‘ವಿವರಣೆ ಬೇಡ, ಕೆಲಸ ಮಾಡಿ ತೋರಿಸಿ, ಫಲಿತಾಂಶ ಬೇಕಾಗಿದೆ’- ಯುವ ಕಾಂಗ್ರೆಸ್ ಆಂತರಿಕ ಚುನಾವಣೆಯ ಗೆಲುವಿನ ರೂವಾರಿಗಳಿಗೆ ಅಭಿನಂದನೆಯಲ್ಲಿ ಶಾಸಕ ರೈ

0

ಪುತ್ತೂರು: ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನಾವು ನಿಮ್ಮೊಂದಿಗೆ ಸದಾ ಇದ್ದೇವೆ. ನಮಗೆ ವಿವರಣೆ ಬೇಡ, ಕೆಲಸ ಮಾಡಿ ತೋರಿಸಿ, ಜನರಿಗೆ ಫಲಿತಾಂಶ ಬೇಕಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈರವರು ಹೇಳಿದರು.


ಇತ್ತೀಚೆಗೆ ಬಪ್ಪಳಿಗೆ-ಪುತ್ತೂರು ಬೈಪಾಸ್ ಆಶ್ಮಿ ಕಂಫರ್ಟ್ ಸಭಾಂಗಣದಲ್ಲಿ ಯುವ ಕಾಂಗ್ರೆಸ್‌ನಲ್ಲಿ ಹೊಸ ನಾಯಕರನ್ನು ಸೃಷ್ಟಿಸುವ ಉದ್ಧೇಶದಿಂದ ನಡೆದ ಆಂತರಿಕ ಚುನಾವಣಾ ಫಲಿತಾಂಶದಲ್ಲಿ ವಿಜಯಿಯಾದ ಅಭ್ಯರ್ಥಿಗಳಿಗೆ ಅಭಿನಂದನೆ ಹಾಗೂ ಅಭ್ಯರ್ಥಿಗಳ ಗೆಲುವಿನಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಯುವ ನಾಯಕರುಗಳನ್ನು ಅಭಿನಂದಿಸಿ ಮಾತನಾಡಿದರು.

ಯುವ ಕಾಂಗ್ರೆಸ್‌ಗೆ ಪದಾಧಿಕಾರಿಗಳನ್ನು ಆಂತರಿಕ ಚುನಾವಣೆಯ ಮೂಲಕ ಆಯ್ಕೆ ಮಾಡುವುದು ಈ ಹಿಂದಿನಿಂದಲೂ ಬಂದಿದ್ದಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚೆಚ್ಚು ಯುವ ಸದಸ್ಯರನ್ನು ಸೇರಿಸುವುದಕ್ಕೆ ಈ ತರಹದ ಆಯ್ಕೆ ಪ್ರಕ್ರಿಯೆ ಮಾಡಲಾಗಿದೆ. ಚುನಾವಣೆ ಬೇಡ, ಅವಿರೋಧವಾಗಿ ಆಯ್ಕೆ ಮಾಡುವುದಕ್ಕೆ ನಾವು ಉಲ್ಲೇಖ ಮಾಡಿದ್ದಿದೆ. ಕ್ರಮೇಣ ತಾಂತ್ರಿಕತೆಯಿಂದಾಗಿ ಚುನಾವಣೆ ಮಾಡೋಣ ಎಂಬ ವಿಷಯಕ್ಕೆ ಬಂದಿದ್ದಾಗಿದೆ ಮಾತ್ರವಲ್ಲ ಇಂದು ಒಳ್ಳೆಯ ರೀತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ನಾವೆಲ್ಲಾ ಕಾಂಗ್ರೆಸ್ ಪಕ್ಷದವರೇ, ಇದರಲ್ಲಿ ಎರಡು ಗ್ರೂಪಿಲ್ಲ. ಎಲ್ಲರೂ ಒಟ್ಟಾಗಿ ಸೇರಿಕೊಂಡು ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದ ಅವರು ಕಾಂಗ್ರೆಸ್ ಬೂತ್‌ನಲ್ಲಿ ಹೆಚ್ಚೆಚ್ಚು ಯುವಕರನ್ನು, ಮಹಿಳೆಯರನ್ನು ಸೇರ್ಪಡೆಗೊಳಿಸಬೇಕು, ಬೂತ್ ಮಟ್ಟದಲ್ಲಿ ಪಕ್ಷವನ್ನು ಕಟ್ಟುವುದು ಮುಖ್ಯವಾಗಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ತಾಲೂಕು ಆಗಲಿ ಜಿಲ್ಲೆಯಲ್ಲಿ ಆಗಲಿ, ಬಲಪಡಿಸುವುದೇ ನಮ್ಮ ಗುರಿಯಾಗಿದೆ, ನಿಮ್ಮ ಬೆನ್ನ ಹಿಂದೆ ನಾವಿದ್ದೇವೆ, ಹೊಡೆದ ಬಾಲ್ ಸಿಕ್ಸರ್‌ಗೆ ಹೋಗಬೇಕು ಎಂದರು.


ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾದರೆ ಅದು ಯುವ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ-ಹೇಮನಾಥ ಶೆಟ್ಟಿ:
ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಯುವಕರಿಗೆ ತುಂಬಾ ಜವಾಬ್ದಾರಿಯಿದೆ. ಮುಂದಿನ ದಿನಗಳಲ್ಲಿ ನಮ್ಮ ನಿರೀಕ್ಷೆಯಿರುವುದು ನಮ್ಮ ಯುವಕರ ಮೇಲೆ. ಯುವಕರು ಏನು ಮಾಡ್ತಾ ಇದ್ದಾರೆ, ಯುವಕರು ನಮ್ಮ ಪಕ್ಷವನ್ನು ಹೇಗೆ ನಡೆಸಿಕೊಂಡು ಹೋಗ್ತಾ ಇದ್ದಾರೆ, ಯುವಕರ ಚಿಂತನೆ ಏನಿದೆ ಎನ್ನುವ ದೃಷ್ಟಿಯಲ್ಲಿ ಯುವ ಕಾಂಗ್ರೆಸ್‌ಗೆ ಬಹಳ ಪ್ರಾಮುಖ್ಯತೆಯಿದೆ. ನಮ್ಮ ಅಖಿಲ ಭಾರತ ಕಾಂಗ್ರೆಸ್ ಪಕ್ಷ ಹೈಕಮಾಂಡ್ ಸಮೇತ ಮತ್ತು ರಾಜ್ಯ ಕಾಂಗ್ರೆಸ್ ಪಕ್ಷ ಯುವ ಕಾಂಗ್ರೆಸ್‌ಗೆ ಬಹಳ ಮಾನ್ಯತೆಯನ್ನು ಕೊಟ್ಟಿದೆ. ಯುವ ಕಾಂಗ್ರೆಸ್ ಮೂಲಕ ದೇಶದ ಮುಂದಿನ ಭವಿಷ್ಯದಲ್ಲಿ ಅನೇಕ ಸವಾಲುಗಳಿವೆ. ಈ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾದರೆ ಅದು ಯುವ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದರು.


ಬೂತ್ ಮಟ್ಟದಲ್ಲಿ ಪಕ್ಷವನ್ನು ಕಟ್ಟಿದಾಗ ರಾಜ್ಯಮಟ್ಟದಲ್ಲಿ ಸಹಕಾರಿಯಾಗುತ್ತದೆ-ಗಿರೀಶ್ ಆಳ್ವ:
ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಗಿರೀಶ್ ಆಳ್ವರವರು ಮಾತನಾಡಿ, ಯುವ ಕಾಂಗ್ರೆಸ್‌ನ್ನು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ಅದರ ಹಿಂದೆ ಬೆನ್ನೆಲುಬಾಗಿ ನಿಂತವರು ಹೇಮನಾಥ ಶೆಟ್ಟಿಯವರು ಮಾತ್ರವಲ್ಲ ಪಕ್ಷದಲ್ಲಿ ಜವಾಬ್ದಾರಿ ಸಿಕ್ಕಿ ಪಕ್ಷವನ್ನು ಸಂಘಟಿಸಿ ಪಕ್ಷದ ಬಗ್ಗೆ ಕಾಳಜಿ ಇರುವವರಲ್ಲಿ ಹೇಮನಾಥ ಶೆಟ್ಟಿ ಒಬ್ಬರು. ಕಾವು ಹೇಮನಾಥ ಶೆಟ್ಟಿಯವರಿಗೆ ಮುಂದಿನ ದಿನಗಳಲ್ಲಿ ಭಗವಂತ ಅತ್ತ್ಯುನ್ನತ ಸ್ಥಾನವನ್ನು ನೀಡಬೇಕು ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದೇವೆ. ಯಾಕೆಂದರೆ ಸ್ವಾರ್ಥರಹಿತ ರಾಜಕೀಯ ಇಂದಿನ ದಿನಗಳಲ್ಲಿ ಬಹಳ ಕಡಿಮೆಯಾಗುತ್ತಿದೆ. ಇವತ್ತು ತನಗೆ ಏನು ಅಧಿಕಾರ ಸಿಗಬೇಕು ಎನ್ನುವುದೇ ಮುಖ್ಯವಾಗಿದೆ. ಆದರೆ ಅದರ ಯಾವುದೇ ಗೋಜಿಗೆ ಹೋಗದೆ ಯುವ ಕಾಂಗ್ರೆಸ್ ಮಿತ್ರರನ್ನು ಕಟ್ಟಿಕೊಂಡು ಪಕ್ಷದ ಎಲ್ಲಾ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರವವರು ಹೇಮನಾಥ ಶೆಟ್ಟಿಯವರು. ಶಾಸಕರು ಹೇಳಿದಂತೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಕಟ್ಟಿದಾಗ ಅದು ರಾಜ್ಯ ಮಟ್ಟದಲ್ಲಿ ಸಹಕಾರಿಯಾಗುತ್ತದೆ ಎಂಬಂತೆ ನಾವು ಕಾರ್ಯೋನ್ಮುಖರಾಗಬೇಕಿದೆ ಎಂದರು.


ಮುಂದಿನ ಐದು ವರ್ಷ ಅಶೋಕ್ ರೈಯವರು ಶಾಸಕರಾಗಿ ಮುಂದುವರೆಯಬೇಕು-ಕೃಷ್ಣಪ್ರಸಾದ್ ಆಳ್ವ:
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರವರು ಮಾತನಾಡಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಯಶಸ್ವಿಗಾಗಿ ಯುವಕರ ತಂಡ ಪುತ್ತೂರಲ್ಲಿ ಸಿದ್ಧವಾಗಿದೆ. ಯುವಕರೆಲ್ಲರೂ ಯುವ ಪದಾಧಿಕಾರಿಗಳೊಂದಿಗೆ ಒಟ್ಟು ಸೇರಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಟಗೊಳಿಸಬೇಕಾಗಿದೆ. ಈಗಾಗಲೇ ನಾವು ಸೊಸೈಟಿ ಚುನಾವಣೆಯನ್ನು ಅಚ್ಚುಕಟ್ಟಾಗಿ ಮಾಡ್ತಿದ್ದು ಮುಂದಿನ ದಿನಗಳಲ್ಲಿ ಪುತ್ತೂರಿನ ಪ್ರತಿ ವಲಯದಲ್ಲಿ ಕಾಂಗ್ರೆಸ್ ಪಕ್ಷದ ಅಭಿವೃದ್ಧಿಗೆ ದುಡಿಯಲಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರವನ್ನು ಬಲಾಡ್ಯಗೊಳಿಸಬೇಕು, ಮುಂದಿನ ಐದು ವರ್ಷ ಅಶೋಕ್ ರೈಯವರು ಶಾಸಕರಾಗಿ ಮುಂದುವರೆಯಬೇಕು ಎಂದರು.


ಕಾಂಗ್ರೆಸ್‌ಗೆ ಭದ್ರ ಬುನಾದಿಯನ್ನು ಹಾಕಿಕೊಳ್ಳುವುದು ನಮ್ಮ ಜವಾಬ್ದಾರಿ-ಪದ್ಮನಾಭ ಅಳಿಕೆ:
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಅಳಿಕೆ ಮಾತನಾಡಿ, ಯುವ ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಒಂದಷ್ಟು ಬಿರುಗಾಳಿ ಎಬ್ಬಿತ್ತು. ಯಾಕೆಂದರೆ ಯುವ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ವಿಚಾರವಾಗಿ ಸದಸ್ಯತ್ವ ನೋಂದಾವಣೆ ಮಾಡುವ ಮೂಲಕವಾಗಿ ಚುನಾವಣಾ ನಡೆಸುವಂತಹ ಪ್ರಕ್ರಿಯೆಯಲ್ಲಿ ಯುವ ನಾಯಕರು ಭಾಗವಹಿಸಿ ಅದರಿಂದ ಅತಿ ಹೆಚ್ಚು ಯುವ ಕಾರ್ಯಕರ್ತರನ್ನ ಪಕ್ಷದ ಕಾರ್ಯಕರ್ತರನ್ನಾಗಿ ಆಯ್ಕೆ ಮಾಡಿದ ಹೆಗ್ಗಳಿಕೆ ಯುವ ನಾಯಕರಲ್ಲಿದೆ. ಅದರಂತೆ ಈ ಯುವ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ ಎಂದರು. ಮುಂದಿನ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಾಗಿರಬಹುದು ಅಥವಾ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಾಗಿರಬಹುದು, ಯುವ ಕಾಂಗ್ರೆಸ್‌ನ್ನು ಒಗ್ಗೂಡಿಸಿಕೊಂಡು ಸಂಘಟನೆಯನ್ನು ಬಲಪಡಿಸಿಕೊಂಡು ಕಾಂಗ್ರೆಸ್‌ಗೆ ಭದ್ರ ಬುನಾದಿಯನ್ನು ಹಾಕಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.


ಚುನಾವಣೆ ಅಧಿಕಾರ ಅಲ್ಲ ಅದು ಜವಾಬ್ದಾರಿ-ಇಬ್ರಾಹಿಂ ನವಾಜ್:
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಬ್ರಾಹಿಂ ನವಾಜ್‌ರವರು ಮಾತನಾಡಿ, ಈ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಬ್ಬ ಯುವಕನ ಕೈಗೆ ಈ ಜಿಲ್ಲೆಯ ಯುವ ಕಾಂಗ್ರೆಸ್‌ನ ಚುಕ್ಕಾಣಿ ಹಿಡಿಲಿಕ್ಕೆ ಅವಕಾಶ ಮಾಡಿ ಕೊಟ್ಟದ್ದಕ್ಕಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಯುವಮಿತ್ರರಿಗೆ ಜೊತೆಗೆ ಅತ್ಯಂತ ಸದಸ್ಯತನ ನೋಂದಣೆ ಮಾಡಿದ ತಾಲೂಕು ಇದ್ರೆ ಅದು ಪುತ್ತೂರು ಆಗಿದೆ. ನನಗೆ ಈ ಪುತ್ತೂರು ವಿಧಾನಸಭಾ ಕ್ಷೇತ್ರದ ಮತದಾರರು ಹೆಚ್ಚಿನ ಮತ ನೀಡಿರುವುದರಿಂದ ಅಭಿನಂದನೆ ಸಲ್ಲಿಸುತ್ತೇನೆ. ಚುನಾಯಿತರಾದ ಆಭ್ಯರ್ಥಿಗಳು ದೇಶದಲ್ಲಿನ ಸರಿಸಾಟಿಯಿಲ್ಲದ ಜನನಾಯಕ ರಾಹುಲ್ ಗಾಂಧಿಯವರ ಕನಸನ್ನು ನನಸುಗೊಳಿಸಬೇಕಾಗಿದೆ. ಈ ಚುನಾವಣೆ ಅಧಿಕಾರ ಅಲ್ಲ ಅದು ಜವಾಬ್ದಾರಿ ಎಂಬುದಾಗಿ ಅರಿತು ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ ಎಂದರು.


ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಉಮಾನಾಥ್ ಶೆಟ್ಟಿ ಮಾತನಾಡಿ ಶುಭ ಹಾರೈಸಿದರು. ಪುತ್ತೂರು ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪುಡಾ ಸದಸ್ಯ ಲ್ಯಾನ್ಸಿ ಮಸ್ಕರೇನ್ಹಸ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಡಾ.ರಾಜಾರಾಂ ಬಿ.ಕೆ, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆ, ನಗರಸಭಾ ಸದಸ್ಯ ಬಶೀರ್ ಪರ್ಲಡ್ಕ, ಮುಖಂಡರಾದ ಪ್ರಸನ್ನ ಕುಮಾರ್ ಶೆಟ್ಟಿ ಸಿಝ್ಲರ್, ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ನಾಸೀರ್ ಕೋಲ್ಫೆ, ಶಮ್ಮೂನ್ ಪರ್ಲಡ್ಕರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಶು ಅಜ್ಜಿನಡ್ಕ ಕಾರ್ಯಕ್ರಮ ನಿರೂಪಿಸಿದರು. ‘

ಅಭಿನಂದನೆ..
ಯುವ ಕಾಂಗ್ರೆಸ್‌ನಲ್ಲಿ ಹೊಸ ನಾಯಕರನ್ನು ಸೃಷ್ಟಿಸುವ ಉದ್ಧೇಶದಿಂದ ನಡೆದ ಆಂತರಿಕ ಚುನಾವಣೆಯಲ್ಲಿ ಆಯ್ಕೆಯಾದ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್, ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಫಾರೂಕ್ ಪೆರ್ನೆ, ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಖಿಲ್ ಕಲ್ಲಾರೆರವರನ್ನು ಪುತ್ತೂರು ಕಾಂಗ್ರೆಸ್‌ನ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಹಿರಿಯ ಕಾಂಗ್ರೆಸ್ ಮುಖಂಡರು ಶಾಲು ಹೊದಿಸಿ ಅಭಿನಂದಿಸಿದರು.

ಕೃತಜ್ಞತೆ..
ಯುವ ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ಯುವಕರನ್ನು ಸಹಕರಿಸಿ ಪ್ರೋತ್ಸಾಹಿಸಿದ ಶಾಸಕ ಅಶೋಕ್ ಕುಮಾರ್ ರೈ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಕಾಂಗ್ರೆಸ್ ಮುಖಂಡ ಪ್ರಸನ್ನ ಕುಮಾರ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಗಿರೀಶ್ ಆಳ್ವರವರನ್ನು ಯುವ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಶಾಲು ಹೊದಿಸಿ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here