ಒಳಮೊಗ್ರು ಗ್ರಾ.ಪಂ. ಪ್ರಭಾರ ಪಿಡಿಒ ಮನ್ಮಥ ಅಜಿರಂಗಳರಿಗೆ ಬೀಳ್ಕೊಡುಗೆ

0

ಪುತ್ತೂರು: ಗ್ರಾಮ ಪಂಚಾಯತ್ ಆಡಳಿತ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಅಧಿಕಾರದ ಅಲ್ಪ ಅವಧಿಯಲ್ಲಿ ಪ್ರಾಮಾಣಿಕವಾಗಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಪಂಚಾಯತ್‌ನ ಎಲ್ಲಾ ಕೆಲಸಗಳನ್ನು ಕೂಡ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ ಎಂದು ಒಳಮೊಗ್ರು ಗ್ರಾ.ಪಂ. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹೇಳಿದರು.


ಅವರು ಫೆ.7 ರಂದು ಒಳಮೊಗ್ರು ಗ್ರಾ.ಪಂ. ಕಛೇರಿ ಸಭಾಂಗಣದಲ್ಲಿ ನಡೆದ ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳರವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಗ್ರಾಮದ ಜನತೆಯನ್ನು ಕೂಡ ಬಹಳ ಆತ್ಮೀಯವಾಗಿ ಮಾತನಾಡಿಸುವ ಮೂಲಕ ಅವರ ಬೇಡಿಕೆಗಳಿಗೆ ಸ್ಪಂದನೆ ಕೊಟ್ಟ ಒಬ್ಬ ದಕ್ಷ ಅಧಿಕಾರಿಯಾಗಿದ್ದಾರೆ. ಅವರು ಮಾಡಿರುವ ಸೇವೆಗೆ ಒಳಮೊಗ್ರು ಗ್ರಾ.ಪಂ. ಎಂದಿಗೂ ಅಭಾರಿಯಾಗಿದೆ ಎಂದ ತ್ರಿವೇಣಿ ಪಲ್ಲತ್ತಾರುರವರು ಮುಂದಿನ ಪಂಚಾಯತ್‌ನಲ್ಲೂ ಕೂಡ ಅವರ ವೃತ್ತಿ ಜೀವನ ಒಳ್ಳೆಯ ರೀತಿಯಲ್ಲಿ ನಡೆಯಲಿ ಅವರಿಗೆ ಇನ್ನಷ್ಟು ಎತ್ತರದ ಸ್ಥಾನಮಾನ ದೊರೆಯಲಿ ಎಂದು ಹೇಳಿ ಶುಭ ಹಾರೈಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರಭಾರ ಪಿಡಿಓ ಮನ್ಮಥರವರು, ಒಳಮೊಗ್ರು ಗ್ರಾ.ಪಂ.ನಲ್ಲಿ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೇ ಗ್ರಾಮದ ಜನತೆ ನನಗೆ ಒಳ್ಳೆಯ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ನನ್ನಿಂದ ಸಾಧ್ಯವಾಗುವ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದೇನೆ. ನನ್ನೊಂದಿಗೆ ಸಹಕರಿಸಿದ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರಿಗೆ ಹಾಗೂ ಸರ್ವ ಸದಸ್ಯರಿಗೆ, ಸಿಬ್ಬಂದಿ ವರ್ಗಕ್ಕೆ, ಗ್ರಾಮದ ಜನತೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಧನ್ಯವಾದಗಳನ್ನು ಅರ್ಪಿಸಿದರು. ಗ್ರಾ.ಪಂ. ಸದಸ್ಯ ಮಹೇಶ್ ರೈ ಕೇರಿಯವರು ಮಾತನಾಡಿ, ಪ್ರಭಾರ ಪಿಡಿಓ ಆಗಿ ಬಂದ ಮನ್ಮಥರವರು ಒಬ್ಬ ಒಳ್ಳೆಯ ಪ್ರಾಮಾಣಿಕ ಅಧಿಕಾರಿಯಾಗಿದ್ದಾರೆ. ಆದರೆ ಅಧಿಕಾರಿಗಳ ವರ್ಗಾವಣೆ ಸಹಜ ಪ್ರಕ್ರಿಯೆ ಒಬ್ಬ ದಕ್ಷ ಅಧಿಕಾರಿಯ ವರ್ಗಾವಣೆಯ ಬೆನ್ನಲ್ಲೆ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಅವಿನಾಶ್ ಬಿ.ಆರ್.ರವರು ಮತ್ತೆ ಒಳಮೊಗ್ರು ಗ್ರಾ.ಪಂ.ಗೆ ಬಂದಿರುವುದು ಖುಷಿ ತಂದಿದೆ ಎಂದು ಹೇಳಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ಜಯಂತಿ, ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಮಹೇಶ್ ರೈ ಕೇರಿ, ಲತೀಫ್ ಕುಂಬ್ರ, ಪ್ರದೀಪ್ ಸೇರ್ತಾಜೆ, ರೇಖಾ ಯತೀಶ್, ವನಿತಾ ಮಜೋಜ್, ನಿಮಿತಾ ರೈ, ಗ್ರಾ.ಪಂ. ಸಿಬ್ಬಂದಿಗಳಾದ ಕೇಶವ, ಜಾನಕಿ, ಗುಲಾಬಿ, ಲೋಕನಾಥ, ಮೋಹನ್, ಸಿರಿನಾ ಉಪಸ್ಥಿತರಿದ್ದರು.

ಸನ್ಮಾನ, ಬೀಳ್ಕೊಡುಗೆ
ಐದೂವರೆ ತಿಂಗಳುಗಳ ಕಾಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಎಲ್ಲರ ಪ್ರೀತಿ ಗಳಿಸಿಕೊಂಡಿದ್ದ ಮನ್ಮಥ ಅಜಿರಂಗಳರವರಿಗೆ ಗ್ರಾ.ಪಂ. ವತಿಯಿಂದ ಸನ್ಮಾನದ ಅಭಿನಂದನೆ ಸಲ್ಲಿಸಲಾಯಿತು. ಶಾಲು ಹಾಕಿ, ಹೂ ಗುಚ್ಛ, ಅಭಿಮಾನದ ಗೌರವಾರ್ಪಣೆ ಪತ್ರವನ್ನು ನೀಡಿ ಸನ್ಮಾನಿಸಿ ಬೀಳ್ಕೊಡಲಾಯಿತು.


ಪಿಡಿಓ ಆಗಿ ಅವಿನಾಶ್ ಬಿ.ಆರ್ ಅಧಿಕಾರ ಸ್ವೀಕಾರ
ಒಳಮೊಗ್ರು ಗ್ರಾಪಂನಲ್ಲಿ ಈ ಹಿಂದೆ 2 ವರ್ಷಗಳ ಕಾಲ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಅವಿನಾಶ್ ಬಿ.ಆರ್.ರವರು ಮತ್ತೆ ಅಭಿವೃದ್ದಿ ಅಧಿಕಾರಿಯಾಗಿ ಒಳಮೊಗ್ರು ಗ್ರಾ.ಪಂ.ಗೆ ವರ್ಗಾವಣೆಗೊಂಡಿದ್ದು ಫೆ.7 ರಂದು ಅಧಿಕಾರ ವಹಿಸಿಕೊಂಡರು. ಪ್ರಭಾರ ಪಿಡಿಓ ಆಗಿದ್ದ ಮನ್ಮಥ ಅಜಿರಂಗಳರವರು ಅವಿನಾಶ್.ಬಿ.ಆರ್.ರವರಿಗೆ ಅಧಿಕಾರಿ ಹಸ್ತಾಂತರಿಸಿದರು. ಅವಿನಾಶ್‌ರವರಿಗೆ ಹೂ ಗುಚ್ಛ ನೀಡಿ ಸ್ವಾಗತಿಸಿದ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು, ಈ ಹಿಂದೆ 2 ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿ ಎಲ್ಲರ ಪ್ರೀತಿಗೆ ಪಾತ್ರರಾದ ಅವಿನಾಶ್ ಬಿ.ಆರ್.ರವರು ಮತ್ತೆ ನಮ್ಮ ಪಂಚಾಯತ್‌ಗೆ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಗ್ರಾಮದ ಅಭಿವೃದ್ದಿಗೆ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಹೇಳಿ ಶುಭ ಹಾರೈಸಿದರು. ಅಧಿಕಾರ ವಹಿಸಿಕೊಂಡ ಅವಿನಾಶ್ ಬಿ.ಆರ್.ರವರು ಮಾತನಾಡಿ, ಈ ಹಿಂದೆಯೂ ಪ್ರತಿಯೊಬ್ಬರು ಒಳ್ಳೆಯ ರೀತಿಯಲ್ಲಿ ಸಹಕಾರ ನೀಡಿದ್ದರ ಫಲವಾಗಿ ಉತ್ತಮ ಅಭಿವೃದ್ಧಿ ಸಾಧ್ಯವಾಯಿತು ಮುಂದೆಯೂ ತಾವೆಲ್ಲರೂ ಒಳ್ಳೆಯ ರೀತಿಯಲ್ಲಿ ಸಹಕಾರ ನೀಡುವಂತೆ ಕೇಳಿಕೊಂಡು, ಸತ್ಯ,ನಿಷ್ಠೆ,ಕಾನೂನು, ಪ್ರಾಮಾಣಿಕತೆ, ಮಾನವೀಯತೆಯ ಮೂಲಕ ಅಧಿಕಾರ ನಡೆಸುತ್ತೇನೆ ಎಂದು ಹೇಳಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.


‘ ಮನ್ಮಥರಂತಹ ಪ್ರಾಮಾಣಿಕ ಅಧಿಕಾರಿಯ ವರ್ಗಾವಣೆಯ ಬೆನ್ನಲ್ಲೆ ಅವಿನಾಶ್‌ರಂತಹ ಪ್ರಾಮಾಣಿಕ ಅಧಿಕಾರಿ ಬಂದಿರುವುದು ಖುಷಿ ತಂದಿದೆ. ಗ್ರಾಮಸ್ಥರ ಸಹಕಾರವಿಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ ಆದ್ದರಿಂದ ಗ್ರಾಮಸ್ಥರು ಪಂಚಾಯತ್‌ನೊಂದಿಗೆ ಕೈ ಜೋಡಿಸುವ ಮೂಲಕ ಗ್ರಾಮವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಸಹಕರಿಸಬೇಕಾಗಿ ವಿನಂತಿ.’
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ

LEAVE A REPLY

Please enter your comment!
Please enter your name here