ತಿಂಗಳೊಳಗೆ ಪ್ರಕ್ರಿಯೆ ಪೂರ್ಣ 2023ರಲ್ಲಿ ತಿಳಿಸಿದ್ದ ಸರಕಾರ
ಮೀಸಲಾತಿ ಪಟ್ಟಿ ನೀಡಿದರೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಲು ಸಿದ್ಧ-ಚು.ಆಯೋಗ
ಮೇ ತಿಂಗಳೊಳಗೆ ಮೀಸಲಾತಿ ಪಟ್ಟಿ-ಸರಕಾರದ ಹೇಳಿಕೆ
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ರಾಜ್ಯ ಸರಕಾರ 2023ರ ದಶಂಬರ್‌ನಲ್ಲಿ ಹೈಕೋರ್ಟ್‌ಗೆ ಮಾಹಿತಿ ನೀಡಿತ್ತು.ಆದರೆ ಆ ಬಳಿಕ ಹದಿನಾಲ್ಕು ತಿಂಗಳು ಕಳೆದರೂ ಇನ್ನೂ ಚುನಾವಣೆ ನಡೆದಿಲ್ಲ.ಹೈಕೋರ್ಟ್ ಸೂಚನೆ ನೀಡಿದ್ದರೂ ಸರಕಾರ ಚುನಾವಣೆ ನಡೆಸಲು ಮುಂದಾಗದೇ ಇರುವುದಕ್ಕೆ ರಾಜ್ಯ ಚುನಾವಣಾ ಆಯೋಗ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.ಈ ಅರ್ಜಿಯ ವಿಚಾರಣೆ ವೇಳೆ, ಮೇ ತಿಂಗಳ ಬಳಿಕ ಚುನಾವಣೆ ನಡೆಸುವುದಾಗಿ ಸರಕಾರದ ಪರ ಎಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಹೈಕೋರ್ಟ್‌ಗೆ ತಿಳಿಸಿದ್ದಾರೆ.
ವಿಳಂಬ ದೋರಣೆಗೆ ಸರಕಾರಕ್ಕೆ 5 ಲಕ್ಷ ರೂ.ದಂಡ:
ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸದಸ್ಯರ ಆಡಳಿತದ ಅವಧಿ ಮುಕ್ತಾಯಗೊಂಡರೂ ನಿಗದಿತ ಅವಧಿಯೊಳಗೆ ಚುನಾವಣೆ ನಡೆಸದೆ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ 5ಲಕ್ಷ ರೂ.ದಂಡವನ್ನೂ ವಿಧಿಸಿತ್ತು.ಈ ದಂಡದ ಮೊತ್ತವನ್ನು ಸರಕಾರ ಈಗಾಗಲೇ ಪಾವತಿ ಮಾಡಿದೆ.ಇದೀಗ, ಮೇ ತಿಂಗಳ ಬಳಿಕ ಜಿ.ಪಂ.,ತಾ.ಪಂ.ಚುನಾವಣೆ ನಡೆಸುವುದಾಗಿ ಸರಕಾರ ಮತ್ತೊಮ್ಮೆ ಹೈಕೋರ್ಟ್‌ಗೆ ಹೇಳಿಕೆ ನೀಡಿದೆ.

ಬೆಂಗಳೂರು:ಇದೇ ಮೇ ತಿಂಗಳ ಬಳಿಕ ಜಿ.ಪಂ.,ತಾ.ಪಂ.ಚುನಾವಣೆ ನಡೆಸುವುದಾಗಿ ಸರಕಾರ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.ಇದರಿಂದಾಗಿ, ಕಳೆದ ನಾಲ್ಕು ವರ್ಷಗಳಿಂದ ನಡೆಯದೇ ಇರುವ ತಾ.ಪಂ.,ಜಿ.ಪಂ.ಚುನಾವಣೆ ಮುಂದಿನ ಮೇ ತಿಂಗಳ ಬಳಿಕ ನಡೆಯುವ ಸಾಧ್ಯತೆ ಇದೆ.
ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾಯಿತ ಸದಸ್ಯರ ಅಧಿಕಾರದ ಅವಧಿ ಮುಗಿದು ಮೂರು ವರ್ಷ ಕಳೆದರೂ ಮತ್ತು ಹೈಕೋರ್ಟ್ ಕೂಡಾ ಚುನಾವಣೆ ನಡೆಸಲು ಗಡುವು ನೀಡಿದ್ದರೂ ಸರಕಾರ ಚುನಾವಣೆ ನಡೆಸದೇ ಇರುವುದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.ಈ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು.
ಈ ವೇಳೆ ಸರಕಾರದ ಪರವಾಗಿ ಮಾತನಾಡಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, ಮೇ ತಿಂಗಳ ಬಳಿಕ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಯನ್ನು ಸರಕಾರ ನಡೆಸುವುದಾಗಿ ತಿಳಿಸಿದರು.
ಸರಕಾರ ಮೀಸಲಾತಿ ಪಟ್ಟಿ ನೀಡಿದರೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಹೇಳಿದರು.ಮೇ ತಿಂಗಳೊಳಗೆ ಮೀಸಲಾತಿ ಪಟ್ಟಿ ನೀಡುವುದಾಗಿ ಸರಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿಯವರ ಹೇಳಿಕೆ ದಾಖಲಿಸಿಕೊಂಡ ಹೈಕೋರ್ಟ್,ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಒಂದು ತಿಂಗಳೊಳಗೆ ಪ್ರಕ್ರಿಯೆ ಪೂರ್ಣ 2023ರಲ್ಲಿ ಭರವಸೆ ನೀಡಿದ್ದ ಸರಕಾರ: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ರಾಜ್ಯ ಸರಕಾರ 2023ರ ದಶಂಬರ್‌ನಲ್ಲಿ ಹೈಕೋರ್ಟ್‌ಗೆ ಭರವಸೆ ನೀಡಿತ್ತು.
ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ಹಿಂಪಡೆದು ಱಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ತಂದಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ 2023ರ ದ.19ರಂದು ವಿಚಾರಣೆ ನಡೆಸಿತ್ತು.
ಆ ಸಂದರ್ಭ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರು, ಜಿ.ಪಂ ಮತ್ತು ತಾ.ಪಂ ಕ್ಷೇತ್ರಗಳ ಗಡಿಗಳನ್ನು ನಿರ್ಧರಿಸುವ ಹಾಗೂ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆಯನ್ನು ಈಗಾಗಲೇ ಚುರುಕುಗೊಳಿಸಲಾಗಿದೆ.ಕೊಡಗು ಜಿಲ್ಲೆಯೊಂದನ್ನು ಬಿಟ್ಟು ಉಳಿದ 30 ಜಿಲ್ಲೆಗಳ ಕ್ಷೇತ್ರ ಪುನರ್‌ವಿಂಗಡಣೆ ಅಧಿಸೂಚನೆಯನ್ನು ಇದೇ ತಿಂಗಳ 19ರಂದು ಸಂಜೆ ಪೂರ್ಣಗೊಳಿಸಲಾಗುತ್ತಿದ್ದು ಅಧಿಸೂಚನೆ ಹೊರಡಿಸಲಾಗುವುದು.ಅಲ್ಲದೆ,ಕ್ಷೇತ್ರಗಳಲ್ಲಿ ಮೀಸಲಾತಿ ನಿಗದಿಪಡಿಸುವ ಸಂಬಂಧ ಮುಂದಿನ ಎರಡು ವಾರಗಳಲ್ಲಿ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುವುದು.ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ನಂತರದ ಎರಡು ವಾರಗಳಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಾಗಿ ನ್ಯಾಯಪೀಠಕ್ಕೆ ಭರವಸೆ ನೀಡಿದ್ದರು.ಕ್ಷೇತ್ರ ಪುನರ್ ವಿಂಗಡಣೆ ಅಧಿಸೂಚನೆ ಪ್ರಕಟಿಸಿದ ನಂತರದ ಏಳು ದಿನಗಳಲ್ಲಿ ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಲಾಗುವುದು.
ಮೀಸಲಾತಿ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನಗಳ ಕಾಲಾವಕಾಶ ನೀಡಲಾಗುವುದು.ನಂತರದ ಎರಡು ವಾರಗಳಲ್ಲಿ ಸಂಬಂಧಿಸಿದ ಪ್ರಾಧಿಕಾರಗಳು ಮೀಸಲು ನಿಗದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿವೆ ಎಂದು ಎಜಿ ತಿಳಿಸಿದ್ದರು.ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯ ಚುನಾವಣಾ ಆಯೋಗ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ,ಱಸರ್ಕಾರದ ಹೇಳಿಕೆಯ ಬಗ್ಗೆ ಸಂಶಯವಿದೆ ಎಂದು ಆಕ್ಷೇಪಿಸಿದ್ದರು.ಈ ಮಾತಿಗೆ ಮಧ್ಯ ಪ್ರವೇಶಿಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು,ಱಅಡ್ವೊಕೇಟ್ ಜನರಲ್ ಒಬ್ಬ ಸಾಂವಿಧಾನಿಕ ಹುದ್ದೆಯ ಜವಾಬ್ದಾರಿಯುತ ಪ್ರತಿನಿಧಿ.ಅವರನ್ನು ನಂಬಬಾರದೇ?ಎಂದು ಪ್ರಶ್ನಿಸಿದರಲ್ಲದೆ, ಅವರ ಮೇಲೆ ಭರವಸೆ ಇಡಬೇಕಾಗುತ್ತದೆ.
ಕ್ಷೇತ್ರ ಪುನರ್ ವಿಂಗಡಣೆ ಪೂರ್ಣಗೊಳಿಸುವ ಬಗೆಗಿನ ಹೇಳಿಕೆಯನ್ನು ಲಿಖಿತವಾಗಿ ಸಲ್ಲಿಸಬೇಕು.ಅಡ್ವೊಕೇಟ್ ಜನರಲ್ ಅವರ ಈ ಹೇಳಿಕೆಯನ್ನೇ ನ್ಯಾಯಪೀಠ ಮುಚ್ಚಳಿಕೆ ಎಂದು ಪರಿಗಣಿಸಲಿದೆ ಎಂದು ತಿಳಿಸಿದ್ದರು.ಇದಕ್ಕೆ ಎಜಿ ಶಶಿಕಿರಣ ಶೆಟ್ಟಿ ಒಪ್ಪಿಗೆ ನೀಡಿದ್ದರು.ಇದನ್ನು ಪರಿಗಣಿಸಿದ ನ್ಯಾಯಪೀಠ,ಈ ಸಂಬಂಧ ಎಜಿ ಲಿಖಿತ ಪ್ರಮಾಣಪತ್ರ ಸಲ್ಲಿಸಬೇಕು.ಅವರು ನೀಡಿರುವ ಭರವಸೆ ಕಾರ್ಯಗತಗೊಳ್ಳದೇ ಹೋದರೆ ರಾಜ್ಯ ಚುನಾವಣಾ ಆಯೋಗವು ಅಗತ್ಯ ಕ್ರಮಕ್ಕಾಗಿ ಪುನಃ ನ್ಯಾಯಾಲಯದ ಮೆಟ್ಟಿಲೇರಬಹುದು ಎಂದು ತಿಳಿಸಿ ಅರ್ಜಿ ವಿಲೇವಾರಿ ಮಾಡಿತ್ತು.