ಹಿರೇಬಂಡಾಡಿ: ಹಿರೇಬಂಡಾಡಿ ಗ್ರಾಮದ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ಫೆ.24ರಂದು ಬೆಳಿಗ್ಗೆ ಗ್ರಾಮಸ್ಥರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ಬೆಳಿಗ್ಗೆ ಹಿರೇಬಂಡಾಡಿ ಗ್ರಾಮದ ಪಾಲೆತ್ತಡಿಯಿಂದ ಹೊರೆಕಾಣಿಕೆಯು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿತು. ಗ್ರಾಮದ ಭಕ್ತರು ಅಡಿಕೆ, ತೆಂಗು, ಸಿಯಾಳ, ಬಾಳೆಗೊನೆ, ತರಕಾರಿ ಸೇರಿದಂತೆ ವಿವಿಧ ಫಲವಸ್ತುಗಳನ್ನು ತಂದು ದೇವರಿಗೆ ಸಮರ್ಪಣೆ ಮಾಡಿದರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಕಟ್ಟೆಪೂಜೆ, ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ತೋಳ್ಪಾಡಿತ್ತಾಯರವರು ವಿವಿಧ ಕಾರ್ಯಕ್ರಮ ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜನಾರ್ದನ ಗೌಡ ಸಾಂತಿತ್ತಡ್ಡ, ಸದಸ್ಯರಾದ ಗಣೇಶ ಮಠಂದೂರು, ಸದಾಶಿವ ಬಂಗೇರ ಎಲಿಯ, ಕಸ್ತೂರಿ ಹೆನ್ನಾಳ, ನಾರಾಯಣ ಕನ್ಯಾನ, ಮುದ್ದ ಕೆಮ್ಮಾರ, ಭಾರತಿ ನಿಡ್ಡೆಂಕಿ, ಸತೀಶ ಶೆಟ್ಟಿ ಪಡ್ಯೊಟ್ಟು, ವಾರ್ಷಿಕ ಉತ್ಸವ ಸಮಿತಿ ಅಧ್ಯಕ್ಷ ನವೀನ್ ಪಡ್ಪು, ಕಾರ್ಯದರ್ಶಿ ಅಶೋಕ ಹಲಸಿನಕಟ್ಟೆ, ಕೋಶಾಧಿಕಾರಿ ವಿಶ್ವನಾಥ ಕೆಮ್ಮಟೆ, ಬೈಲುವಾರು ಸಮಿತಿ ಸಂಚಾಲಕರು, ಸದಸ್ಯರು, ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿ, ಗಣೇಶೋತ್ಸವ ಸಮಿತಿ, ಭಜನಾ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಇಂದು ದರ್ಶನ ಬಲಿ:
ದೇವಸ್ಥಾನದಲ್ಲಿ ಫೆ.25ರಂದು ಬೆಳಿಗ್ಗೆ 6ಕ್ಕೆ ಶ್ರೀ ಮಹಾಗಣಪತಿ ಹೋಮ ನಡೆಯಲಿದೆ. ಬೆಳಿಗ್ಗೆ 9ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನಬಲಿ, ಬಟ್ಟಲು ಕಾಣಿಕೆ, ಕಲಶಾಭಿಷೇಕ, ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕುಣಿತ ಭಜನೆ, ರಾತ್ರಿ ರಂಗಪೂಜೆ, ಬಳಿಕ ದೈವಗಳ ಭಂಡಾರ ತೆಗೆದು ರಕ್ತೇಶ್ವರಿ, ಪಂಜುರ್ಲಿ, ಕಲ್ಲುರ್ಟಿ ದೈವಗಳ ನೇಮೋತ್ಸವ, ಅನ್ನಸಂತರ್ಪಣೆ, ’ ಪರಮಾತ್ಮೆ ಪಂಜುರ್ಲಿ’ ತುಳುನಾಟಕ ನಡೆಯಲಿದೆ. ಫೆ.26ರಂದು ಬೆಳಿಗ್ಗೆ ಶ್ರೀ ದುಗಲಾಯಿ ಮತ್ತು ಗುಳಿಗ ದೈವದ ನೇಮೋತ್ಸವ ನಡೆಯಲಿದೆ. ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ವೇದಮೂರ್ತಿ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ವಾರ್ಷಿಕ ಉತ್ಸವ ನಡೆಯಲಿದೆ.