![](https://puttur.suddinews.com/wp-content/uploads/2025/02/y2.jpg)
ಪುತ್ತೂರು: ಸರ್ವೆ ಗ್ರಾಮ ವ್ಯಾಪ್ತಿಗೆ ಸೇರಿದ, ಹಾಲು ಪಾಯಸದಂತಹ ಪ್ರೀತಿಯ ಹರಕೆಯಿಂದಲೇ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಬಂದಿರುವ ಶ್ರೀ ವಿಷ್ಣುಮೂರ್ತಿ ದೇವರ ಜಾತ್ರೋತ್ಸವವನ್ನು ನೋಡುವುದೇ ಸೊಗಸು. ಒಂದು ದಿನ ಜಾತ್ರೆ ನಡೆದರೆ ಮರುದಿವಸ ದೇವಳದ ದೈವಗಳಿಗೆ ನೇಮೋತ್ಸವ ನಡೆಯುತ್ತದೆ. ಸಂಪೂರ್ಣ ಪ್ರಕೃತಿಯ ಮಡಿಲಲ್ಲಿರುವ ಈ ದೇವಸ್ಥಾನಕ್ಕೆ ಬರುತ್ತಿದ್ದಂತೆ ನಮ್ಮ ಮೈಮನಸ್ಸು ರೋಮಾಂಚನಗೊಳ್ಳುತ್ತದೆ. ಇಲ್ಲಿ ನಡೆಯುವ ಜಾತ್ರೆಯನ್ನು ನೋಡುವುದು ಕೂಡ ಅಷ್ಟೇ ಖುಷಿ ಕೊಡುತ್ತದೆ. ಈ ವರ್ಷ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಹಾಗೇ ದೇವಳದ ಪ್ರಧಾನ ಅರ್ಚಕ ನಾಗೇಶ ಕಣ್ಣಾರಾಯ ಎಲಿಯರವರ ಸಹಕಾರದೊಂದಿಗೆ ಶ್ರೀ ದೇವರ ತೃತೀಯ ಪ್ರತಿಷ್ಠಾ ವರ್ಧಂತಿ ಮತ್ತು ಎಲಿಯ ಜಾತ್ರೆ ಫೆ.6 ರಂದು ಬಹಳ ವಿಜೃಂಭಣೆಯಿಂದ ಜರಗಿತು. ಮರು ದಿವಸ ಫೆ.7 ರಂದು ದೇವಳದ ದೈವಗಳಿಗೆ ಅದ್ಧೂರಿ ನೇಮೋತ್ಸವ ನಡೆಯಿತು. ಜಾತ್ರೆ ಹಾಗೂ ನೇಮೋತ್ಸವಕ್ಕೆ ಊರಪರವೂರ ಸಾವಿರಾರು ಭಕ್ತರು ಆಗಮಿಸಿ ಶ್ರೀ ದೈವ ದೇವರ ಗಂಧಪ್ರಸಾದ, ಅನ್ನಪ್ರಸಾದ ಸ್ವೀಕರಿಸಿ ಧನ್ಯರಾದರು.
ದೇವಳದ ದೈವಗಳಿಗೆ ವೈಭವದ ನೇಮೋತ್ಸವ
ದೇವಳದಲ್ಲಿ ಮುಖ್ಯವಾಗಿ ಪಿಲಿಭೂತ, ರಕ್ತೇಶ್ವರಿ, ಶಿರಾಡಿ, ಪಂಜುರ್ಲಿ ಹಾಗೇ ಕಾವಲು ದೈವ ಗುಳಿಗ ಇವುಗಳಿಗೆ ವಿಜೃಂಭಣೆಯ ನೇಮೋತ್ಸವ ಜರಗಿತು. ಫೆ.7 ರಂದು ಸಂಜೆ ಪಿಲಿಭೂತ, ರಕ್ತೇಶ್ವರಿ, ಶಿರಾಡಿ, ಪಂಜುರ್ಲಿ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ಪಿಲಿಭೂತಕ್ಕೆ ಎಣ್ಣೆಬೂಳ್ಯ ಕೊಡುವ ಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಅಡ್ಕರೆಗುಂಡಿಯ ಕಾವಲು ದೈವ ಗುಳಿಗ ಬನಕ್ಕೆ ಭಂಡಾರ ತರಲು ದೇವಳದಿಂದ ಹೊರಡುವ ಕಾರ್ಯಕ್ರಮ ನಡೆಯಿತು. ಪಿಲಿಭೂತದ ನೇಮ ಹಾಗೂ ಬೂಳ್ಯಪ್ರಸಾದ ವಿತರಣೆ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ರಾತ್ರಿಯಿಂದ ಬೆಳಗ್ಗಿನ ತನಕ ರಕ್ತೇಶ್ವರಿ, ಶಿರಾಡಿ, ಪಂಜುರ್ಲಿ ಹಾಗೂ ಗುಳಿಗ ದೈವಗಳ ನರ್ತನ ಸೇವೆ ನಡೆದು ಬೂಳ್ಯ ಪ್ರಸಾದ ವಿತರಣೆ ನಡೆಯಿತು. ಬೆಳಗ್ಗಿನ ಜಾವ ಗುಳಿಗ ದೈವವು ಅಡ್ಕರೆಗುಂಡಿಯಲ್ಲಿರುವ ಬನಕ್ಕೆ ಹೊರಡುವ ಕಾರ್ಯಕ್ರಮ ನಡೆಯಿತು.
4 ಸಾವಿರಕ್ಕೂ ಅಧಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ
ಮೂರು ದಿನಗಳ ಕಾಲ ದೇವಳದಲ್ಲಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು ಇದಲ್ಲದೆ ಬೆಳಗ್ಗೆ ಮತ್ತು ಸಂಜೆ ಉಪಹಾರದ ವ್ಯವಸ್ಥೆಯೂ ಇತ್ತು. ಫೆ.5 ರಂದು ಹೊರೆಕಾಣಿಕೆ ಸಮರ್ಪಣೆ ದಿನವೂ ಅನ್ನಸಂತರ್ಪಣೆ ನಡೆಯಿತು. ಹೊರೆಕಾಣಿಕೆ ದಿನದಿಂದ ಜಾತ್ರೆ ಹಾಗೂ ನೇಮೋತ್ಸವ ದಿನದವರೇಗೆ ಭಕ್ತಾಧಿಗಳಿಗೆ ನಿರಂತರ ಅನ್ನಪ್ರಸಾದ ವಿತರಣೆ ನಡೆಯಿತು.
ಸರ್ವೆ,ಮುಂಡೂರು, ಕೆದಂಬಾಡಿ, ಕೆಯ್ಯೂರು ಗ್ರಾಮ ಸೇರಿದಂತೆ ಊರಪರವೂರ ಸಾವಿರಾರು ಭಕ್ತರು ಆಗಮಿಸಿದ್ದರು.4 ಸಾವಿರಕ್ಕೂ ಅಧಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಪವಿತ್ರಪಾಣಿ ಬಾಲಕೃಷ್ಣ ಮುಡಂಬಡಿತ್ತಾಯ ಸೊರಕೆ, ಜಾತ್ರಾ ಸಮಿತಿಯ ಗೌರವ ಅಧ್ಯಕ್ಷರುಗಳಾದ ಬೂಡಿಯಾರ್ ರಾಧಾಕೃಷ್ಣ ರೈ, ರಾಜಾರಾವ್ ಮುಡಂಬಡಿತ್ತಾಯ ಸೊರಕೆ, ಸಂಚಾಲಕ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ಅಧ್ಯಕ್ಷ ಶಿವರಾಮ ರೈ ಸೊರಕೆ, ಕ್ಷೇತ್ರದ ಆಡಳಿತಾಧಿಕಾರಿ ಉಮೇಶ್ ಕಾವಾಡಿ, ಕೋಶಾಧಿಕಾರಿ ಮಜಿತ್ ಸುವರ್ಣ ಸೊರಕೆ, ಕಾರ್ಯದರ್ಶಿ ರಜನಿಕಾಂತ ಬಾಳಯ ಹಾಗೇ ವ್ಯವಸ್ಥಾಪನ ಸಮಿತಿಯ ಸದಸ್ಯರುಗಳಾದ ಉದಯ ಕುಮಾರ್ ರೈ ಬಾಕುಡ, ಆನಂದ ರಾವ್, ರಾಧಾಕೃಷ್ಣ ರೈ ಚಾವಡಿ, ಪ್ರವೀಣ್ ಪ್ರಭು ಕೆ, ಚಂದ್ರಶೇಖರ ನೆಕ್ಕಿಲು, ಗಣೇಶ ನೇರೋಳ್ತಡ್ಕ, ಸುನೀತ ಎಸ್.ರೈಸೊರಕೆ, ಯಶೋಧಾ ಡಿ ನೆಕ್ಕಿಲು ಹಾಗೇ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು, ಜಾತ್ರಾ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಹಾಗೇ ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರುಗಳು ಹಾಗೂ ಸರ್ವೆ, ಮುಂಡೂರು, ಕೆದಂಬಾಡಿ, ಕೆಯ್ಯೂರು ಗ್ರಾಮದ ಸಮಸ್ತ ಭಕ್ತಾಧಿಗಳು ಉಪಸ್ಥಿತರಿದ್ದರು.