ಕಲಾವಿದರು ಜನಮಾನಸದಲ್ಲಿ ಚಿರಂಜೀವಿಗಳಾಗಿರುತ್ತಾರೆ: ಕಣಿಯೂರು ಶ್ರೀ
ವಿಟ್ಲ: ಇತ್ತೀಚೆಗೆ ನಿಧನರಾದ ಯಕ್ಷಗಾನ ಕಲಾವಿದ, ಉಪನ್ಯಾಸಕ ಪಕಳಕುಂಜ ಶ್ಯಾಮ್ ಭಟ್, ಕೂಡ್ಲು ಗಣಪತಿ ಭಟ್ ಅವರಿಗೆ ನುಡಿ ನಮನ ಹಾಗೂ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದಲ್ಲಿ ನಡೆಯಿತು.
ಶ್ರೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿರವರು ಮಾತನಾಡಿ, ಸಹೃದಯಿ ಕಲಾವಿದರು ಜನಮಾನಸದಲ್ಲಿ ಚಿರಂಜೀವಿಗಳಾಗಿರುತ್ತಾರೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪಕಳಕುಂಜ ಶ್ಯಾಮ್ ಭಟ್ಟರು ಯಕ್ಷಗಾನ ರಂಗದಲ್ಲಿ ತಮ್ಮ ಹೆಸರನ್ನು ಚಿರಸ್ಥಾಯಿಯಾಗಿಸಿದ್ದಾರೆ. ನೂರಾರು ಶಿಷ್ಯರಿಗೆ ಪ್ರೇರಣಾ ಶಕ್ತಿಯಾಗಿದ್ದಾರೆ. ಅವರು ಜೊತೆಗೆ ಅರ್ಥಗಾರಿಕೆ ಮಾಡುವುದೇ ಹಿತಾನುಭವ ಎಂದು ತಿಳಿಸಿದರು.
ನುಡಿನಮನ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರಾದ ಗುಂಡ್ಯಡ್ಕ ಈಶ್ವರ ಭಟ್, ಜಯರಾಮ ಭಟ್ ದೇವಸ್ಯ ನುಡಿ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ಟ್ರಸ್ಟ್ ಅಧ್ಯಕ್ಷ ಪದ್ಮನಾಭ ಪೂಜಾರಿ ಅಳಿಕೆ, ನಿವೃತ್ತ ಪ್ರಿನ್ಸಿಪಾಲ್ ಬಾಲಕೃಷ್ಣ ರಾವ್, ಹಿರಿಯರಾದ ಕೊರಗಪ್ಪ ಶೆಟ್ಟಿ ಉಪಸ್ಥಿತರಿದ್ದರು.
ಕ್ಷೇತ್ರದ ಟ್ರಸ್ಟಿ ಚಂದ್ರಶೇಖರ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಕಣಿಯೂರು ಶ್ರೀ ಚಾಮುಂಡೇಶ್ವರಿ ಯಕ್ಷಕೂಟದ ವತಿಯಿಂದ ‘ಶ್ರೀರಾಮ ನಿರ್ಯಾಣ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಿತು. ಶ್ರೀ ಕ್ಷೇತ್ರದಲ್ಲಿ ಶ್ರೀ ದೇವಿಗೆ ವಿಶೇಷ ರಂಗ ಪೂಜೆ ನಡೆಯಿತು.