*ಭಜನಾ ಮಂದಿರಗಳಿಂದ ಧರ್ಮಕ್ಕೆ ಶಕ್ತಿ ತುಂಬುತ್ತದೆ-ಅಶೋಕ್ ಕುಮಾರ್ ರೈ
*ದೇವರನ್ನು ಒಲಿಸುವ ಸುಲಭ ಮಾರ್ಗ ಭಜನೆಯಾಗಿದೆ-ಚಿದಾನಂದ ಬೈಲಾಡಿ
*ದೇವರಲ್ಲಿ ವಿಶ್ವಾಸ, ನಂಬಿಕೆ ಇರಿಸಿದರೆ ಆಶೀರ್ವಾದಿಸುತ್ತಾರೆ-ವಿಶ್ವನಾಥ ರೈ ಕಡಮ್ಮಾಜೆ
ಪುತ್ತೂರು: ಬೆಟ್ಟಂಪಾಡಿ ವಿನಾಯಕನಗರದಲ್ಲಿರುವ ಶ್ರೀಸಿದ್ಧಿವಿನಾಯಕ ಸೇವಾ ಸಂಘದ 24ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ, ನಗರ ಭಜನಾ ಮಂಗಲೋತ್ಸವ ಹಾಗೂ ಸಭಾಕಾರ್ಯಕ್ರಮ ಫೆ.15ರಂದು ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ನಡೆಯಿತು.
ಭಜನಾ ಕಾರ್ಯಕ್ರಮ ಉದ್ಘಾಟನೆ:
ಬೆಳಿಗ್ಗೆ 7ರಿಂದ ಗಣಪತಿ ಹೋಮ ನಡೆದು ಭಜನಾ ಕಾರ್ಯಕ್ರಮ ಆರಂಭಗೊಂಡಿತು. ಬಲ್ನಾಡು ದುರ್ಗಾಶ್ರೀ ಭಜನಾ ಮಂಡಳಿಯ ಅಧ್ಯಕ್ಷೆ ಪರಮೇಶ್ವರಿ ಬಿ.ಆರ್. ದೀಪ ಪ್ರಜ್ವಲನೆ ಮಾಡಿ ಕಾಯಕ್ರಮ ಉದ್ಘಾಟಿಸಿ ಮಾತನಾಡಿ, ಭಜನೆಗೆ ವಿಶೇಷ ಶಕ್ತಿ ಇದೆ. ಸಂಜೆಯ ಸಮಯದಲ್ಲಿ ಮನೆಗಳಲ್ಲಿ ದೀಪ ಹೊತ್ತಿಸಿ ಭಜನೆ ಮಾಡಬೇಕು. ಇದರಿಂದ ಮಾನಸಿಕ ನೆಮ್ಮದಿ, ಆರೋಗ್ಯ ದೊರೆಯುತ್ತದೆ. ಭಜನೆಯಿಂದ ಒಗ್ಗಟ್ಟು, ಸಂಘಟನೆ ಬಲಗೊಳ್ಳುತ್ತದೆ. ಈ ಮೂಲಕ ಭಜನೆ ಮಹತ್ವದ ಸ್ಥಾನ ಪಡೆದುಕೊಂಡಿದೆ ಎಂದು ಹೇಳಿದರು. ಇಲ್ಲಿ 24ವರ್ಷದಿಂದ ಮನೆ ಮನೆಗೆ ಹೋಗಿ ನಗರ ಭಜನೆ ಮಾಡುತ್ತಿರುವುದು ಸಂತೊಷದಾಯಕ. ನಿಮ್ಮ ಧಾರ್ಮಿಕ ಶ್ರದ್ಧೇ ಹೀಗೆಯೇ ಮುಂದುವರಿಯಲಿ ಎಂದು ಹಾರೈಸಿದರು. ಧನ್ಯಾಶ್ರೀ ಪ್ರಾರ್ಥಿಸಿ ಶ್ರೀಸಿದ್ಧಿವಿನಾಯಕ ಭಜನಾ ಮಂದಿರದ ಪುನರ್‌ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರೈ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನೆ ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆದು ಸಂಜೆ ಭಜನಾ ಮಂಗಲೋತ್ಸವದೊಂದಿಗೆ ಭಜನಾ ಕಾರ್ಯಕ್ರಮ ಕೊನೆಗೊಂಡಿತು. ಸಂಜೆ ೫ರಿಂದ ವೇ.ಮೂ.ಗುಮ್ಮಟೆಗದ್ದೆ ದಿನೇಶ್ ಮರಡಿತ್ತಾಯರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ, ಶ್ರೀಸಿದ್ಧಿವಿನಾಯಕ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಸಭಾ ಕಾರ್ಯಕ್ರಮ:
ರಾತ್ರಿ ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಭಾಗವಹಿಸಿ ಮಾತನಾಡಿ ಈ ಭಜನಾ ಮಂದಿರಕ್ಕೆ ಈ ಹಿಂದೆಯೂ ಬಂದಿದ್ದೇನೆ. ಭಜನೆಗೆ, ಪ್ರಾರ್ಥನೆಗೆ ಧಾರ್ಮಿಕ ಮಂದಿರಗಳು ಬೇಕು. ಭಜನಾ ಮಂದಿರಗಳು ಧರ್ಮವನ್ನು ಉಳಿಸುವ ದೃಷ್ಟಿಕೋನದಿಂದ ಧರ್ಮದ ಅಭಿವೃದ್ಧಿಯಾಗಿ ಧರ್ಮಕ್ಕೆ ಶಕ್ತಿ ತುಂಬುತ್ತದೆ. ಧಾರ್ಮಿಕ ವಿಚಾರಗಳನ್ನು ನಮ್ಮ ಮಕ್ಕಳಿಗೆ ಹೇಳಿಕೊಡುವ ಕೆಲಸ ಆಗಬೇಕು ಎಂದ ಅವರು ಈ ಭಜನಾ ಮಂದಿರದ ಜೀಣೋದ್ಧಾರಕ್ಕೆ ರೂ.೫ಲಕ್ಷ ಅನುದಾನ ಇಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅನುದಾನ ಕೊಡುವ ಕೆಲಸ ಮಾಡುತ್ತೇನೆ ಎಂದರು.
ಮುಖ್ಯ ಅತಿಥಿ ನೋಟರಿ ವಕೀಲ ಚಿದಾನಂದ ಬೈಲಾಡಿ ಮಾತನಾಡಿ ನನಾತನ ಧರ್ಮದ ದೇವತಾ ಆರಾಧನೆಗಳು ನವ ಜೀವನದ ಅವಿಭಾಜ್ಯ ಅಂಗ. 18 ಪುರಾಣಗಳು, ವೇದಗಳು, ಶಾಸ್ತ್ರಗಳು ಕೂಡ ದೇವತಾ ಆರಾಧನೆಯನ್ನು ತಿಳಿಸುತ್ತವೆ. ಇದರಿಂದ ಮನುಷ್ಯ ಜೀವನ ಪರಿಪೂರ್ಣತೆ ಪಡೆಯುತ್ತದೆ. ಸುಲಭದಲ್ಲಿ ದೇವರನ್ನು ಒಲಿಸುವ ಕಾರ್ಯ ಎಂದರೆ ಸತ್ಯನಾರಾಯಣಪೂಜೆ. ಯಾವುದೇ ಖರ್ಚು ಇಲ್ಲದೆ ದೇವರನ್ನು ಒಲಿಸುವ ಮಾರ್ಗ ಭಜನೆಯಾಗಿದೆ ಎಂದರು. ಹಿಂದಿನ ಕಾಲದಲ್ಲಿ ಮನೆಯಲ್ಲಿ, ಶಾಲೆಯಲ್ಲಿ ಭಜನೆ ನಡೆಯುತ್ತಿತ್ತು. ಆದರೆ ಇಂದು ಆಧುನಿಕತೆಯ ಪರಾಮವಧಿಯಲ್ಲಿ ಮೊಬೈಲ್ ಬಳಕೆಯಿಂದ ಭಜನೆಯ ನಂಬಿಕೆ ಕಡಿಮೆ ಆಗಿದೆ. ಆಧುನಿಕತೆಯಲ್ಲಿಯೂ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ನವಭಾರತದ ನಿರ್ಮಾಣಕ್ಕೆ ಇಂತಹ ಧಾರ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ನಮ್ಮ ಜೀವನ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು.
ಪ್ರಗತಿಪರ ಕೃಷಿಕ ವಿಶ್ವನಾಥ ರೈ ಕಡಮಾಜೆ ಮಾತನಾಡಿ ದೇವರಲ್ಲಿ ವಿಶ್ವಾಸ, ನಂಬಿಕೆ ಬಲಪಡಿಸಿದಾಗ ದೇವರು ಒಲಿದು ಆಶೀರ್ವದಿಸುತ್ತಾನೆ. ಮುಂದಕ್ಕೆ ಈ ಕ್ಷೇತ್ರವೂ ನಂಬಿದ ಭಕ್ತರಿಗೆ ಇಂಬು ಕೊಡುವ ಮಂದಿರವಾಗಿ ಬೆಳೆಯಲಿ ಎಂದರು. ಸನ್ಮಾನ ಸ್ವೀಕರಿಸಿ ರಾಧಾಕೃಷ್ಣ ಆರ್. ಕೋಡಿ ಮಾತನಾಡಿ ಸಿದ್ದಿವಿನಾಯಕ ಭಜನಾ ಮಂದಿರದಲ್ಲಿ ನಾನು ಕಾರ್ಯನಿರ್ವಹಿಸಿದ್ದೇನೆ. ಹಿರಿಯರ ಶ್ರಮ, ಪ್ರಯತ್ನದಿಂದ ಈ ಭಜನಾ ಮಂದಿರ ಎತ್ತರಕ್ಕೆ ಬೆಳೆದಿದೆ. ಅಲ್ಲದೆ ಮುಂದಕ್ಕೆ ವೈಭವದ ನೂತನ ಮಂದಿರ ತಲೆಎತ್ತಲಿದೆ ಎಂದರು. ಜೇನು ಇಲ್ಲದಿದ್ದರೆ ಪ್ರಪಂಚವೇ ಇಲ್ಲ. ಸಸ್ಯಗಳ ಪರಾಗಸ್ಪರ್ಶ ಇಲ್ಲ. ಪರಾಗಸ್ಪರ್ಶ ಇಲ್ಲದಿದ್ದರೆ ಗಿಡ ಇಲ್ಲ. ಗಿಡ ಇಲ್ಲದಿದ್ದರೆ ಮನುಷ್ಯ ಜೀವನ ಕಷ್ಟ. ಆದುದರಿಂದ ಎಲ್ಲರೂ ಜೇನು ಕೃಷಿಗೆ ಪ್ರೋತ್ಸಾಹ ಕೊಡಿ ಎಂದರು.
ಶ್ರೀಸಿದ್ಧಿವಿನಾಯಕ ಭಜನಾ ಮಂದಿರದ ಪುನರ್‌ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರೈ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಕಳೆದ 24 ವರ್ಷದಿಂದ ಭಜನಾ ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸುವುದರ ಮೂಲಕ ಹೊಸ ಚೈತನ್ಯ, ಸಾನಿಧ್ಯ ವೃದ್ಧಿಯಾಗಿ ಇಂದು ಧಾರ್ಮಿಕ ಕ್ಷೇತ್ರವಾಗಿ ಬೆಳೆದಿದೆ. ಪ್ರತಿ ಗುರುವಾರ ಭಜನೆ, ಚೌತಿ ಹಬ್ಬದಂದು ಗಣಹೋಮ, ನವರಾತ್ರಿ ಸಂದರ್ಭದಲ್ಲಿ 9 ದಿವಸವೂ ಭಜನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸುಮಾರು 250 ಮನೆಗಳಿಗೆ ಹೋಗಿ ನಗರ ಭಜನೆ ಮಾಡಿ ಇಂದು ಮಂಗಲೋತ್ಸವ ಮಾಡುತ್ತಿದ್ದೇವೆ ಎಂದರು. ಒಂದು ವರ್ಷದ ಹಿಂದೆ ಪ್ರಶ್ನಾ ಚಿಂತನೆ ನಡೆಸಿ ದೈವಜ್ಞರು ಸೂಚಿಸಿದಂತೆ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಗಳು ನಡೆದಿದೆ. ಹಿರಿಯರ ಮಾರ್ಗದರ್ಶನ, ಸುಸಂಸ್ಕೃತ ಯುವಕರ ತಂಡ, ಹಿಂದೂ ಭಾಂಧವರಿಂದ ಇಲ್ಲಿ ಯಶಸ್ವಿಯಾಗಿ ಹಲವು ಕಾರ್ಯಕ್ರಮಗಳು ನಡೆಯುತ್ತಿದೆ ಎಂದರು.
ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕೋರ್ಮಂಡ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಶ್ರೀಸಿದ್ಧಿವಿನಾಯಕ ಸೇವಾ ಸಂಘದ ಗೌರವಾಧ್ಯಕ್ಷ ನಾರಾಯಣ ಮನೋಳಿತ್ತಾಯ ಕಾಜಿಮೂಲೆ, ಅಧ್ಯಕ್ಷ ಶ್ರೀಕುಮಾರ್ ಭಟ್ ಅಡ್ಯೆತ್ತಿಮಾರ್, ಸಿದ್ಧಿವಿನಾಯಕ ಭಜನಾ ಮಂದಿರದ ಪುನರ್‌ನಿರ್ಮಾಣ ಸಮಿತಿ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ ಕಕ್ಕೂರು, ಕೋನಡ್ಕ ಲಕ್ಷ್ಮೀ ಮಸಾಜ್ ಸೆಂಟರ್‌ನ ನಾಟಿ ವೈದ್ಯ ಗಂಗಾಧರ ಕೆ.ಎನ್. ಗಾಯಕಿ ಸಿಂಚನಾ ಎಂ.ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇತ್ತೀಚೆಗೆ ಅಗಲಿದ ಭಜನಾ ಮಂದಿರದ ಸಲಹೆಗಾರ ರಾಮಯ್ಯ ರೈ ಕಕ್ಕೂರುರವರಿಗೆ ಮೌನ ಪ್ರಾರ್ಥನೆ ನಡೆಸಲಾಯಿತು. ಸುರೇಂದ್ರ ಕಕ್ಕೂರು ಮತ್ತು ಧನ್ಯಶ್ರೀ ಕಕ್ಕೂರು ಸನ್ಮಾನಿತರ ಪತ್ರ ವಾಚಿಸಿದರು. ದಿನೇಶ್ ಗೌಡ ಪಂಬೆಜಾಲು, ಅಚ್ಚುತ ಭಟ್ ಕಕ್ಕೂರು, ಸುರೇಂದ್ರ ಕಕ್ಕೂರು, ಪುರಂದರ ಮಿತ್ತಡ್ಕ, ಸತ್ಯನಾರಾಯಣ ಮಣಿಯಾಣಿ, ಧನ್ಯಶ್ರೀ ಕಕ್ಕೂರು, ಜಯರಾಮ ಗಾಂಭೀರ, ಶಶಿಕಾಂತ್ ಕಕ್ಕೂರು, ಕೃಷ್ಣಪ್ಪ ಕುಲಾಲ್, ಸುರೇಶ ಪಾಟಾಳಿರವರು ಅತಿಥಿಗಳನ್ನು ಹೂ ಹಾಗೂ ಶಾಲು ನೀಡಿ ಸ್ವಾಗತಿಸಿದರು. ಶ್ರೀಸಿದ್ಧಿವಿನಾಯಕ ಸೇವಾ ಸಂಘದ ಕಾರ್ಯದರ್ಶಿ ಗಣೇಶ್ ಪಂಬೆಜಾಲು ವಂದಿಸಿ ಯತೀಶ್ ಕುಲಾಲ್ ಕೋರ್ಮಂಡ ಕಾರ್ಯಕ್ರಮ ನಿರೂಪಿಸಿದರು. ಶ್ರೀಸಿದ್ಧಿವಿನಾಯಕ ಸೇವಾ ಸಂಘ ಮತ್ತು ಶ್ರೀಸಿದ್ಧಿವಿನಾಯಕ ಭಜನಾ ಮಂದಿರ ಪುನರ್‌ನಿರ್ಮಾಣ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಬ್ಬರು ಸಾಧಕರನ್ನು ಸನ್ಮಾನಿಸಲಾಯಿತು. ಜೇನು ತರಬೇತುದಾರ ರಾಧಾಕೃಷ್ಣ ಆರ್. ಕೋಡಿ, ಮತ್ತು ಗಾಯಕಿ ಸಿಂಚನ ಎಮ್. ಗೌಡ ರವರನ್ನು ಶಾಲು, ಪೇಟ, ಹಾರ, ಸ್ಮರಣಿಕೆ, ಹಣ್ಣುಹಂಪಲು ನೀಡಿ ಗಣ್ಯರು ಸನ್ಮಾನಿಸಿದರು.