ಕಾಣಿಕೆ ಡಬ್ಬಿ ಮುರಿದು ಕಳ್ಳತನ-ಪೊಲೀಸರ ಭೇಟಿ
ಕಡಬ: ಕೋಡಿಂಬಾಳ ಗ್ರಾಮದ ರಾಮನಗರದಲ್ಲಿರುವ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಹಾಗೂ ಕೊರಗಜ್ಜ ದೈವಸ್ಥಾನದಲ್ಲಿ ಮೂರನೆ ಬಾರಿ ಮತ್ತೆ ಕಾಣಿಕೆ ಹುಂಡಿಗಳನ್ನು ಮುರಿದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ದೈವಸ್ಥಾನದ ಮುಂಭಾಗದಲ್ಲಿದ್ದ ಹರಕೆ ಡಬ್ಬಿಯನ್ನು ಪಿಕ್ಕಾಸು ಮತ್ತು ಕಬ್ಬಿಣದ ವಸ್ತುವಿನಿಂದ ಒಡೆದು ಬೀಗ ಮುರಿದು ಕಳ್ಳತನ ಮಾಡಿರುವುದು ಕಂಡು ಬಂದಿದೆ. ಸಿಸಿ ಟಿವಿ ಜಾಲ್ತಿಯಲ್ಲಿ ಇಲ್ಲದ ಸಮಯದಲ್ಲೇ ಕಳ್ಳತನ ನಡೆದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎರಡು ವಾರಗಳ ಹಿಂದೆ ಜ.28 ನಸುಕಿನ ವೇಳೆ 4:50ರ ವೇಳೆ ಕಬ್ಬಿಣದ ಪಿಕ್ಕಾಸನ್ನು ಕೈಯಲ್ಲಿ ಹಿಡಿದುಕೊಂಡು ಹೋಗಿ ವ್ಯಕ್ತಿಯೋರ್ವ ಬೀಗ ಮುರಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕಳೆದ ನವಂಬರ್ 16 ರಂದು ದೈವಸ್ಥಾನದ ಮೂರು ಕಾಣಿಕೆ ಡಬ್ಬಿಗಳನ್ನು ಒಡೆದು ಕಳ್ಳತನ ಮಾಡಲಾಗಿತ್ತು. ಕಾಣಿಗೆ ಹುಂಡಿ ಒಡೆಯಲು ಬಳಸಿರುವ ಕಬ್ಬಿಣದ ಸಾಧನವೊಂದು ಸ್ಥಳದಲ್ಲಿ ಪತ್ತೆಯಾಗಿತ್ತು.
ಜ.28 ರಂದು ಕಳ್ಳತನ ನಡೆದ ವೇಳೆ ಅಪರಿಚಿತ ವ್ಯಕ್ತಿಯ ಕೈಯಲ್ಲಿ ಕಬ್ಬಿಣದ ಪಿಕ್ಕಾಸು ಇರುವುದು ಕಂಡು ಬಂದಿತ್ತು. ಹರಕೆ ಡಬ್ಬಿಗಳನ್ನು ಹೊಡೆದು ಹಣವನ್ನು ದೋಚಿ ಪಿಕ್ಕಸಾನ್ನು ಅಲ್ಲೇ ಬಿಟ್ಟು ಹೋಗಿದ್ದ. ವಿಪರ್ಯಾಸವೆಂದರೆ ಆ ಪಿಕ್ಕಾಸನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ಕೊನೆಗೆ ಆ ಪಿಕ್ಕಾಸು ಓಂತ್ರಡ್ಕ ಸರ್ಕಾರಿ ಶಾಲೆಯ ಪಿಕ್ಕಾಸು ಎಂದು ಗೊತ್ತಾದ ಹಿನ್ನೆಲೆಯಲ್ಲಿ ದೈವಸ್ಥಾನದ ಆಡಳಿತ ಮಂಡಳಿಯವರು ಶಾಲೆಗೆ ತಲುಪಿಸಿದ್ದರು.
ಕಳ್ಳತನ ಘಟನೆ ನಡೆದಾಗ ಪ್ರಕರಣ ದಾಖಲಾಗುವುದಿಲ್ಲ ಏಕೆ?
ಈ ದೈವಸ್ಥಾನದಲ್ಲಿ ಕಳ್ಳತನ ನಡೆದಿರುವುದು ಇದು ಮೂರನೆ ಬಾರಿ, ಈ ಹಿಂದೆ ಆಡಳಿತ ಮಂಡಳಿ ಕಳ್ಳತನವಾದಾಗ ದೂರು ನೀಡಿದ್ದು, ಎನ್.ಸಿ.ಆರ್ ದಾಖಲಿಸಿಕೊಂಡಿದ್ದರು. ಎರಡನೇ ಬಾರಿ ಮತ್ತೊಮ್ಮೆ ದೂರು ನೀಡಿದಾಗಲೂ ಮತ್ತೊಮ್ಮೆ ಎನ್.ಸಿ.ಆರ್ ದಾಖಲಿಸಿಕೊಂಡಿದ್ದರು. ಇದೀಗ ಮತ್ತೆ ಮೂರನೇ ಬಾರಿಗೆ ಕಳ್ಳತನ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಕಳ್ಳನನ್ನು ಪತ್ತೆ ಹಚ್ಚಬೇಕೆಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕುತ್ತಿದ್ದಾರೆ.