ಕೆಡ್ಡಸದ ಆಚರಣೆಯಲ್ಲಿ ಆರೋಗ್ಯ ಮತ್ತು ಪ್ರಕೃತಿಯ ಉಳಿವಿದೆ- ಶ್ರೀಶಾವಾಸವಿ ತುಳುನಾಡ್
ಪುತ್ತೂರು: ತುಳುನಾಡಿನ ಪ್ರತಿ ಹಬ್ಬಗಳ ಹಿಂದೆ ಒಂದು ನಂಬಿಕೆಯಿದೆ. ಪ್ರತಿ ನಂಬಿಕೆಯ ಹಿಂದೆ ಹಲವು ವೈಜ್ಞಾನಿಕ ವಿಚಾರಧಾರೆಯಿದೆ. ಅಂತೆಯೇ ಭೂಮಿ ದೇವಿ ರಜಸ್ವಲೆಯಾಗುವ ಹಬ್ಬವಾದ ಕೆಡ್ಡಸ ಆಚರಣೆಯ ಜೊತೆಗೆ ಆರೋಗ್ಯ ಕಾಯ್ದುಕೊಳ್ಳುವ ತಿನಿಸು ಮತ್ತು ಪ್ರಕೃತಿ ಉಳಿಸುವ ಕಾಳಜಿ ಇದೆ ಎಂದು ಶ್ರೀಶಾವಾಸವಿ ತುಳುನಾಡ್ ಹೇಳಿದರು.
ಅವರು ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗ ಪುತ್ತೂರು, ಶ್ರೀ ವಜ್ರಮಾತಾ ವಿಕಾಸ ಕೇಂದ್ರ ಪುತ್ತೂರು, ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪುತ್ತೂರು, ಶ್ರೀ ಗ್ರಾಮವಿಕಾಸ ಯೋಜನೆ ಪುತ್ತೂರು ಹಾಗೂ ತುಳು ಅಪ್ಪೆಕೂಟ ಪುತ್ತೂರು ಇದರ ಸಹಭಾಗಿತ್ವದಲ್ಲಿ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ಸುಧೀರ್ ನೋಂಡರ ಮನೆಯಲ್ಲಿ ನಡೆದ ಕೆಡ್ಡಸ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ಕೆಡ್ಡಸದಂದು ಧಾನ್ಯಗಳಿಂದ ಮಾಡುವ ನನ್ನೆರಿ, ಅಡುಗೆಯಲ್ಲಿ ವಿಶೇಷವಾಗಿ ಬಳಸುವ ನುಗ್ಗೆ ಬದನೆ ಪ್ರಕೃತಿಯ ಬದಲಾವಣೆಗೆ ಆರೋಗ್ಯವನ್ನು ಕಾಯ್ದುಕೊಳ್ಳುವ ತಿನಿಸು ಅಷ್ಟೇ ಅಲ್ಲದೆ ಭೂಮಿಗೆ ಆಯುಧ ಮುಟ್ಟಿಸಬಾರದು, ಗಿಡಗಳನ್ನು ನೋಯಿಸಬಾರದು ಎನ್ನುವಲ್ಲಿ ತುಳುವರ ಪರಿಸರದ ಕಾಳಜಿ ಎದ್ದು ಕಾಣುತ್ತದೆ ಎಂದರು.
![](https://puttur.suddinews.com/wp-content/uploads/2025/02/WhatsApp-Image-2025-02-11-at-9.08.58-AM-1-1.jpeg)
ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷರಾದ ಸುಧೀರ್ ನೋಂಡರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ನಾಗವೇಣಿ ದೇವಪ್ಪ ನೋಂಡರು ಉದ್ಘಾಟಿಸಿ, ಭೂಮಾತೆಗೆ ಪೂಜಿಸಿ ಕೆಡ್ಡಸದ ಆಚರಣೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಅಪ್ಪೆಕೂಟದ ಅಧ್ಯಕ್ಷೆ ಹರಿಣಾಕ್ಷಿ ಜೆ ಶೆಟ್ಟಿ, ವಜ್ರಮಾತಾ ವಿಕಾಸ ಕೇಂದ್ರದ ಅಧ್ಯಕ್ಷೆ ನಯನಾ ರೈ ನೆಲ್ಲಿಕಟ್ಟೆ, ಒಡಿಯೂರು ವಿಕಾಸ ಯೋಜನೆಯ ಸವಿತಾ ರೈ ಮತ್ತು ಪವಿತ್ರಾರವರು ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಓಮಾನ್ ತುಳುವೆರ್ ಸಂಘಟನೆಯಿಂದ ತುಳುನಾಡ್ದ ಗೇನದ ಪಿಂಗಾರ ಬಿರುದು ಪಡೆದ ಶ್ರೀಶಾವಾಸವಿ (ವಿದ್ಯಾಶ್ರೀ ಎಸ್) ತುಳುನಾಡ್ರವರನ್ನು ಗುರುದೇವಾ ಸೇವಾ ಬಳಗ, ತುಳು ಅಪ್ಪೆಕೂಟ ಮತ್ತು ವಜ್ರಮಾತಾ ವಿಕಾಸ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿದೋದ್ದೇಶ ಸಹಕಾರಿ ಸಂಘದ ನಿರ್ದೇಶಕರುಗಳು, ಸಹಭಾಗಿತ್ವದ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು. ಹರಿಣಾಕ್ಷಿ ಜೆ ಶೆಟ್ಟಿ ಸ್ವಾಗತಿಸಿ, ನಯನಾ ರೈ ನೆಲ್ಲಿಕಟ್ಟೆ ವಂದಿಸಿದರು. ಶಾರದಾ ಕೇಶವ ಕಾರ್ಯಕ್ರಮ ನಿರೂಪಿಸಿದರು.