ಪುತ್ತೂರು: ದ.ಕ ಜಿಲ್ಲಾ ಕೃಷಿಕ ಸಮಾಜದ ಆಡಳಿತ ಮಂಡಳಿ ಸಭೆ ಜಂಟಿ ಕೃಷಿ ನಿರ್ದೇಶಕರ ಕಛೇರಿ ಮಂಗಳೂರು ಇಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಇವರ ಅಧ್ಯಕ್ಷತೆಯಲ್ಲಿ ಫೆ.18ರಂದು ನಡೆಯಿತು.
ಸಭೆಯಲ್ಲಿ, ನೂತನವಾಗಿ ಅಸ್ತಿತ್ವಗೊಂಡ ಕಡಬ ಹಾಗೂ ಉಳ್ಳಾಲ ತಾಲೂಕು ಕೃಷಿಕ ಸಮಾಜಕ್ಕೆ ಆಡಳಿತ ವೆಚ್ಚ ಇತರ ಅನುದಾನಗಳನ್ನು ಬಿಡುಗಡೆಗೊಳಿಸುವಂತೆ, ಕಾಡು ಪ್ರಾಣಿಗಳಿಂದ ಕೃಷಿಯನ್ನು ರಕ್ಷಿಸಲು ಸೋಲಾರ್ ಬೇಲಿ ಅಳವಡಿಸಲು ಸಬ್ಸಿಡಿಯನ್ನು ನೀಡಬೇಕೆಂದು, ಎಲೆ ಚುಕ್ಕಿ ಬಾಧಿತ ಅಡಿಕೆ ತೋಟಗಳ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಸರಕಾರದ ಬಳಿ ಮನವಿ ಮಾಡಲಾಗುವದೆಂದು ತೀರ್ಮಾನಿಸಿದರು.
ಕೃಷಿಕ ಸಮಾಜಕ್ಕೆ ನಿವೇಶನ ರಹಿತ ತಾಲೂಕುಗಳಿಗೆ ನಿವೇಶನ ಗುರುತಿಸುವಂತೆ ಕಂದಾಯ ಇಲಾಖೆಗೆ ಸೂಚಿಸಲಾಯಿತು. ಪ್ರತಿ ತಾಲೂಕು ಹಾಗು ಜಿಲ್ಲಾ ಕೇಂದ್ರಗಳಲ್ಲಿ ಮಣ್ಣು ಪರೀಕ್ಷಾ ಕೇಂದ್ರಗಳನ್ನು ತೆರೆಯುವಂತೆ ರಾಜ್ಯ ಹಾಗು ಕೇಂದ್ರ ಸರಕಾರಕ್ಕೆ ಮನವಿಯನ್ನು ಮಾಡುವುದಾಗಿ ಕ್ರಮ ಕೈಗೊಳ್ಳಲಾಯಿತು.
ಚಂದ್ರ ಕೋಲ್ಚಾರ್ ಅವರಿಗೆ ಗೌರವ
ದ.ಕ ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಚಂದ್ರ ಕೋಲ್ಚಾರ್ ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಮಹಾಮಂಡಲ ಬೆಂಗಳೂರು ಇದರ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಗೆ ಸಂಘದ ವತಿಯಿಂದ ಗೌರವಿಸಿದರು.

ಸಭೆಯಲ್ಲಿ ನಿರ್ದೇಶಕ ಸಂಜೀವ ಮಠಂದೂರು, ರಾಜ್ಯ ಪ್ರತಿನಿಧಿ ಪದ್ಮನಾಭ ರೈ, ಉಪಾಧ್ಯಕ್ಷ ಚಂದ್ರ ಕೋಲ್ಚಾರ್, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಖಜಾಂಜಿ ಎ.ಟಿ ಕುಸುಮಾಧರ, ನಿರ್ದೇಶಕ ಮಹೇಶ್ ಕೆ, ಮಹಾವೀರ ಜೈನ್ ಬೆಳ್ತಂಗಡಿ, ಪಿ.ಕೆ ರಾಜು ಪೂಜಾರಿ ಬೆಳ್ತಂಗಡಿ, ದೇವದಾಸ ಭಂಡಾರಿ ಉಳ್ಳಾಲ ಉಪಸ್ಥಿತರಿದ್ದರು.
ಜಂಟಿ ಕೃಷಿ ನಿರ್ದೆಶಕ ಹೊನ್ನಪ್ಪ ಗೌಡ ಸ್ವಾಗತಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿಯನ್ನು ನೀಡಿದರು. ಸಿಬ್ಬಂಧಿಗಳಾದ ಮನೋಹರ್ ಸಹಕರಿಸಿದರು.