ಕೋಡಿಂಬಾಡಿ ಶಾಲೆಯಲ್ಲಿ ಉಪ್ಪಿನಂಗಡಿ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದ ಸಮಾರೋಪ

0

ಶಿಬಿರದಲ್ಲಿ ಕಲಿತ ವಿಷಯಗಳನ್ನು ಬದುಕಿನಲ್ಲಿ ಅನುಸರಿಸಿ: ಅಶೋಕ್ ಕುಮಾರ್ ರೈ

ಪುತ್ತೂರು: ಎನ್‌ಎಸ್‌ಎಸ್ ಶಿಬಿರ ಅನುಭವದ ಶಿಕ್ಷಣ ನೀಡುತ್ತದೆ. ಭಾಗವಹಿಸುವಿಕೆಯ ಪ್ರತೀ ಹಂತದಲ್ಲಿ ಕಲಿಕೆಯನ್ನು ಕಂಡುಕೊಂಡು ಜೀವನದಲ್ಲಿ ಅನುಸರಿಸಿಕೊಳ್ಳಬೇಕು ಮತ್ತು ಎನ್‌ಎಸ್‌ಎಸ್ ಶಿಬಿರದಲ್ಲಿ ಕಲಿತ ವಿಷಯಗಳನ್ನು ಬದುಕಿನಲ್ಲಿ ಅನುಸರಿಸಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳಿಂದ ಒಂದು ವಾರ ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.


ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ಸಮಾರೋಪ ಭಾಷಣ ಮಾಡಿದರು. ಕಾಲೇಜಿನ ಪ್ರಾಂಶುಪಾಲ ರವಿರಾಜ್ ಎಸ್. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಸದಸ್ಯ ಜಗನ್ನಾಥ ಶೆಟ್ಟಿ ನಡುಮನೆ, ಕೋಡಿಂಬಾಡಿ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ. ಮುರಳೀಧರ ರೈ ಮಠಂತಬೆಟ್ಟು, ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯ ಡಾ. ರಾಜಾರಾಮ್ ಕೆಬಿ, ಉದ್ಯಮಿ ಪ್ರಭಾಕರ ಸಾಲ್ಯಾನ್, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶೇಖರ ಪೂಜಾರಿ ಮತ್ತು ಮುಖ್ಯ ಗುರು ಬಾಲಕೃಷ್ಣ ಎನ್. ಭಾಗವಹಿಸಿದ್ದರು. ಎನ್‌ಎಸ್‌ಎಸ್ ಘಟಕದ ಯೋಜನಾಧಿಕಾರಿ ಡಾ. ಹರಿಪ್ರಸಾದ್ ಎಸ್. ಸ್ವಾಗತಿಸಿದರು. ಯೋಜನಾಧಿಕಾರಿ ಕೇಶವ ಕುಮಾರ ಬಿ. ವಂದಿಸಿದರು. ಶಿಬಿರಾರ್ಥಿಗಳಾದ ಪ್ರತಿಕ್ಷಾ ಎಚ್, ಪ್ರದೀಪ್, ಧನರಾಜ್ ಮತ್ತು ಸಂಗೀತ ಅವರು ಶಿಬಿರದ ವರದಿ ವಾಚನ ಮಾಡಿದರು. ಅನುಷಾ ಕಾರ್ಯಕ್ರಮ ನಿರ್ವಹಿಸಿದರು.

ಸಾರ್ವಜನಿಕ ದಂತ ಚಿಕಿತ್ಸಾ ಶಿಬಿರ:
ಸಾರ್ವಜನಿಕರು ದಂತ ಆರೋಗ್ಯದ ಮಹತ್ವ ಅರಿತು ಚಿಕಿತ್ಸೆ ಪಡೆಯಬೇಕು ಎಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ಅಭಿವೃದ್ಧಿ ಸಮಿತಿ ಸದಸ್ಯ ಡಾ. ರಾಜಾರಾಮ್ ಕೆ.ಬಿ. ಹೇಳಿದರು. ಎನ್‌ಎಸ್‌ಎಸ್ ಶಿಬಿರದ ಪ್ರಯುಕ್ತ ಫೆ.9ರಂದು ಆಯೋಜಿಸಲಾದ ಸಾರ್ವಜನಿಕ ದಂತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ, ಅವರು ಮಾತನಾಡಿದರು.


ಸಮುದಾಯ ದಂತ ಆರೋಗ್ಯ ಕೇಂದ್ರ ಕೆ.ವಿ.ಜಿ. ಸುಳ್ಯ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ ಪುತ್ತೂರು ವಲಯ ಇವುಗಳ ಸಹಯೋಗದೊಂದಿಗೆ ಆಯೋಜಿಸಿದ ಈ ಶಿಬಿರದಲ್ಲಿ ದಂತ ಚಿಕಿತ್ಸೆಯ ಮಹತ್ವ ತಿಳಿಸಿ ವಿವಿಧ ಚಿಕಿತ್ಸೆಗಳನ್ನು ಸ್ಥಳದಲ್ಲಿಯೇ ಉಚಿತವಾಗಿ ನೀಡಲಾಯಿತು.


ಎನ್.ಎಸ್.ಎಸ್ ಯೋಜನಾಧಿಕಾರಿ ಡಾ. ಹರಿಪ್ರಸಾದ್ ಎಸ್. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಸಮುದಾಯ ದಂತ ಆರೋಗ್ಯ ಕೇಂದ್ರ ಕೆ.ವಿ.ಜಿ ಸುಳ್ಯ ಇಲ್ಲಿನ ಡಾ. ಸುಮನ್, ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ, ಕೋಡಿಂಬಾಡಿ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ. ಮುರಳೀಧರ ರೈ ಮಠಂತಬೆಟ್ಟು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷೆ ಶಾರದಾ ಸಿ.ರೈ, ಕೆ.ವಿ.ಜಿ ಡೆಂಟಲ್ ಕಾಲೇಜ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಯಂತ್ ಪಿ. ಆರ್, ಕೋಡಿಂಬಾಡಿ ಶಾಲೆಯ ಹಿರಿಯ ವಿದ್ಯಾರ್ಥಿ ಶಿವಪ್ರಸಾದ್ ರೈ ಮಠಂತಬೆಟ್ಟು, ಸಮುದಾಯ ದಂತ ಆರೋಗ್ಯ ಕೇಂದ್ರದ ಮೆಡಿಕಲ್ ಕ್ಯಾಂಪ್ ತಂಡದ ಸದಸ್ಯರು ಹಾಗೂ ಎನ್.ಎಸ್.ಎಸ್ ಯೋಜನಾಧಿಕಾರಿ ಕೇಶವ ಕುಮಾರ್ ಉಪಸ್ಥಿತರಿದ್ದರು.70 ಜನರು ಶಿಬಿರದಲ್ಲಿ ಭಾಗವಹಿಸಿ ವಿವಿಧ ಚಿಕಿತ್ಸೆ ಪಡೆದರು. ಎನ್‌ಎಸ್‌ಎಸ್ ಘಟಕ ನಾಯಕಿ ಅಶ್ವಿನಿ ಎಂ. ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here