಂಗವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಅನ್ನದಾನಕ್ಕಾಗಿ ರೂ. 10,100 ದೇಣಿಗೆ ನೀಡಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಕೃತಿ ಬಿಡುಗಡೆಗೊಳಿಸಿ ಶುಭ ಹಾರೈಸಿ, ಸಮಾಜಮುಖಿ ಕೆಲಸಗಳಿಂದಾಗಿ ಸುಭಾಸ್ ರೈಯವರು ಸಮಾಜದ ಒಂದು ಆಸ್ತಿಯಾಗಿದ್ದಾರೆ’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸುಭಾಸ್ ರೈಯವರು ‘ಕೃತಿಯು ಸಾಂಕೇತಿಕವಾಗಿ ದೇವರಿಗೆ ಸಮರ್ಪಿಸಿ ಬಿಡುಗಡೆಗೊಳಿಸಲಾಗಿದೆ. ಅಧಿಕೃತವಾಗಿ ತಾಲೂಕು ಮಟ್ಟದ ಕಾರ್ಯಕ್ರಮವೊಂದರಲ್ಲಿ ಬಿಡುಗಡೆಗೊಂಡು ಓದುಗನಿಗೆ ʻಪ್ರೀತಿಯಿಂದ ಓದುʼ ಬೆಲೆಗೆ ನೀಡಲಿದ್ದೇನೆ. ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಈ ಕಾರ್ಯಕ್ರಮ ನಡೆದ ಹಿನ್ನೆಲೆಯಲ್ಲಿ ಇದು ಅಮೃತ ಸಿಂಚನವಾಗಿದೆ’ ಎಂದ ಅವರು ’80 ನೇ ಹುಟ್ಟುಹಬ್ಬ ಮತ್ತು 50 ರ ದಾಂಪತ್ಯ ಸಂಭ್ರಮವನ್ನು ದೊಡ್ಡಮಟ್ಟದಲ್ಲಿ ನಡೆಸುವ ಬಗ್ಗೆ ಯೋಜನೆ ಇದೆ’ ಎಂದರು.
ಪ್ರೊ. ವಿ.ಬಿ. ಅರ್ತಿಕಜೆ ಶುಭ ನುಡಿಗಳನ್ನಾಡಿ, ‘ಕಡಮಜಲು ಸುಭಾಸ್ ರೈ ಓರ್ವ ಕೃಷಿಕನಾದರೂ ಸಾಹಿತ್ಯ ಕ್ಷೇತ್ರ ಅವರ ಅಚ್ಚುಮೆಚ್ಚಿನದ್ದಾಗಿದೆ. ಕೃಷಿಯಲ್ಲಿ ಸಾಹಿತ್ಯ ಕಂಡವರು. ಸಾಹಿತ್ಯದಲ್ಲೂ ಕೃಷಿ ಮಾಡಿದವರಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ಸಮಾಜಕ್ಕೆ ಮಾದರಿ ಎನಿಸಿಕೊಳ್ಳುತ್ತಾರೆ’ ಎಂದರು.
ಕೃಷಿಯಂತೆ ವ್ಯಕ್ತಿತ್ವದಲ್ಲೂ ಕಡಮಜಲು ಮಾದರಿ – ಶಶಿಕುಮಾರ್ ರೈ ಬಾಲ್ಯೊಟ್ಟು
ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಶುಭಾಸಂಶನೆ ಮಾಡಿ, ‘ಕಡಮಜಲುರವರ ಕೃಷಿ ಚಟುವಟಿಕೆ ನೋಡಿದರೆ ಪ್ರತಿಯೊಬ್ಬ ಕೃಷಿಕನಿಗೂ ಮಾದರಿಯಾಗಿದೆ. ಒಂದಿಂಚೂ ಕೃಷಿ ಭೂಮಿಯನ್ನು ಅವರನ್ನು ವ್ಯರ್ಥಗೊಳಿಸಿಲ್ಲ. ಅದರ ಜೊತೆಗೆ ಧಾರ್ಮಿಕ, ಸಾಮಾಜಿಕ, ಸಹಕಾರಿ ರಂಗದಲ್ಲಿ ಪ್ರತಿಯೊಬ್ಬರ ಪ್ರೀತಿಗೆ ಪಾತ್ರರಾದವರು. ನಾನು ಯಾವುದೇ ಕಾರ್ಯಕ್ರಮ ಮಾಡುವಾಗಲೂ ಮೊದಲು ಅವರ ಬಳಿ ಹೋಗುತ್ತೇನೆ. ಅವರು ದೇವರ ಎದುರಿನಲ್ಲಿ ನಿಂತು ಒಂದು ಮೌಲ್ಯ ಘೋಷಿಸಿದರೆ ಆ ಕಾರ್ಯ ಸಂಪೂರ್ಣ ಯಶಸ್ವಿಯಾಗುತ್ತದೆ. ಅವರ ಜೀವನಕ್ಕೆ ದೇವರು ಇನ್ನಷ್ಟು ಆರೋಗ್ಯ ಶಕ್ತಿ ನೀಡಲಿ’ ಎಂದರು.
ಕ.ಸಾ.ಪ. ಪುತ್ತೂರು ತಾಲೂಕು ಅಧ್ಯಕ್ಷ ಉಮೇಶ್ ನಾಯಕ್ ಉಪಸ್ಥಿತರಿದ್ದರು. ಶ್ರೀಮತಿ ಲಕ್ಷ್ಮಿ ಅರ್ತಿಕಜೆ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಎ.ಕೆ. ಜಯರಾಮ ರೈ ದಂಪತಿ, ಅಶ್ವಿನಿ ಹೊಟೇಲ್ ಮ್ಹಾಲಕ ದೇರ್ಲ ಕರುಣಾಕರ ರೈ, ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ, ನಿವೃತ್ತ ಯೋಧ ಬೋಳೋಡಿ ರಮೇಶ್ ರೈ ಬೊಳಿಕ್ಕಳ, ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಅಧ್ಯಕ್ಷ ಜಗಜೀವನ್‌ದಾಸ್ ರೈ ಚಿಲ್ಮೆತ್ತಾರು, ಕೆದಂಬಾಡಿ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ ಅಧ್ಯಕ್ಷ ಜೈಶಂಕರ ರೈ ಬೆದ್ರುಮಾರ್, ಭಜನಾ ಮಂಡಳಿ ಅಧ್ಯಕ್ಷ ಕರುಣಾಕರ ರೈ ಕೋರಂಗ, ಮುಂಡಾಳಗುತ್ತು ಮೋಹನ ಆಳ್ವ, ಕೊಳಲು ವಾದಕ ಲಿಂಗಪ್ಪ ಗೌಡ, ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಕಡಮಜಲು ಸುಭಾಸ್ ರೈ ಅಭಿಮಾನಿಗಳು, ಬಂಧುಗಳು, ಹಿತೈಷಿಗಳು ಇದೇ ವೇಳೆ ಉಪಸ್ಥಿತರಿದ್ದರು.
ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಕಾರ್ಯಕ್ರಮ ನಿರ್ವಹಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ವಳತ್ತಡ್ಕ ಮಹಾಬಲ ರೈ ಗೆಣಸಿನಕುಮೇರು ಇಡೀ ಕಾರ್ಯಕ್ರಮದ ಉಸ್ತುವಾರಿ ವಹಿಸಿ, ವಂದಿಸಿದರು.
ಸುದರ್ಶನ್ ಮೂಡಬಿದ್ರೆ ದಂಪತಿ ಹುಟ್ಟುಹಬ್ಬ ಆಚರಣೆ
ಕಳೆದ 5 ವರ್ಷಗಳಿಂದ ಕಡಮಜಲು ಸುಭಾಸ್ ರೈಯವರು ತನ್ನ ಹುಟ್ಟುಹಬ್ಬವನ್ನು ದ.ಕ. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆಯವರೊಂದಿಗೆ ಆಚರಿಸುತ್ತಿದ್ದು, ಈ ಬಾರಿಯೂ ಅವರ ಜೊತೆಗೆ ಹುಟ್ಟುಹಬ್ಬ ಆಚರಣೆಯು ದೇವಸ್ಥಾನದ ವಠಾರದಲ್ಲಿ ಸಾಂಕೇತಿಕವಾಗಿ ನಡೆಸಲಾಯಿತು. ಸುದರ್ಶನ್ ಮೂಡಬಿದ್ರೆ ದಂಪತಿಯನ್ನು ಪಂಜಿಗುಡ್ಡೆ ಈಶ್ವರ ಭಟ್ ರವರು ಪುಷ್ಪಗುಚ್ಛ ನೀಡಿ ಗೌರವಿಸಿದರು.
ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು. ಸಂಜೆ ಕಡಮಜಲು ದಂಪತಿ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ಕ್ಷೇತ್ರದ ಜಾತ್ರೋತ್ಸವ ಸಂದರ್ಭ ಭೇಟಿ ನೀಡಿ, ದೇವರ ಪ್ರಸಾದ ಸ್ವೀಕರಿಸಿ, ಅನ್ನದಾನಕ್ಕೆ ದೇಣಿಗೆ ನೀಡಿದರು.
ಕಾಶಿ, ಪ್ರಯಾಗ ಪ್ರವಾಸ ಮಾಡಲಿರುವ ಕಡಮಜಲು ದಂಪತಿ
75 ವರ್ಷ ದಾಟಿದ ಮೇಲೆ ಹಿಂದಿನ ಸಂಪ್ರದಾಯದಲ್ಲಿ ಕಾಶಿ ತೀರ್ಥ ಯಾತ್ರೆ ಹೋಗಿ ಬರುವುದು ರೂಢಿ. ಅದೇ ರೀತಿ ನಾನು ಪತ್ನಿ ಸಹಿತನಾಗಿ ಫೆ. 16 ರಂದು ಕಾಶಿ, ಪ್ರಯಾಗರಾಜ್, ಅಯೋಧ್ಯೆ ಪವಿತ್ರ ತೀರ್ಥಯಾತ್ರೆ ಕೈಗೊಳ್ಳಲಿದ್ದೇನೆ ಎಂದು ಕಡಮಜಲು ಇದೇ ವೇಳೆ ಹೇಳಿದರು.