ಉಪ್ಪಿನಂಗಡಿ: ಕೋಡಿಂಬಾಡಿಯ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸರ್ವರ ಶ್ರೇಯೋಭಿವೃದ್ಧಿಗಾಗಿ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಯವರ ಮಾಗದರ್ಶನದಲ್ಲಿ ಶ್ರೀ ದೇವಿಗೆ ಸಹಸ್ರ ಕುಂಕುಮಾರ್ಚನೆ ಸೇವೆ ಹಾಗೂ ಭಕ್ತರ ಸಮಾಲೋಚನಾ ಸಭೆ ನಡೆಯಿತು.
ಫೆ. 21ರಂದು ರಾತ್ರಿ ಏಳರಿಂದ ಸಹಸ್ರ ಕುಂಕುಮಾರ್ಚನೆ ಸೇವೆ ಪ್ರಾರಂಭವಾಯಿತು. ಮಾತೆಯರಿಂದ ಲಿಲಿತ ಸಹಸ್ರನಾಮ ಪಾರಾಯಣ, ಭಜನಾ ಸೇವೆ ನಡೆಯಿತು. ಬಳಿಕ ಮಹಾಪೂಜೆಯಾಗಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಸಮಾಲೋಚನ ಸಭೆಯನ್ನುದ್ದೇಶಿಸಿ ಮಾತನಾಡಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ಭಕ್ತರೆಲ್ಲಾ ಒಂದಾಗಿ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಪಣತೊಡಬೇಕಿದೆ. ನಮ್ಮ ಶಾಸಕರಾದ ಅಶೋಕ್ ಕುಮಾರ್ ರೈಯವರು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರೂ ಆಗಿದ್ದು, ಈಗಾಗಲೇ ತಡೆಗೋಡೆ ಹಾಗೂ ಸೇವಾ ಕೌಂಟರ್ ನಿರ್ಮಾಣಕ್ಕೆ 30 ಲಕ್ಷ ರೂ. ಅನುದಾನ ನೀಡಿದ್ದಾರೆ. ಇನ್ನು ಒಂದು ಕೋ. ರೂ. ಅನುದಾನದಲ್ಲಿ ತಡೆಗೋಡೆಗೆ ಎಂಜಿನಿಯರ್ ಎಸ್ಟಿಮೇಟ್ ಮಾಡಲಾಗಿದೆ. ಶಾಸಕರ ಅವಧಿಯಲ್ಲಿ ಇನ್ನಷ್ಟು ಅನುದಾನಗಳು ಶ್ರೀ ಕ್ಷೇತ್ರಕ್ಕೆ ಬರಲಿದ್ದು, ನಾವೆಲ್ಲಾ ಜೊತೆಗೂಡಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ. ಶ್ರೀ ಕ್ಷೇತ್ರದಲ್ಲಿ ರಾಶಿ ಪೂಜೆ, ಏಕಹಾ ಭಜನೆ, ಅರ್ಧ ಏಕಹಾ ಭಜನೆಯನ್ನು ಆರಂಭಿಸುವ ಯೋಚನೆಯೂ ಇದೆ ಎಂದರಲ್ಲದೆ, ದೇವಾಲಯದ ಅಭಿವೃದ್ಧಿಗೆ ಸರ್ವರ ಸಹಕಾರ ಕೋರಿದರು.
ಮುಖ್ಯ ಅತಿಥಿಯಾಗಿದ್ದ ಶ್ರೀ ಗೆಜ್ಜೆಗಿರಿ ಕ್ಷೇತ್ರದ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ ಕೆ.ಬಿ. ಮಾತನಾಡಿ, ಶ್ರೀ ನಾರಾಯಣ ಗುರುಗಳ ಸಿದ್ಧಾಂತದಂತೆ ಎಲ್ಲರೂ ಗೆಜ್ಜೆಗಿರಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಭಾಗಿಗಳಾಗಬೇಕಿದೆ ಎಂದರಲ್ಲದೆ, ಶ್ರೀ ಗೆಜ್ಜೆಗಿರಿ ಕ್ಷೇತ್ರದ ಆಮಂತ್ರಣ ಪತ್ರವನ್ನು ನೀಡಿದರು.

ವೇದಿಕೆಯಲ್ಲಿ ಶಾಸಕರಾದ ಅಶೋಕ್ ಕುಮಾರ್ ರೈ, ಶ್ರೀ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ರಾಮಕೃಷ್ಣ ಭಟ್ (ಪ್ರಧಾನ ಅರ್ಚಕರು), ಯಮುನಾ ಡೆಕ್ಕಾಜೆ, ರೇಣುಕಾ ಎಂ. ರೈ ಮಠಂತಬೆಟ್ಟು, ಸತೀಶ್ ನಾಯಕ್ ಮೋನಡ್ಕ, ಕುಮಾರನಾಥ ಎಸ್. ಪಲ್ಲತ್ತಾರು, ವಿಜಯ ನಾಯ್ಕ ಪಲ್ಲತ್ತಾರು ಉಪಸ್ಥಿತರಿದ್ದರು.
ಸಭೆಯಲ್ಲಿ ಕೋಡಿಂಬಾಡಿ ಗ್ರಾ.ಪಂ. ಅಧ್ಯಕ್ಷರಾದ ಮಲ್ಲಿಕಾ, ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು, ಸದಸ್ಯ, ಕೋಡಿಂಬಾಡಿ ಹಾಲು ಉತ್ಪಾದಕರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ ನಡುಮನೆ, ಪ್ರಮುಖರಾದ ಮುರಳೀಧರ ರೈ ಮಠಂತಬೆಟ್ಟು, ಸುದೇಶ್ ಶೆಟ್ಟಿ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ವಾರಿಸೇನಾ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ದೇವಾಲಯದ ಮೇಲ್ವೀಚಾರಕ ಸಂತೋಷ್ ಕುಮಾರ್ ಸ್ವಾಗತಿಸಿದರು. ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ದೇವದಾಸ ಗೌಡ ಪಿಲಿಗುಂಡ ವಂದಿಸಿದರು.